ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್
ಬೆಂಗಳೂರು:ಭಾರತದ ಸಾವಿರಾರು ವರ್ಷಗಳ ಹಳೆಯ ಯೋಗ ಪರಂಪರೆಗೆ ಜಾಗತಿಕ ಮನ್ನಣೆ ತಂದಿರುವ ಅಂತಾರಾಷ್ಟ್ರೀಯ ಯೋಗ ದಿನವು, ಇಂದಿನ ದಿನಗಳಲ್ಲಿ ವಿಶ್ವದ ಅತಿದೊಡ್ಡ ಆರೋಗ್ಯ ಮತ್ತು ಕ್ಷೇಮ ಅಭಿಯಾನಗಳಲ್ಲಿ ಒಂದಾಗಿ ರೂಪುಗೊಂಡಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅಭಿಪ್ರಾಯಪಟ್ಟರು.
ಆಯುಷ್ ಇಲಾಖೆ ವತಿಯಿಂದ ವಿಧಾನಸೌಧದ ಮುಂಭಾಗದಲ್ಲಿ ಭಾನುವಾರ ಆಯೋಜಿಸಿದ್ದ ’ 12ನೇ ಅಂತಾರಾಷ್ಟ್ರೀಯ ಯೋಗ’ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಗವು ದೈಹಿಕ,ಮಾನಸಿಕ ಆರೋಗ್ಯ ಉತ್ತೇಜಿಸುವ ಅತ್ಯಂತ ವಿಶ್ವಾಸಾರ್ಹ ಸಾಧನವಾಗಿದೆ. ಯೋಗ ಮನಸ್ಸು,ದೇಹದ ಏಕತೆ, ಆಲೋಚನೆ, ಕ್ರಿಯೆಯ ಸಮನ್ವಯ, ಸಂಯಮ, ತೃಪ್ತಿ, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯ, ಆರೋಗ್ಯ ಮತ್ತು ಯೋಗಕ್ಷೇಮದ ಸಮಗ್ರ ದೃಷ್ಟಿಕೋನ ಪ್ರತಿಬಿಂಬಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಮತ್ತು ಒತ್ತಡದ ಜೀವನಶೈಲಿಯು ದೈಹಿಕ,ಮಾನಸಿಕ ಮತ್ತು ಸವಾಲು ಸೃಷ್ಟಿಸಿದೆ. ಯೋಗದಿಂದ ಆರೋಗ್ಯಕರ ದೇಹ, ಶಾಂತ ಮನಸ್ಸು ಮತ್ತು ಸಕಾರಾತ್ಮಕ ದೃಷ್ಟಿಕೋನ ಒದಗಿಸಲಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉಪಕ್ರಮದ ಮೇರೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2014ರ ಜೂ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಿರುವುದು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಹೆಮ್ಮೆಯ ವಿಷಯವಾಗಿದೆ. 190ಕ್ಕೂ ಹೆಚ್ಚು ದೇಶಗಳಲ್ಲಿ ಲಕ್ಷಾಂತರ ಜನರು ಯೋಗಾಭ್ಯಾಸ ಮಾಡುತ್ತಿದ್ದಾರೆ. ಇದು ಭಾರತದ ಜ್ಞಾನ, ಸಂಸ್ಕೃತಿ, ವಸುಧೈವ ಕುಟುಂಬಕಂ ಎಂಬ ಮನೋಭಾವಕ್ಕೆ ದೊರೆತ ಜಾಗತಿಕ ಮನ್ನಣೆ. ಯುವಕರು ಪ್ರತಿದಿನ ಸ್ವಲ್ಪ ಸಮಯವನ್ನು ಯೋಗಕ್ಕೆ ಮೀಸಲಿಟ್ಟರೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ವ್ಯಕ್ತಿತ್ವವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು ಎಂದು ಸಲಹೆ ನೀಡಿದರು.
ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ, ಆರೋಗ್ಯ ಸಚಿವ ಯು.ಟಿ.ಖಾದದ್ ಮತ್ತು ನಟಿ ಸುಧಾರಾಣಿ ಸೇರಿ ಸಾವಿರಾರು ಜನರು ಯೋಗಾಸನ ಮಾಡಿದರು.
ಯೋಗ ಮತ್ತು ಪ್ರಾಣಾಯಾಮ ನಾನು ಅಳವಡಿಸಿಕೊಂಡಿದ್ದೇನೆ. ಅದರ ಪರಿಣಾಮದಿಂದ ಆರೋಗ್ಯವಾಗಿದ್ದೇನೆ. ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಪ್ರತಿದಿನ ಕೆಲ ನಿಮಿಷದ ಯೋಗಾಭ್ಯಾಸವು ಅನೇಕ ರೋಗಗಳಿಂದ ರಕ್ಷಿಸಿ ಜೀವನದಲ್ಲಿ ಹೊಸ ಚೈತನ್ಯ ತುಂಬಲಿದೆ ಎಂದು ಥಾವರ್‌ಚಂದ್ ಗೆಹಲೋತ್ ಹೇಳಿದರು.ಯೋಗದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಅದರ ಪ್ರಚಾರಕ್ಕೆ ಸರ್ಕಾರ ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳನ್ನು ಶ್ಲಾಘಿಸಿದ ರಾಜ್ಯಪಾಲರು, ಸಿಎಂ, ಸಚಿವರು, ಅಧಿಕಾರಿಗಳು, ಯೋಗ ಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳು ಹಾಗೂ ಯೋಗ ಸಾಧಕರನ್ನು ಅಭಿನಂದಿಸಿದರು.