ಸ್ಮಾರ್ಟ್ ಅನ್ನವಾಣಿ’ ಯೋಜನೆ  
ರಾಜ್ಯ

ಪಡಿತರ ಸಮಸ್ಯೆ ನಿವಾರಣೆಗೆ ‘ಸ್ಮಾರ್ಟ್ ಅನ್ನವಾಣಿ’ ಶೀಘ್ರ: ಧ್ವನಿಚಾಟ್‌ಬಾಟ್, ಲೈವ್ ಕರೆ ವರ್ಗಾವಣೆ ವ್ಯವಸ್ಥೆ- Smart Annavani

ಹರೀಶ್​​ ಕೆ.ಸಿ.
ಬೆಂಗಳೂರು: ಪಡಿತರ ಚೀಟಿದಾರರ ಕುಂದುಕೊರತೆಗಳಿಗೆ ವೇಗವಾಗಿ ಪರಿಹಾರ ಒದಗಿಸುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ‘ಸ್ಮಾರ್ಟ್ ಅನ್ನವಾಣಿ’ ಯೋಜನೆ ಜಾರಿಗೆ ಆಹಾರ ಇಲಾಖೆ ಮುಂದಾಗಿದೆ.
‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಮತ್ತು ‘ಅನ್ನಭಾಗ್ಯ’ ಯೋಜನೆ, ಕಾರ್ಡ್ ತಿದ್ದುಪಡಿ, ಹೆಸರು ಸೇರ್ಪಡೆ ಮತ್ತು ಪಡಿತರ ವಿತರಣೆ ಸಮಸ್ಯೆ ಕುರಿತು ದೂರು ನೀಡಲು ಇಲಾಖೆ, ‘1967’ ಸಹಾಯವಾಣಿ ಆರಂಭಿಸಿದೆ. ಪ್ರತಿನಿತ್ಯ 200-300 ದೂರು ದಾಖಲಾಗುತ್ತಿವೆ. ದೂರು ಸ್ವೀಕರಿಸುವ ಸಿಬ್ಬಂದಿ ಸಂಬಂಧಿಸಿದ ಅಧಿಕಾರಿಗಳಿಗೆ ವರ್ಗಾವಣೆ ಮಾಡುತ್ತಿದ್ದಾರೆ. ಇದು ಇಲಾಖೆಯ ಹಳೆಯ ಮ್ಯಾನ್ಯುಯಲ್ ವ್ಯವಸ್ಥೆಯಾಗಿದೆ. ಇದಕ್ಕೆ ಹೊಸ ಸ್ಪರ್ಶ ನೀಡಲು ಇಲಾಖೆ ಸಿದ್ಧತೆ ನಡೆಸಿದೆ. ಇದೀಗ, ಎಐ ತಂತ್ರಜ್ಞಾನ ಬಳಸಿ ಪ್ರಸ್ತುತ ಜಾರಿಯಲ್ಲಿರುವ ಇಲಾಖೆಯ ಸಹಾಯವಾಣಿ ವ್ಯವಸ್ಥೆಯನ್ನು ಸ್ವಯಂಚಾಲಿತ ದೂರು ಕೇಂದ್ರ, ಧ್ವನಿಚಾಟ್‌ಬಾಟ್ ಮತ್ತು ಲೈವ್ ಕರೆ ವರ್ಗಾವಣೆ ವ್ಯವಸ್ಥೆ ಒಳಗೊಂಡ ‘ಸ್ಮಾರ್ಟ್ ಅನ್ನವಾಣಿ’ ಯೋಜನೆ ಜಾರಿಗೆ ತರಲಿದೆ. ಮುಂದಿನ 2-3 ತಿಂಗಳಲ್ಲಿ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ.
ಮಾಡೆಲ್ ತಯಾರಿಕೆ
ಯೋಜನೆ ಜಾರಿಗೆ ಸಂಬಂಧಿಸಿದಂತೆ ಇಲಾಖೆಯು ಇ-ಆಡಳಿತ, ಸೆಂಟರ್ ಾರ್ ಸ್ಮಾರ್ಟ್ ಗವರ್ನೆನ್ಸ್(ಸಿಎಸ್‌ಜಿ), ಎಐ ಸೆಲ್ ಕರ್ನಾಟಕ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ (ಎನ್‌ಐಸಿ) ಅಧ್ಯಯನ ನಡೆಸಿ ಮಾಡೆಲ್ ತಯಾರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಮೇಲಿನ ಸಂಸ್ಥೆಗಳು ಸಲ್ಲಿಸುವ ಮಾಡೆಲ್‌ಗಳನ್ನು ಪರಿಶೀಲಿಸಿ ಅಂತಿಮವಾಗಿ 1.5 ಕೋಟಿ ರೂ. ವೆಚ್ಚದಲ್ಲಿ ‘ಸ್ಮಾರ್ಟ್ ಅನ್ನವಾಣಿ’ ಯೋಜನೆ ತರಲಾಗುತ್ತಿದೆ. ವಾಟ್ಸ್‌ಆ್ಯಪ್ ಚಾಟ್‌ಬಾಟ್‌ನಲ್ಲಿ ಕಾರ್ಡ್ ಸಂಖ್ಯೆ ನಮೂದಿಸಿದರೆ ಯಾವ ಅಂಗಡಿಯಲ್ಲಿ ಎಷ್ಟು ಪಡಿತರ ಪಡೆಯುತ್ತಿರುವುದು, ಕುಟುಂಬದ ಸದಸ್ಯರ ವಿವರ ಮತ್ತು ಇ-ಕೆವೈಸಿ ಮಾಡಿಸುವುದೂ ಸೇರಿ ಇತ್ಯಾದಿ ಮಾಹಿತಿ ಸಿಗಲಿದೆ. ಲೈವ್ ಕರೆಗಳಿಗೆ ತಕ್ಷಣವೇ ಪರಿಹಾರ ದೊರೆಯಲಿದೆ.
ಪಿಡಿಎಸ್ ಸುಧಾರಣೆಗೆ ಒತ್ತು
ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿ ನ್ಯಾಯಬೆಲೆ ಅಂಗಡಿಗಳಲ್ಲಿ ಆಧುನಿಕ ತಂತ್ರಜ್ಞಾನ ಮೂಲಕ ಕಾರ್ಡ್‌ದಾರರಿಗೆ ಪಡಿತರ ವಿತರಿಸಲು ಇಲಾಖೆ ಕ್ರಮ ತೆಗೆದುಕೊಂಡಿದೆ. ‘ಸ್ಮಾರ್ಟ್ ಪಿಡಿಎಸ್’ ಯೋಜನೆ ಅನುಷ್ಠಾನಕ್ಕಾಗಿ 35 ಕೋಟಿ ರೂ. ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಲ ನ್ಯಾಯಬೆಲೆ ಅಂಗಡಿಗಳ ಮಾಲೀಕರು, ಲಾನುಭವಿಗಳಿಗೆ ಸಮರ್ಪಕವಾಗಿ ಪಡಿತರ ವಿತರಿಸದೆ ಅಕ್ರಮವಾಗಿ ದಾಸ್ತಾನು ಮಾರಿಕೊಳ್ಳುತ್ತಿರುವ ಬಗ್ಗೆ ದೂರುಗಳಿದ್ದು, ಇವುಗಳ ನಿವಾರಣೆಗೆ ಯೋಜನೆ ಸಹಕಾರಿಯಾಗಲಿದೆ.
‘ಮೇರಾ ರೇಷನ್’ ಆ್ಯಪ್:
ಕಾರ್ಡ್‌ದಾರರಿಗೆ ರೇಷನ್ ವಿತರಣೆಯಲ್ಲಿ ಪಾರದರ್ಶಕತೆ ತರಲು ‘ಮೇರಾ ರೇಷನ್’ ಆ್ಯಪ್‌ನಲ್ಲಿ ಹಲವು ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಡ್‌ದಾರರು ಮೊಬೈಲ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಕಾರ್ಡ್ ಸಂಖ್ಯೆ ನಮೂದಿಸಿದರೆ ಆರು ತಿಂಗಳಲ್ಲಿ ಎಷ್ಟು ರೇಷನ್ ವಿತರಿಸಿರುವುದು, ಎಷ್ಟು ಪ್ರಮಾಣದ ರೇಷನ್ ಕೊಟ್ಟಿರುವುದು, ಮಾಲೀಕರು ಕಾರ್ಡ್‌ದಾರರಿಗೆ ಎಷ್ಟು ಹಂಚಿಕೆ ಮಾಡಿರುವುದು, ಹತ್ತಿರದ ರೇಷನ್ ಅಂಗಡಿ ಇರುವುದು ಮತ್ತು ಪೋರ್ಟಬಿಲಿಟಿಯಡಿ ಹೊರ ರಾಜ್ಯದವರು ಎಷ್ಟು ರೇಷನ್ ಪಡೆದಿರುವುದು ಸೇರಿ ಇತರ ಮಾಹಿತಿಗಳು ಸಿಗಲಿವೆ.