ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ರಾಜ್ಯ ರಾಜಕಾರಣ ಇದೀಗ ದೇಶದ ಗಮನ ಸೆಳೆದಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಹಾಲಿ ಸಿಎಂ ಸಿದ್ದರಾಮಯ್ಯ ( Siddaramaiah ) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ( DK Shivakumar ) ನಡುವೆ ಜಟಾಪಟಿ ನಡೆಯುತ್ತಿದೆ. ಸಿಎಂ ಆಗಿ ಮುಂದುವರಿಯಬೇಕು ಅಂತ ಸಿದ್ದರಾಮಯ್ಯ ಪರ ಅಹಿಂದ ಸಮುದಾಯ ಬ್ಯಾಟ್ ಬೀಸಿದರೆ, ಡಿಕೆಶಿಗೂ ಒಂದು ಅವಕಾಶ ಕೊಡಿ ಎಂದು ಒಕ್ಕಲಿಗ ಸಮುದಾಯ ಅವರ ಬೆನ್ನಿಗೆ ನಿಂತಿದೆ. ಇದರ ನಡುವೆ ಹೈಕಮಾಂಡ್ ಸೂಚನೆಯಂತೆ ಸಿದ್ದು ಮತ್ತು ಡಿಕೆಶಿ ಇಂದು ಬ್ರೇಕ್ಫಾಸ್ಟ್ ಮೀಟಿಂಗ್ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಉಪಾಹಾರ ಸಭೆ ನಡೆಸಿದರು. ಉಭಯ ನಾಯಕರು ಇಡ್ಲಿ ಮತ್ತು ಸಾಂಬಾರ್ ಸವಿಯುತ್ತಾ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು. ತಮ್ಮ ಸಭೆಯ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಟ್ವೀಟ್ ಮಾಡಿಕೊಂಡಿದ್ದಾರೆ.
ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ಜೊತೆ ಬೆಳಗ್ಗಿನ ಉಪಹಾರ ಸೇವಿಸುತ್ತಾ, ಕೆಲಹೊತ್ತು ಮಾತುಕತೆ ನಡೆಸಿದೆ ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದರೆ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರನ್ನು ಇಂದು ಅವರ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಉಪಾಹಾರ ಸಭೆ ನಡೆಸಲಾಯಿತು ಎಂದು ಡಿಸಿಎಂ ಡಿಕೆಶಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಅಲ್ಲದೆ, ಕೆಲವೇ ಹೊತ್ತಲ್ಲಿ ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದು, ಏನು ಹೇಳಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.
'ಕೈ'ಕಮಾಂಡ್ ಲೆಕ್ಕಾಚಾರ ಏನು?
ಇಬ್ಬರ ತೀರ್ಮಾನ ಏನೇ ಆಗಲಿ ಸರ್ಕಾರಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದಕ್ಕಾಗಿ ಇಬ್ಬರೂ ಸೌಹಾರ್ದಯುತವಾಗಿ ಇರುವುದು ಮುಖ್ಯ. ಈ ಕಾರಣಕ್ಕೆ ದ್ವಿಪಕ್ಷೀಯ ಮಾತುಕತೆ ನಡೆಸಲು ಹೈಕಮಾಂಡ್ ಸೂಚನೆ ನೀಡಿತ್ತು. ಅದರಂತೆ ಉಭಯ ನಾಯಕರು ಮೀಟಿಂಗ್ ಮಾಡಿದ್ದಾರೆ. ಈಗ ಎದುರಾಗಿರುವ ಬಿಕ್ಕಟ್ಟು ಸುಗಮ ರೀತಿಯಲ್ಲಿ ಸೌಹಾರ್ದ ವಾತಾವರಣದಲ್ಲಿ ಬಗೆಹರಿಸಲು ಈ ನಾಯಕರಿಬ್ಬರೂ ಸಹಮತದಲ್ಲಿ ಇರುವುದು ಮುಖ್ಯ ಎಂಬುದು ಹೈಕಮಾಂಡ್ ಲೆಕ್ಕಾಚಾರವಾಗಿದೆ. ಸಿಎಂ-ಡಿಸಿಎಂ ಇಬ್ಬರೇ ಚರ್ಚಿಸಿ ಪರಿಹಾರ ಕಂಡು ಕೊಂಡರೆ ಒಳಿತೆಂಬ ಕಾರಣಕ್ಕೆ ಈ ಸಭೆಯನ್ನು ನಡೆಸಲು ಹೈಕಮಾಂಡ್ ಸೂಚಿಸಿತು. ದೆಹಲಿಯಲ್ಲಿ ನಡೆಯುವ ಪಕ್ಷದ ಉನ್ನತ 'ನಾಯಕರ ಸಭೆಗೆ ಮುನ್ನ ಇಬ್ಬರ ನಡುವೆ ಒಂದು ಸುತ್ತಿನ ಚರ್ಚೆಯಾದರೆ ನಿರ್ಣಯ ಕೈಗೊಳ್ಳುವಾಗ ಸ್ಪಷ್ಟತೆ ಇರುತ್ತದೆ ಎಂಬ ಕಾರಣ ಸಭೆ ನಡೆಸಲು ತಿಳಿಸಲಾಯಿತು. ಸಿಎಂ-ಡಿಸಿಎಂ ಮುಖ ತಿರುಗಿಸಿಕೊಂಡು ಓಡಾಡಿದರೆ ಪ್ರತಿಪಕ್ಷಕ್ಕೆ ಆಹಾರ, ಕಾಂಗ್ರೆಸ್ ಕಾರ್ಯಕರ್ತರಿಗೂ ಸಂಕಟ ಮತ್ತು ಆಡಳಿತದ ಮೇಲೂ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಹೈಕಮಾಂಡ್ ಸಭೆ ನಡೆಸಲು ಸೂಚಿಸಿತು.