ಪಿಆರ್​ಸಿ ನೀಡುವುದನ್ನು ವಿರೋಧಿ ರಾಜ್ಯಪಾಲರಿಗೆ ದೂರು. 
ರಾಜ್ಯ

ಲೋಕಭವನ ತಲುಪಿದ ಶಾಶ್ವತ ನಿವಾಸ ಪ್ರಮಾಣಪತ್ರ ಜಟಾಪಟಿ: ರಾಜ್ಯಪಾಲರಿಗೆ ದೂರು ನೀಡಿ ಬಿಜೆಪಿ ನಾಯಕರು ಹೇಳಿದ್ದೇನು? | BJP

ಬೆಂಗಳೂರು: ಭಾರತೀಯ ಚುನಾವಣೆ ಆಯೋಗದಿಂದ ರಾಜ್ಯದಲ್ಲಿ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ನಡುವೆಯೇ ಅಗತ್ಯವಿದ್ದವರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವಂತೆ ತಹಶೀಲ್ದಾರ್​ಗೆ ಆದೇಶ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ರಾಜ್ಯ ಬಿಜೆಪಿ(BJP) ನಾಯಕರು ರಾಜ್ಯಪಾಲರಿಗೆ ಬುಧವಾರ(ಜು. 15) ದೂರು ನೀಡಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮುಖಂಡರಾದ ಸಿಟಿ ರವಿ, ಸುಧಾಕರ್ ಸೇರಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ದೂರು ನೀಡಿದ್ದು, ಪಿಆರ್‌ಸಿ ನಡೆಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಪಿಆರ್‌ಸಿ ದೇಶದ ಭದ್ರತೆಗೆ ಆತಂಕ‌ ತರಲಿದೆ. ಈ ಹಿನ್ನೆಲೆ ತಾವು ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿದ್ದಾರೆ.
ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಮಾತನಾಡಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ರಾಜ್ಯದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಸರ್ಕಾರ ಬಾಂಗ್ಲಾದೇಶಿಯರನ್ನು ಕರ್ನಾಟಕದ ಮತದಾರರನ್ನಾಗಿ ಮಾಡುತ್ತಿರುವ ಹುನ್ನಾರ ತಡೆಯುವಂತೆ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ.
ಈ ಪ್ರಮಾಣಪತ್ರ ಹಂಚಿಕೆ ಮಾಡುವುದರಿಂದ ಬಾಂಗ್ಲಾದೇಶಿಯರಿಗೆ ಎಲ್ಲಾ ಸೌಲಭ್ಯ ಸುಲಭವಾಗಿ ಸಿಗುವ ವ್ಯವಸ್ಥೆಯಿದೆ. ಇದು ದೇಶದ ಭದ್ರತೆ ಆತಂಕ. ಕರ್ನಾಟಕದಲ್ಲಿ 25 ರಿಂದ 30 ಲಕ್ಷ ಬಾಂಗ್ಲಾದೇಶಿಯರು ಕರ್ನಾಟಕದಲ್ಲಿದ್ದಾರೆ ಎಂಬ ಮಾಹಿತಿಯಿದೆ. ಇಂದು ಬಾಂಗ್ಲಾದಿಂದ ಬಂದವರು ನಾಳೆ ಭಯೋತ್ಪಾದಕರಾದರೇ? ಯಾರು ಜವಾಬ್ದಾರಿ. ಅವರಿಗೆ ಶಾಶ್ವತ ನಿವಾಸ ಪತ್ರ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಯಾರಿಗಾದ್ರೂ ಶಾಶ್ವತ ನಿವಾಸಿ ಪ್ರಮಾಣಪತ್ರ ಕೊಡುವ ಅಧಿಕಾರ ಇದ್ರೆ ಅಂದ್ರೆ, ಅದು ಕೇಂದ್ರ ಸರ್ಕಾರಕ್ಕೆ ಮಾತ್ರ, ಮುಂದಿನ ಚುನಾವಣೆಯ ಮತಗಳಿಗೋಸ್ಕರ ಶಾಶ್ವತ ನಿವಾಸ ಪತ್ರ ಕೊಡುತ್ತಿದ್ದಾರೆ. ಇದರಿಂದ ದೇಶಕ್ಕೆ ಅಪಾಯ. ರಾಜ್ಯಪಾಲರು ಸರ್ಕಾರಕ್ಕೆ ಎಚ್ಚರಿಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನೂ ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣದಲ್ಲಿ ಐಎಎಸ್ ಅಧಿಕಾರಿಗಳಿಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಹೆಂಡತಿ, ಮಕ್ಕಳ ಜೊತೆ ಸ್ಟೇಜ್ ಮೇಲೆ ಇದ್ದವರ ಮೇಲೆ ಕ್ರಮ ಆಗಬೇಕಿತ್ತು. ಅಧಿಕಾರಿಗಳು ನಿರಪರಾಧಿಗಳಾದರೆ ಅಪರಾಧಿಗಳು ಯಾರು?, ಆ 11 ಮಕ್ಕಳ ಸಾವಿಗೆ ನ್ಯಾಯ ಎಲ್ಲಿದೆ? ನಮ್ಮ ಸರ್ಕಾರ ಬಂದರೆ ಇದನ್ನು ಸಿಬಿಐಗೆ ಕೊಡುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬರ ಅಧ್ಯಯನ ಮಾಡಲು ತಂಡ ಕಳಿಸುವಂತೆ ಸಿಎಂ ಪ್ರಧಾನಿಗೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಸ್​ಡಿಆರ್​ಎಫ್​ ಹಣ ಏನು ಮಾಡಿದ್ರಿ ಅಂತಾ ಅದರ ಲೆಕ್ಕ ಕೊಡಿ. ಬರ ಪೀಡಿತ ಅಂತಾ ಘೋಷಿಸಲು ಯೋಗ್ಯತೆಯೇ ಇಲ್ಲ ನಿಮಗೆ, ಬರೀ ದೇವಸ್ಥಾನದ ಸುತ್ತಿ ದಂಡ ಹಾಕುವುದು ಅಷ್ಟೇ ಆಗಿದೆ. ಕೇಂದ್ರದ ಹತ್ತಿರ ಹಣ ಕೇಳುತ್ತಿದ್ದಾರೆ, ನಾಚಿಕೆ ಆಗಲ್ವಾ? ಪತ್ರ ಬರೆದು ಕೇಂದ್ರದ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಾರೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಮಾತನಾಡಿರುವ ಎಂಎಲ್​ಸಿ ಸಿ.ಟಿ.ರವಿ, ಚಿಕ್ಕಮಗಳೂರು, ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ಬಡವರ ಹೆಸರಿನಲ್ಲಿ ಹಣ ವಹಿವಾಟು ವಿಚಾರವಾಗಿ ರಾಜ್ಯಪಾಲರಿಗೆ ದೂರು ಕೊಟ್ಟಿದ್ದೇವೆ. ಸಿಬಿಐ ತನಿಖೆ ಮಾಡಲು ಒತ್ತಾಯ ಮಾಡಿದ್ದೇವೆ. ಸಿಎಂಗೂ ಸಹ ಮನವಿ ಪತ್ರ ಕೊಡುತ್ತೇವೆ ಎಂದಿದ್ದಾರೆ.