ಕಾವೇರಿ ನೀರು ವಿಚಾರದಲ್ಲಿ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಸೂಚನೆ
- ಕಾವೇರಿ ನೀರು ವಿಚಾರದಲ್ಲಿ ಕರ್ನಾಟಕಕ್ಕೆ ಸುಪ್ರೀಂ ಸೂಚನೆ
- CWMA ಸೂಚನೆಗಳನ್ನು ಪಾಲಿಸುವಂತೆ ನಿರ್ದೇಶನ
- ಒಂದು ವಾರದ ಬಳಿಕ ಮತ್ತೆ ಕಾವೇರಿ ಕೇಸ್ ವಿಚಾರಣೆ
Cauvery Water Release: ಕಾವೇರಿ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ವಿವಾದ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ಸೂಚನೆಗಳನ್ನು ಪಾಲಿಸುವಂತೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಸೋಮವಾರ ಈ ಪ್ರಕರಣದ ವಿಚಾರಣೆ ನಡೆಸಿತು. ಕಾವೇರಿ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಸೂಚನೆಯಂತೆ ಕರ್ನಾಟಕ ನೀರು ಬಿಡುತ್ತಿಲ್ಲ ಎಂದು ತಮಿಳುನಾಡು ಕೋರ್ಟ್‌ಗೆ ದೂರು ನೀಡಿತ್ತು.
ಕರ್ನಾಟಕ ನೀರು ಬಿಡುತ್ತಿದೆ ಎಂದ ಕೋರ್ಟ್
ವಿಚಾರಣೆ ವೇಳೆ ಕರ್ನಾಟಕದ ಪರ ವಕೀಲರು, ತಮಿಳುನಾಡಿಗೆ ಈಗಾಗಲೇ ನೀರು ಬಿಡಲಾಗುತ್ತಿದೆ ಎಂದು ಕೋರ್ಟ್‌ಗೆ ಮಾಹಿತಿ ನೀಡಿದರು. ಆಗಸ್ಟ್ 17ರ ಬೆಳಗ್ಗೆ ಕರ್ನಾಟಕದಿಂದ 12 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರು ಹರಿದುಹೋಗ್ತಿದೆ ಎಂದು ತಿಳಿಸಿದರು. ಕಾವೇರಿ ಜಲಾನಯನ ಪ್ರದೇಶದಲ್ಲಿ ಇತ್ತೀಚೆಗೆ ಜೋರು ಮಳೆಯಾಗಿದ್ದು, ಜಲಾಶಯಗಳಿಗೆ ನೀರಿನ ಒಳಹರಿವು ಕೂಡ ಹೆಚ್ಚಾಗಿದೆ ಎಂದು ಕರ್ನಾಟಕ ಹೇಳಿದೆ.
ಇನ್ನು, ಇದನ್ನು ಗಮನಿಸಿದ ಸುಪ್ರೀಂ ಕೋರ್ಟ್, ‘ಕರ್ನಾಟಕ ನೀರು ಬಿಡಲ್ಲ ಅಂತೇನಿಲ್ಲ’ ಎಂದಿದ್ದು, ಸದ್ಯದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಸಾಕಷ್ಟು ನೀರು ಸಿಗುತ್ತಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಹೀಗಾಗಿ ಸದ್ಯಕ್ಕೆ ಕರ್ನಾಟಕದ ವಿರುದ್ಧ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಆದರೆ, ಸಿಡಬ್ಲ್ಯೂಎಂಎ ನೀಡಿರುವ ಸೂಚನೆಗಳನ್ನ ಕರ್ನಾಟಕ ಪಾಲಿಸಬೇಕು ಎಂದು ಸ್ಪಷ್ಟವಾಗಿ ಸೂಚಿಸಿದೆ.
ಬಾಕಿ ನೀರು ಬಿಡಲು ತಮಿಳುನಾಡು ಪಟ್ಟು
ಇನ್ನೊಂದೆಡೆ, ಕರ್ನಾಟಕ ನಿಗದಿತ ಪ್ರಮಾಣದಲ್ಲಿ ನೀರು ಬಿಡುತ್ತಿಲ್ಲ. ಈಗಾಗಲೇ ಬಾಕಿ ಉಳಿದಿರುವ ನೀರನ್ನೂ ಬಿಡಿಸಬೇಕು ಎಂದು ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಕಾವೇರಿ ನೀರು ಬಿಡುವ ಪ್ರಮಾಣದ ಬಗ್ಗೆ ಸಿಡಬ್ಲ್ಯೂಎಂಎ ಮತ್ತು ಸಿಡಬ್ಲ್ಯೂಆರ್‌ಸಿ ಕಾಲಕಾಲಕ್ಕೆ ಸೂಚನೆ ನೀಡುತ್ತಿವೆ. ಬಿಳಿಗುಂಡ್ಲು ಗಡಿಯಲ್ಲಿ ನೀರಿನ ಹರಿವನ್ನು ಲೆಕ್ಕ ಹಾಕಲಾಗುತ್ತಿದ್ದು, ಜುಲೈ ಅಂತ್ಯದಲ್ಲಿ ದಿನಕ್ಕೆ ಸುಮಾರು 3,500 ಕ್ಯುಸೆಕ್ ನೀರು ಬಿಡುವಂತೆ ಸೂಚಿಸಲಾಗಿತ್ತು. ಮಳೆ ಪ್ರಮಾಣ ಮತ್ತು ಜಲಾಶಯಗಳ ಭರ್ತಿಗೆ ಅನುಗುಣವಾಗಿ ನಂತರ ಎಷ್ಟು ನೀರು ಬಿಡಬೇಕು ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ಜಲಾಶಯಗಳಿಗೆ ಒಳಹರಿವು ಹೆಚ್ಚಳ
ಇತ್ತ, ಕರ್ನಾಟಕದ ವಾದ ಏನು ಅಂದರೆ, ಇತ್ತೀಚೆಗೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ಡ್ಯಾಂಗಳಿಗೆ ನೀರು ಭಾರೀ ಹರಿದುಬರುತ್ತಿದೆ. ಕಬಿನಿ ಜಲಾಶಯಕ್ಕೂ ಒಳಹರಿವು ಹೆಚ್ಚಾಗಿದೆ ಎಂದು ಕರ್ನಾಟಕ ಕೋರ್ಟ್‌ಗೆ ತಿಳಿಸಿದೆ. ಜುಲೈ ಕೊನೆಯ ವಾರದಿಂದ ಆಗಸ್ಟ್ ಮಧ್ಯಭಾಗದವರೆಗೆ ಜಲಾಶಯಗಳಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಬಿಡಲಾಗಿದೆ. ಹೀಗಾಗಿಕಾವೇರಿ ಪ್ರಾಧಿಕಾರದ ಎಲ್ಲಾ ಸೂಚನೆಗಳನ್ನು ಪಾಲಿಸಿದ್ದೇವೆ ಎಂಬುದು ಕರ್ನಾಟಕದ ವಾದ.
ಒಂದು ವಾರದ ಬಳಿಕ ಮತ್ತೆ ಕಾವೇರಿ ಕೇಸ್
ಕರ್ನಾಟಕ ಮತ್ತು ತಮಿಳುನಾಡು ಎರಡೂ ಕಡೆಯ ವಾದ ಆಲಿಸಿದ ಸುಪ್ರೀಂ ಕೋರ್ಟ್, ಸದ್ಯಕ್ಕೆ ಪರಿಸ್ಥಿತಿಯನ್ನು ಗಮನಿಸುವ ನಿರ್ಧಾರಕ್ಕೆ ಬಂದಿದೆ. ಕಾವೇರಿ ಪ್ರಾಧಿಕಾರದ ಸೂಚನೆಯಂತೆ ಕರ್ನಾಟಕ ನೀರು ಬಿಡುವುದನ್ನ ಮುಂದುವರಿಸಬೇಕು ಎಂದು ಕೋರ್ಟ್ ಹೇಳಿದೆ ಮತ್ತೆ ಒಂದು ವಾರದ ಬಳಿಕ ಕೇಸ್ ವಿಚಾರಣೆ ನಡೆಯಲಿದೆ. ಮುಂದಿನ ವಿಚಾರಣೆಯಲ್ಲಿ ಕರ್ನಾಟಕ ಎಷ್ಟು ನೀರು ಬಿಟ್ಟಿದೆ, ಜಲಾಶಯಗಳಲ್ಲಿ ಎಷ್ಟು ನೀರಿದೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಮತ್ತು ಒಳಹರಿವು ಹೇಗಿದೆ ಎನ್ನುವುದನ್ನು ಕೋರ್ಟ್ ಪರಿಶೀಲಿಸುವ ಸಾಧ್ಯತೆ ಇದೆ,(ಏಜೆನ್ಸೀಸ್).