ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ಮುಂದೆ 625 ಅಲ್ಲ 525 ಅಂಕಗಳು... ತೃತೀಯ ಭಾಷೆಗೆ ಸರ್ಕಾರದಿಂದ ಕೋಕ್​! SSLC Exam  
ರಾಜ್ಯ

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ಮುಂದೆ 625 ಅಲ್ಲ 525 ಅಂಕಗಳು... ತೃತೀಯ ಭಾಷೆಗೆ ಸರ್ಕಾರದಿಂದ ಕೋಕ್​! SSLC Exam

ಪ್ರಮುಖ ಮುಖ್ಯಾಂಶಗಳು

  • ಇನ್ಮುಂದೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಅಂಕ 625ಕ್ಕೆ ಬದಲಾಗಿ 525ಕ್ಕೆ ನಿಗದಿ ಮಾಡಿದ ಸರ್ಕಾರ
  • ಮಹತ್ವದ ಘೋಷಣೆ ಮಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ
  • ತೃತೀಯ ಭಾಷೆಗೆ ಗ್ರೇಡ್ ಪದ್ದತಿ ಜಾರಿಗೆ ತಂದಿರುವುದಾಗಿ ತಿಳಿಸಿದ ಶಿಕ್ಷಣ ಸಚಿವರು
ಬೆಂಗಳೂರು: ನಿನ್ನೆಯಷ್ಟೇ ಒಂದನೇ ತರಗತಿ ದಾಖಲಾತಿಗೆ 60 ದಿನಗಳ ವಯೋಮಿತಿ ಅಂತಹ ಮಹತ್ವ ಘೋಷಣೆ ಮಾಡಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು ಮತ್ತೊಂದು ದೊಡ್ಡ ಘೋಷಣೆ ಮಾಡಿದ್ದಾರೆ. ಅದೇನೆಂದರೆ, ಈ ವರ್ಷದಿಂದಲೇ ಎಸ್ಸೆಸ್ಸೆಲ್ಸಿ ಪರೀಕ್ಷಾ ( SSLC Exam ) ಅಂಕವನ್ನು 625ಕ್ಕೆ ಬದಲಾಗಿ 525ಕ್ಕೆ ನಿಗದಿ ಮಾಡಲಾಗಿದೆ.
ಇಂದು ಪತ್ರಿಕಾಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಎಸ್ಸೆಸ್ಸೆಲ್ಸಿ ಪರೀಕ್ಷೆಯ ಅಂಕವನ್ನು ಈ ವರ್ಷದಿಂದಲೇ 625 ರಿಂದ 525ಕ್ಕೆ ಇಳಿಸಿರುವುದಾಗಿ ಘೋಷಣೆ ಮಾಡಿದರು. ಅಲ್ಲದೆ, ತೃತೀಯ ಭಾಷೆಗೆ ಗ್ರೇಡ್ ಪದ್ದತಿ ಜಾರಿಗೆ ತಂದಿರುವುದಾಗಿ ತಿಳಿಸಿದರು. ಈ ಮೂಲಕ ಹಿಂದಿ, ಉರ್ದು, ಕೊಂಕಣಿ ಸೇರಿದಂತೆ ಇತರೆ ಮೂರನೇ ಭಾಷೆಗಳಿಗೆ ಗ್ರೇಡ್​ ಪದ್ಧತಿ ಅನ್ವಯವಾಗಲಿದೆ ಎಂದರು.
ಹಿಂದಿ ಪರೀಕ್ಷೆಯಿಂದ ಯಾವುದೇ ರೀತಿಯಲ್ಲಿ ಪರಿಣಾಮ ಬೀರಲ್ಲ ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು. ತೃತೀಯ ಭಾಷೆಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಆದರೆ, 100 ಅಂಕಗಳು ಇರುವುದಿಲ್ಲ. ಅದನ್ನು ಎ, ಬಿ, ಸಿ ಹಾಗೂ ಡಿ ಗ್ರೇಡ್​ ಆಧಾರದಲ್ಲಿ ನಿರ್ಧಾರ ಮಾಡಲಾಗುವುದು ಎಂದು ಶಿಕ್ಷಣ ಸಚಿವರು ತಿಳಿಸಿದರು.
ಈಗಾಗಲೇ ಶುರುವಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷಯಿಂದಲೇ ಈ ಆದೇಶ ಜಾರಿಯಾಗಲಿದೆ. ಪರೀಕ್ಷೆ ಮಾತ್ರ 6 ವಿಷಯಗಳಿಗೂ ನಡೆಯಲಿದೆ. ಆದರೆ, ಅಂಕಗಳು ಮಾತ್ರ 525ಕ್ಕೆ ನಿರ್ಧಾರ ಮಾಡಲಾಗುತ್ತದೆ. ತೃತೀಯ ಭಾಷೆಯ ಅಂಕವನ್ನು ಗ್ರೇಡ್​ ಆಧಾರದ ಮೇಲೆ ನಿಗದಿ ಮಾಡಲಾಗುವುದು ಎಂದರು.

1ನೇ ತರಗತಿಗೆ ವಯೋಮಿತಿ ಸಡಿಲಿಕೆ

ನಿನ್ನೆ (ಮಾರ್ಚ್​ 26) ಸದನದಲ್ಲಿ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, 1ನೇ ತರಗತಿ ಮಕ್ಕಳ ದಾಖಲಾತಿಗೆ 6 ವರ್ಷದ ಮಿತಿಯನ್ನು ನಿಗದಿ ಮಾಡಲಾಗಿತ್ತು. ಆ ನಿಯಮದಲ್ಲಿ ಸಡಿಲ ಮಾಡುವಂತೆ ಸಾಕಷ್ಟು ಮಕ್ಕಳ ಪಾಲಕರು ನಮ್ಮ ಬಳಿ ಮನವಿ ಮಾಡಿದ್ದರು. ಆ ಪಾಲಕರೆಲ್ಲ ಸ್ವಲ್ಪ ಗಾಬರಿಯಲ್ಲೂ ಇದಾರೆ. ಅವರ ಮನವಿಯನ್ನು ಪುರಸ್ಕರಿಸಿ ಸರ್ಕಾರ ವಯೋಮಿತಿಯಲ್ಲಿ ಸಡಿಲಿಕೆ ನೀಡುತ್ತಿದೆ ಎಂದರು. ಕರ್ನಾಟಕ ಶಿಕ್ಷಣ ಕಾಯ್ದೆ 1993ರ ಅಧ್ಯಾಯ 3 ಸೆಕ್ಷನ್​ 20ರ ಅಡಿಯಲ್ಲಿ ಮಕ್ಕಳನ್ನು ಒಂದನೇ ತರಗತಿಗೆ ದಾಖಲಾತಿ ಮಾಡುವ ಸಂಬಂಧ 60 ದಿನಗಳ ವಿನಾಯಿತಿಯನ್ನು ನೀಡಲಾಗಿರುತ್ತದೆ. ಅದರಂತೆ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಒಂದನೇ ತರಗತಿಗೆ ದಾಖಲಾತಿ ನೀಡುವ ಸಂಬಂಧ 60 ದಿನಗಳ ಸಡಿಲಿಕೆಯನ್ನು ನೀಡಲಾಗುತ್ತದೆ. ಈ ಸಂಬಂಧ ದಾಖಲಾತಿ ತಂತ್ರಾಂಶದಲ್ಲೂ ಬದಲಾವಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸದನದಲ್ಲಿ ಆದೇಶದ ಪ್ರತಿಯನ್ನು ಓದಿದರು.
ಅಂದಹಾಗೆ, ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ (NEP) ಅನ್ವಯ 1ನೇ ತರಗತಿ ಪ್ರವೇಶಕ್ಕೆ ಜೂನ್ 1ಕ್ಕೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿತ್ತು. ಆದರೆ, ಇದರಿಂದ ಲಕ್ಷಾಂತರ ಮಕ್ಕಳಿಗೆ ತೊಂದರೆಯಾಗಲಿದೆ ಎಂಬ ಪೋಷಕರ ಮನವಿಯನ್ನು ಪುರಸ್ಕರಿಸಿ ಸರ್ಕಾರ ಈ ಮಹತ್ವದ ಸಡಿಲಿಕೆ ಘೋಷಿಸಿದೆ. ಸರ್ಕಾರದ ಈ ಘೋಷಣೆಯಿಂದಾಗಿ 1ನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಜೂನ್ 1ಕ್ಕೆ 6 ವರ್ಷ ತುಂಬಲು ಕೇವಲ 60 ದಿನಗಳು (2 ತಿಂಗಳು) ಬಾಕಿ ಇದ್ದರೂ ಸಹ ಅಂತಹ ಮಕ್ಕಳಿಗೆ ಪ್ರವೇಶ ನೀಡಲು ಸರ್ಕಾರ ಅನುಮತಿ ನೀಡಿದೆ. ಅಂದರೆ, ಜೂನ್ 1ರ ಬದಲಾಗಿ ಆಗಸ್ಟ್ 1ರ ಒಳಗೆ 6 ವರ್ಷ ಪೂರ್ಣಗೊಳಿಸುವ ಮಕ್ಕಳು ಕೂಡ ಈ ವರ್ಷ 1ನೇ ತರಗತಿಗೆ ಸೇರಬಹುದಾಗಿದೆ.