ರಾಜ್ಯದ 153 ತಾಲೂಕುಗಳಲ್ಲಿ ಮಳೆ ಅಭಾವ
ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆ ಮುಂದುವರಿದಿದ್ದು, 153 ತಾಲೂಕುಗಳಲ್ಲಿ ಬರ ಎದುರಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಜೂ.1ರಿಂದ ಜು.26ವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ 427 ಮಿಮೀ ಮಳೆಯಾಗಬೇಕಿತ್ತು. ಆದರೆ, 279 ಮಿಮೀ ಸುರಿದಿದ್ದು, ಶೇ.35 ಮಳೆ ಅಭಾವವಾಗಿದೆ. ಈ ಅವಧಿಯಲ್ಲಿ 27 ಜಿಲ್ಲೆಗಳಿಂದ 153 ತಾಲೂಕು ಮತ್ತು 523 ಹೋಬಳಿಗಳಲ್ಲಿ ಮಳೆ ಕುಂಠಿತವಾಗಿದೆ. 57 ತಾಲೂಕುಗಳಲ್ಲಿ ವಾಡಿಕೆಯಷ್ಟೇ ಮಳೆಯಾದರೆ, 14 ತಾಲೂಕುಗಳಲ್ಲಿ ವಾಡಿಕೆಗಿಂತ ತುಸು ಅಧಿಕವಾಗಿ ಸುರಿದಿದೆ.
ರಾಜ್ಯಾದ್ಯಂತ ಜೂನ್‌ನಲ್ಲಿ ವಾಡಿಕೆಯಂತೆ 199 ಮಿಮೀ ಮಳೆಯಾಗುವ ಬದಲು 116 ಮಿಮೀ ಸುರಿದಿದ್ದು, ಶೇ.42 ಮಳೆ ಕೊರತೆಯಾಗಿದ್ದು, ಈ ವೇಳೆ 120 ತಾಲೂಕುಗಳಲ್ಲಿ ಮಳೆ ಅಭಾವವಾಗಿದೆ. ಜು.1ರಿಂದ ಜು.26ವರೆಗೆ ವಾಡಿಕೆಯಂತೆ 228 ಮಿಮೀ ಮಳೆ ಸುರಿಯಬೇಕಿತ್ತು. ಆದರೆ, 163 ಮಿಮೀ ಸುರಿದಿದ್ದು, ಶೇ.29 ಕೊರತೆಯಾಗಿದೆ. ಈ ಅವಧಿಯಲ್ಲಿ 96 ತಾಲೂಕುಗಳಲ್ಲಿ ಬರ ಎದುರಾಗಿದೆ.
2 ತಿಂಗಳಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಶೇ.30, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಶೇ.42 ಮಳೆ ಮಳೆ ಅಭಾವವಾಗಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಸೇರಿ ದಕ್ಷಿಣ ಕರ್ನಾಟಕದಲ್ಲಿ ಶೇ.36 ಮಳೆ ಕುಂಠಿತವಾಗಿದೆ. ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ, ಗದಗ, ಹಾವೇರಿ, ಧಾರವಾಡದಲ್ಲಿ ಶೇ.27 ಮಳೆ ಕುಂಠಿತವಾದರೆ, ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರದಲ್ಲಿ ವಾಡಿಕೆಯಷ್ಟೇ ಸರಿದಿದೆ.