ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ  
ರಾಜ್ಯ

ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಎನ್​ಡಿಎ ಕ್ಲೀನ್‌ಸ್ವೀಪ್!...ಭ್ರಷ್ಟ ಹಾಗೂ ಅಭಿವೃದ್ಧಿಶೂನ್ಯ ಸರ್ಕಾರವನ್ನು ಜನ ಧಿಕ್ಕರಿಸಿದ್ದಾರೆ ಎಂದ ವಿಜಯೇಂದ್ರ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳಿಗೆ ನಡೆದ ನಾಲ್ಕೂ ಸ್ಥಾನಗಳಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಭರ್ಜರಿ ಜಯಗಳಿಸಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸಂತಸ ಹಂಚಿಕೊಂಡಿದ್ದು, ಇದು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನತೆ ನೀಡಿರುವ ಸ್ಪಷ್ಟ ತೀರ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ವಿಜೇತ ಅಭ್ಯರ್ಥಿಗಳಿಗೆ ಮತ್ತು ಮತದಾರರಿಗೆ ಅಭಿನಂದನೆಗಳನ್ನು ಸಲ್ಲಿಸಿರುವ ಬಿವೈವಿ, ಗುರುಪರಂಪರೆಯ ಸಂಸ್ಕೃತಿ ಮತ್ತು ವಿದ್ವತ್ ಜನರ ಸಮಾಜವಾಗಿರುವ ನಮ್ಮ ರಾಜ್ಯದ ಪದವೀಧರರು ಹಾಗೂ ಶಿಕ್ಷಕರು, ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯ ಹಾಗೂ ರಾಷ್ಟ್ರದಲ್ಲಿ ಕಲುಷಿತಗೊಳಿಸಲು ಯತ್ನಿಸುತ್ತಿರುವ ಕ್ಷುದ್ರ ರಾಜಕೀಯ ವ್ಯವಸ್ಥೆಗೆ ತಕ್ಕ ಉತ್ತರ ನೀಡಿದ್ದಾರೆ. ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಬೆಂಬಲಿಸುವ ಮೂಲಕ, ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಭ್ರಷ್ಟ ಹಾಗೂ ಅಭಿವೃದ್ಧಿಶೂನ್ಯ ಕಾಂಗ್ರೆಸ್ ಸರ್ಕಾರವನ್ನು ಧಿಕ್ಕರಿಸಿದ್ದಾರೆ ಎಂದು ಆರೋಪಿಸಿದರು.

ಈ ಚುನಾವಣಾ ಫಲಿತಾಂಶವು ರಾಷ್ಟ್ರದಲ್ಲಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಸಲು ಹುನ್ನಾರ ನಡೆಸುತ್ತಿರುವ ಶಕ್ತಿಗಳ ವಿರುದ್ಧ ಜನತೆ ನೀಡಿರುವ ತೀರ್ಪಾಗಿದ್ದು, ಕರ್ನಾಟಕದಲ್ಲಿ ನಡೆಯಲಿರುವ 2028ರ ಚುನಾವಣೆಗೆ ಸ್ಪಷ್ಟ ದಿಕ್ಸೂಚಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಮತ ಕಳ್ಳತನ ಹಾಗೂ ಚುನಾವಣಾ ವ್ಯವಸ್ಥೆಯ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ಸಿಗರಿಗೆ ಇದು ದಿಟ್ಟ ಉತ್ತರವಾಗಿದೆ ಎಂದಿರುವ ಅವರು, ಬ್ಯಾಲೆಟ್ ಮತದಾನದ ಮೂಲಕ ನಡೆದ ಈ ಚುನಾವಣೆಯಲ್ಲೂ ಮತದಾರರು ಮೈತ್ರಿಕೂಟದ ಪರವಾಗಿ ನಿಲ್ಲುವ ಮೂಲಕ ಇಂಡಿಯಾ ಒಕ್ಕೂಟದವರ ವಾದಕ್ಕೆ ತಕ್ಕ ತಿರುಗೇಟು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನಾದರೂ ರಾಹುಲ್ ಗಾಂಧಿಯವರಾದಿಯಾಗಿ ಇಂಡಿಯಾ ಮುಖಂಡರೆಲ್ಲರೂ ನೈಜ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಪಾರದರ್ಶಕ ಚುನಾವಣಾ ವ್ಯವಸ್ಥೆಯನ್ನು ಒಪ್ಪಿಕೊಂಡು, ಭಾರತದ ಸಾಂವಿಧಾನಿಕ ವ್ಯವಸ್ಥೆಯನ್ನು ಗೌರವಿಸಲಿ. ಇಲ್ಲದಿದ್ದರೆ ಭವಿಷ್ಯದಲ್ಲಿ ದೇಶದ ಜನತೆ ನಿಮಗೆ ಮತಪತ್ರದ ಮೂಲಕವೂ ದಿಟ್ಟ ಉತ್ತರ ನೀಡಲಿದ್ದಾರೆ, ಇವಿಎಂ ಯಂತ್ರದ ಮೂಲಕವೂ ನೇರ ಉತ್ತರ ನೀಡಿ ವಾಸ್ತವ ಫಲಿತಾಂಶವನ್ನು ಪ್ರಮಾಣೀಕರಿಸಲಿದ್ದಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಕರ್ನಾಟಕ ವಿಧಾನ ಪರಿಷತ್ತಿನ ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರಗಳಿಗೆ ನಡೆದ ಚುನಾವಣಾ ಫಲಿತಾಂಶವು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಪ್ರಬುದ್ಧ ಮತದಾರರ ಕ್ಷೇತ್ರಗಳಾದ ಈ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ನಾಲ್ಕೂ ಸ್ಥಾನಗಳನ್ನು ಬಾಚಿಕೊಳ್ಳುವ ಮೂಲಕ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಈ ಐತಿಹಾಸಿಕ ಗೆಲುವು ಕೇವಲ ರಾಜಕೀಯ ಪಕ್ಷವೊಂದರ ಯಶಸ್ಸಷ್ಟೇ ಅಲ್ಲ, ಬದಲಿಗೆ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಜನತೆ ನೀಡಿರುವ ಸ್ಪಷ್ಟ ಅತೃಪ್ತಿಯ ಸಂಕೇತ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಬ್ಯಾಲೆಟ್ ಪೇಪರ್ ವಾದಕ್ಕೆ ಮತದಾರರ ನೇರ ಉತ್ತರ

ದೇಶಾದ್ಯಂತ ಇವಿಎಂ ಯಂತ್ರಗಳ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣೆ ನಡೆಸಬೇಕೆಂದು ಕಾಂಗ್ರೆಸ್ ಸೇರಿದಂತೆ ಇಂಡಿಯಾ ಒಕ್ಕೂಟವು ನಿರಂತರವಾಗಿ ಧ್ವನಿ ಎತ್ತುತ್ತಾ ಬಂದಿದೆ. ಚುನಾವಣಾ ಆಯೋಗದ ವಿರುದ್ಧವೂ ವಾಗ್ದಾಳಿ ನಡೆಸಲಾಗಿದೆ. ಆದರೆ, ತಮಾಷೆಯೆಂದರೆ ವಿಧಾನ ಪರಿಷತ್ ಚುನಾವಣೆಗಳು ಮೊದಲಿನಿಂದಲೂ ಬ್ಯಾಲೆಟ್ ಪೇಪರ್ ಪದ್ಧತಿಯ ಆಧಾರದ ಮೇಲೆಯೇ ನಡೆಯುತ್ತವೆ. ಸ್ವತಃ ಬ್ಯಾಲೆಟ್ ಪೇಪರ್ ಮೂಲಕವೇ ನಡೆದ ಈ ಚುನಾವಣೆಯಲ್ಲೂ ಎನ್‌ಡಿಎ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿರುವುದು ವಿಪಕ್ಷಗಳ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬ್ಯಾಲೆಟ್ ಪೇಪರ್‌ನಲ್ಲೇ ಚುನಾವಣೆ ನಡೆದರೂ ಫಲಿತಾಂಶ ನಮ್ಮ ಪರವಾಗಿಯೇ ಬಂದಿದೆ ಎಂಬ ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದಾರೆ.

ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಕುಂಠಿತಗೊಂಡಿದೆ ಎಂಬ ಆರೋಪಗಳು ಪದವೀಧರರು ಮತ್ತು ಶಿಕ್ಷಕರ ವಲಯದಿಂದ ಕೇಳಿಬರುತ್ತಿದ್ದವು. ಉದ್ಯೋಗಾವಕಾಶಗಳ ಕೊರತೆ, ಶೈಕ್ಷಣಿಕ ವಲಯದ ಸಮಸ್ಯೆಗಳು ಮತ್ತು ಸರ್ಕಾರದ ಆಡಳಿತ ಶೈಲಿಯ ಬಗ್ಗೆ ಬುದ್ಧಿವಂತ ಮತದಾರರು ಈ ಚುನಾವಣೆಯ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಮುಂಬರುವ ದಿನಗಳಲ್ಲಿ ವಿಪಕ್ಷಗಳು ಈ ಫಲಿತಾಂಶವನ್ನು ಮುಂದಿಟ್ಟುಕೊಂಡು ಸರ್ಕಾರದ ವೈಫಲ್ಯಗಳನ್ನು ಇನ್ನಷ್ಟು ತೀವ್ರವಾಗಿ ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವುದು ಖಚಿತವಾಗಿದ್ದು, ರಾಜಕೀಯ ವಲಯದಲ್ಲಿ ಮುಂದಿನ ದಿನಗಳು ಮತ್ತಷ್ಟು ಕುತೂಹಲ ಮೂಡಿಸಲಿವೆ.