ಬೆಂಗಳೂರು: ಕರ್ನಾಟಕದ ಎಲ್ಲಾ ಜಿಲ್ಲೆಗಳ ಸುಮಾರು 15,000 ಕಿ.ಮೀ. ಗ್ರಾಮೀಣ ರಸ್ತೆಗಳನ್ನು ಪುನರ್ ಅಭಿವೃದ್ಧಿ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಿ.ಸಿ ರಸ್ತೆ, ಚರಂಡಿಗಳನ್ನು ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, 16 ಸಾವಿರ ಕೋಟಿ ರೂಪಾಯಿ ಅನುದಾನಕ್ಕೆ ಅನುಮೋದನೆ ನೀಡಿದೆ. ಈ ಕುರಿತು ಮಂಗಳವಾರ(ನ. 17) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಆದೇಶ ಹೊರಡಿಸಿದ್ದು, ಸೆ.18ರ ಸಚಿವ ಸಂಪುಟ ಸಭೆಯ ನಿರ್ಧಾರದಂತೆ ಯೋಜನೆ ಜಾರಿಗೆ ಬರಲಿದೆ.
ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯಡಿ ಎಲ್ಲಾ ಜಿಲ್ಲೆಗಳ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ₹10,000 ಕೋಟಿ ರೂ. ಮತ್ತು ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿಗಳನ್ನು ₹6,000 ಕೋಟಿ ರೂಪಾಯಿ ವೆಚ್ಚಕ್ಕೆ ರಾಜ್ಯ ಆಡಳಿತಾತ್ಮಕ ಅನುಮೋದನೆ ನೀಡಿದೆ.
ರಾಜ್ಯದಲ್ಲಿ 2019ರ ಡಿಆರ್ಆರ್ಪಿ ಪ್ರಕಾರ ಒಟ್ಟು 1,99,458.72 ಕಿ.ಮೀ ಗ್ರಾಮೀಣ ರಸ್ತೆಗಳಿವೆ. 5,927 ಗ್ರಾಮ ಪಂಚಾಯಿತಿಗಳು ಮತ್ತು 29,340 ಗ್ರಾಮಗಳಿದ್ದು, ರಾಜ್ಯದ ಶೇ.61.33ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಜನರು ಗ್ರಾಮ ಪರಿಮಿತಿ ಮೀರಿ ತಮ್ಮ ಹೊಲ, ತೋಟಗಳಲ್ಲಿ ಮನೆ ಕಟ್ಟಿಕೊಳ್ಳುತ್ತಿದ್ದು, ಗ್ರಾಮಗಳು ಚದುರಿದ ಸ್ವರೂಪ ಪಡೆಯುತ್ತಿವೆ. ಇದಕ್ಕೆ ತಕ್ಕಂತೆ ಮೂಲಸೌಕರ್ಯ ಅಭಿವೃದ್ಧಿ ಮಾಡಲು ಆದೇಶಿಸಲಾಗಿದೆ.
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ₹10,000 ಕೋಟಿ ರೂಪಾಯಿ ಮೀಸಲಿನಲ್ಲಿ ದೀರ್ಘಕಾಲ ಬಾಳಿಕೆ ಬರುವ ಸುಧಾರಿತ ರಸ್ತೆಗಳು, ಹಾನಿಗೊಳಗಾಗಿರುವ ಡಾಂಬರು ರಸ್ತೆಗಳನ್ನು ಸುಧಾರಿಸಿ ಪುನರ್ನಿರ್ಮಿಸಲು ₹7,000 ಕೋಟಿ ರೂ. ನೀಡಲಾಗಿದೆ. ಮತ್ತು ಪ್ರಮುಖ ಗ್ರಾಮೀಣ ರಸ್ತೆಗಳಿಗೆ ಮರು ಡಾಂಬರೀಕರಣ ಕೈಗೊಳ್ಳಲು ₹3,000 ಕೋಟಿ ವಿನಿಯೋಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಮುಖವಾಗಿ ಟೆಂಡರ್ನಲ್ಲಿ ಪ್ರತಿಯೊಂದು ರಸ್ತೆ ಕಾಮಗಾರಿಯ ಪೂರ್ಣಗೊಂಡ ಬಳಿಕ ಮೂರು ವರ್ಷಗಳ ನಿರ್ವಹಣೆಯ ಹೊಣೆಗಾರಿಕೆಯ ಷರತ್ತನ್ನು ಗುತ್ತಿಗೆದಾರರಿಗೆ ವಿಧಿಸಲಾಗಿದೆ. ಇದರಿಂದ ಮಳೆಗಾಲದಲ್ಲಿಯೂ ಬಸ್ಗಳು, ಟ್ರ್ಯಾಕ್ಟರ್ಗಳು ಹಾಗೂ ಆಂಬ್ಯುಲೆನ್ಸ್ಗಳು ಸೇರಿದಂತೆ ಎಲ್ಲಾ ವಾಹನಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ ಎನ್ನಲಾಗಿದೆ.
ಪ್ರತಿ ಜಿಲ್ಲೆಗೂ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಆದ್ಯತೆ ನೀಡಲಾಗಿದ್ದು, ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೂ ಈಗಾಗಲೇ ಒಟ್ಟು ₹7,775 ಕೋಟಿಗಳ ಅನುದಾನ ಹಂಚಿಕೆ ಮಾಡಲಾಗಿದೆ. ಈ ಪೈಕಿ ಬೆಳಗಾವಿ ಜಿಲ್ಲೆಗೆ ಗರಿಷ್ಠ ₹650 ಕೋಟಿ ಹಾಗೂ ತುಮಕೂರು ಜಿಲ್ಲೆಗೆ ₹425 ಕೋಟಿ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಸ್ಥಳೀಯ ಅಗತ್ಯಗಳು ಮತ್ತು ಆದ್ಯತೆಗಳನ್ನು ಪರಿಗಣಿಸಿ ಆಯಾ ವಿಧಾನಸಭಾ ಕ್ಷೇತ್ರಗಳ ಶಾಸಕರೊಂದಿಗೆ ಸಮಾಲೋಚನೆ ನಡೆಸಿ ರಸ್ತೆ ಕಾಮಗಾರಿಗಳನ್ನು, ಆಯ್ಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಅತ್ಯಂತ ಅಗತ್ಯವಿರುವ ಪ್ರದೇಶಗಳ ರಸ್ತೆಗಳಿಗೆ ಮೊದಲ ಆದ್ಯತೆ. ಪ್ರತಿ ರಸ್ತೆಯು ಸಂಪರ್ಕ ಕಲ್ಪಿಸುವ ಜನಸಂಖ್ಯೆ ಹಾಗೂ ಕೃಷಿ ಪ್ರದೇಶಗಳು, ಮಾರುಕಟ್ಟೆಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ಸಾರಿಗೆ ಕೇಂದ್ರಗಳಿಗೆ ಒದಗಿಸುವ ಸಂಪರ್ಕದ ಮಹತ್ವವನ್ನು ಆಧರಿಸಿ ಕಾಮಗಾರಿಗಳಿಗೆ ಆದ್ಯತೆ ನಿಗದಿಪಡಿಸಲಾಗುವುದು. ತೀವ್ರವಾಗಿ ಹಾನಿಗೊಳಗಾಗಿರುವ ರಸ್ತೆಗಳು ಹಾಗೂ ದೀರ್ಘಕಾಲದಿಂದ ಬಾಕಿ ಉಳಿದಿರುವ ರಸ್ತೆ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಆದೇಶದಲ್ಲಿ ಹೇಳಲಾಗಿದೆ.
ಇನ್ನೂ ಮುಖ್ಯಮಂತ್ರಿ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿಗಳನ್ನು ₹6,000 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಮೂರು ವಿಧದ ಕಾಮಗಾರಿಗಳ ಅಡಿ, ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಡಿಆರ್ಆರ್ಪಿ ನಕ್ಷೆಯಲ್ಲಿ ಇಲ್ಲದ ಹೊಸ ರಸ್ತೆಗಳನ್ನು (ಚರಂಡಿ ಸೇರಿ ಕನಿಷ್ಠ 6 ಮೀಟರ್ ಅಗಲದ ಸ್ಥಳಾವಕಾಶದೊಂದಿಗೆ) ಅಭಿವೃದ್ಧಿಪಡಿಸುವುದು ಹಾಗೂ ಗ್ರಾಮೀಣ ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿಗಳು ಮಾಡಲು ಉದ್ಧೇಶಿಸಲಾಗಿದೆ.
ಹೊಸ ರಸ್ತೆಗಳಲ್ಲಿ ಡಾಂಬರು ಅಥವಾ ಸಿ.ಸಿ ಹಾಕುವಂತಿಲ್ಲ. 2011ರ ಜನಗಣತಿ ಆಧರಿಸಿ ಆಯ್ಕೆಯಾಗುವ ಪ್ರತಿ ಗ್ರಾಮ ಪಂಚಾಯಿತಿಯ ಗ್ರಾಮಗಳಿಗೆ ಆದ್ಯತೆ ನೀಡಲಾಗುತ್ತದೆ. ಸ್ಥಳೀಯ ಶಾಸಕರ ಸಹಮತಿ ಮೇರೆಗೆ ಪಟ್ಟಿ ಅಂತಿಮಗೊಳ್ಳಲಿದೆ. ರಸ್ತೆಗಳ ಆಯ್ಕೆಗೂ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ನಮ್ಮ ಹೊಲ ನಮ್ಮ ರಸ್ತೆಯಡಿ ಅಭಿವೃದ್ಧಿಯಾಗಿ ವಿನ್ಯಾಸ ಅವಧಿ ಪೂರ್ಣಗೊಂಡ ರಸ್ತೆಗಳು, ಹೊಸ ಜನವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಪರಿಗಣಿಸಲಾಗುವುದು. ಪ್ರತಿ 100 ಮೀಟರ್ಗೆ ಕನಿಷ್ಠ 10 ಮನೆ ಅಥವಾ ಕಟ್ಟಡಗಳಿರುವ ಬೀದಿಗಳಿಗೆ ಆದ್ಯತೆ ಸಿಗಲಿದೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಿದ್ದಾರೆ. ಕಾಮಗಾರಿಗಳನ್ನು ಕೆಟಿಪಿಪಿ ಕಾಯ್ದೆಯಂತೆ ಅನುಷ್ಠಾನಗೊಳಿಸಬೇಕು. ಇದಕ್ಕೆ ರಾಜ್ಯ ಮಟ್ಟದ ಸಮಿತಿಯ ಪ್ರತ್ಯೇಕ ಅನುಮೋದನೆ ಬೇಕಿಲ್ಲ. ಆದರೆ ಮಾರ್ಗಸೂಚಿಗೆ ಅನುಗುಣವಾಗಿಲ್ಲದಿದ್ದರೆ ಸಮಿತಿ 15 ದಿನಗಳೊಳಗೆ ತಿಳಿಸಲಿದೆ. ಕಾಮಗಾರಿಗಳನ್ನು 15 ತಿಂಗಳೊಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು. ಅಂದಾಜು ಪಟ್ಟಿಯಲ್ಲಿ ಜಿಎಸ್ಟಿ ಸೇರಿರಬೇಕು. ಏಜೆನ್ಸಿ ಶುಲ್ಕ, ಗುಣನಿಯಂತ್ರಣ ಶುಲ್ಕ ಸೇರಿ ಎಲ್ಲಾ ವೆಚ್ಚ ಅಂದಾಜು ಮೊತ್ತದ ಶೇ.5ನ್ನು ಮೀರಬಾರದು.
ಜಿಲ್ಲಾವಾರು ಅನುದಾನ ಹಂಚಿಕೆಯನ್ನೂ ಪ್ರಕಟಿಸಲಾಗಿದ್ದು, ಒಟ್ಟು 4,904.50 ಕೋಟಿ ರೂ. ಹಂಚಿಕೆಯಾಗಿದೆ. ಬೆಳಗಾವಿ ಜಿಲ್ಲೆಗೆ ಅತಿ ಹೆಚ್ಚು ₹399.50 ಕೋಟಿ ದೊರೆತಿದ್ದರೆ, ತುಮಕೂರಿಗೆ ₹277.50 ಕೋಟಿ ರೂ., ಕಲಬುರಗಿಗೆ 229 ಕೋಟಿ ರೂ., ಚಿಕ್ಕಮಗಳೂರಿಗೆ 226 ಕೋಟಿ ರೂ., ಮೈಸೂರಿಗೆ 225 ಕೋಟಿ ರೂ. ಹಾಗೂ ಹಾವೇರಿಗೆ 223 ಕೋಟಿ ರೂ. ಹಂಚಿಕೆಯಾಗಿದೆ. ಅತಿ ಕಡಿಮೆ ಅನುದಾನ ಬೆಂಗಳೂರು ನಗರ (56.50 ಕೋಟಿ ರೂ.) ಮತ್ತು ಉಡುಪಿ (77.50 ಕೋಟಿ ರೂ.) ಜಿಲ್ಲೆಗಳಿಗೆ ದೊರೆತಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸಿಎಂ ಅವರು 10 ಸಾವಿರ ಕೋಟಿ ರೂ ಹಂಚಿಕೆ ಮಾಡಿದ್ದಾರೆ. ರಾಜ್ಯದಲ್ಲಿ 1,99,458 ಕಿಮೀ ಉದ್ದದ ರಸ್ತೆ ಗ್ರಾಮೀಣ ಭಾಗದಲ್ಲಿದೆ. ಕಲ್ಯಾಣ ಪಥ ಯೋಜನೆಯಡಿ 43,476 ಕಿಮೀ ರಸ್ತೆ ಈಗಾಗಲೇ ಅಭಿವೃದ್ಧಿ ಪಡಿಸಲಾಗಿದೆ.
ಈಗ ಮುಖ್ಯಮಂತ್ರಿಗಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ 10 ಸಾವಿರ ಕೋಟಿ ಹಂಚಿಕೆ ಮಾಡಿ ರಸ್ತೆಗಳ ಅಭಿವೃದ್ಧಿ ಮಾಡಲಿದ್ದೇವೆ. ಈ ಯೋಜನೆಗೆ ನವೆಂಬರ್ 20ರಂದು ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಚಾಲನೆ ಕೊಡಲಿದ್ದಾರೆ. ಇದಲ್ಲದೇ ಇನ್ನೂ 6 ಸಾವಿರ ಕೋಟಿ ರೂ. ಮೊತ್ತದಲ್ಲಿ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಸಿಸಿ ರಸ್ತೆ, ಚರಂಡಿಗಳ ಅಭಿವೃದ್ಧಿಗೆ ಹಂಚಿಕೆ ಮಾಡಲಾಗಿದೆ. ಒಟ್ಟು 16 ಸಾವಿರ ಕೋಟಿ ರೂ ನಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ನೀಡಲಾಗಿದ್ದು, ಟೆಂಡರ್ನಲ್ಲೂ ಮೂರು ವರ್ಷಗಳ ಕಾಲ ರಸ್ತೆಗಳ ನಿರ್ವಹಣೆ ಮಾಡುವ ಷರತ್ತು ಹಾಕಲಾಗಿದೆ ಎಂದು ತಿಳಿಸಿದ್ದಾರೆ.