ಬೆಂಗಳೂರು: ವೈದ್ಯಕೀಯ, ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಎದುರು ನೋಡುತ್ತಿರುವ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಿಗಾಗಿ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಆಯೋಜಿಸಿರುವ ಎರಡು ದಿನಗಳ ‘ವಿದ್ಯೋತ್ಸವ ಎಜುಕೇಷನ್ ಎಕ್ಸ್ಪೋ’ಗೆ ಮೊದಲ ದಿನ ಭರ್ಜರಿ ಸ್ಪಂದನೆ ದೊರೆಯಿತು.
ಜಯನಗರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಎಕ್ಸ್ಪೋಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಶನಿವಾರ ಚಾಲನೆ ನೀಡಿ ಶುಭ ಹಾರೈಸಿದರು.
ರಾಮಲಿಂಗಾರೆಡ್ಡಿ ಶ್ಲಾಘನೆ: ದ್ವಿತೀಯ ಪಿಯುಸಿ ಉತ್ತೀರ್ಣರಾದ ಮಕ್ಕಳಲ್ಲಿ ತಮ್ಮದೇ ಆದ ಆಲೋಚನೆಗಳಿರಲಿವೆ. ಅವುಗಳನ್ನು ಸಾಕಾರಗೊಳಿಸಲು ಮತ್ತು ಶಕ್ತಿಯನ್ನು ತುಂಬುವ ಕೆಲಸವನ್ನು ಕಾಲೇಜುಗಳು ಮಾಡಬೇಕಿದೆ. ವಿಆರ್ಎಲ್ ಸಮೂಹ ಸಂಸ್ಥೆ ಇಂತಹದ್ದೊಂದು ಎಕ್ಸ್ ಪೋ ಆಯೋಜಿಸಿರುವುದು ನಿಜಕ್ಕೂ ಉತ್ತಮ ಕೆಲಸ ಎಂದು ರಾಮಲಿಂಗಾರೆಡ್ಡಿ ಶ್ಲಾಘಿಸಿದರು.
ಭವಿಷ್ಯದ ಶಿಕ್ಷಣದ ಮಾಹಿತಿ: ದ್ವಿತೀಯ ಪಿಯು ಉತ್ತೀರ್ಣರಾಗಿ ವಿವಿಧ ಕೋರ್ಸ್ ಗಳನ್ನು ಸೇರುತ್ತಿರುವ ವಿದ್ಯಾರ್ಥಿಗಳು ತಮ್ಮ ಪಾಲಕರು, ಸ್ನೇಹಿತರೊಂದಿಗೆ ಆಗಮಿಸಿ ತಮ್ಮ ಗೊಂದಲಗಳನ್ನು ಬಗೆಹರಿಸಿಕೊಂಡರು. ಉದ್ಯೋಗದ ದೃಷ್ಟಿಯಿಂದ ಯಾವ ಕೋರ್ಸ್ ಆಯ್ಕೆ ಮಾಡಿಕೊಂಡರೆ ಉತ್ತಮ, ಸಂಶೋಧನಾ ಕ್ಷೇತ್ರದಲ್ಲಿ ಮುಂದುವರಿದಲ್ಲಿ ವಿಜ್ಞಾನದಲ್ಲಿ ಯಾವ ವಿಭಾಗ ಹೆಚ್ಚು ಸಹಕಾರಿ, ಕಂಪ್ಯೂಟರ್ ಸೈನ್ಸ್ ಹೊರತುಪಡಿಸಿ ಉಳಿದ ಬ್ರಾಂಚ್ಗಳಲ್ಲಿಯೂ ಪ್ಲೇಸ್ಮೆಂಟ್ ದೊರೆಯಲಿದೆಯೇ? ಬಿಸಿಎ, ಎಂಬಿಎ ಕೋರ್ಸ್ಗಳಿಂದ ಯಾವ ಲಾಭ? ಸ್ಪರ್ಧಾತ್ಮಕ ಪರೀಕ್ಷೆಗೆ ಹೇಗೆ ಓದಬೇಕೆಂಬುದು ಸೇರಿ ಹತ್ತಾರು ಗೊಂದಲಗಳನ್ನು ಪರಿಹರಿಸಿಕೊಂಡರು ಹಾಗೂ ತಿಳಿಯದ ಮಾಹಿತಿಯನ್ನು ಪಡೆದು ನೆಮ್ಮದಿಯಾದರು. ಇಂತಹದ್ದೊಂದು ಎಕ್ಸ್ಪೋ ಆಯೋಜಿಸಿದ್ದಕ್ಕಾಗಿ ವಿಜಯವಾಣಿ ಸಂಸ್ಥೆಗೂ ಧನ್ಯವಾದಗಳನ್ನು ಸಚಿವರು ಅರ್ಪಿಸಿದರು.
ಎಜುಕೇಷನ್ ಎಕ್ಸ್ಪೋ ಅನಿವಾರ್ಯ: ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಿಗೆ ಉನ್ನತ ಶಿಕ್ಷಣ ಕೋರ್ಸ್ ಮತ್ತು ವಿಭಾಗಗಳ ಆಯ್ಕೆಯಲ್ಲಿನ ಗೊಂದಲಗಳ ನಿವಾರಣೆಗಾಗಿ ಹಾಗೂ ಮಕ್ಕಳಲ್ಲಿ ಅರಿವು ಮೂಡಿಸುವುದಕ್ಕಾಗಿ ಇಂತಹ ಎಕ್ಸ್ ಪೋಗಳು ಅವಶ್ಯಕವಾಗಿವೆ. ಪ್ರತಿವರ್ಷ ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಾರೆ. ಇದರ ಜತೆಗೆ ಖಾಸಗಿ ವಿಶ್ವವಿದ್ಯಾಲಯಗಳಿಗೂ ಪ್ರವೇಶ ಪಡೆಯುತ್ತಾರೆ. ಆದರೆ, ಮಕ್ಕಳಿಗೆ ವೆಬ್ಸೈಟ್ಗಳಲ್ಲಿ ಒಂದಿಷ್ಟು ಮಾಹಿತಿ ದೊರೆಯಲಿವೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಯಾವ ರೀತಿಯ ಸೌಲಭ್ಯಗಳಿರಲಿವೆ, ಸಂಶೋಧನೆಗಳು ನಡೆಸಬಹುದು ಎಂಬುದನ್ನು ತಿಳಿಯಲು ವಿಸ್ತೃತ ಮಾಹಿತಿಗಾಗಿ ಎಕ್ಸ್ಪೋಗಳು ಸಹಕಾರಿಯಾಗಲಿವೆ ಎಂದು ಪಾಲಕರು ಮತ್ತು ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು. ಎಕ್ಸ್ ಪೋದಲ್ಲಿ ರಾಮಯ್ಯ ಅನ್ವಯಿಕ ವಿಶ್ವವಿದ್ಯಾಲಯ, ರೇವಾ ವಿವಿ, ಪ್ರೆಸಿಡೆನ್ಸಿ, ಸಪ್ತಗಿರಿ ಎನ್ಪಿಎಸ್ ವಿಶ್ವವಿದ್ಯಾಲಯ ಸೇರಿ ಹತ್ತಾರು ವಿಶ್ವವಿದ್ಯಾಲಯಗಳು ಭಾಗವಹಿಸಿವೆ.
50ಕ್ಕೂ ಹೆಚ್ಚಿನ ಮಳಿಗೆ ಸಾವಿರಾರು ಜನ ಭೇಟಿ
ಎಕ್ಸ್ಪೋದಲ್ಲಿ ರಾಜ್ಯದ ವಿವಿಧ ಕಾಲೇಜುಗಳ 50ಕ್ಕೂ ಹೆಚ್ಚಿನ ಮಳಿಗೆಗಳಿವೆ. ಎಲ್ಲ ಮಳಿಗೆಗಳಲ್ಲಿಯೂ ಪ್ರತಿ ಕಾಲೇಜುಗಳು ತಮ್ಮದೇ ವಿಶಿಷ್ಟತೆಯನ್ನು ಹೊಂದಿವೆ. ಕೋರ್ಸ್, ಸೌಲಭ್ಯ, ಕ್ಯಾಂಪಸ್, ಪ್ಲೇಸ್ಮೆಂಟ್, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ, ಪಠ್ಯಕ್ರಮ ಸೇರಿ ಹತ್ತಾರು ಬಗೆಯ ವೈವಿಧ್ಯತೆಗಳು ಒಂದೇ ಸೂರಿನಡಿ ದೊರೆತದ್ದು ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಸಂತಸವನ್ನು ತಂದಿತು. ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಸಾವಿರಾರು ಜನರು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಪ್ರೆಸಿಡೆನ್ಸಿ ವಿವಿಯಲ್ಲಿ ಸಂಶೋಧನೆ, ನಾವೀನ್ಯತೆಗೆ ಆದ್ಯತೆ
ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ನಾವೀನ್ಯತೆ, ಸಂಶೋಧನೆ ಮತ್ತು ಪ್ರಾಯೋಗಿಕ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ವಿಶೇಷವಾಗಿ ವಿದ್ಯಾರ್ಥಿಯ ವೈಯಕ್ತಿಕ ಬೆಳವಣಿಗೆ ಜತೆಗೆ ಶೈಕ್ಷಣಿಕ ಶ್ರೇಷ್ಠತೆಯನ್ನು ಹೊಂದುವ ಮೂಲಕ ಸಮಗ್ರ ಶಿಕ್ಷಣವನ್ನು ನೀಡುವುದು ಸಂಸ್ಥೆಯ ಉದ್ದೇಶವಾಗಿದೆ ಎನ್ನುತ್ತಾರೆ ಆಪರೇಷನಲ್ ಮ್ಯಾನೇಜರ್ ಗಿರಿ ಪ್ರಕಾಶ್. ಕಂಪ್ಯೂಟರ್ ಸೈನ್ಸ್, ಇಂಜಿನಿಯರಿಂಗ್, ಮ್ಯಾನೇಜ್ಮೆಂಟ್, ವಾಣಿಜ್ಯ, ಕಾನೂನು, ಡಿಸೈನ್ ಸೇರಿ ಹತ್ತಾರು ಕೋರ್ಸ್ಗಳನ್ನು ಹೊಂದಿವೆ. ಶಿಕ್ಷಣ ಕ್ಷೇತ್ರದಲ್ಲಿ 50 ವರ್ಷಗಳ ಪರಂಪರೆಯನ್ನು ಹೊಂದಿದ್ದು, ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ನಲ್ಲಿ ಎನ್ಐಆರ್ಎಫ್ ರ್ಯಾಂಕಿಂಗ್ ಹೊಂದಿದೆ. ಜಾಗತಿಕ ಮೌಲ್ಯಾಧಾರಿತ ಶಿಕ್ಷಣ, ಸಮಾಜದ ಮೇಲಿನ ಕಾಳಜಿಯನ್ನು ಹೊಂದುವಂತೆ ಮಾಡುವುದು ಸಂಸ್ಥೆಯ ದೂರದೃಷ್ಟಿ ಚಿಂತನೆಯನ್ನು ಹೊಂದಿದೆ. 10 ಅಡ್ವಾನ್ಸ್ಡ್ ಸ್ಕೂಲ್, 600ಕ್ಕೂ ಹೆಚ್ಚಿನ ಕಾರ್ಪೊರೇಟ್ ಪಾರ್ಟ್ನರ್ಸ್, 70ಕ್ಕೂ ಹೆಚ್ಚಿನ ವಿಶೇಷ ಪ್ರೋಗ್ರಾಂಗಳು, ವಿವಿಧ 38 ದೇಶಗಳ 180ಕ್ಕೂ ಹೆಚ್ಚಿನ ಅಂತಾರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆ ಮತ್ತು ಶೇ.100 ಪ್ಲೇಸ್ಮೆಂಟ್ ಹೊಂದಿರುವುದು ಸಂಸ್ಥೆಯ ಹೆಗ್ಗಳಿಕೆಗೆ ಕಾರಣವಾಗಿದೆ.
ವಿಜಯವಾಣಿ ಕಾರ್ಯಕ್ಕೆ ನಟಿ ಸಂಜನಾ ಮೆಚ್ಚುಗೆ
ಎಜುಕೇಷನ್ ಎಕ್ಸ್ ಪೋಗೆ ಬಿಗ್ಬಾಸ್ ಖ್ಯಾತಿಯ ನಟಿ ಸಂಜನಾ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಲೇಜುಗಳು ಆರಂಭವಾಗುತ್ತಿರುವ ಸಂದರ್ಭದಲ್ಲಿ ಎಕ್ಸ್ ಪೋ ಮಾಡಿರುವುದು ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಬಹಳಷ್ಟು ಅನುಕೂಲವಾಗಲಿದೆ. ವಿಜಯವಾಣಿ ಉತ್ತಮ ಕೆಲಸ ಮಾಡಿದೆ ಎಂದರು. ವಿವಿಧ ಸ್ಟಾಲ್ಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಈ ವೇಳೆ ವಿದ್ಯಾರ್ಥಿಗಳು, ಪಾಲಕರು, ಸ್ಟಾಲ್ಗಳಲ್ಲಿದ್ದ ಸಿಬ್ಬಂದಿ ನಟಿ ಜತೆ ಸೆಲ್ಫಿ ತೆಗೆದುಕೊಂಡು ಸಂತಸಪಟ್ಟರು.
ಕೌಶಲಪೂರ್ಣ ಬೋಧನೆ ಸಪ್ತಗಿರಿಯ ಆಕರ್ಷಣೆ
ಹೆಸರುಘಟ್ಟದಲ್ಲಿರುವ ಸಪ್ತಗಿರಿ ಎನ್ಪಿಎಸ್ ವಿಶ್ವವಿದ್ಯಾಲಯವು ರೋಮನ್ ವಾಸ್ತುಶಿಲ್ಪದ ಮೂಲಕವೇ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಹೊರನೋಟ ಮಾತ್ರವಲ್ಲ, ಪಠ್ಯಕ್ರಮ, ಕ್ಯಾಂಪಸ್, ಪ್ಲೇಸ್ಮೆಂಟ್ ಮತ್ತು ಕೌಶಲಪೂರ್ಣ ಬೋಧನೆಯೂ ವಿದ್ಯಾರ್ಥಿಯನ್ನು ಬಹುಶಿಸ್ತೀಯ ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳುತ್ತಿದೆ ಎನ್ನುತ್ತಾರೆ ಸಂಸ್ಥೆಯ ಮಾರ್ಕೆಟಿಂಗ್ ವ್ಯವಸ್ಥಾಪಕ ರಾಹುಲ್ ಗೌಡ. ಐಬಿಎಂ ಜತೆ ಒಡಂಬಡಿಕೆ ಮಾಡಿಕೊಂಡಿದ್ದು, ಇದೇ ಕೋರ್ಸ್ ಅನ್ನು ಬೇರೆ ಸಂಸ್ಥೆಗಳಲ್ಲಿ ಕಲಿಯಬೇಕಾದರೆ ನಿಗದಿತ ಶುಲ್ಕವನ್ನು ಪಾವತಿಸಬೇಕು. ಆದರೆ, ಸಪ್ತಗಿರಿಯಲ್ಲಿ ಐಬಿಎಂ ಕೋರ್ಸ್ ಅನ್ನು ಕೂಡ ಇತರೆ ಕೋರ್ಸ್ಗಳ ಜತೆಯಲ್ಲಿ ಕಲಿಸುತ್ತಿರುವುದು ವಿದ್ಯಾರ್ಥಿಗಳಿಗೆ ಕಲಿಕೆ ಜತೆಗೆ ಬೋನಸ್ ಆಗಿದೆ. ಪ್ರಾಬ್ಲಮ್ ಸಾಲ್ವಿಂಗ್ ಸ್ಕಿಲ್ಸ್, ನಾಯಕತ್ವ, ಪರಿಣಾಮಕಾರಿ ಸಂವಹನ ಕೌಶಲಗಳು ಸಂಸ್ಥೆಯಲ್ಲಿನ ಮೊದಲ ಆದ್ಯತೆಯಾಗಿದೆ. ಇಂಜಿನಿಯರಿಂಗ್, ಅನ್ವಯಿಕ ವಿಜ್ಞಾನ (ಅಲೈಡ್ ಸೈನ್ಸ್) ಬಿಸಿನೆಸ್ ಸ್ಟಡೀಸ್, ಮ್ಯಾನೇಜ್ಮೆಂಟ್ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಗುಣಮಟ್ಟದ ಜತೆಗೆ ಶ್ರೇಷ್ಠತೆಯನ್ನು ಕಾಯ್ದುಕೊಳ್ಳಲಾಗಿದೆ. ವಿಶೇಷ ಕಲಿಕಾ ಅನುಭವದೊಂದಿಗೆ ಸಮಾಜದಲ್ಲಿ ಪರಿವರ್ತನೆಯನ್ನು ತರುವುದು ಸಂಸ್ಥೆಯ ದೂರದೃಷ್ಟಿಯಾಗಿದೆ. ಜತೆಗೆ ಮಾನವ ಜಗತ್ತನ್ನು ಸುಧಾರಣೆಯತ್ತ ಕೊಂಡೊಯ್ಯುವಂತಹ ಮೌಲ್ಯವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಸಂತಸ ಹಂಚಿಕೊಂಡರು.
ಲಕ್ಕಿ ಡ್ರಾ ಕೂಪನ್
ಎಕ್ಸ್ಪೋಗೆ ಆಗಮಿಸುವ ಪ್ರತಿಯೊಬ್ಬರಿಗೂ ಲಕ್ಕಿ ಡ್ರಾದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿತ್ತು. ಪ್ರತಿ ಗಂಟೆಗೆ ಇಬ್ಬರು ಅದೃಷ್ಟಶಾಲಿಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಯಿತು. ಮೊದಲ ದಿನವೇ 20ಕ್ಕೂ ಹೆಚ್ಚು ಮಂದಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಒಂದೇ ಸೂರಿನಡಿ ಹತ್ತಾರು ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳ ಭವಿಷ್ಯದ ಬೇಕು/ಬೇಡಗಳನ್ನು ತಿಳಿಸಿಕೊಡುವ ವಿದ್ಯೋತ್ಸವ ಎಜುಕೇಷನ್ ಎಕ್ಸ್ ಪೋ ಪಾಲಕರು ಮತ್ತು ವಿದ್ಯಾರ್ಥಿಗಳ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. ಪ್ರವೇಶಾತಿ ಪಡೆಯುವ ಸಂದರ್ಭದಲ್ಲಿ ಸಣ್ಣ ಪುಟ್ಟ ಗೊಂದಲಗಳನ್ನೂ ಬಹಳ ಸುಲಭವಾಗಿ ಬಗೆಹರಿಸಿಕೊಳ್ಳಲು ಇದಕ್ಕಿಂತ ಮತ್ತೊಂದು ವೇದಿಕೆ ಸಿಗಲಾರದು.
| ಕೆ.ವಿಜಯಕಲಾ ಆಡ್ಸ್ ಮುಖ್ಯಸ್ಥೆ
ರೇವಾದಲ್ಲಿ ಜ್ಞಾನ ಜತೆ ಉದ್ಯಮಿಯಾಗುವ ಗುರಿ
ರೇವಾ ವಿಶ್ವವಿದ್ಯಾಲಯವು ನ್ಯಾಕ್ ಎ ಪ್ಲಸ್ ಗ್ರೇಡ್ ಪಡೆದಿದ್ದು, ಇಲ್ಲಿ ಶಿಕ್ಷಣವನ್ನು ಕೇವಲ ಜ್ಞಾನವನ್ನಾಗಿ ನೀಡುವ উদ্দেশ্য ಹೊಂದಿಲ್ಲ. ವ್ಯಾಸಂಗ ಮಾಡಿದ ಪ್ರತಿ ವಿದ್ಯಾರ್ಥಿಯನ್ನೂ ಉದ್ಯೋಗಿಯಾಗಿಸುವುದು ಮತ್ತು ನಂತರದ ಕಾಲಘಟ್ಟದಲ್ಲಿ ಉದ್ಯಮಿಯನ್ನಾಗಿ ರೂಪಿಸುವ ಗುರಿಯೊಂದಿಗೆ ಪಠ್ಯಕ್ರಮವನ್ನು ಸಿದ್ಧಪಡಿಸಿರುವುದು ಸಂಸ್ಥೆಯ ವಿಶೇಷತೆಯಾಗಿದೆ ಎನ್ನುತ್ತಾರೆ ವಿವಿ ಮಿಷನ್ ಆಫೀಸರ್ಸ್ ಮುಖ್ಯಸ್ಥೆ ನೇಹಾ. ವಿದ್ಯಾರ್ಥಿಯಲ್ಲಿನ ಕಲಿಕಾ ಕುತೂಹಲ ಅರಳುವಂತೆ ಮಾಡುವುದು, ಆತ್ಮವಿಶ್ವಾಸದಿಂದ ಮುನ್ನಡೆಸುವುದು ಹಾಗೂ ಉದ್ಯಮಿ, ನಾವೀನ್ಯತೆ, ನಾಯಕತ್ವ ಮತ್ತು ಬದಲಾವಣೆ ಬಯಸುವ ವ್ಯಕ್ತಿತ್ವವನ್ನು ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ. ಶೇ.100 ಪ್ಲೇಸ್ಮೆಂಟ್ ಹೊಂದಿರುವ ಸಂಸ್ಥೆಯು 600ಕ್ಕೂ ಹೆಚ್ಚಿನ ಕಂಪನಿಗಳೊಂದಿಗೆ ಎಂಒಯು ಮಾಡಿಕೊಂಡಿದೆ. ವಿದ್ಯಾರ್ಥಿಗೆ ಶಿಕ್ಷಣದ ಜತೆಗೆ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಆಸಕ್ತಿದಾಯಕವಾಗಿ ಬೆಳವಣಿಗೆ ಹೊಂದುವ ಪೂರಕ ಅವಕಾಶಗಳನ್ನು ಕಲ್ಪಿಸಲಾಗಿದೆ. ‘ಎಜುಕೇಟ್ ಟು ಎಂಟರ್ಪ್ರೆನರ್’ ಎಂಬ ಬದ್ಧತೆಯನ್ನು ಹೊಂದಿದೆ. ಕ್ಯಾಂಪಸ್ನಲ್ಲಿಯೇ 90ಕ್ಕೂ ಹೆಚ್ಚಿನ ಸ್ಟಾರ್ಟಪ್ ಇನ್ಕ್ಯೂಬೇಟ್ಗಳನ್ನು ಹೊಂದಲಾಗಿದೆ.
ಯುಪಿಎಸ್ಸಿ ಗುರಿ ತಲುಪಿಸುವ ಇನ್ಸೈಟ್ಸ್ ಐಎಎಸ್
ಯುಪಿಎಸ್ಸಿ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ಮತ್ತು ಆ ಗುರಿಯನ್ನು ಬೇರೆ ಸಂಸ್ಥೆಗಳಿಗಿಂತ ವಿಭಿನ್ನವಾಗಿ ಕರೆದೊಯ್ಯುವಲ್ಲಿ ಇನ್ಸೈಟ್ಸ್ ಐಎಎಸ್ ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ ಎನ್ನುತ್ತಾರೆ ಸಂಸ್ಥೆಯ ಕೋರ್ಸ್ ಲೀಡ್ ನರೇಶ್. ಸಂಸ್ಥೆಯಲ್ಲಿ ಅಭ್ಯರ್ಥಿಗಳು ಕೋರ್ಸ್ಗೆ ಸೇರಿದ ತಕ್ಷಣ ಒನ್ ಟು ಒನ್ ಸಂದರ್ಶನ ಮಾಡಿ ಅವರ ಸಾಮರ್ಥ್ಯ, ಕಲಿಕೆ ಮತ್ತು ಗುರಿಯನ್ನು ತಿಳಿದು ಮುಂದಿನ ಹೆಜ್ಜೆ ಹೇಗಿರಬೇಕು ಮತ್ತು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಯಾವ ರೀತಿಯ ಕಠಿಣ ಪರಿಶ್ರಮ ಅಗತ್ಯ ಎಂಬ ಮಾರ್ಗದರ್ಶನ ನೀಡಲಾಗುತ್ತದೆ. ಇಂಟಿಗ್ರೇಟೆಡ್ ಕೋರ್ಸ್ಗಳ ಮೂಲಕ ಎನ್ಸಿಇಆರ್ಟಿ ಪಠ್ಯಕ್ರಮದ ಜತೆಗೆ ಸ್ಪರ್ಧಾತ್ಮಕ ಕೋರ್ಸ್ಗಳ ಪಠ್ಯಕ್ರಮವನ್ನು ಸಿದ್ಧಪಡಿಸಿ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ವ್ಯಾಸಂಗ ಮಾಡುವ ವಾತಾವರಣ, ಕೋಚಿಂಗ್ ನೀಡಲಿದೆ. ಫೌಂಡೇಷನ್ ಕೋರ್ಸ್ನಲ್ಲಿಯೇ ಅಭ್ಯರ್ಥಿಗಳು ಮುಂದಿನ ಪಯಣದ ಕನಸು ಚಿಗುರೊಡೆಯಲಿದೆ. ಹೀಗಾಗಿ, ಇಲ್ಲಿಂದಲೇ ಯಶಸ್ಸಿನ ದಾರಿ ಸುಗಮವಾಗುವಂತೆ ಮಾಡುವಲ್ಲಿ ಇನ್ಸೈಟ್ಸ್ ಐಎಎಸ್ ಅಕಾಡೆಮಿಯು ನಿರಂತರವಾಗಿ ಯಶಸ್ಸು ಕಾಣುತ್ತಿದೆ. ಈ ಮೂಲಕ ರಾಜ್ಯದ ಹೆಚ್ಚೆಚ್ಚು ಮಂದಿ ಯುಪಿಎಸ್ಸಿ ತೇರ್ಗಡೆಯಾಗಲು ಕಾರಣವಾಗುತ್ತಿದೆ ಎಂದು ಸಂಸ್ಥೆಯ ಯಶಸ್ಸಿನ ಗುಟ್ಟುಗಳನ್ನು ಬಿಚ್ಚಿಟ್ಟರು.
ಜ್ಯೋತಿ ಇನ್ಸ್ಟಿಟ್ಯೂಟ್ನಲ್ಲಿ ಆರೋಹಿ ಬೆಳಕು
ಕನಕಪುರ ರಸ್ತೆಯಲ್ಲಿರುವ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ‘ಆರೋಹಿ’ ಎಂಬ ಯೋಜನೆಯು ನಿಜವಾಗಿಯೂ ವಿದ್ಯಾರ್ಥಿಗಳ ಬಾಳಲ್ಲಿ ಬೆಳಕಾಗಿದೆ. ಪದವಿ ವ್ಯಾಸಂಗ ಮಾಡುವ ಆಯ್ದ 50 ವಿದ್ಯಾರ್ಥಿಗಳಿಗೆ ಉಚಿತವಾಗಿ ಯುಪಿಎಸ್ಸಿ ಕೋಚಿಂಗ್ ನೀಡಲಾಗುತ್ತದೆ ಎಂದು ಸಂಸ್ಥೆಯ ಬಿ.ಕಾಂ. ವಿಭಾಗದ ಮುಖ್ಯಸ್ಥ ಚೇತನ್ ಕುಮಾರ್ ಎಸ್. ಮಾಹಿತಿ ಹಂಚಿಕೊಂಡರು. 4 ವರ್ಷಗಳ ಕಾಲ ಉಚಿತ ವಸತಿ ಸಹಿತ ಶಿಕ್ಷಣ ನೀಡಲಾಗುತ್ತದೆ. ಬಿ.ಕಾಂ., ಬಿಬಿಎ ಮತ್ತು ಬಿಸಿಎ ಕೋರ್ಸ್ಗಳನ್ನು ಬೋಧನೆ ಮಾಡಲಾಗುತ್ತಿದೆ. ಜತೆಗೆ ಎಂಬಿಎ ಮತ್ತು ಎಂ.ಕಾಂ ಕೋರ್ಸ್ಗಳನ್ನು ಕೂಡ ಓದಲು ಅವಕಾಶವಿದೆ. ಅಂತಾರಾಷ್ಟ್ರೀಯ ಸಹಯೋಗ, ಸ್ಟಾರ್ಟ್ ಅಪ್ ಪ್ರೋತ್ಸಾಹ ಮತ್ತು ಪೋಷಣೆ, ಕ್ಯಾಂಪಸ್ನಲ್ಲಿಯೇ ಪ್ಲೇಸ್ಮೆಂಟ್ ಕೊಡಿಸಲಾಗುತ್ತಿದೆ. ಮೆಟ್ರೋ ಸಂಪರ್ಕ ಕೂಡ ಇರುವುದರಿಂದ ವಿದ್ಯಾರ್ಥಿಗಳ ಸಂಚಾರಕ್ಕೂ ಅನುಕೂಲವಾಗಿದೆ. ಕನಕಪುರ ರಸ್ತೆಯ ಸಿಲ್ಕ್ ಇನ್ಸ್ಟಿಟ್ಯೂಟ್ನಿಂದ ಕೇವಲ 5 ನಿಮಿಷದ ಪ್ರಯಾಣವಾಗಿದೆ ಎನ್ನುತ್ತಾರೆ ಚೇತನ್ ಕುಮಾರ್.
ನನ್ನ ಮಗಳಿಗೆ ಒಳ್ಳೆಯ ಕಾಲೇಜು, ಕೋರ್ಸ್ಗಳ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ಎಜುಕೇಷನ್ ಎಕ್ಸ್ ಪೋ ಭೇಟಿ ನೀಡಿದ್ದೇನೆ. ಕಡಿಮೆ ಸಮಯದಲ್ಲಿ ಎಲ್ಲ ಮಾಹಿತಿಯೂ ಸಿಕ್ಕಿದೆ. ವಿಜಯವಾಣಿ ಅಚ್ಚುಕಟ್ಟಾಗಿ ಆಯೋಜಿಸಿದೆ. ಇಲ್ಲಿಗೆ ಭೇಟಿ ನೀಡುವಂತೆ ನೆರೆಮನೆಯವರಿಗೆ ಮತ್ತು ಸ್ನೇಹಿತರಿಗೆ ಹೇಳುವೆ.
| ಶಾಂತಲಾ ಕೇಶವರೆಡ್ಡಿ ನಾಗರಬಾವಿ
ನನ್ನ ಮಗ ಬಿಸಿಎ ಓದುತ್ತಿದ್ದಾನೆ. ವಿಜಯವಾಣಿ ಎಜುಕೇಷನ್ ಎಕ್ಸ್ಪೋ ದಲ್ಲಿ ಕೋರ್ಸ್, ಶುಲ್ಕ ಬಗ್ಗೆ ಮಾಹಿತಿ ಸಿಕ್ಕಿದೆ. ಎಕ್ಸ್ ಪೋಗೆ ಭೇಟಿ ನೀಡುವಂತೆ ಮಗನಿಗೆ ಹೇಳುವೆ. ಎಲ್ಲ ಕಾಲೇಜುಗಳಿಗೆ ತೆರಳಿ ವಿಚಾರಿಸಲು ಸಮಯ ಸಿಗುವುದಿಲ್ಲ. ಇಂತಹ ಎಜುಕೇಷನ್ ಎಕ್ಸ್ಪೋದಿಂದ ನಮಗೆ ಅನುಕೂಲವಾಗಿದೆ.
ನಾನು ಇಂಜಿನಿಯರಿಂಗ್ ಓದುತ್ತಿದ್ದೇನೆ. ನನ್ನ ತಮ್ಮನಿಗೆ ಯಾವ ಕೋರ್ಸ್ ಓದಬೇಕು ಎಂಬುದರ ಬಗ್ಗೆ ಮಾಹಿತಿ ಪಡೆಯಲು ಎಕ್ಸ್ ಪೋಗೆ ಭೇಟಿ ನೀಡಿದ್ದೇನೆ. ವಿದ್ಯಾರ್ಥಿಗಳು ಇಂತಹ ಎಜುಕೇಷನ್ ಎಕ್ಸ್ ಪೋಗೆ ಭೇಟಿ ಕೊಟ್ಟರೆ ಅತ್ಯುತ್ತಮ ಮಾಹಿತಿ ದೊರೆಯಲಿದೆ.
ವಿಜಯವಾಣಿಯ ‘ಎಜುಕೇಷನ್ ಎಕ್ಸ್ ಪೋ’ ಶಿಕ್ಷಣ ಜ್ಞಾನಗಳ ಕಣಜ. ಒಂದೇ ಸೂರಿನಡಿ ಉಪಯುಕ್ತ ಮಾಹಿತಿ ದೊರೆಯಿತು. ಕೋರ್ಸ್, ಕಾಲೇಜು, ಶುಲ್ಕ ಸೇರಿ ಪ್ಲೇಸ್ಮೆಂಟ್ ಮತ್ತು ಅಧಿಕ ಸಂಬಳದ ಬಗ್ಗೆ ಮಾಹಿತಿ ಪಡೆದಿದ್ದೇನೆ.
| ಅನುಷಾ ನಾಗರಬಾವಿ ಪಿಯು ವಿದ್ಯಾರ್ಥಿ
ನಾನು ದ್ವಿತೀಯ ಪಿಯು ಮುಗಿಸಿದ್ದೇನೆ. ಒಳ್ಳೆಯ ಕಾಲೇಜು ಮತ್ತು ಕೋರ್ಸ್ಗಳ ಬಗ್ಗೆ ಮಾಹಿತಿ ಪಡೆಯುವ ಸಲುವಾಗಿ ಎಜುಕೇಷನ್ ಎಕ್ಸ್ ಪೋಗೆ ಭೇಟಿ ಕೊಟ್ಟಿದ್ದೇನೆ. ಎಲ್ಲ ಶಿಕ್ಷಣ ಸಂಸ್ಥೆಗಳು ಉಪಯುಕ್ತ ಮಾಹಿತಿ ಕೊಟ್ಟಿದ್ದಾರೆ. ವಿಜಯವಾಣಿಗೆ ಧನ್ಯವಾದ ಸಲ್ಲಿಸುತ್ತೇನೆ.
ಗೀತಂ ಡೀಮ್ಡ್ ಟು ಬಿ ಯೂನಿವರ್ಸಿಟಿ 3 ಕ್ಯಾಂಪಸ್ ಹೊಂದಿದೆ. ಮುಖ್ಯ ಕ್ಯಾಂಪಸ್ ವಿಶಾಖಪಟ್ಟಣಂನಲ್ಲಿದೆ. ಪಿಯುಸಿ ಮುಗಿದ ಬಳಿಕ ಏನೇ ಕೋರ್ಸ್ ಓದಬೇಕೆಂದರೂ ವಿಶಾಖಪಟ್ಟಣಂ ಕ್ಯಾಂಪಸ್ನಲ್ಲಿ ಸಿಗಲಿದೆ. ಹೈದರಾಬಾದ್, ದೊಡ್ಡಬಳ್ಳಾಪುರದಲ್ಲಿ ಮತ್ತೆರಡು ಕ್ಯಾಂಪಸ್ಗಳಿವೆ. ದೊಡ್ಡಬಳ್ಳಾಪುರ ಕ್ಯಾಂಪಸ್ನಲ್ಲಿ ಇಂಜಿನಿಯರಿಂಗ್ ಪದವಿಯಲ್ಲಿ 10, ಸೈನ್ಸ್ನಲ್ಲಿ 6 ಮತ್ತು ಮ್ಯಾನೇಜ್ಮೆಂಟ್ ಪದವಿಯಲ್ಲಿ 7 ಕೋರ್ಸ್ಗಳಿವೆ. ಜತೆಗೆ, ಯುಜಿ, ಪಿಜಿ ಕೋರ್ಸ್ಗಳಿವೆ. ಗುಣಮಟ್ಟದ ಶಿಕ್ಷಣಕ್ಕೆ ಗೀತಂ ಡೀಮ್ಡ್ ಟು ಬಿ ಯೂನಿವರ್ಸಿಟಿ ಹೆಸರುವಾಸಿ. ಆಯಾ ಕಾಲಕ್ಕೆ ತಕ್ಕಂತೆ ಹೊಸ ಕೋರ್ಸ್ಗಳನ್ನು ಪರಿಚಯಿಸಲಾಗುತ್ತಿದೆ. ಕೌಶಲ ಆಧಾರಿತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ. ಸಾಕಷ್ಟು ವಿದ್ಯಾರ್ಥಿಗಳು ಮಳಿಗೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.
| ಗೋಪಿ ಆಡಳಿತ ವ್ಯವಸ್ಥಾಪಕ, ಗೀತಂ ಡೀಮ್ಡ್ ಟು ಬಿ ಯೂನಿವರ್ಸಿಟಿ
ಶಿಕ್ಷಣ ಕ್ಷೇತ್ರದಲ್ಲಿ ಸಿಎಂಆರ್ ಯೂನಿವರ್ಸಿಟಿ 36 ವರ್ಷ ಅನುಭವ ಹೊಂದಿದೆ. ಉತ್ಕೃಷ್ಟ ಶಿಕ್ಷಣಕ್ಕೆ ನಮ್ಮ ಸಂಸ್ಥೆ ಪ್ರಸಿದ್ಧಿ ಹೊಂದಿದೆ. ಸಿಎಂಆರ್ ಯೂನಿವರ್ಸಿಟಿ ಮತ್ತು ಸಿಎಂಆರ್ ಐಟಿಯಲ್ಲಿ 100ಕ್ಕೂ ಅಧಿಕ ಕೋರ್ಸ್ಗಳಿವೆ. ಮುಂದಿನ 20-30 ವರ್ಷಕ್ಕೆ ಯಾವ ಕೋರ್ಸ್ ಓದಬೇಕು ಎಂಬುದರ ಬಗ್ಗೆ ಅಧ್ಯಯನ ನಡೆಸಿ, ಅಂತಹ ಕೋರ್ಸ್ಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ. ವೃತ್ತಿ ಸಂಬಂಧಿತ, ಭವಿಷ್ಯ ಆಧಾರಿತ ಕೋರ್ಸ್ಗಳಿವೆ. ಕೈಗೆಟುಕುವ ದರದಲ್ಲಿ ಶುಲ್ಕ ಪಾವತಿಸಬಹುದು. ಮಧ್ಯಮವರ್ಗದ ವಿದ್ಯಾರ್ಥಿಗಳೂ ಓದಬಹುದು. ಹುಡುಗ ಮತ್ತು ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇದೆ.
| ಅಶ್ವಿತ್ ಮುರುಡಕ್ಕನವರ್ ಪ್ರೋಗ್ರಾಮ್ ಮ್ಯಾನೇಜರ್ ಸಿಎಂಆರ್ ಯೂನಿವರ್ಸಿಟಿ
ಶ್ರೀ ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯ (ಎಸ್ಜೆಎಂಯು) ಚಿತ್ರದುರ್ಗದಲ್ಲಿದೆ. 1980ರಲ್ಲಿ ಎಸ್ಜೆಎಂಯು ಆರಂಭವಾಗಿದೆ. 50 ಎಕರೆಯ ಪ್ರದೇಶದಲ್ಲಿ ಪ್ರತಿ ಕೋರ್ಸ್ಗೆ ಪ್ರತ್ಯೇಕ ಕ್ಯಾಂಪಸ್ ಇದೆ. ವೈದ್ಯಕೀಯ, ಇಂಜಿನಿಯರಿಂಗ್, ನರ್ಸಿಂಗ್, ಫಾರ್ಮಸಿ, ಡೆಂಟಲ್, ಫಿಸಿಯೋಥೆರಪಿ ಮತ್ತು ಅಲೈಡ್ ಸೈನ್ಸ್ ಸೇರಿ ಪದವಿ ಮತ್ತು ಸ್ನಾತಕೋತ್ತರ ಪದವಿ ಸೇರಿ ನೂರಾರು ಕೋರ್ಸ್ಗಳಿವೆ. ಕಳೆದ ವರ್ಷ ಇಂಜಿನಿಯರಿಂಗ್ ಪದವಿಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕೋರ್ಸ್ ಅನುಷ್ಠಾನಕ್ಕೆ ತಂದಿದ್ದು, ಪ್ರಸಕ್ತ ವರ್ಷ 80 ವಿದ್ಯಾರ್ಥಿಗಳು ಈ ಕೋರ್ಸ್ ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳಿಂದ ಈ ಕೋರ್ಸ್ಗೆ ಭಾರಿ ಬೇಡಿಕೆ ಬಂದಿದೆ. ಕೌಶಲ ಆಧಾರಿತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ. ಅತ್ಯುತ್ತಮ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದಾರೆ. ಹಾಸ್ಟೆಲ್ ವ್ಯವಸ್ಥೆಯೂ ಇದೆ.
| ಪಿ.ಆರ್.ಆಶಾ ಮಾನವ ಸಂಪನ್ಮೂಲ ಅಧಿಕಾರಿ, ಶ್ರೀ ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯ
ಡಾ.ಎಚ್.ಎನ್.ನ್ಯಾಷನಲ್ ಕಾಲೇಜ್ ಆಫ್ ಇಂಜಿನಿಯರಿಂಗ್ ಜಯನಗರದಲ್ಲಿದೆ. 600ಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇಂಜಿನಿಯರಿಂಗ್ನಲ್ಲಿ ಸಿಎಸ್ಇ, ಐಎಸ್ಇ, ಎಐ ಮತ್ತು ಡಿಎಸ್, ಇಸಿ ಕೋರ್ಸ್ಗಳಿವೆ. ಜತೆಗೆ, ಎಂಬಿಎ, ಎಂಸಿಎ ಕೋರ್ಸ್ಗಳಿವೆ. ನಮ್ಮ ಸಂಸ್ಥೆಯು ಶತಮಾನದ ಇತಿಹಾಸ ಹೊಂದಿದೆ. ನ್ಯಾಷನಲ್ ಕಾಲೇಜು ಆಫ್ ಎಜುಕೇಷನ್ ಸೊಸೈಟಿ (ಎನ್ಇಎಸ್) 21 ಇನ್ಸ್ಟಿಟ್ಯೂಷನ್ಗಳನ್ನು ಹೊಂದಿದೆ. ಎಲ್ಕೆಜಿಯಿಂದ ಪಿಜಿ ಕೋರ್ಸ್ಗಳಿವೆ. ವಿಶೇಷವಾಗಿ ಕೃತಕ ಬುದ್ಧಿಮತ್ತೆ (ಎಐ) ಕೋರ್ಸ್ಗಳಿವೆ. ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ ಇದೆ. ಕಳೆದ ವರ್ಷ ದ್ವಿತೀಯ ಪಿಯುಸಿನಲ್ಲಿ ಶೇ.95ಕ್ಕಿಂತ ಅಧಿಕ ಅಂಕ ಪಡೆದ 100 ವಿದ್ಯಾರ್ಥಿಗಳಿಗೆ 25 ಲಕ್ಷ ರೂ. ವಿದ್ಯಾರ್ಥಿವೇತನ ನೀಡಲಾಗಿತ್ತು. ಈ ಬಾರಿಯೂ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಇದನ್ನು ಪ್ರತಿಭಾವಂತ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬಹುದು.
| ಡಾ.ವಿಖ್ಯಾತ್ ಸಹ ಪ್ರಾಧ್ಯಾಪಕ, ಡಾ.ಎಚ್.ಎನ್.ನ್ಯಾಷನಲ್ ಕಾಲೇಜ್ ಆಫ್ ಇಂಜಿನಿಯರಿಂಗ್
ದಿ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ (ಐಸಿಎಸ್ಐ) ಬೆಂಗಳೂರು ಚಾಪ್ಟರ್ನಲ್ಲಿ ಕಂಪನಿಯ ಕಾರ್ಯದರ್ಶಿ ಸಂಬಂಧಿತ ಕೋರ್ಸ್ಗಳಿವೆ. ರಾಜಾಜಿನಗರದ 6ನೇ ಹಂತದಲ್ಲಿ ಐಸಿಎಸ್ಐ ಬೆಂಗಳೂರು ಚಾಪ್ಟರ್ ಕ್ಯಾಂಪಸ್ ಇದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಐಸಿಎಸ್ಐ ಕಾರ್ಯನಿರ್ವಹಿಸುತ್ತಿದೆ. 2.5 ವರ್ಷದಿಂದ ಹಿಡಿದು 5 ವರ್ಷವರೆಗಿನ ಕೋರ್ಸ್ಗಳಿವೆ. 12ನೇ ತರಗತಿ ಪಾಸಾದವರು ಈ ಕೋರ್ಸ್ ತೆಗೆದುಕೊಳ್ಳಬಹುದು. ಕೋರ್ಸ್ಗೆ ಸೇರುವ ಮುನ್ನ ಪ್ರವೇಶ ಪರೀಕ್ಷೆ ಪಾಸ್ ಮಾಡಬೇಕು. ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಮಂಗಳೂರು ಸೇರಿ ದೇಶಾದ್ಯಂತ 72 ಐಸಿಎಸ್ಐ ಕ್ಯಾಂಪಸ್ಗಳಿವೆ. ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ ಶೇ.50 ಶುಲ್ಕ ವಿನಾಯಿತಿ ಇದೆ. ಸೈನಿಕರ ಮಕ್ಕಳು ಯಾವುದೇ ಶುಲ್ಕ ಪಾವತಿಸದೆ ಕೋರ್ಸ್ ಓದಬಹುದು.
| ಪ್ರಿಯಾದರ್ಶಿನಿ ಕಾರ್ಯನಿರ್ವಾಹಕ ಸಹಾಯಕಿ, ಐಸಿಎಸ್ಐ ಬೆಂಗಳೂರು ಚಾಪ್ಟರ್
1984ರಲ್ಲಿ ಎಎಂಸಿ ಇನ್ಸ್ಟಿಟ್ಯೂಷನ್ಸ್ ಸ್ಥಾಪಿಸಲಾಯಿತು. 1999ರಲ್ಲಿ ಇಂಜಿನಿಯರಿಂಗ್ ಕೋರ್ಸ್ ಆರಂಭಿಸಿದ್ದೇವೆ. ಬೆಂಗಳೂರಿನಲ್ಲಿ 7 ಕ್ಯಾಂಪಸ್ಗಳಿವೆ. ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ನಲ್ಲಿ ಪ್ಲೇಸ್ಮೆಂಟ್ ನಡೆಸಲಾಗುತ್ತಿದೆ. ಸಾಕಷ್ಟು ವಿದ್ಯಾರ್ಥಿಗಳಿಗೆ ಪ್ಲೇಸ್ಮೆಂಟ್ ಮೂಲಕ ಉದ್ಯೋಗ ಸಿಕ್ಕಿದೆ. ಇಂಜಿನಿಯರಿಂಗ್ನಲ್ಲಿ ಪ್ರತಿಯೊಂದು ಕೋರ್ಸ್ಗೆ ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಗಿದೆ. 2ನೇ ವರ್ಷದಿಂದ ಕಡಿಮೆ ಶುಲ್ಕ ಇರಲಿದೆ. ನಾವು ಯಾವುದೇ ಡೊನೇಷನ್ ಪಡೆಯುವುದಿಲ್ಲ. ಪರಮಹಂಸ ಟ್ರಸ್ಟ್ನವರು ಎಎಂಸಿ ಇನ್ಸ್ಟಿಟ್ಯೂಷನ್ಸ್ ನಡೆಸುತ್ತಿದ್ದಾರೆ. ಮೇ 30ರಂದು ಬನ್ನೇರುಘಟ್ಟದ ಎಎಂಸಿ ಇನ್ಸ್ಟಿಟ್ಯೂಷನ್ಸ್ನಲ್ಲಿ ‘ಓಪನ್ ಡೇ’ ಇವೆಂಟ್ ಆಯೋಜಿಸಿದ್ದೇವೆ.
| ಆಕಾಶ್ ಜಾಕೋಬ್ ಹಿರಿಯ ಆಡಳಿತ ಸಲಹೆಗಾರ, ಎಎಂಸಿ ಇನ್ಸ್ಟಿಟ್ಯೂಷನ್ಸ್
ವಿಜಯವಾಣಿ ಆಯೋಜಿಸಿರುವ ಎಜುಕೇಷನ್ ಎಕ್ಸ್ಪೋದಲ್ಲಿ ಅದ್ವೈತ್ ಹುಂಡೈನಿಂದ ಮಳಿಗೆ ಸ್ಥಾಪಿಸಲಾಗಿದೆ. 2026ರಲ್ಲಿ ಅನಾವರಣವಾಗಿರುವ ‘ಎಕ್ಸ್ಟರ್’ ಕಾರು ಪ್ರದರ್ಶನಕ್ಕೆ ಇಟ್ಟಿದ್ದೇವೆ. ಈ ಕಾರು 7.5 ಲಕ್ಷ ರೂ.ನಿಂದ ಆರಂಭವಾಗಲಿದೆ. ವಿದ್ಯುತ್ಚಾಲಿತ ಕ್ರೇಟಾ ಕಾರು ಸಹ ನೋಡುಗರನ್ನು ಆಕರ್ಷಿಸುತ್ತಿದೆ. ಇದು 21 ಲಕ್ಷ ರೂ.ನಿಂದ ಆರಂಭವಾಗಲಿದೆ. ಟೆಸ್ಟ್ ಡ್ರೈವ್ ಸೌಲಭ್ಯ ಇದೆ.
| ಸುಹಾಸ್ ಮಾರಾಟ ಸಲಹೆಗಾರ ಅದ್ವೈತ್ ಹುಂಡೈ ಬನಶಂಕರಿ
ಎಲೈಟ್ ಮೋಟೋಕ್ರಾಫ್ಟ್ನಿಂದ ಹೊಸ ಮಾದರಿಯ 2 ವಿದ್ಯುತ್ಚಾಲಿತ ‘ಅಲ್ಟ್ರಾ ವಿಯೋಲೆಟ್’ ಬೈಕ್ ಅಭಿವೃದ್ಧಿಪಡಿಸಿದ್ದೇವೆ. ಅಲ್ಟ್ರಾ ವಿಯೋಲೆಟ್ ಎಕ್ಸ್ 47 ಮಾದರಿ ಬೈಕ್ಗೆ 2.84 ಲಕ್ಷ ರೂ. ಇದೆ. ಎಫ್77 ಮಾದರಿಯ ಮತ್ತೊಂದು ಬೈಕ್ಗೆ 2.59 ಲಕ್ಷ ರೂ. ದರ ಇದೆ. ವಿದ್ಯುತ್ಚಾಲಿತ ಬೈಕ್ಗಳ ಪೈಕಿ ಈ ಬೈಕ್ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿವೆ. 45 ನಿಮಿಷದಲ್ಲಿ ಶೇ.80 ಚಾರ್ಜಿಂಗ್ ಮಾಡಬಹುದು.
| ಸಂಜಯ್ ಪ್ರಾಡಕ್ಟ್ ಸ್ಪೆಷಲಿಸ್ಟ್, ಎಲೈಟ್ ಮೋಟೋಕ್ರಾಫ್ಟ್
ಎಜುಕೇಷನ್ ಎಕ್ಸ್ಪೋಗೆ ಬರುವವರಿಗೆ ವಿದ್ಯುತ್ಚಾಲಿತ ಎಥರ್ ಬೈಕ್ ಖರೀದಿಸುವ ಅವಕಾಶ ಇದೆ. ಸ್ಥಳದಲ್ಲಿಯೇ ಬೈಕ್ ವೀಕ್ಷಿಸಬಹುದು. ಎಥರ್ 450ಎಕ್ಸ್ ಬೈಕ್ 1.56 ಲಕ್ಷ ರೂ.ನಿಂದ ಆರಂಭವಾಗಲಿದೆ. ಎಥರ್ ರಿಜ್ಜಾ ಬೈಕ್ 1.40 ಲಕ್ಷ ರೂ. ದರ ಇದೆ. ಬೈಕ್ನಲ್ಲಿ ಲಿಥಿಯಂ ಬ್ಯಾಟರಿ ವ್ಯವಸ್ಥೆ ಇದೆ. ದೀರ್ಘಕಾಲದವರೆಗೆ ಬಾಳಿಕೆ ಬರಲಿದೆ.
ಇಂದು ತೆರೆ
ಎರಡು ದಿನಗಳ ಎಕ್ಸ್ಪೋಗೆ ಭಾನುವಾರ (ಮೇ 24) ತೆರೆ ಬೀಳಲಿದೆ. ವಿದ್ಯಾರ್ಥಿಗಳು ಹಾಗೂ ಪಾಲಕರು ಆಗಮಿಸಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಒಂದೇ ಸೂರಿನಡಿ ಹತ್ತಾರು ಕಾಲೇಜುಗಳ ಮಾಹಿತಿ ಮತ್ತೆ ಬೇರೆಲ್ಲೂ ಸಿಗುವುದಿಲ್ಲ. ಹೀಗಾಗಿ, ಈ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬಹುದಾಗಿದೆ.