ಬೆಂಗಳೂರು:‘ಅನ್ನಭಾಗ್ಯ’ ಯೋಜನೆಯಡಿ ಅಕ್ಕಿ ಬದಲು ಪೋಷಕಾಂಶ ಪದಾರ್ಥ ಹೊಂದಿರುವ ‘ಇಂದಿರಾ ಕಿಟ್’ ಯೋಜನೆ ಅನುಷ್ಠಾನವು ಇನ್ನಷ್ಟು ವಿಳಂಬವಾಗಲಿದ್ದು, ಒಂದರೆಡು ತಿಂಗಳ ಬಳಿಕ ಯೋಜನೆ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಆಹಾರ ಇಲಾಖೆಯ ಮೂಲಗಳು ತಿಳಿಸಿವೆ.
ಅಕ್ಕಿ ಬದಲು ನಗದು ವರ್ಗಾವಣೆ ವ್ಯವಸ್ಥೆಯನ್ನು ಸರ್ಕಾರ, 2023ರ ಜು.10ರಿಂದ ಜಾರಿಗೆ ತಂದಿತ್ತು. 2023ರ ಜು.10ರಿಂದ 2025ರ ಜನವರಿವರೆಗೆ ಫಲಾನುಭವಿಗಳ ಖಾತೆಗೆ ಡಿಬಿಟಿ ಮುಖೇನ ಹಣ ಹಾಕಲಾಗುತ್ತಿತ್ತು. ಆದರೆ, ಕಡಿಮೆ ದರಕ್ಕೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ಒಪ್ಪಿದ್ದ ಕಾರಣ ಕಳೆದ ಫೆಬ್ರವರಿಯಿಂದ ಯೋಜನೆಯಡಿ ಬಿಪಿಎಲ್ ಪ್ರತಿ ಸದಸ್ಯನಿಗೆ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ. ಇದೀಗ, ಕಾರ್ಡ್‌ದಾರರಿಗೆ ಪೋಷಕಾಂಶ ಪದಾರ್ಥ ನೀಡುವ ಸಲುವಾಗಿ ಇಲಾಖೆ, 3-4 ತಿಂಗಳಿಂದ ಯೋಜನೆ ಜಾರಿಗೆ ತರಲು ಈಗಾಗಲೇ ಪ್ರಕ್ರಿಯೆ ಶುರು ಮಾಡಿದೆ. ಯೋಜನೆ ಅನುಷ್ಠಾನದ ಕುರಿತು ಸಚಿವ ಕೆ.ಎಚ್.ಮುನಿಯಪ್ಪ ಸಹ ಆಗಾಗ್ಗೆ ಹೇಳಿಕೆ ನೀಡುತ್ತಿದ್ದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ತೊಗರಿಬೇಳೆ, ಹೆಸರುಕಾಳು, ಅಡುಗೆ ಎಣ್ಣೆ, ಸಕ್ಕರೆ,ಉಪ್ಪು ಖರೀದಿಗಾಗಿ ಪ್ರತ್ಯೇಕ ಟೆಂಡರ್ ಆಹ್ವಾನಿರುವುದು, ಖರೀದಿಸಿದ ಪದಾರ್ಥವನ್ನು ಪ್ರತ್ಯೇಕವಾಗಿ ಪ್ಯಾಕಿಂಗ್ ಮಾಡುವುದು ಹಾಗೂ ಗೋಡೌನ್‌ನಿಂದ ನ್ಯಾಯಬೆಲೆ ಅಂಗಡಿಗಳಿಗೆ ಕಿಟ್ ಸರಬರಾಜುಗೆ ಖಾಸಗಿ ಏಜೆನ್ಸಿಗೆ ಹೊಣೆ ವಹಿಸುವುದು ಇತ್ಯಾದಿ ಕಾರ್ಯಚಟುವಟಿಕೆ ಬಗ್ಗೆ ಇಲಾಖೆ ರೂಪುರೇಷೆ ಸಿದ್ಧಪಡಿಸಿಕೊಂಡಿದೆ. ಆದರೆ, ಟೆಂಡರ್ ವಿಳಂಬದಿಂದ ಕಿಟ್ ವಿತರಣೆ ಯೋಜನೆ ತುಸು ವಿಳಂಬವಾಗುತ್ತಿದೆ ಎನ್ನಲಾಗಿದೆ. ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರಿಗೆ ಇಂದಿರಾ ಕಿಟ್ ಹಂಚಿಕೆ ಮಾಡಲಾಗುತ್ತದೆ. ಕಿಟ್‌ನಲ್ಲಿ ತಲಾ 1 ಕೆಜಿ ತೊಗರಿಬೇಳೆ, ಹೆಸರುಕಾಳು, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಇರಲಿದೆ. ದುರ್ಬಳಕೆ ತಡೆಗೆ ಕಿಟ್ ಮೇಲೆ ಕ್ಯೂ ಆರ್ ಕೋಡ್ ಅಳವಡಿಸಲಾಗುತ್ತಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
‘ಇಂದಿರಾ ಕಿಟ್’ ವಿತರಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಇದುವರೆಗೆ ಸರ್ಕಾರ ಅಥವಾ ಇಲಾಖೆಯಿಂದ ನಮಗೆ ಸೂಚನೆ ಬಂದಿಲ್ಲ. ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಕಿಟ್ ಕುರಿತು ಕಾರ್ಡ್‌ದಾರರು ವಿಚಾರಿಸುತ್ತಿದ್ದಾರೆ. ಯಾವಾಗಿನಿಂದ ಕಿಟ್ ವಿತರಣೆಯಾಗಲಿದೆ ಎಂಬುದರ ಬಗ್ಗೆ ನಮ್ಮನ್ನು ಕೇಳುತ್ತಿದ್ದಾರೆ ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಹೇಳುತ್ತಾರೆ.