- ಗದಗ ಲಕ್ಕುಂಡಿಯಲ್ಲಿ ಪುರಾತನ ಕಾಲದ ಚಿನ್ನಾಭರಣಗಳು ಪತ್ತೆ
- ಮನೆ ಕಟ್ಟಿಸಲು ಅಡಿಪಾಯ ತೋಡುವಾಗ ತಂಬಿಗೆ ಪ್ರತ್ಯಕ್ಷ
- ನೀಲಮಣಿ, ಮುತ್ತು, ಹವಳ ಸೇರಿದಂತೆ ಹಲವು ಬೆಲೆ ಬಾಳುವ ಆಭರಣಗಳು
- ಉತ್ಖನನ ಕಾರ್ಯಾಚರಣೆಯಲ್ಲಿ ಹಲವು ಪ್ರಾಚೀನ ವಸ್ತುಗಳು ಪತ್ತೆ
ಗದಗ: ಜ.10ರಂದು ಜಿಲ್ಲೆಯ ಲಕ್ಕುಂಡಿಯಲ್ಲಿ ಮನೆ ನಿರ್ಮಾಣಕ್ಕೆಂದು ಅಡಿಪಾಯ ತೋಡುವಾಗ ತಂಬಿಗೆಯೊಂದು ಪ್ರತ್ಯಕ್ಷವಾಗಿ, ಅದರಲ್ಲಿ ಮುತ್ತು, ಹವಳ, ಚಿನ್ನಾಭರಣ, ಖಡ್ಗ, ನೀಲಮಣಿ ಸೇರಿ ಹಲವು ಪ್ರಾಚೀನ ಕಾಲದ ಬೆಲೆಬಾಳುವ ವಸ್ತುಗಳು ಸಿಕ್ಕಿರುವುದು ಇಂದಿನ ಬಿರುಸಿನ ಶೋಧ ಕಾರ್ಯಕ್ಕೆ ಬಲವಾದ ಸಾಕ್ಷಿಯಾಗಿದೆ. ನಿಧಿ ಸಿಕ್ಕ ಸ್ಥಳವನ್ನು ಜಿಲ್ಲಾಡಳಿತಕ್ಕೆ ಆ ಬಡ ಕುಟುಂಬ ತೋರಿಸಿದ್ದೇ ತಡ, ಆ ಜಾಗದಲ್ಲೀಗ ಅಧಿಕಾರಿಗಳು ನಿರಂತರವಾಗಿ ಕಾರ್ಯಾಚರಣೆ ಕೈಗೊಂಡಿರುವುದು ಸದ್ಯ ಸ್ಥಳೀಯರ ಕುತೂಹಲ ಕೆರಳಿಸಿದೆ. ದಿನಕ್ಕೊಂದು ಪುರಾತನದ್ದು ಎಂದೇಳುವ ವಸ್ತುಗಳು ಲಭಿಸುತ್ತಿರುವುದು ನಾನಾ ಗೊಂದಲ ಮತ್ತು ಅನುಮಾನಗಳಿಗೆ ಎಡಮಾಡಿಕೊಟ್ಟಿದೆ.
ಪ್ರಸ್ತುತ, ಬಡ ಕುಟುಂಬ ತೋರಿದ ಜಾಗವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿರುವ ಪುರಾತತ್ವ ಇಲಾಖೆಯ ಅಧಿಕಾರಿಗಳು, ಅಲ್ಲಿಂದ ಶೋಧ ಕಾರ್ಯ ಆರಂಭಿಸಿ, ಇಂದು ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಿವಲಿಂಗ, ಪ್ರಾಚೀನ ಕಾಲದ ಅವಶೇಷ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತು ಇವುಗಳು ಯಾವ ಕಾಲಕ್ಕೆ ಸೇರಿದ್ದು? ಶತಮಾನದಷ್ಟು ಹಳೆಯದೇ ಎಂಬುದನ್ನು ಪತ್ತೆಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ.
ಪತ್ತೆ ಆಗಿದ್ಹೇಗೆ?
ಗ್ರಾಮದ ನಿವಾಸಿ ಗಂಗವ್ವ ಬಸವರಾಜ ರಿತ್ತಿ ಎಂಬ ಮಹಿಳೆ ಮನೆ ಕಟ್ಟಿಸುವ ಆಸೆಯನ್ನು ಹೊತ್ತಿದ್ದರು. ಈ ಹಿನ್ನೆಲೆ ತಮ್ಮ ಜಾಗದಲ್ಲಿ ಶನಿವಾರ ಅಡಿಪಾಯಕ್ಕೆ ಗುಂಡಿ ಅಗೆಯುವ ಕೆಲಸಕ್ಕೆ ಮುಂದಾದರು. ಈ ವೇಳೆ, ಅವರ ಪುಟ್ಟ ಮಗನಿಗೆ ತಾಮ್ರದ ತಂಬಿಗೆಯಲ್ಲಿ ಪುರಾತನದ ವಸ್ತುಗಳು ಎಂದು ಸೂಚಿಸುವ ಚಿನ್ನಾಭರಣಗಳು ಸಿಕ್ಕಿತು. ಅಲ್ಲಿಂದ ಶುರುವಾದ ಪುರಾತತ್ವ ಇಲಾಖೆಯ ಕಾರ್ಯಾಚರಣೆ, ಇದು ಯಾವ ಶತಮಾನದ್ದು ಎಂದು ಕಂಡುಹಿಡಿಯುವ ಬಹುದೊಡ್ಡ ಸವಾಲಿಗೆ ನೂಕಿದೆ.
ಇಲ್ಲಿಯವರೆಗೆ ಏನೆಲ್ಲ ಸಿಕ್ಕಿವೆ?
ಆರಂಭದಲ್ಲಿ ಬಾಲಕನಿಗೆ ಸಿಕ್ಕ ತಂಬಿಗೆಯಲ್ಲಿ ಚಿನ್ನಾಭರಣ, ಎರಡು ನೀಲಮಣಿ, ಎರಡು ಮಾಣಿಕ್ಯ ಮತ್ತು ಒಂದು ಹವಳದ ಜತೆ ಒಂದು ಮುತ್ತು ದೊರೆಯಿತು. ಚಿನ್ನಾಭರಣದ ಮೌಲ್ಯದಷ್ಟೇ ನೀಲಮಣಿ ಮುತ್ತು-ಹವಳ ಮಾಣಿಕ್ಯದ ಮೌಲ್ಯವು ಇನ್ನೂ ಅಧಿಕವಾಗಲಿದೆ ಎಂದು ತಿಳಿದುಬಂದಿತು.
ಉತ್ಖನನದ 2ನೇ ದಿನ: 2ನೇ ದಿನದ ಉತ್ಖನನದ ವೇಳೆ ಶ್ರೀ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ಪ್ರಾಚೀನ ಕಾಲದ ಅವಶೇಷವೊಂದು ಪತ್ತೆಯಾಯಿತು.
ಉತ್ಖನನದ 3ನೇ ದಿನ: ಈ ದಿನದ ಉತ್ಖನನ ವೇಳೆ ಸ್ಥಳದ ಕೋಟೆಯ ಗೋಡೆಯಲ್ಲಿ ಶಿವಲಿಂಗ ಸಿಕ್ಕಿತು. ಇದು ಹಿತ್ತಾಳೆ, ಕಂಚು, ತಾಮ್ರ ಅಥವಾ ಬೆಳ್ಳಿಯದ್ದಾ? ಎಂಬ ಕುತೂಹಲ ಮೂಡಿತು.
ಉತ್ಖನನದ 4ನೇ ದಿನ: ಈ ದಿನದಂದು ಕಂಬದ ಗೋದಿ, ಲೋಹದ ಗಂಟೆ, ಕಲ್ಲಿನ ಕೊಡಲಿ ಪತ್ತೆಯಾಗಿವೆ.
ಗ್ರಾಮ ಪೂರ ಉತ್ಖನನ?
ಆರಂಭದಲ್ಲಿ ಸಿಕ್ಕ ತಂಬಿಗೆಯಲ್ಲಿ, ಅಪರೂಪದಲ್ಲಿ ಅಪರೂಪ ಎನ್ನುವಂತ ಹವಳ, ಮಾಣಿಕ್ಯ ನೀಲಮಣಿ ಸಿಕ್ಕಿರುವುದು ಭಾರೀ ವಿಶೇಷ. ಈ ಮುತ್ತು ಹವಳಗಳನ್ನು ಚಿನ್ನಾಭರಣದ ಜತೆಗೆ ಅತ್ಯಂತ ಸೂಕ್ಷ್ಮವಾಗಿ ಬಳಸಲಾಗಿದ್ದು, ಅಂದಿನ ಚಿನ್ನಾಭರಣದ ಕುಶಲ ಕರ್ಮಿಗಳ ಕೌಶ್ಯಲದ ಪ್ರಭುದ್ದತೆ ಅನಾವರಣಗೊಳ್ಳುತ್ತದೆ. ಈ ಮೂಲಕ ವ್ಯಾಪಾರ ಸಂಸ್ಕೃತಿಯು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಗ್ರಾಮದ ಜನರಿಗೆ ಸೂಕ್ತ ಪರಿಹಾರ ಮತ್ತು ಪುನರ್ವಸತಿ ನೀಡುವುದರ ಮೂಲಕ ಗ್ರಾಮದಲ್ಲಿ ಸಂಪೂರ್ಣ ಉತ್ಖನನ ಆಗಬೇಕು ಎನ್ನುವ ಕೂಗು ಕೂಡ ಕೇಳಿಬಂದಿವೆ. ಈ ಬಗ್ಗೆ ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.