ಬೆಂಗಳೂರು: ಕೃಷಿಗೆ ಪ್ರಾಮುಖ್ಯತೆ ದೊರೆಯುವಂತಾಗಬೇಕು. ಮಣ್ಣಿನ ಫಲವತ್ತತೆ ಉಳಿಸುವ ಕೆಲಸವಾಗಬೇಕು ಎಂದು ಎಸ್‌ಕೆಎಫ್ ಎಲಿಕ್ಸರ್ ಸಂಸ್ಥೆಯ ಮುಖ್ಯಸ್ಥ ಡಾ.ರಾಮಕೃಷ್ಣ ಆಚಾರ್ ಹೇಳುತ್ತಾರೆ.
ಪ್ರಗತಿಪರ ರೈತರನ್ನು ಪ್ರೋತ್ಸಾಹಿಸುವ ಸಲುವಾಗಿ ರೈತಪೀಠ ಪ್ರಶಸ್ತಿ ಸ್ಥಾಪಿಸಿದ್ದೇನೆ. ಕೃಷಿ ಪ್ರಾತ್ಯಕ್ಷಿಕೆ ತೋರಿಸಲು ಗೋಧಾಮ ಎಂಬ ಮಾದರಿ ತೋಟ ನಿರ್ಮಿಸಿದ್ದೇನೆ. ಫೆ.20ರಂದು ಕಾರ್ಕಳ ಮುನಿಯಾಲಿನಲ್ಲಿರುವ ಗೋಧಾಮದಲ್ಲಿ ರೈತಪೀಠ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.
ನಮ್ಮ ದೇಶದಲ್ಲಿ ರೈತ ಅತ್ಯಂತ ಕೀಳರಿಮೆಯಿಂದ ಬದುಕುತ್ತಿದ್ದಾನೆ. ವಿದೇಶಗಳಲ್ಲಿ ರೈತರಿಗೆ ಸಿಗುವ ಸಾಮಾಜಿಕ ಮಾನ್ಯತೆ ಮತ್ತು ಗೌರವ ಇಲ್ಲಿನ ರೈತರಿಗೆ ಹಾಗೂ ಅವರ ಮಕ್ಕಳಿಗೆ ಸಿಗುತ್ತಿಲ್ಲ. ಕೃಷಿ ಎಂದರೆ ಲಾಭವಿಲ್ಲದ ಕೆಲಸ, ಸೋತವನು ಮಾತ್ರ ಕೃಷಿಗೆ ಬರುತ್ತಾನೆ ಎನ್ನುವ ಮನಸ್ಥಿತಿ ಬದಲಾಗಬೇಕು. ರೈತನಿಗೆ ಪರಮ ಗೌರವ ಮತ್ತು ಲೋಕಪ್ರೀತಿ ದೊರೆಯಬೇಕು ಎಂಬ ಸದುದ್ದೇಶದಿಂದ ನಾನು 'ರೈತ ಪೀಠ' ಪ್ರಶಸ್ತಿಯನ್ನು ಸ್ಥಾಪಿಸಿದ್ದೇನೆ. ಸಾಹಿತ್ಯದಲ್ಲಿ ಶ್ರೇಷ್ಠ ಸಾಧನೆ ಮಾಡಿದವರಿಗೆ ಜ್ಞಾನಪೀಠ, ಕೃಷಿಯಲ್ಲಿ ಶ್ರೇಷ್ಠ ಸಾಧನೆ ಮಾಡಿದವರಿಗೆ ರೈತಪೀಠ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ನಾನು ಮೂಲತಃ ಉದ್ಯಮಿ. ಆದರೆ, ವಿದೇಶಗಳಿಗೆ ಹೋದಾಗ ಅಲ್ಲಿನ ವ್ಯವಸ್ಥೆ ಕಂಡು ಕೃಷಿಯಲ್ಲಿರುವ ನೆಮ್ಮದಿ ನನ್ನನ್ನು ಮಣ್ಣಿಗೆ ಮರಳುವಂತೆ ಮಾಡಿತು. 27 ಎಕರೆ ಜಾಗವನ್ನು ಖರೀದಿಸಿ, ಸಂಜೀವಿನಿ ಗೋಧಾಮ ರೂಪಿಸಿದೆ. ಇಲ್ಲಿ ಮೊದಲು ಹಸುಗಳನ್ನು ಸಾಕಿ ಭೂಮಿಯನ್ನು ಫಲವತ್ತಾಗಿಸಿದೆ. ಇಲ್ಲಿ ಗಿಡಮರಗಳು ನನಗೆ ಹಣದ ಮೂಲಗಳಲ್ಲ, ಅವು ನನ್ನ ಮನಸ್ಸಿಗೆ ನೆಮ್ಮದಿ ನೀಡುವ ಹವ್ಯಾಸವಾಗಿದೆ. ಧಾನ್ಯದ ಕಣಜ ಎಂದೇ ಕರೆಯಲ್ಪಡುತ್ತಿದ್ದ ಪಂಜಾಬ್ ಇಂದು ವಿಷದ ಕಣಜವಾಗುತ್ತಿದೆ. ಅಲ್ಲಿನ ಮಣ್ಣು ಎಷ್ಟು ಹಾಳಾಗಿದೆಯೆಂದರೆ, ಅಲ್ಲಿ ಬೆಳೆದಿದ್ದನ್ನು ತಿಂದರೆ ಕ್ಯಾನ್ಸರ್ ಬರುವ ಅಪಾಯವಿದೆ. ಅಲ್ಲಿ ಈಗಾಗಲೇ 'ಕ್ಯಾನ್ಸರ್ ರೈಲು' ಓಡಾಡುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ದೇಶದ ಇತರ ರಾಜ್ಯಗಳಿಗೂ ಈ ಅಪಾಯ ವಿಸ್ತರಿಸಬಹುದು. ಹಾಗಾಗಿ, ನಮ್ಮ ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ ಕೃಷಿ, ಮಣ್ಣಿನ ಮಹತ್ವ ತಿಳಿಸಬೇಕಿದೆ ಎಂದು ಹೇಳಿದರು.
ಹೈನುಗಾರಿಕೆ ರಹಿತವಾಗಿ ಭಾರತೀಯ ಕೃಷಿಯನ್ನು ನೋಡಲು ಅಸಾಧ್ಯ. 1970ರ ದಶಕದಲ್ಲಿ ಹೈಬ್ರಿಡ್ ಕೃಷಿ ಮತ್ತು ಹೈಬ್ರಿಡ್ ಹಸುಗಳ ಪ್ರವೇಶವಾಯಿತು. ಅಮೆರಿಕದ ಮಾದರಿಯನ್ನು ಅನುಸರಿಸಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದ ನಮ್ಮ ಮಣ್ಣು ವಿಷವಾಯಿತು.ಸಾವಿರಾರು ವರ್ಷಗಳಿಂದ ಸುಸ್ಥಿರವಾಗಿದ್ದ ಪರಂಪರಾಗತ ಕೃಷಿ ಪದ್ಧತಿ ಮತ್ತು ಭೂಮಿ-ಮನುಷ್ಯನ ಸಂಬಂಧ ಇದರಿಂದ ಕಲುಷಿತಗೊಂಡಿತು. ಹಾಗಾಗಿ, ಕೇವಲ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ ಅಥವಾ ರಬ್ಬರ್ ಬೆಳೆಯುವುದು ಸಮಗ್ರ ಕೃಷಿಯಲ್ಲ. ಭೂಮಿಯಲ್ಲಿರುವ ಎಡೆಗಳಲ್ಲಿ ಜೇನು, ಗೋವು, ಕುರಿ, ಕೋಳಿ, ಮೀನು ಮತ್ತು ಪಕ್ಷಿಗಳನ್ನು ಒಳಗೊಂಡ ಕೃಷಿ ಪದ್ಧತಿ ಇರಬೇಕು. ಇವು ಒಂದಕ್ಕೊಂದು ಪೂರಕವಾಗಿರುತ್ತವೆ. ಹಸು-ಕೋಳಿಗಳ ಗೊಬ್ಬರ ಕೃಷಿಗೆ ಸಿಕ್ಕರೆ, ಜೇನುನೊಣಗಳು ಪರಾಗಸ್ಪರ್ಶಕ್ಕೆ ನೆರವಾಗಲಿದೆ ಎಂದು ಮಾಹಿತಿ ನೀಡಿದರು.