Satish Jarkiholi > ವಕ್ಫ್ ಮಂಡಳಿ ವಿಚಾರಕ್ಕೆ ಸತೀಶ್ ಜಾರಕಿಹೊಳಿ ರಿಯಾಕ್ಷನ್
ಬೆಂಗಳೂರು: ಮಧ್ಯಪ್ರದೇಶದ ವಕ್ಫ್ ಮಂಡಳಿಯಲ್ಲಿ ಹಿಂದೂಗಳನ್ನು ಸದಸ್ಯರನ್ನಾಗಿ ನೇಮಕ ಮಾಡಿರುವ ವಿಚಾರಕ್ಕೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮಂಡಳಿಗೆ ಸದಸ್ಯರನ್ನು ನೇಮಕ ಮಾಡುವ ಸಂಪೂರ್ಣ ಅಧಿಕಾರ ಆಯಾ ಸರ್ಕಾರಕ್ಕೆ ಇರುತ್ತದೆ. ಹೀಗಾಗಿ ಈ ವಿಷಯದ ಬಗ್ಗೆ ಚರ್ಚೆ ಮಾಡುವುದು ಅನಾವಶ್ಯಕ ಎಂದಿದ್ದಾರೆ. ಹಿಂದೂ-ಮುಸ್ಲಿಂ ವಿಷಯಗಳನ್ನು ಇಟ್ಟುಕೊಂಡು ಏನು ಮಾಡುವುದು ಎಂದು ಪ್ರಶ್ನಿಸಿದ ಅವರು, ರಾಮಮಂದಿರ, ಹಿಂದೂ-ಮುಸ್ಲಿಂ ಹಾಗೂ ಪಾಕಿಸ್ತಾನದ ವಿಚಾರಗಳನ್ನು ಹೊರತುಪಡಿಸಿ ನಮಗೆ ಮಾಡಲು ಬೇರೆ ಸಾಕಷ್ಟು ಕೆಲಸಗಳಿವೆ. ಇದು ನಮ್ಮ ರಾಜ್ಯಕ್ಕೆ ಸಂಬಂಧಿಸಿದ ವಿಚಾರವಲ್ಲ ಮತ್ತು ಇಂತಹ ವಿಚಾರಗಳು ನಮ್ಮ ಆದ್ಯತೆಯೂ ಅಲ್ಲ ಎಂದರು.
ಚುನಾವಣಾ ಆಯೋಗ ಅವರ ಕೈಯಲ್ಲೇ ಇದೆ!
ಇನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಎನ್‌ಡಿಎ ನಾಯಕರು ನೀಡಿರುವ ದೂರಿನ ಕುರಿತು ಪ್ರತಿಕ್ರಿಯಿಸಿದ ಸಚಿವ ಜಾರಕಿಹೊಳಿ, ಚುನಾವಣಾ ಆಯೋಗ ಅವರ ಕೈಯಲ್ಲೇ ಇದೆ. ಅಧಿಕಾರದ ಕಂಟ್ರೋಲ್ ಎಲ್ಲವೂ ಅವರ ಬಳಿ ಇದ್ದರೂ ನಮ್ಮ ಮೇಲೆಯೇ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಚುನಾವಣಾ ಆಯೋಗದ ಎಲ್ಲಾ ನಿಯಮಗಳನ್ನು ಅವರೇ ರೂಪಿಸಿದ್ದು, ನಾವೇನೂ ಮಾಡಿದ್ದಲ್ಲ ಹಾಗೂ ನಿಯಮಗಳನ್ನು ಮೀರಿ ಅಧಿಕಾರಿಗಳು ಏನನ್ನೂ ಮಾಡಲು ಸಾಧ್ಯವಿಲ್ಲ. ಕೇಂದ್ರದ ಅಧಿಕಾರಿಗಳು ತನಿಖೆಗೆ ಬರುವುದಾದರೆ ಬರಲಿ, ಒಂದು ಕ್ಷೇತ್ರದಲ್ಲಿ ಎರಡೇ ಲಕ್ಷ ಮತದಾರರಿರುತ್ತಾರೆ, ಅಲ್ಲಿ ಹೆಚ್ಚಾಗಿ ಅಕ್ರಮ ಮಾಡಲು ಬರುವುದಿಲ್ಲ. ಫಾರ್ಮ್ ನೀಡಿದ ಮೇಲೆ ಚರ್ಚ್, ಮಸೀದಿ, ಮಂದಿರ ಎಲ್ಲಿಗಾದರೂ ಹೋಗಿ ಭರ್ತಿ ಮಾಡಿಕೊಂಡು ಬರುತ್ತೇವೆ, ಅದು ನಮಗೆ ಬಿಟ್ಟ ವಿಚಾರ. ಹೆಚ್ಚು ಮತದಾರರಾದರೆ ಮಾತ್ರ ಸಮಸ್ಯೆ ಎಂದು ಹೇಳಿದ್ದಾರೆ. ಆ್ಯಪ್‌ಗೆ ಹೊಸದಾಗಿ ಸೇರಿಸಲು ಅವಕಾಶವಿಲ್ಲ ಹಾಗೂ ಅನಕ್ಷರಸ್ಥರು ಇರುವ ಕಾರಣ ತಾವು ಟೀಮ್ ಮಾಡಿದ್ದು, ಇದರಿಂದ ಬಿಜೆಪಿ ಮತ್ತು ಜೆಡಿಎಸ್ ನವರ ಕೆಲಸ ಕಡಿಮೆಯಾಗಿದೆ ಎಂದರು.
ಬಿಜೆಪಿಯವರಿಗೆ ಸುದ್ದಿಯಲ್ಲಿರಲು ಒಂದು ವಿಚಾರ ಬೇಕಷ್ಟೇ ಎಂದು ಆರೋಪಿಸಿದ ಸಚಿವರು, ಇಂತಹ ಗೊಂದಲಗಳನ್ನು ಮಾಡುವುದರಲ್ಲಿ ಅವರು ನಿಸ್ಸೀಮರಿದ್ದು, ತಮ್ಮದೇ ಚುನಾವಣಾ ಆಯೋಗಕ್ಕೆ ಹೋಗಿ ದೂರು ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ ಹಾಗೂ ಹೊಸದಾಗಿ ನಿಯಮ ರೂಪಿಸಲು ಯಾರಿಗೂ ಅವಕಾಶವಿಲ್ಲ ಎಂದು ಹೇಳಿದರು.
ಬುಡ ಸ್ವಲ್ಪ ಅಲ್ಲಾಡುತ್ತದೆ, ಆಮೇಲೆ ಸರಿ ಹೋಗುತ್ತದೆ
ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಕುರಿತು ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ಎಲ್ಲರೂ ಕೂಡಿ ಸಭೆ ಮಾಡಬೇಕಿದ್ದು, ಈಗಾಗಲೇ ಒಂದು ತಿಂಗಳು ತಡವಾಗಿದೆ. ಎಸ್‌ಐಆರ್ ಆದ ಮೇಲೆ ಅಧಿವೇಶನ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. ಸಂಪುಟ ವಿಸ್ತರಣೆಯ ಬಳಿಕ ಸ್ವಲ್ಪ ಬುಡ ಅಲ್ಲಾಡುವುದು ಸಹಜ, ಎರಡ್ಮೂರು ದಿನ ಅಲ್ಲಾಡುತ್ತದೆ, ಆ ಮೇಲೆ ಎಲ್ಲವೂ ಸರಿ ಹೋಗುತ್ತದೆ ಎಂದರು.
ಮುಖ್ಯಮಂತ್ರಿಗಳಾಗಿ ಡಿ ಕೆ ಶಿವಕುಮಾರ್ ಅವರೇ ಮುಂದುವರಿಯಲಿದ್ದು, ಹೊಸ ಸಿಎಂ ಬರಲ್ಲ. ಇನ್ನು ಹೊಸಬರಿಗೆ ಸಚಿವಸ್ಥಾನ ನೀಡುವುದು ಸಿಎಂ ಹಾಗೂ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿದ್ದಾರೆ.