Cm Siddaramaiah | ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಇತ್ತೀಚೆಗೆ ತಮಿಳುನಾಡು ಮತ್ತು ಕೇರಳದಲ್ಲಿ ನಡೆದಿದ್ದ ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವಿನ ಸಂಘರ್ಷ ಕರ್ನಾಟಕಕ್ಕೂ ಕಾಲಿಟ್ಟಿದ್ದು, ರಾಜ್ಯದ ಸಂಪುಟವು ಅನುಮೋದಿಸಿ ಸಿದ್ಧಪಡಿಸಿಕೊಟ್ಟಿದ್ದ ಭಾಷಣದ ಪ್ರತಿಯನ್ನು ಬದಿಗಿಟ್ಟು, ರಾಜ್ಯಪಾಲರು ತಾವೇ ಸ್ವತಃ ಸಿದ್ಧಪಡಿಸಿಕೊಂಡಿದ್ದ 1 ಪ್ಯಾರಾ ಭಾಷಣ ಓದಿದ್ದನ್ನು ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ.
ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ನಿರ್ಗಮನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಗವರ್ನರ್ ಕೇಂದ್ರದ ಕೈಗೊಂಬೆ ರೀತಿ ವರ್ತಿಸಿದ್ದು, ಅವರ ಅಣತಿಯಂತೆ ಭಾಷಣ ಓದಿಸಿರುವುದು ಸಂವಿಧಾನದ ಉಲ್ಲಂಘನೆ, ಈ ನಡೆ ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ ಎಂದರು.
ಮನರೇಗಾ ಯೋಜನೆಯನ್ನು ಜಿ ರಾಮ್ ಜಿ ಎಂದು ಮರುನಾಮಕರಣ ಮಾಡಿರುವುದಕ್ಕೆ ನಮ್ಮ ಸಂಪೂರ್ಣ ವಿರೋಧವಿದ್ದು, ಮಹಾತ್ಮ ಗಾಂಧಿ ಹೆಸರು ಕೈ ಬಿಟ್ಟಿರುವುದು ಸರಿಯಲ್ಲ, ಮೂಲ ಯೋಜನೆ ಜಾರಿ ಮಾಡುವ ತನಕ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಹೇಳಿದರು. ರಾಜ್ಯಪಾಲರ ಈ ನಡೆಯ ವಿರುದ್ಧವೂ ನಮ್ಮ ಸರ್ಕಾರ ಹೋರಾಟ ನಡೆಸಲಿದ್ದು, ಮುಂದಿನ ಕಾನೂನು ಕ್ರಮಗಳ ಕುರಿತು ಸಚಿವರುಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಮುಂದುವರೆದು ಮಾತನಾಡಿದ ಸಿಎಂ, ಪ್ರತಿ ವರ್ಷದ ಆರಂಭದಲ್ಲಿ ನಡೆಯುವ ಹಾಗೂ ಹೊಸ ಸರ್ಕಾರ ಸ್ಥಾಪನೆಗೊಂಡ ಸಂದರ್ಭದಲ್ಲಿ ನಡೆಸಲಾಗುವ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡುವುದು ಸಂವಿಧಾನದ ಅಡಿಯಲ್ಲಿ ಸನ್ಮಾನ್ಯ ರಾಜ್ಯಪಾಲರ ಕರ್ತವ್ಯವಾಗಿರುತ್ತದೆ. ಸಂವಿಧಾನ ಕಲಂ 176 ಮತ್ತು 163 ರಂತೆ ಸರ್ಕಾರದ ಸಚಿವ ಸಂಪುಟ ಸಿದ್ಧಪಡಿಸಿರುವ ಭಾಷಣವನ್ನು ಓದಲೇಬೇಕೆಂಬ ನಿಯಮವಿದ್ದು, ರಾಜ್ಯಪಾಲರು ಸಿದ್ಧಪಡಿಸಿದ ಭಾಷಣವನ್ನು ಓದುವಂತಿಲ್ಲ ಎಂದರು.
ಮನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ) ರದ್ದುಪಡಿಸಿ, ವಿಬಿಜಿರಾಮ್ ಜಿ ( ವಿಕಸಿತ ಭಾರತ - ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಎಂಬ ಕಾಯ್ದೆಯನ್ನು ಕೇಂದ್ರ ಸರ್ಕಾರ ಹೊಸದಾಗಿ ರಚಿಸಿದೆ. ಇದಕ್ಕೆ ನಮ್ಮ ಸರ್ಕಾರದ ತೀವ್ರ ವಿರೋಧವಿದೆ ಎಂದು ಹೇಳಿದರು.
ಕೆಲಸದ ಹಕ್ಕು ಖಾತ್ರಿಪಡಿಸುವ ಮನರೇಗಾ
ಕಾಯ್ದೆಯಿಂದ ಮಹಾತ್ಮಾ ಗಾಂಧಿ ಹೆಸರನ್ನು ತೆಗೆಯಲಾಗಿದೆ. 2005 ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ಸಂವಿಧಾನ ನಿರ್ದೇಶನಗಳಂತೆ, ಆಹಾರ ಭದ್ರತೆ, ಮಾಹಿತಿ ಹಕ್ಕು, ಶಿಕ್ಷಣ ಹಕ್ಕು, ಉದ್ಯೋಗದ ಹಕ್ಕು ಕಾಯ್ದೆಗಳನ್ನು ಜಾರಿಗೆ ತಂದಿದ್ದರು. ಬಡ ಕಾರ್ಮಿಕರಿಗೆ ಕನಿಷ್ಠ 100 ದಿನಗಳ ಕಾಲ ಉದ್ಯೋಗ ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾಗಿದ್ದ ಈ ಕಾಯ್ದೆಯಿಂದ ದಲಿತರು, ಕಾರ್ಮಿಕರು ಮತ್ತು ಮಹಿಳೆಯರು ಮತ್ತು ಸಣ್ಣ ರೈತರಿಗೆ ಅನುಕೂಲವಾಗುತ್ತದೆ ಎಂದರು.
ವರ್ಷ ಪೂರ್ತಿ ಕೆಲಸದ ಭರವಸೆ ಇಲ್ಲ
ಹೊಸ ಕಾಯ್ದೆಯಲ್ಲಿ ವಿಶೇಷವಾಗಿ ಶೇ.53 ಮಹಿಳೆಯರು, ಶೇ.28 ದಲಿತರಿದ್ದು, ಇವರಿಗೆ ಉದ್ಯೋಗದ ಖಾತ್ರಿ ಇಲ್ಲ. ಅವರು ಅಪೇಕ್ಷಿಸಿದ ಸ್ಥಳದಲ್ಲಿ, ಸಣ್ಣ ರೈತರು ಅವರ ಜಮೀನುಗಳಲ್ಲಿಯೇ ಕೆಲಸ ಮಾಡುವ ಅವಕಾಶವನ್ನು ಮುಂಚಿನ ಕಾಯ್ದೆ ಕಲ್ಪಿಸಿತ್ತು. ಆದರೆ ವಿಬಿ ಜಿ ರಾಮ್ ಜಿ ಕಾಯ್ದೆಯಲ್ಲಿ ಈ ನಿರ್ಣಯವನ್ನು ಕೇಂದ್ರ ಸರ್ಕಾರ ಕೈಗೊಳ್ಳುತ್ತದೆ. ಕೇಂದ್ರ ಸರ್ಕಾರ ನಿರ್ಧರಿಸುವ ಕಡೆಗಳಲ್ಲಿ ಬಡ ಕಾರ್ಮಿಕರು ಕೆಲಸ ಮಾಡಬೇಕಾಗಿದೆ.
ನರೇಗಾ ಯೋಜನೆಯ ಅಡಿಯಲ್ಲಿ 365 ದಿನಗಲ್ಲಿ ಯಾವಾಗಾಲಾದರೂ ಕೆಲಸ ಕೊಡಬಹುದಾಗಿದ್ದು, ಅದು ಸರ್ಕಾರದ ಕರ್ತವ್ಯವಾಗಿತ್ತು. ಅಲ್ಲದೇ, ಈ ಬಗ್ಗೆ ಕ್ರಿಯಾಯೋಜನೆ ರಚಿಸುವ ಹಕ್ಕು ಆಯಾ ಗ್ರಾಮಸಭೆ ಮತ್ತು ಪಂಚಾಯತಿಗಳಿಗೆ ಅವಕಾಶವಿತ್ತು. ಆದರೆ ಈ ಹೊಸ ಕಾಯ್ದೆಯಲ್ಲಿ ಈ ಅವಕಾಶವನ್ನು ರದ್ದು ಪಡಿಸಲಾಗಿದೆ ಎಂದು ಸಿಎಂ ತಿಳಿಸಿದರು.
ಹೊಸ ಕಾಯ್ದೆ ರದ್ದುಗೊಳ್ಳಲೇಬೇಕು
MGNREGA ಕಾಯ್ದೆಯನ್ನು ಮರುಸ್ಥಾಪಿಸುವುದು ಮತ್ತು ಹೊಸ ಕಾಯ್ದೆಯನ್ನು ರದ್ದುಗೊಳಿಸಬೇಕೆಂಬುದೇ ನಮ್ಮ ಉದ್ದೇಶ. ನಮ್ಮ ಪಕ್ಷ ಮತ್ತು ಸರ್ಕಾರದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಮನರೇಗಾ ಮರುಸ್ಥಾಪನೆ ಮಾಡುವವರೆಗೆ ನಿರಂತರವಾಗಿ ನಮ್ಮ ಹೋರಾಟ ನಡೆಯಲಿದೆ. ಈ ಹಿಂದೆ ರೈತರ ವಿರೋಧಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ಸು ತೆಗೆದುಕೊಂಡಂತೆ, ಈ ಹೊಸ ಕಾಯ್ದೆಯನ್ನು ವಾಪಸ್ಸು ತೆಗೆದುಕೊಳ್ಳುವವರೆಗೆ ನಮ್ಮ ಹೋರಾಟ ನಡೆಯಲಿದೆ ಎಂದರು.
ಕೇಂದ್ರ ಸರ್ಕಾರ ತಾವು ಮಾಡಿದ ತಪ್ಪನ್ನು ಮರೆಮಾಚಲು ರಾಜ್ಯಪಾಲರ ಕೈಯಲ್ಲಿ ಬೇರೆ ಭಾಷಣವನ್ನು ಓದಿಸಿದ್ದಾರೆ. ಇದು ಸಂವಿಧಾನ ಬಾಹಿರ ಕೃತ್ಯ. ರಾಜ್ಯಪಾಲರು ತಮ್ಮ ಕರ್ತವ್ಯವನ್ನು ಪಾಲನೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ರಾಜ್ಯಪಾಲರು ಕೆಂದ್ರದ ಅಣತಿಯಂತೆ ವರ್ತಿಸುತ್ತಿರುವುದು ಈಗಾಗಲೇ ರಾಜ್ಯದ ಎಲ್ಲ ಜನರಿಗೂ ತಿಳಿದಿದೆ. ಸರ್ಕಾರದ ಅಭಿಪ್ರಾಯ ಓದಬೇಕಾದ ರಾಜ್ಯಪಾಲರು ವಿರೋಧ ಪಕ್ಷದ ನಾಯಕರಂತೆ ವರ್ತಿಸುವುದು ಅಕ್ಷಮ್ಯ, ಬಿಜೆಪಿಗೆ ಒಳಿತಾಗುವ ಹಾಗೆ ಭಾಷಣವಿರಬೇಕೆಂಬುದು ಅವರ ಆಶಯ ಎಂಬಂತಿದೆ.
ಎಚ್ ಸಿ ಬಾಲಕೃಷ್ಣ ಮಾಗಡಿ ಶಾಸಕ
ರಾಜ್ಯದ ಜನ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿದ್ದಾರೆ. ಆದರೆ ರಾಜ್ಯಪಾಲರು ಕೆಂದ್ರದ ಕೈಗೊಂಬೆಯಂತೆ ಕೆಲಸ ಮಾಡುವ ಮೂಲಕ ರಾಜ್ಯದ ಮತದಾರಿಗೆ ತಪ್ಪು ಸಂದೇಶ ರವಾನೆ ಮಾಡುತ್ತಿದ್ದಾರೆ. ಬೇರೆ ರಾಜ್ಯದಲ್ಲಿ ಇಂಥ ಪರಿಸ್ಥಿತಿ ಇಲ್ಲ. ಎರಡು ಮಾತಿನಲ್ಲಿ ಭಾಷಣ ಮುಗಿಸುವುದು ಅಸಂವಿಧಾನಿಕ. ಆದ್ದರಿಂದ ರಾಜ್ಯಪಾಲರನ್ನು ವಜಾ ಮಾಡಬೇಕು.
ಬೇಳೂರು ಗೋಪಾಲಕೃಷ್ಣ ಸಾಗರ ಶಾಸಕ.