ಹಾವೇರಿಯಲ್ಲಿ VAO ಪರೀಕ್ಷೆಯಲ್ಲಿ ಅಕ್ರಮವೆಸಗಿ ಸಿಕ್ಕಿಬಿದ್ದ ಟಾಪರ್ ಶಂಕರ್ ಬನ್ನೂರ್ 
ರಾಜ್ಯ

VAO ಟಾಪರ್​ ಶಂಕರ್​ ಬನ್ನೂರ್​ ಅಂದರ್​! ಗೂಗಲ್​ ಬಳಸಿ ಉತ್ತರ ಬರೆದವನ ವಿರುದ್ಧ ಎಫ್​ಐಆರ್​! Shankar Bannur

ಹಾವೇರಿ: ಪೊಲೀಸ್​ ಕಾನ್ಸ್​ಟೇಬಲ್​ ಪರೀಕ್ಷೆಯಲ್ಲಿ ಕೇವಲ 25 ಅಂಕ ಪಡೆದು, ಗ್ರಾಮ ಆಡಳಿತ ಅಧಿಕಾರಿ (VAO) ಪರೀಕ್ಷೆಯಲ್ಲಿ 151 ಅಂಕ ಪಡೆದು ರಾಜ್ಯಕ್ಕೆ ಟಾಪರ್​ ಆಗಿ ಹೊರಹೊಮ್ಮಿದ್ದ ಶಂಕರ್​ ಬನ್ನೂರ್ ಎಂಬಾತನ ಕಳ್ಳಾಟ ಬಯಲಾಗಿದೆ.

ಪರೀಕ್ಷಾ ಕೊಠಡಿಗೆ ಮೊಬೈಲ್​ ಫೋನ್​ ತೆಗೆದುಕೊಂಡು ಹೋಗಿ, ಅಲ್ಲಿ ಗೂಗಲ್​ ಲೆನ್ಸ್​ ಮೂಲಕ ಪ್ರಶ್ನೆಗಳನ್ನು ಕಾಪಿ ಮಾಡಿ, ಉತ್ತರ ಪಡೆದುಕೊಂಡಿರುವುದು ಬಯಲಾದ ಹಿನ್ನಲೆ ಆರೋಪಿದ ಅಭ್ಯರ್ಥಿ ಶಂಕರ್​ ಬನ್ನೂರ್​ ಮೇಲೆ ಹಾವೇರಿಯ, ಶಿಗ್ಗಾಂವ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

25 ರಿಂದ 151 ಅಂಕ ಪಡೆದಿದ್ದೇ ಆಶ್ಚರ್ಯ!

ಇನ್ನು ಈ ಶಂಕರ್​ ಬನ್ನೂರ್​​, ಕೆಲ ತಿಂಗಳುಗಳ ಹಿಂದೆ ನಡೆದಿದ್ದ ಕೆಎಸ್​ಆರ್​ಪಿ ಪೊಲೀಸ್​ ಕಾನ್ಸ್​ಟೇಬಲ್​ ಪರೀಕ್ಷೆಯಲ್ಲಿ ಕೇವಲ 25 ಅಂಕಗಳನ್ನು ಪಡೆದುಕೊಂಡಿದ್ದ. ಆದರೆ, ನಂತರ ನಡೆದಿದ್ದ, ಗ್ರಾಮ ಆಡಳಿತ ಅಧಿಕಾರಿ (VAO) ಪರೀಕ್ಷೆಯಲ್ಲಿ 151 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್​ ಆಗಿ ಹೊರಹೊಮ್ಮಿದ್ದ.

ಈ, ರೀತಿ ದಿಢೀರ್​ ಅಂಕ ಏರಿಕೆ ಕಂಡ ಕೆಲ ಸ್ಪರ್ಧಾರ್ಥಿಗಳು ಈ ಶಂಕರ್​ ಬನ್ನೂರ್ ಮೇಲೆ ಅನುಮಾನ ವ್ಯಕ್ತಪಡಿಸಿ, ಪರೀಕ್ಷೆ ನಡೆಸಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕ್ಕೆ ದೂರನ್ನು ಸಲ್ಲಿಸಿದ್ದರು. ಈ ದೂರನ್ನು ದಾಖಲಿಸಿಕೊಂಡ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ, ಈ ಅಭ್ಯರ್ಥಿಯ ಕುರಿತು ತನಿಖೆ ನಡೆಸುವಂತೆ ಹಾವೇರಿ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದರು.

CCTV ಯಲ್ಲಿ ಬಯಲಾದ ಕಳ್ಳಾಟ!

ಕೆಇಎ ನಿರ್ದೇಶಕರ ಆದೇಶದಂತೆ ಹಾವೇರಿ ಜಿಲ್ಲಾಧಿಕಾರಿಗಳು, ಈ ಶಂಕರ್​ ಬನ್ನೂರ್​ ಪರೀಕ್ಷೆ ಬರೆದಿದ್ದ ಕೊಠಡಿಯ ಸಿಸಿಟಿವಿ ಫೂಟೆಜ್​ಅನ್ನು ಪರೀಕ್ಷಿಸಿದಾಗ ಆತನ ಕಳ್ಳಾಟ ಬಯಲಾಗಿದೆ. ಪರೀಕ್ಷಾ ಕೊಠಡಿಗೆ ಮೊಬೈಲ್​ ತೆಗೆದುಕೊಂಡು ಹೋಗಿ ಅದರ ಮೂಲಕ ಪ್ರಶ್ನೆ ಪತ್ರಿಕೆಯನ್ನು ಸ್ಕ್ಯಾನ್​ ಮಾಡಿ ಉತ್ತರ ಪಡೆದು, ಓಎಂಆರ್​ ಪ್ರತಿಗಳಲ್ಲಿ ಉತ್ತರ ತುಂಬಿದ್ದಾನೆ. ಈ ಕಳ್ಳಾಟ ಪತ್ತೆಯಾದ ಕೂಡಲೇ ಆರೋಪಿ ಶಂಕರ್​ ಬನ್ನೂರ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಾನೇನು ತಪ್ಪು ಮಾಡಿಲ್ಲ!

ಇನ್ನು ಈ ಶಂಕರ್ ಬನ್ನೂರ್​ ಬಗ್ಗೆ ಅನುಮಾನ ವ್ಯಕ್ತವಾದಾಗ, ಆರೋಪಿ ನಾನು ಯಾವುದೇ ಅಕ್ರಮ ಕೆಲಸ ಮಾಡಿಲ್ಲ. ನಾನು ಈ ವರೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ನಡೆಸುವ ಸುಮಾರು 45 ಕ್ಕೂ ಹೆಚ್ಚಿನ ಪರೀಕ್ಷೆಗಳನ್ನು ಎದುರಿಸಿದ್ದೇನೆ. ನಾನು ಕಷ್ಟ ಪಟ್ಟು ಓದಿ ಪರೀಕ್ಷೆ ಪಾಸು ಮಾಡಿದ್ದೇನೆಂದು ಹೇಳಿಕೊಂಡಿದ್ದ. ಆದರೆ, ಈಗ ಇತ ನಡೆಸಿದ್ದ ಅಕ್ರಮ ಬಯಲಾಗಿದೆ.

ಎಫ್​ಐಆರ್​ ದಾಖಲು; ತನಿಖೆ ಚುರುಕು!

ಇನ್ನೂ ಈ ಶಂಕರ್ ಬನ್ನೂರ್​ ಪರೀಕ್ಷೆಯಲ್ಲಿ ಅಕ್ರಮ ಮಾಡಿ ಟಾಪರ್​ ಆಗಿ ಹೊರಹೊಮ್ಮಿದ ಹಿನ್ನಲೆ, ಶಿಗ್ಗಾಂವ್​ ಪೊಲೀಸರು ಇತನ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ. ನಂತರ ಇವನ ವಿಚಾರಣೆಯನ್ನು ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅತ್ಯಂತ ಜಾಗರೂಕತೆ ಹಾಗೂ ಕಟ್ಟುನಿಟ್ಟಿನಿಂದ ನಡೆಯಬೇಕಾದ ಪರೀಕ್ಷೆಯಲ್ಲಿ ಈ ಅಭ್ಯರ್ಥಿ ಅದೇಗೆ ಮೊಬೈಲ್​ ಅನ್ನು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋದ? ಇದಕ್ಕೆ ಅಲ್ಲಿಯ ಸಿಬ್ಬಂದಿಯ ಸಹಕಾರವಿತ್ತೇ? ಕೊಡಠ ಮೇಲ್ವಿಚಾರಕರಿಗೇ ಇದರ ಬಗ್ಗೆ ಅನುಮಾನ ಬಂದಿಲ್ಲವೇ? ಇದು ಕೇವಲ ಒಂದು ಕಡೆ ನಡೆದಿದಿಯೇ? ಅಥವಾ ಇದೊಂದು ಅಕ್ರಮ ಜಾಲದ ಮೂಲಕ ನಡೆದಿದೆಯೇ? ಎಂಬೆಲ್ಲಾ ಪ್ರಶ್ನೆಗಳಿಗೆ ಪೊಲೀಸ್ ವಿಚಾರಣೆ ನಡೆದ ನಂತರವೇ ಉತ್ತರ ಸಿಗಬೇಕಿದೆ.