ಬೆಂಗಳೂರು: ನಿಸರ್ಗದ ಅದ್ಭುತಗಳಲ್ಲಿ ಒಂದಾದ ‘ಪೀಕಾಕ್ ಟೆರಾಂಟುಲಾ’ ,ತನ್ನ ಮೈದುಂಬಿದ ಮೆರುಗುಳ್ಳ ನೀಲಿ ಬಣ್ಣದ ವಿಶ್ವದ ಅತ್ಯಂತ ಆಕರ್ಷಕ ಜೇಡಗಳ ಸಂತತಿಯಾಗಿದೆ.ರಾಜ್ಯದಲ್ಲಿ ಅಳಿವಿನಂಚಿನಲ್ಲಿರುವ ಇದರ ಸಂತತಿಯನ್ನು ರಕ್ಷಿಸುವ ಅಗತ್ಯವಿದೆ.
ಈ ಜೇಡದ ಅಪರೂಪದ ಅಸ್ತಿತ್ವವನ್ನು ಪರಿಗಣಿಸಿ ಕೇಂದ್ರ ಸರ್ಕಾರ, ಈ ಜೇಡವನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ತಂದಿದ್ದು, ಈ ಮೂಲಕ ಇವುಗಳ ಬೇಟೆ, ಸಂಗ್ರಹಣೆ ಹಾಗೂ ಅಕ್ರಮ ವ್ಯಾಪಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆಯೂ ಇದೆ. ಇಷ್ಟೆಲ್ಲಾ ಕಾನೂನು ರಕ್ಷಣೆ ಇದ್ದರೂ ವಾಸಸ್ಥಳದ ನಾಶ, ಪೆಟ್ ವ್ಯಾಪಾರಕ್ಕಾಗಿ ನಡೆಯುವ ಅಕ್ರಮ ಸಂಗ್ರಹಣೆಯಿಂದ ಇದರ ಸಂತತಿ ಕಡಿಮೆಯಾಗುತ್ತಿದೆ.
ಗೂಟಿ ಟೆರಾಂಟುಲಾ ಎಂದೂ ಕರೆಯಲ್ಪಡುವ ಈ ವಿಶಿಷ್ಟ ಜೀವಿಯು ಆಂಧ್ರಪ್ರದೇಶದ ಪೂರ್ವ ಘಟ್ಟಗಳ ಅತಿ ಸಣ್ಣ ಪ್ರದೇಶದಲ್ಲಿ ಕಂಡುಬರಲಿವೆ. ಮರಗಳಲ್ಲಿ ವಾಸಿಸುವ ಈ ಜೇಡಗಳು ಕೇವಲ ಅಂದಕ್ಕೆ ಸೀಮಿತವಾಗಿಲ್ಲ. ದಟ್ಟ ಕಾಡುಗಳ ಮೇಲೆ ಅವಲಂಬಿತವಾಗಿರುವ ಇವುಗಳು, ಸಣ್ಣ ಕೀಟ, ಅಕಶೇರುಕವನ್ನು ಭಕ್ಷಿಸಲಿವೆ. ಈ ಮೂಲಕ ಪರಿಸರದಲ್ಲಿ ಕೀಟಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿ ಇಡಲಿವೆ. ಪೂರ್ವ ಘಟ್ಟಗಳ ವಿಶಿಷ್ಟ ಜೀವವೈವಿಧ್ಯತೆ ಕಾಪಾಡುವಲ್ಲಿ ಇವುಗಳ ಪಾತ್ರ ಅನನ್ಯವಾಗಿದೆ.
ಆಂಧ್ರ ಸರ್ಕಾರದಿಂದ ಸಂರಕ್ಷಣೆ: ಇತ್ತೀಚೆಗೆ ಆಂಧ್ರಪ್ರದೇಶ ಸರ್ಕಾರವು ಈ ಜೇಡಗಳ ಸಂರಕ್ಷಣೆಗಾಗಿ ಮಹತ್ವದ ಹೆಜ್ಜೆ ಇಟ್ಟಿದೆ. ಪಿಸಿಬಿಎ್ ಚಲಪತಿರಾವ್ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಹಾಗೂ ‘ಪೂರ್ವ ಘಟ್ಟಗಳ ವನ್ಯಜೀವಿ ಸೊಸೈಟಿ’ಜಂಟಿಯಾಗಿ ಜೇಡಗಳ ಮಹತ್ವ, ರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಜೀವವೈವಿಧ್ಯದ ಇತಿಹಾಸದಲ್ಲಿ ಕೀಟ ಪ್ರಪಂಚದಲ್ಲಿ ಪುಟ್ಟ ಜೀವಿ ಉಳಿಸಿಕೊಳ್ಳಲು ಬೃಹತ್ ಯೋಜನೆ ರೂಪಿಸಿರುವುದು ಪರಿಸರ ಪ್ರೇಮಿಗಳಲ್ಲಿ ಹರ್ಷ ತಂದಿದೆ. ಕರ್ನಾಟಕದಲ್ಲಿ ಈ ನೀಲಿ ಸುಂದರಿ ಉಳಿಸಿಕೊಳ್ಳಲು ಹೊಣೆಗಾರಿಕೆ ರಾಜ್ಯ ಸರ್ಕಾರದ ಮೇಲಿದೆ.
ನಾಗಾರ್ಜುಮಸಾಗರ ಶ್ರೀಶೈಲಂ ಟೈಗರ್ ರಿಸರ್ವ್ ಪ್ರದೇಶದಲ್ಲಿ ಅಪರೂಪದ ಜಾತಿಯ ಪೀಕಾಕ್ ಟೆರಾಂಟುಲಾ ಸಂರಕ್ಷಿಸಲು ಯೋಜನೆ ಪ್ರಾರಂಭಿಸಲಾಗಿದೆ. ಜೇಡಗಳ ಸಮೀಕ್ಷೆಯು ದೇಶದಲ್ಲಿಯೇ ಪ್ರಥಮ ಯೋಜನೆಯಾಗಿದೆ. ಈ ಉಪಕ್ರಮ ಜೇಡಗಳ ಮಹತ್ವ ಸಾರಲಿದೆ.
- ಮಂಜುನಾಥ ಎಸ್.ನಾಯಕ,ಜೇವವೈವಿಧ್ಯ ಸಂಶೋಧಕ.
ಪೀಕಾಕ್ ಟೆರಾಂಟುಲಾ ಮರಗಳಲ್ಲಿ ವಾಸಿಸುವ ಜಾತಿಯಾಗಿದೆ. ಇವುಗಳು ವಾಸಿಸಲು ದೊಡ್ಡ ಮರ ಅಥವಾ ಕಾಡುಪ್ರದೇಶಗಳ ಮೇಲೆ ಅವಲಂಬಿತವಾಗಿವೆ. ಆದ್ದರಿಂದ, ಇದು ಕಾಡಿನ ಆರೋಗ್ಯದ ಸೂಚಕ ಪ್ರಾಣಿಯಾಗಿದೆ. ಇವುಗಳ ಸಂರಕ್ಷಣೆಯಿಂದ ಪೂರ್ವ ಘಟ್ಟಗಳ ವಿಶಿಷ್ಟ ಜೀವ ವೈವಿಧ್ಯತೆ ರಕ್ಷಿಸಲು ಸಹಾಯವಾಗಲಿದೆ. ಅಲ್ಲಿ ಅನೇಕ ಸ್ಥಳೀಯ, ಅಪರೂಪದ ಜಾತಿಗಳು ಸಹವಾಸದಲ್ಲಿವೆ.
-ಡಾ.ಚಲಪತಿರಾವ್, ಪಿಸಿಸಿಎ್ ಆಂಧ್ರಪ್ರದೇಶ.