HDK  
ರಾಜ್ಯ

'ಅತಿ ವಿನಯಂ ಧೂರ್ತ ಲಕ್ಷಣಂ': ಡಿಕೆಶಿ ಭೇಟಿ ಆಗ್ತಾರೆ ಅಂತಿದ್ದಂತೆ ಕುಮಾರಣ್ಣ ವ್ಯಂಗ್ಯ! | HDK

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ 'ಸಲಹೆ' ಮತ್ತು 'ಹಿರಿಯರ ಗೌರವ'ದ ರಾಜಕೀಯ ಜೋರಾಗಿ ಸಾಗಿದೆ. "ಸಮಯ ಕೊಟ್ಟರೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ(HDK) ಅವರನ್ನೂ ಭೇಟಿ ಮಾಡಿ ಸಲಹೆ ಪಡೆಯುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡ ಬೆನ್ನಲ್ಲೇ, ಇತ್ತ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಡಿಕೆಶಿ ಹೇಳಿದ್ದೇನು?

ಬೆಂಗಳೂರಿನಲ್ಲಿ ಸೋಮವಾರ ಸಂಜೆ ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ, ಜಗದೀಶ್ ಶೆಟ್ಟರ್ ಮತ್ತು ಸದಾನಂದ ಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
"ರಾಜ್ಯಕ್ಕೆ ಸೇವೆ ಮಾಡಿರುವ ಹಿರಿಯರ ಅನುಭವ ಮತ್ತು ಮಾರ್ಗದರ್ಶನ ನಮಗೆ ಬೇಕು. ನಾನು ಕೇವಲ ಮೊಯ್ಲಿ ಅವರನ್ನು ಮಾತ್ರವಲ್ಲ, ಜಗದೀಶ್ ಶೆಟ್ಟರ್, ಸದಾನಂದ ಗೌಡ ಹಾಗೂ ಬೊಮ್ಮಾಯಿ ಅವರನ್ನೂ ಭೇಟಿ ಮಾಡಿದ್ದೇನೆ. ಸಮಯ ಕೊಟ್ಟರೆ ಕುಮಾರಸ್ವಾಮಿ ಅವರನ್ನೂ ಭೇಟಿ ಮಾಡುವೆ. ಇವರೆಲ್ಲರೂ ರಾಜ್ಯಕ್ಕೆ ಸೇವೆ ಸಲ್ಲಿಸಿದ್ದು, ಅವರಿಗೆ ನೀಡಬೇಕಾದ ಗೌರವವನ್ನು ನಾವು ಕೊಡಲೇಬೇಕು" ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದರು.

ಕುಮಾರಣ್ಣ ಕೊಟ್ಟ ಕಡಕ್ ತಿರುಗೇಟು!

ಡಿಕೆಶಿ ಅವರ ಈ ಭೇಟಿಯ ಪ್ಲಾನ್ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ಕುಮಾರಸ್ವಾಮಿ ಅವರು ತಮ್ಮದೇ ಶೈಲಿಯಲ್ಲಿ ಲೇವಡಿ ಮಾಡಿದ್ದಾರೆ.
ನಾನೇನು ಸಲಹೆ ಕೊಡಲಿ?: "ಅವರೇ ತುಮಕೂರಿನ ಭಾಷಣದಲ್ಲಿ ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಏನು ಕಿತ್ತಾಕಿದ್ದಾರೆ ಎಂದು ಕೇಳಿದ್ದರು. ಏನು ಹರಿದಾರೆ ಎಂದಿದ್ದಾರೆ. ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿ ಏನೂ ಕೆಲಸ(ಏನು ಹರಿದಿಲ್ಲ) ಮಾಡಿಲ್ಲ ಎಂದ ಮೇಲೆ, ಈಗ ನನ್ನ ಹತ್ತಿರ ಬಂದು ಏನು ಸಲಹೆ ತಗೊಳ್ತಾರೆ?" ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಫೋಟೋ ಪ್ರಚಾರಕ್ಕಾಗಿ ನಾಟಕ: "ಅವರಿಗೆ ನಿಜವಾಗಿ ಸಲಹೆ ಬೇಕಾಗಿಲ್ಲ. ಕೇವಲ ಪತ್ರಿಕೆಗಳಲ್ಲಿ ಮತ್ತು ಟಿವಿಗಳಲ್ಲಿ ಫೋಟೋ ಬರಬೇಕಾಗಿದೆ. ನಾನು ನೋಡಿ ಎಲ್ಲರ ಹತ್ತಿರ ಹೋಗಿ ಗೌರವ ಕೊಡುತ್ತಿದ್ದೇನೆ ಎಂದು ಜಗತ್ತಿಗೆ ತೋರಿಸಿಕೊಳ್ಳಲು ಫೋಟೋ ಬೇಕಾಗಿದೆ ಅಷ್ಟೇ" ಎಂದು ಕುಮಾರಣ್ಣ ಕಿಡಿಕಾರಿದ್ದಾರೆ.
ಗಾದೆ ಮಾತು ನೆನಪಿಸಿದ ಮಾಜಿ ಸಿಎಂ: ಕಾಂಗ್ರೆಸ್ ನಾಯಕರ ವರ್ತನೆಯನ್ನು ಟೀಕಿಸುತ್ತಾ, "ನಮ್ಮ ಹಿರಿಯರು ಒಂದು ಗಾದೆ ಮಾತು ಹೇಳಿದ್ದಾರೆ, ಅದೇ 'ಅತಿ ವಿನಯಂ ಧೂರ್ತ ಲಕ್ಷಣಂ' (ಅತಿಯಾದ ವಿನಯ ತೋರಿಸುವುದು ವಂಚಕರ ಲಕ್ಷಣ). ಇವರ ಕಥೆಯೂ ಹಾಗೆಯೇ ಆಗಿದೆ" ಎಂದು ತೀಕ್ಷ್ಣವಾಗಿ ಹೇಳಿದ್ದಾರೆ. ಒಟ್ಟಾರೆಯಾಗಿ, ಈ ಇಬ್ಬರು ನಾಯಕರ ವಾಗ್ಯುದ್ಧ ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.