ಮಂಗಳೂರಿನ ಕೆಎಫ್​ಸಿ ರೆಸ್ಟೋರೆಂಟ್​ ಮೇಲೆ ಆರೋಗ್ಯ ಸುರಕ್ಷಾ ಇಲಾಖೆ ರೇಡ್​​ 
ರಾಜ್ಯ

ಕೊಳೆತ ಚಿಕನ್​ ನೀಡಿದ ಆರೋಪ: KFC ಮಳಿಗೆಯಲ್ಲಿ ಆರೋಗ್ಯ ಸುರಕ್ಷಾ ಇಲಾಖೆಯಿಂದ ತಪಾಸಣೆ; ಗೋಡೌನ್​ಗೆ ಬೀಗ ಜಡಿದ ಅಧಿಕಾರಿಗಳು! Rotten Chicken at KFC

ಪ್ರಮುಖ ಮುಖ್ಯಾಂಶಗಳು

  • ಗ್ರಾಹಕರಿಗೆ ಕೊಳೆತ ಚಿಕನ್​ ನೀಡಿದ ಆರೋಪ
  • ಮಂಗಳೂರಿನ ಕೆಎಫ್​ಸಿ ರೆಸ್ಟೋರೆಂಟ್​ ಮೇಲೆ ಆರೋಗ್ಯ ಸುರಕ್ಷಾ ಇಲಾಖೆ ರೇಡ್​​
  • ಗೋಡೌನ್​ಗೆ ಬೀಗ ಜಡಿದ ಅಧಿಕಾರಿಗಳು
ಮಂಗಳೂರು: ಪ್ರಸಿದ್ಧ ಫಾಸ್ಟ್ ಫುಡ್ ರೆಸ್ಟೋರೆಂಟ್ ಚೇನ್ ಆದ ಕೆಎಫ್‌ಸಿಯಲ್ಲಿ (Rotten Chicken at KFC) ಗ್ರಾಹಕರಿಗೆ ಹಾಳಾದ ಮತ್ತು ದುರ್ವಾಸನೆ ಬೀರುವ ಕೋಳಿ ಮಾಂಸವನ್ನು ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಆನ್‌ಲೈನ್ ಮೂಲಕ ಆರ್ಡರ್ ಮಾಡಿದ ಆಹಾರದಲ್ಲಿ ಈ ಲೋಪ ಪತ್ತೆಯಾಗುತ್ತಿದ್ದಂತೆ ಎಚ್ಚೆತ್ತ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ರೆಸ್ಟೋರೆಂಟ್‌ನ ಗೋಡೌನ್ ಅನ್ನು ಸೀಲ್ ಮಾಡಿದ್ದಾರೆ.

ಆನ್‌ಲೈನ್ ಆರ್ಡರ್‌ನಲ್ಲಿ ಕೆಟ್ಟುಹೋದ ಚಿಕನ್!

ಮಂಗಳೂರಿನ ಕೆ.ಎಸ್. ರಾವ್ ರಸ್ತೆಯಲ್ಲಿರುವ ಸಿಟಿ ಸೆಂಟರ್ ಮಾಲ್‌ನಲ್ಲಿರುವ ಕೆಎಫ್‌ಸಿ ಔಟ್‌ಲೆಟ್‌ಗೆ ಈ ಸಂಕಷ್ಟ ಎದುರಾಗಿದೆ. ಇತ್ತೀಚೆಗೆ ಗ್ರಾಹಕರೊಬ್ಬರು ಈ ಔಟ್‌ಲೆಟ್‌ನಿಂದ ಆನ್‌ಲೈನ್ ಮೂಲಕ ಚಿಕನ್ ಪೆರಿ ಪೆರಿ ಲೆಗ್ಸ್ ಆರ್ಡರ್ ಮಾಡಿದ್ದರು.

ಆದರೆ ತಲುಪಿದ ಆಹಾರವನ್ನು ತೆರೆದು ನೋಡಿದಾಗ, ಅದು ಸಂಪೂರ್ಣವಾಗಿ ಹಳಸಿಹೋಗಿದ್ದು, ಭೀಕರ ದುರ್ವಾಸನೆ ಬೀರುತ್ತಿತ್ತು. ಈ ಬಗ್ಗೆ ಗ್ರಾಹಕರು ನೇರವಾಗಿ ಆಹಾರ ಸುರಕ್ಷತಾ ಇಲಾಖೆಗೆ ದೂರು ದಾಖಲಿಸಿದ್ದಾರೆ.

ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಸಿಟಿ ಸೆಂಟರ್‌ನಲ್ಲಿರುವ ಕೆಎಫ್‌ಸಿ ಶಾಖೆಗೆ ಮುತ್ತಿಗೆ ಹಾಕಿ ಪರಿಶೀಲನೆ ನಡೆಸಿದ್ದಾರೆ. ಅಡುಗೆ ಕೋಣೆ, ಸ್ಟೋರ್ ರೂಂ, ಕೋಲ್ಡ್ ಸ್ಟೋರೇಜ್, ಡೀಪ್ ಫ್ರೀಜರ್ ಹಾಗೂ ಫ್ರೈಡ್ ಚಿಕನ್ ಸ್ಟಾಕ್ ಇರುವ ಜಾಗಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.


ಗೋಡೌನ್ ಸೀಲ್, ಮಾದರಿ ಪ್ರಯೋಗಾಲಯಕ್ಕೆ ರವಾನೆ

ಪರಿಶೀಲನೆಯ ವೇಳೆ ಆಹಾರ ಪದಾರ್ಥಗಳು ಕಳಪೆಯಾಗಿರುವುದು ಮತ್ತು ನಿಯಮ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ತಕ್ಷಣ ಎಚ್ಚೆತ್ತ ಅಧಿಕಾರಿಗಳು ಕೆಎಫ್‌ಸಿ ಗೋಡೌನ್ ಅನ್ನು ಸೀಲ್ ಮಾಡಿದ್ದಾರೆ. ಅಲ್ಲದೆ, ಗುಣಮಟ್ಟ ಪರಿಶೀಲನೆಗಾಗಿ ಕೋಳಿ ಮಾಂಸದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ವಿಶ್ಲೇಷಣೆಗೆ ಕಳುಹಿಸಿಕೊಡಲಾಗಿದೆ.
ಲ್ಯಾಬ್ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಸಿದ್ಧ ಬ್ರ್ಯಾಂಡ್ ಹೆಸರಿನಲ್ಲಿ ಗ್ರಾಹಕರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ, (ಏಜನ್ಸೀಸ್​).