ಬಿಹಾರದ ಪಾಟ್ನಾದಲ್ಲಿ ವಾಹನ ಸ್ಕ್ರ್ಯಾಪಿಂಗ್ ಕೇಂದ್ರ
ಬೆಂಗಳೂರು: ದೇಶದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್, ಬಿಹಾರದ ಪಾಟ್ನಾದಲ್ಲಿ ಅತ್ಯಾಧುನಿಕ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯ ಆರಂಭಿಸಿದೆ.
ಈ ಮೂಲಕ ಟಾಟಾ ಮೋಟಾರ್ಸ್, ದೇಶಾದ್ಯಂತ 12 ಸ್ಕ್ರ್ಯಾಪಿಂಗ್ ಕೇಂದ್ರಗಳನ್ನು ಹೊಂದಿದೆ. ಈ ಎಲ್ಲ ಕೇಂದ್ರಗಳಿಂದ ಪ್ರತಿ ವರ್ಷ ಅಂದಾಜು 2 ಲಕ್ಷ ಹಳೆಯ ವಾಹನಗಳನ್ನು ಸ್ಕ್ರ್ಯಾಪಿಂಗ್ ಮಾಡಲಾಗುತ್ತಿದೆ.
ಈ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಕೇಂದ್ರವನ್ನು ಬಿಹಾರ ಸರ್ಕಾರದ ಸಾರಿಗೆ ಸಚಿವ ದಾಮೋದರ್ ರಾವತ್ ಉದ್ಘಾಟಿಸಿದರು. 5.5 ಎಕರೆ ಪ್ರದೇಶದಲ್ಲಿರುವ ಈ ಕೇಂದ್ರವನ್ನು ಕಲಹನು ಬೋತ್ರಾ ಗ್ರೂಪ್ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಪ್ರತಿವರ್ಷ 15 ಸಾವಿರ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಸಾಮರ್ಥ್ಯ ಇದು ಹೊಂದಿದೆ.
ದ್ವಿಚಕ್ರ, ತ್ರಿಚಕ್ರ, ಪ್ರಯಾಣಿಕರ ಹಾಗೂ ವಾಣಿಜ್ಯ ವಾಹನಗಳು ಸೇರಿ ಎಲ್ಲ ಬ್ರ್ಯಾಂಡ್‌ಗಳ ಹಳೆಯ ಅಥವಾ ಬಳಕೆಗೆ ಯೋಗ್ಯವಲ್ಲದ ವಾಹನಗಳನ್ನು ಸ್ಕ್ರ್ಯಾಪಿಂಗ್ ಮಾಡಲಾಗುತ್ತಿದೆ. ಈ ಕೇಂದ್ರವು ಕಾಗದರಹಿತ ಹಾಗೂ ಸಂಪೂರ್ಣ ಡಿಜಿಟಲ್ ವ್ಯವಸ್ಥೆ ಹೊಂದಿದೆ. ಟೈರ್‌ಗಳು, ಬ್ಯಾಟರಿಗಳು, ಇಂಧನ, ತೈಲ ಮತ್ತು ಅನಿಲಗಳನ್ನು ಸುರಕ್ಷಿತವಾಗಿ ಬೇರ್ಪಡಿಸಲು ಪ್ರತ್ಯೇಕ ಸೌಲಭ್ಯಗಳಿವೆ.
ರಾಷ್ಟ್ರೀಯ ವಾಹನ ಸ್ಕ್ರ್ಯಾಪಿಂಗ್ ನೀತಿಗೆ ಅನುಗುಣವಾಗಿ ಹಳೆಯ ಮತ್ತು ಹೆಚ್ಚು ಮಾಲಿನ್ಯ ಉಂಟುಮಾಡುವ ವಾಹನಗಳನ್ನು ವೈಜ್ಞಾನಿಕ ರೀತಿಯಲ್ಲಿ ತೆರವುಗೊಳಿಸಿ ಹೊಸ, ಪರಿಸರ ಸ್ನೇಹಿ ವಾಹನಗಳ ಬಳಕೆ ಉತ್ತೇಜಿಸಲು ಈ ಕೇಂದ್ರ ನೆರವಾಗಲಿದೆ ಎಂದು ಸಚಿವ ದಾಮೋದರ್ ರಾವತ್ ತಿಳಿಸಿದ್ದಾರೆ.