BJP Padayatra | ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ಕಿತ್ತೊಗೆಯಲು ಈ ಪಾದಯಾತ್ರೆ : ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಲಿಂಗಸಗೂರು: ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವು ದಲಿತರು, ರೈತರು ಮತ್ತು ಮಹಿಳೆಯರ ವಿರೋಧಿಯಾಗಿದೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಈ ಭ್ರಷ್ಟ ಸರ್ಕಾರವನ್ನು ಬುಡಸಮೇತ ಕಿತ್ತೊಗೆಯಲು ಲಿಂಗಸಗೂರಿನಿಂದ ಐತಿಹಾಸಿಕ ಪಾದಯಾತ್ರೆಗೆ (BJP Padayatra) ಚಾಲನೆ ನೀಡಲಾಗಿದೆ ಎಂದು ಘೋಷಿಸಿದ್ದಾರೆ.
ಲಿಂಗಸಗೂರಿನಲ್ಲಿ ಆಯೋಜಿಸಲಾಗಿದ್ದ ಪಾದಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಬಿವೈವಿ, ಈ ಹೋರಾಟವು ಮುಂದಿನ ದಿನಗಳಲ್ಲಿ ರಾಜ್ಯದ ರಾಜಕೀಯ ಶಕ್ತಿಯನ್ನು ನಿರ್ಧರಿಸಲಿದೆ ಎಂದಿದ್ದಾರೆ.
ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಅಕ್ರಮ ಎಸಗಿದವರನ್ನು ಮತ್ತೆ ಸಂಪುಟಕ್ಕೆ ಸೇರಿಸಿದ್ದೇಕೆ ಎಂದು ಪ್ರಶ್ನಿಸಿದ ವಿಜಯೇಂದ್ರ, ದಲಿತ ನಾಯಕ ಹಾಗೂ ಸಚಿವರಾಗಿದ್ದ ರಾಜಣ್ಣ ಅವರು ರಾಹುಲ್ ಗಾಂಧಿ ವಿರುದ್ಧ ಮಾತನಾಡಿದ್ದಕ್ಕಾಗಿ ರಾಜೀನಾಮೆ ಪಡೆದಿರುವುದು ಕಾಂಗ್ರೆಸ್‌ನ ದಲಿತ ವಿರೋಧಿ ವರ್ತನೆಗೆ ಸಾಕ್ಷಿಯಾಗಿದ್ದು, ಹಿಂದೆ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಆಡಳಿತಾವಧಿಯಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಅಲೆಮಾರಿ ಸಮುದಾಯಗಳಿಗೆ ನೀಡಲಾಗಿದ್ದ ಮೀಸಲಾತಿ ಹೆಚ್ಚಳಕ್ಕೆ ಕಾಂಗ್ರೆಸ್ ಕಲ್ಲು ಹಾಕಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿ ಅನ್ಯಾಯ ಮಾಡಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳಲ್ಲಿ ತೀವ್ರ ಅಭಾವವಿದ್ದರೂ ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಮಧ್ಯಮ ಬರ ಹಾಗೂ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಸಂಪೂರ್ಣ ಬರ ಎಂದು ಘೋಷಿಸಿರುವುದು ಸರ್ಕಾರದ ಪಕ್ಷಪಾತ ಮತ್ತು ಅರಿವಿನ ಕೊರತೆಯನ್ನು ತೋರಿಸುತ್ತದೆ ಎಂದು ದೂರಿರುವ ಬಿಜೆಪಿ ರಾಜ್ಯಾಧ್ಯಕ್ಷರು, ರೈತರು ಹಾಗೂ ಕೃಷಿ ಕೂಲಿಕಾರರು ಗುಳೆ ಹೋಗುತ್ತಿದ್ದು, ಅವರ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿಯಿಲ್ಲದೆ ಸಿಎಂ ಕೇವಲ ರಿಯಲ್ ಎಸ್ಟೇಟ್ ದಂಧೆಯಲ್ಲಿ ಬ್ಯುಸಿಯಾಗಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ನವಲಿ ಸಮಾನಾಂತರ ಜಲಾಶಯ, ಕೃಷ್ಣಾ ಮೇಲ್ದಂಡೆ ಯೋಜನೆ ಹಾಗೂ ನಂದವಾಡಗಿ ಏತ ನೀರಾವರಿ ಯೋಜನೆಗಳಿಗೆ ನೀಡಲಾಗಿದ್ದ ಅನುದಾನವನ್ನು ಈಗಿನ ಸರ್ಕಾರ ನೀಡುತ್ತಿಲ್ಲ. ಇನ್ನು ಕೆಪಿಎಸ್‍ಸಿ ಹಗರಣದಲ್ಲಿ ಶಾಮೀಲಾದವರನ್ನು ಗಲ್ಲಿಗೇರಿಸಿದರೂ ತಡೆಯುವುದಿಲ್ಲ, ತಕ್ಷಣ ನೇಮಕಾತಿ ಪ್ರಕ್ರಿಯೆ ಆರಂಭಿಸಲಿ ಎಂದರು.
ಈ ಹೋರಾಟವನ್ನು ಯಾರೂ ಹಗುರವಾಗಿ ಪರಿಗಣಿಸಬಾರದು ಎಂದು ಎಚ್ಚರಿಕೆ ನೀಡಿದ ಬಿ ವೈ ವಿಜಯೇಂದ್ರ, ಸರ್ಕಾರದ ವೈಫಲ್ಯಗಳು ಹಾಗೂ ಅಕ್ರಮಗಳ ಪರಿಣಾಮವಾಗಿ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಸಂಪುಟದ ಪ್ರಮುಖ ಸಚಿವರೇ ರಾಜೀನಾಮೆ ನೀಡಬೇಕಾದಂತಹ ಸ್ಥಿತಿ ನಿರ್ಮಾಣವಾಗಲಿದೆ ಎಂದರು. ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಐದು ಗ್ಯಾರಂಟಿ ಯೋಜನೆಗಳನ್ನು ಉಲ್ಲೇಖಿಸಿದ ಅವರು, ಮುಂದಿನ 2028 ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದೇ ತಾನು ನೀಡುವ ಆರನೇ ಗ್ಯಾರಂಟಿ ಎಂದು ಘೋಷಿಸಿದರು.
ಹೋರಾಟದ ಕಿಚ್ಚು ಆರಿಲ್ಲ, ಕಾಂಗ್ರೆಸ್ ಕಿತ್ತೊಗೆಯಿರಿ: ಬಿ.ಎಸ್. ಯಡಿಯೂರಪ್ಪ
ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು, ರಾಜ್ಯದ ಮುಖ್ಯಮಂತ್ರಿ ಪ್ರತಿಯೊಂದು ಸಣ್ಣ ನಿರ್ಧಾರಕ್ಕೂ ಹೈಕಮಾಂಡ್ ಬಳಿ ಕೇಳುವಂತಾಗಿರುವುದು ದುರದೃಷ್ಟಕರ. ಸಿಎಂ ಅವರಿಗೆ ಸ್ವಾಯತ್ತತೆಯನ್ನೇ ನೀಡದಂತಹ ವಾತಾವರಣ ಕಾಂಗ್ರೆಸ್‌ನಲ್ಲಿದ್ದು, ಇಂತಹ ಸ್ಥಿತಿ ರಾಜ್ಯದ ಸಿಎಂಗೆ ಬರಬಾರದಿತ್ತು ಎಂದು ಲೇವಡಿ ಮಾಡಿದ್ದಾರೆ.
ಲಿಂಗಸಗೂರಿನಿಂದ ಆರಂಭವಾಗಿರುವ ಈ ಪಾದಯಾತ್ರೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯಲು ಇಟ್ಟ ಮೊದಲ ಹೆಜ್ಜೆಯಾಗಿದೆ ಎಂದು ಬಣ್ಣಿಸಿದ ಬಿಎಸ್ವೈ, ತಮಗೆ ಈಗ 86 ವರ್ಷ ವಯಸ್ಸಾಗಿದ್ದರೂ ಹೋರಾಟದ ಕಿಚ್ಚು ಇನ್ನು ಆರಿಲ್ಲ ಎಂದಿದ್ದಾರೆ. ಶೀಘ್ರದಲ್ಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು, ಮುಂಬರುವ ಚುನಾವಣೆಗೆ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸುವುದಾಗಿ ಘೋಷಿಸಿದರು.