ಕಂದಾಯ ಇಲಾಖೆಯಿಂದ ಶೈಕ್ಷಣಿಕ ವಿದ್ಯಾರ್ಹತೆ ಬದಲಾವಣೆ
ಬೆಂಗಳೂರು: ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ 750 ಭೂಮಾಪಕರ (ಸರ್ವೆಯರ್) ನೇಮಕಾತಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ, ಪಿಯುಸಿ ಸೇರಿ ಇತರ ಶೈಕ್ಷಣಿಕ ವಿದ್ಯಾರ್ಹತೆಯನ್ನು ಕೈಬಿಡಲು ಮುಂದಾಗಿರುವುದಕ್ಕೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘ (ಎಕೆಎಸ್‌ಎಸ್‌ಎ) ಹಾಗೂ ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿಗಳ ಸಂಘ( ಕೆಎಸ್‌ವಿಎಸ್) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಹಳೆಯ ಶೈಕ್ಷಣಿಕ ವಿದ್ಯಾರ್ಹತೆ ಮುಂದುವರಿಸಿ ಭೂಮಾಪಕರ ನೇಮಕಾತಿಗೆ ಮರು ಅಧಿಸೂಚನೆ ಹೊರಡಿಸುವಂತೆ ಸಾವಿರಾರು ಅಭ್ಯರ್ಥಿಗಳು, ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಮನವಿ ಸಲ್ಲಿಸಲು ನಾಲ್ಕೈದು ಬಾರಿ ಕಚೇರಿಗೆ ತೆರಳಿದ್ದರೂ ಇಲಾಖೆ ಆಯುಕ್ತರು ಕೈಗೆ ಸಿಗುತ್ತಿಲ್ಲ ಎಂದು ಅಭ್ಯರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ 750 ಭೂಮಾಪಕರ ನೇಮಕಾತಿಗೆ ಸರ್ಕಾರ 2 ವರ್ಷದ ಹಿಂದೆ ಅಧಿಸೂಚನೆ ಹೊರಡಿಸಿತ್ತು. ಇದಕ್ಕಾಗಿ ಶೈಕ್ಷಣಿಕ ವಿದ್ಯಾರ್ಹತೆ ನಿಗದಿಪಡಿಸಿದ್ದ ಕೆಪಿಎಸ್‌ಸಿ, ಯಾವುದೇ ವಿಶ್ವವಿದ್ಯಾಲಯದಲ್ಲಿ ಬಿಇ (ಸಿವಿಲ್), ಬಿ.ಟೆಕ್(ಸಿವಿಲ್), ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ, ಪಿಯುಸಿ ಅಥವಾ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ನಡೆಸುವ 12ನೇ ತರಗತಿಯಲ್ಲಿ (ಸಿಬಿಎಸ್‌ಇ ಅಥವಾ ಐಸಿಎಸ್‌ಇ) ವಿಜ್ಞಾನ ವಿಷಯ ಪಡೆದು ಗಣಿತ ವಿಷಯದಲ್ಲಿ ಶೇ.60ಕ್ಕಿಂತ ಅಧಿಕ ಪಡೆದವರು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ ಎಂದು ಹೇಳಿತ್ತು. ವೃತ್ತಿ ಶಿಕ್ಷಣ ಇಲಾಖೆ ನಡೆಸುವ ‘ಲ್ಯಾಂಡ್ ಅಂಡ್ ಸಿಸಿ ಸರ್ವೇ’ ಪದವಿ ಪೂರ್ವ ಡಿಪ್ಲೋಮಾ, ಉದ್ಯೋಗ ಹಾಗೂ ತರಬೇತಿ ಇಲಾಖೆ ನಡೆಸುವ ‘ಐಟಿಐ ಇನ್ ಸರ್ವೇ ಟ್ರೇಡ್’ನಲ್ಲಿ ಉತ್ತೀರ್ಣರಾಗಿರಬೇಕು ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿತ್ತು. ಈ ಮೇಲಿನ ಕೋರ್ಸ್ ಓದಿರುವ ಲಕ್ಷಾಂತರ ಅಭ್ಯರ್ಥಿಗಳು, ಶುಲ್ಕ ಪಾವತಿಸಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕೆಲ ತಿಂಗಳ ನಂತರ ಒಳಮೀಸಲಾತಿ ಕಾರಣ ಕೊಟ್ಟು ಸರ್ಕಾರ, ಈ ನೇಮಕಾತಿ ಪರೀಕ್ಷೆಯನ್ನೇ ರದ್ದುಗೊಳಿಸಿತ್ತು. ಇದರಿಂದ ಲಕ್ಷಾಂತರ ಉದ್ಯೋಗಿಗಳು ನಿರಾಸೆಗೆ ಒಳಗಾಗಿದ್ದರು.
ಇದೀಗ, ಭೂಮಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ, ಹೊಸದಾಗಿ ವೃಂದ ಮತ್ತು ನೇಮಕಾತಿ(ಸಿಆಂಡ್ ಆರ್) ನಿಯಮ ಸಿದ್ಧಪಡಿಸುತ್ತಿದೆ. ಇದರಲ್ಲಿ ಬಿಇ (ಸಿವಿಲ್), ಬಿ.ಟೆಕ್ (ಸಿವಿಲ್), ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ಹೊರತುಪಡಿಸಿ ಪಿಯುಸಿ ಸೇರಿ ಉಳಿದ ಶೈಕ್ಷಣಿಕ ವಿದ್ಯಾರ್ಹತೆ ಕೈಬಿಡಲು ಮುಂದಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅಭ್ಯರ್ಥಿಗಳು, ಹಳೇ ಅಧಿಸೂಚನೆಯ ಶೈಕ್ಷಣಿಕ ವಿದ್ಯಾರ್ಹತೆ ಆಧಾರಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಬೇಕು. ಅರ್ಜಿ ಸಲ್ಲಿಸಿರುವ ಪೈಕಿ 50 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು, ಪಿಯುಸಿ, ‘ಲ್ಯಾಂಡ್ ಅಂಡ್ ಸಿಸಿ ಸರ್ವೇ ಹಾಗೂ ‘ಐಟಿಐ ಇನ್ ಸರ್ವೇ ಟ್ರೇಡ್’ ಕೋರ್ಸ್ ಓದಿರುವವರು ಇದ್ದಾರೆ. ಏಕಾಏಕಿ ಈ ಕೋರ್ಸ್‌ಗಳು ಕೈಬಿಟ್ಟರೆ ಸಾವಿರಾರು ನಿರುದ್ಯೋಗಿಗಳಿಗೆ ಅನ್ಯಾಯವಾಗಲಿದೆ. ಇಂಜಿನಿಯರಿಂಗ್ ಅಥವಾ ಡಿಪ್ಲೋಮಾ ಶಿಕ್ಷಣ ಪಡೆಯಲು ಆರ್ಥಿಕ ಸಾಮರ್ಥ್ಯ ಇಲ್ಲದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಭೂಮಾಪಕರ ಹುದ್ದೆಗೆ ಪ್ರಬಲ ಅಕಾಂಕ್ಷಿಯಾಗಿದ್ದಾರೆ. ಹೊಸ ಕರಡು ನಿಯಮದಿಂದ ಇವೆರಲ್ಲೂ ಸ್ಪರ್ಧೆಯಿಂದ ಹೊರಗುಳಿಯಲಿದ್ದಾರೆ ಎಂದು ವಿಜಯವಾಣಿ ಬಳಿ ಅಭ್ಯರ್ಥಿಗಳು ಅಲವತ್ತುಕೊಂಡಿದ್ದಾರೆ.
ಕೆಪಿಎಸ್‌ಸಿ ಬದಲು ಕೆಇಎಗೆ ವಹಿಸಿ:
ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬ, ಅಕ್ರಮ, ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಕೇಳುಬರುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಮುಂದೆ ನಡೆಯುವ ಯಾವುದೇ ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಕೆಪಿಎಸ್‌ಸಿ ಬದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ವಹಿಸಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ. ವಿದ್ಯಾಭ್ಯಾಸ ಪೂರ್ಣಗೊಳಿಸುತ್ತಿದ್ದಂತೆ ಸರ್ಕಾರಿ ಹುದ್ದೆಗೆ ಸೇರಬೇಕೆಂದು ಲಕ್ಷಾಂತರ ಮಂದಿ ಹಗಲಿರುಳು ಶ್ರಮ ವಹಿಸಿ ಅಭ್ಯಾಸ ಮಾಡುತ್ತಾರೆ. ಆದರೆ, ಕೆಪಿಎಸ್‌ಸಿ ವ್ಯವಸ್ಥೆಯು ಸರ್ಕಾರಿ ನಿಯಂತ್ರಣದಲ್ಲಿ ವಿದ್ಯಾರ್ಥಿಗಳ ಕನಸು ಹತ್ಯೆ ಮಾಡುವ ಕೇಂದ್ರವಾಗಿದೆ.ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಆಯೋಗದಲ್ಲಿ ಭ್ರಷ್ಟಾಚಾರ, ಅವ್ಯವಹಾರ ಮೀತಿ ಮೀರಿದೆ. ಹಾಗಾಗಿ, ಸುಗಮವಾಗಿ ಸಿಇಟಿ ಪರೀಕ್ಷೆ ನಡೆಸುವ ಕೆಇಎಗೆ ವಹಿಸಿ ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕು ಎಂದು ಸಾವಿರಾರು ಅಭ್ಯರ್ಥಿಗಳ ಒತ್ತಾಸೆಯಾಗಿದೆ.