ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಂಡುಬಂದ ದೃಶ್ಯ
- ಅಪ್ರಾಪ್ತರಿಂದ ಸ್ಕೂಟಿ ಚಾಲನೆ
- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಂಡುಬಂದ ದೃಶ್ಯ
- ಮಕ್ಕಳ ಪಾಲಕರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹ
ಬೆಂಗಳೂರು: ನಮ್ಮ ದೇಶದಲ್ಲಿ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರುವುದು ಹೊಸ ಸಂಗತಿಯೇನಲ್ಲ. ಟ್ರಾಫಿಕ್ ಪೊಲೀಸರು ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಸಹ ಸಾರ್ವಜನಿಕರು ತಪ್ಪು ಮಾಡುವುದನ್ನು ನಿಲ್ಲಿಸುತ್ತಿಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿ ಆರು ಜನ ಸುಮಾರು 12 ರಿಂದ 14 ವರ್ಷ ವಯೋಮಾನದ ಮಕ್ಕಳು (Underage Driving) ಸ್ಕೂಟಿಯನ್ನು ಚಲಾಯಿಸುತ್ತಿರುವ ಫೋಟೊಗಳು ಹರಿದಾಡುತ್ತಿವೆ.
ಬೆಳಿಗ್ಗೆ ವಾಕಿಂಗ್ಗೆಂದು ಹೊರಟಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು, ವಾಹನದ ಸಂಖ್ಯೆಯನ್ನು ಸಹ ನಮೂದಿಸಿ ಟ್ರಾಫಿಕ್ ಪೊಲೀಸರಿಗೆ ಇವರ ಪಾಲಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ್ದಾರೆ.
ಈ ಫೋಟೊ ವೈರಲ್ ಆಗುವ ಮೊದಲು 18 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಹುಡುಗನೊಬ್ಬ ಬೆಂಗಳೂರಿನ ಜನ ನಿಬಿಡ ಪ್ರದೇಶದಲ್ಲಿ ಸ್ಕೂಟಿಯನ್ನು ವೇಗವಾಗಿ ಚಲಾಯಿಸುತ್ತಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಆಗ ಸಹ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಕ್ರಮ ಕಥಗೊಳ್ಳುವಂತೆ ಕೇಳಿಕೊಳ್ಳಲಾಗಿತ್ತು.
ಈ ಫೋಟೊ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಆ ಮಕ್ಕಳಿಗಂತೂ ಬುದ್ಧಿಯಿಲ್ಲ, ಅವರ ಅಪ್ಪ-ಅಮ್ಮ ಏನು ಮಾಡುತಿರುತ್ತಾರೆ? ಎಂದು ಒಬ್ಬರು ಪ್ರಶ್ನಿಸಿದ್ದಾರೆ.
ಇನ್ನೊಬ್ಬರು ಮೊದಲು ಆ ಮಕ್ಕಳ ಪಾಲಕರನ್ನು ಒದ್ದು ಜೈಲಿಗೆ ಹಾಕಿ ಎಂದು ಆಗ್ರಹಿಸಿದ್ದಾರೆ. ಈ ಬೇಸಿಗೆ ರಜೆ ಪ್ರಾರಂಭವಾದರೆ ಸಾಕು ಈ ಚಿಕ್ಕ-ಚಿಕ್ಕ ಮಕ್ಕಳು ಗಾಡಿ ತೆಗೆದುಕೊಂಡು ರಸ್ತೆಗೆ ಬಂದು ಬೀಡುತ್ತಾರೆಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಕಾನೂನು ಏನು ಹೇಳುತ್ತೆ?
1. ಪೋಷಕರು ಅಥವಾ ವಾಹನ ಮಾಲೀಕರಿಗೆ ಶಿಕ್ಷೆ
ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವಾಗ ಸಿಕ್ಕಿಬಿದ್ದರೆ, ಅದರ ಸಂಪೂರ್ಣ ಜವಾಬ್ದಾರಿಯನ್ನು ಅವರ ಪೋಷಕರು ಅಥವಾ ಆ ವಾಹನದ ಮಾಲೀಕರು ಹೊರಬೇಕಾಗುತ್ತದೆ. ಪೋಷಕರಿಗೆ ಅಥವಾ ವಾಹನ ಮಾಲೀಕರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆಯಾಗಬಹುದು. ಚಾಲಕನ ಪೋಷಕರಿಗೆ 25,000 ರೂ. ವರೆಗೆ ದಂಡ ವಿಧಿಸಲಾಗುತ್ತದೆ.
2. ವಾಹನ ನೋಂದಣಿ ರದ್ದು
ಅಪ್ರಾಪ್ತ ವಯಸ್ಕರು ಚಲಾಯಿಸಿದ ವಾಹನದ ನೋಂದಣಿಯನ್ನು (RC) 12 ತಿಂಗಳವರೆಗೆ ರದ್ದುಗೊಳಿಸಲಾಗುತ್ತದೆ. ಅಂದರೆ ಒಂದು ವರ್ಷದವರೆಗೆ ಆ ವಾಹನವನ್ನು ಕಾನೂನುಬದ್ಧವಾಗಿ ರಸ್ತೆಗೆ ಇಳಿಸುವಂತಿಲ್ಲ.
3. ಮಗುವಿನ ಭವಿಷ್ಯದ ಮೇಲೆ ಪರಿಣಾಮ
ವಾಹನ ಚಲಾಯಿಸಿದ ಆ ಅಪ್ರಾಪ್ತ ವಯಸ್ಕನಿಗೆ ಭವಿಷ್ಯದಲ್ಲಿ ತೊಂದರೆಯಾಗುತ್ತದೆ. ಆ ಮಗುವಿಗೆ ಅವರಿಗೆ 25 ವರ್ಷ ತುಂಬುವವರೆಗೆ ಯಾವುದೇ ಚಾಲನಾ ಪರವಾನಗಿ (Driving Licence) ಅಥವಾ ಲರ್ನರ್ಸ್ ಲೈಸೆನ್ಸ್ ಸಿಗುವುದಿಲ್ಲ.
4. ವಿಮಾ ಸೌಲಭ್ಯ ಸಿಗುವುದಿಲ್ಲ
ಒಂದು ವೇಳೆ ಅಪ್ರಾಪ್ತ ವಯಸ್ಕ ವಾಹನ ಚಾಲನೆ ಮಾಡುವಾಗ ಅಪಘಾತ ಸಂಭವಿಸಿದರೆ, ಆ ವಾಹನದ ವಿಮಾ ಕಂಪನಿಯು ಯಾವುದೇ ಹಣವನ್ನು (Insurance Claim) ನೀಡುವುದಿಲ್ಲ. ಅಪಘಾತದ ಎಲ್ಲಾ ಖರ್ಚು ಮತ್ತು ನಷ್ಟವನ್ನು ಪೋಷಕರೇ ಭರಿಸಬೇಕಾಗುತ್ತದೆ,(ಏಜನ್ಸೀಸ್).