ಹೆಣ್ಣು ಭ್ರೂಣ ಹತ್ಯೆ ತಡೆಯಿರಿ ಎಂಬ ರಂಗೋಲಿ ಬಿಡಿಸಲಾಯಿತು
- ರಥಬೀದಿಯಲ್ಲಿ ಅರಳಿದ ರಂಗೋಲಿ
- ವಿರೂಪಾಕ್ಷನಿಗೆ ರಂಗಿನ ಸ್ವಾಗತ
ಹಂಪಿ: ವಿಜಯನಗರ ಸಾಮ್ರಾಜ್ಯದ ಅಧಿದೈವ ಪಂಪಾ ವಿರೂಪಾಕ್ಷೇಶ್ವರನಿಗೆ ಉತ್ಸವದ ಮೊದಲ ದಿನವಾದ ಶುಕ್ರವಾರ ಬಗೆಬಗೆಯ ಚಿತ್ತಾರಗಳ ಮೂಲಕ ಸ್ವಾಗತ ಕೋರಲಾಯಿತು. ನಸುಕಿನಲ್ಲಿಯೇ ನಾರಿಮಣಿಯರು ತರಹೇವಾರಿ ರಂಗು ಬಳಸಿ ರಂಗೋಲಿ ಬಿಡಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ವಿರೂಪಾಕ್ಷೇಶ್ವರನ ರಥಬೀದಿಯಲ್ಲಿ ನೂರಾರು ಜನರು ಸಡಗರ ಸಂಭ್ರಮದಿಂದ ರಂಗೋಲಿ ಸ್ಪರ್ಧೆಯಲ್ಲಿ ಭಾಗಿಯಾದರು. ಯುವತಿಯರಿಂದ ಹಿಡಿದು ವೃದ್ಧೆಯರವರೆಗೆ ಎಲ್ಲರೂ ಉತ್ಸಾಹದಿಂದ ಚಿತ್ತಾರ ಬಿಡಿಸಿದರು. ಬೆಳಗ್ಗೆ ಎಂಟು ಗಂಟೆಯ ವೇಳೆಗೆ ಸ್ಪರ್ಧೆಯು ಪೂರ್ಣಗೊಂಡಿತು. ಹಲವರು ಬಣ್ಣ ಬಣ್ಣಗಳನ್ನು ಬಳಸಿ ವಿವಿಧ ಚಿತ್ರಗಳನ್ನು ಬಿಡಿಸಿದರು.
ಹಂಪಿ ಉತ್ಸವಕ್ಕೆ ಸ್ವಾಗತ, ಹೆಣ್ಣು ಭ್ರೂಣ ಹತ್ಯೆ ತಡೆಯಿರಿ, ವಿಜಯನಗರ ಸಾಮ್ರಾಜ್ಯ ಬಿಂಬಿಸುವ ವರಹ, ವಿರೂಪಾಕ್ಷನ ಗೋಪುರ, ಕೃಷ್ಣದೇವರಾಯ, ಉಗ್ರನರಸಿಂಹ, ಕಲ್ಲಿನ ರಥ ಚಿತ್ರಿಸಿದರು. ಜೊತೆಗೆ ಶಿವ, ಗಣೇಶ, ನವಿಲು ಚಿತ್ರಗಳ ಜೊತೆಗೆ ಪ್ರಕೃತಿ ಸಂಬಂಧಿತ ರಂಗೋಲಿ ಹಾಕಿದ್ದು ಕಂಡುಬಂತು. ಸ್ಥಳೀಯರು ಹಾಗೂ ಪ್ರವಾಸಿಗರು, ವಿದೇಶಿ ಪ್ರವಾಸಿಗರು ವಿರೂಪಾಕ್ಷೇಶ್ವರನ ದರ್ಶನಕ್ಕೆ ಮೊದಲು ರಂಗೋಲಿ ಚಿತ್ರಣವನ್ನು ಕಣ್ತುಂಬಿಕೊಂಡರು.
ತಮ್ಮ ಇಷ್ಟದ ಚಿತ್ರದ ಜೊತೆ ಫೋಟೋ, ಸೆಲ್ಫಿ ಕ್ಲಿಕಿಸಿಕೊಂಡು ಹರ್ಷಪಟ್ಟರು. ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಒಟ್ಟು 41 ಸ್ಪರ್ಧಿಗಳು ಭಾಗವಹಿಸಿದರು. ರಂಗೋಲಿಗಳು ಹಂಪಿಯಲ್ಲಿ ಹಬ್ಬದ ಸಡಗರವನ್ನು ಮೂಡಿಸುವುದರ ಜೊತೆಗೆ ಹತ್ತಾರು ಜಾಗೃತಿ ಸಂದೇಶಗಳನ್ನು ಸಾರಿದ್ದು ವಿಶೇಷವಾಗಿತ್ತು. ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ನಾವು ಹಂಪಿ ನೋಡಲು ಬಂದಿದ್ದು, ಇದೇ ವೇಳೆ ಉತ್ಸವ ಹಮ್ಮಿಕೊಂಡಿರುವುದು ಖುಷಿ ನೀಡಿತು. ಉತ್ಸವದಲ್ಲಿ ಓಡಾಡಿ ಹಲವು ವಿಶೇಷಗಳು ಕಣ್ತುಂಬಿಕೊಂಡಿವೆ. ಬಣ್ಣ ಬಣ್ಣದ ರಂಗೋಲಿ ನೋಡಿ ಸಂತಸ ಹೆಚ್ಚಿಸಿತು.