ಮೈಸೂರು: ಕೆಲವರಿಗೆ ಹೇಗಾದರೂ ಮಾಡಿ ಒಂದು ಬಾರಿಯಾದರೂ ಪ್ರಧಾನಿಯಾಗುವ ಕನಸಿದೆ. ರಾಹುಲ್ ಗಾಂಧಿಗೆ ಮದುವೆಯೂ ಆಗಿಲ್ಲ, ಹುಚ್ಚು ಬಿಡುತ್ತಿಲ್ಲ, ಪ್ರಧಾನಿಯಾಗುವುದು ಸಾಧ್ಯವೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ ಪಾದಯಾತ್ರೆ ಸಂದರ್ಭದಲ್ಲಿ ಮಾತನಾಡಿದ ಬಿವೈವಿ, ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರ ನಡೆಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ದೊಡ್ಡ ಶಕ್ತಿಯಾಗಿ ಪರಿವರ್ತನೆ ಹೊಂದಿದೆ. ಇದನ್ನು ರಾಹುಲ್ ಗಾಂಧಿಯವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಕುಟುಕಿದರು.
ರಾಹುಲ್ ಗಾಂಧಿಯವರು ಅನಿವಾಸಿ ವಿರೋಧ ಪಕ್ಷದ ನಾಯಕ ಎಂದ ವಿಜಯೇಂದ್ರ, ಎನ್ಡಿಎ ಸರ್ಕಾರವನ್ನು ಹೇಗಾದರೂ ಮಾಡಿ ಕೆಳಗಿಳಿಸಲು ಸಂಚು ಇವರೆಲ್ಲಾ ರೂಪಿಸುತ್ತಿದೆ. ಈ ಎಲ್ಲಾ ಷಡ್ಯಂತ್ರ ದೇಶದ ಜನತೆಯ ಅರಿವಿಗಿದ್ದು, ರಾಹುಲ್ ಮುಂದಾಳತ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದರು.
4ನೇ ಬಾರಿಗೆ ಮೋದಿಯವರು ಪ್ರಧಾನಿಯಾಗುವುದು ನಿಶ್ಚಿತವಾಗಿದ್ದು, ಆದ್ದರಿಂದ ಕಾಂಗ್ರೆಸ್ನವರ ಆತಂಕ ಹೆಚ್ಚಾಗಿದೆ. ಇದಕ್ಕಾಗಿ ದೆಹಲಿ ಮತ್ತಿತರ ಕಡೆ ಪ್ರತಿಭಟನೆ ಮಾಡುತ್ತಿದ್ದಾರೆ, ಅರಾಜಕತೆ ಸೃಷ್ಟಿಗೆ ಮುಂದಾಗಿದ್ದಾರೆ. ದೇಶದಲ್ಲಿ ಗೊಂದಲ ನಿರ್ಮಿಸಿ, ಯುವಜನರನ್ನು ಬೀದಿಗೆ ತಂದು ಕೇಂದ್ರ ಸರ್ಕಾರವನ್ನು ಉರುಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶವು ಅಭಿವೃದ್ಧಿಯತ್ತ ಮುನ್ನಡೆದಿದ್ದು, ಭಯೋತ್ಪಾದನೆ ಮತ್ತು ನಕ್ಸಲಿಸಂ ಕಿತ್ತುಹಾಕಲಾಗಿದೆ. ದೇಶದಲ್ಲಿ ಶಾಂತಿಯುತ ಪರಿಸ್ಥಿತಿ ಇದ್ದು, ದೇಶದ ಪ್ರಗತಿ ಸಹಿಸಲು ಸಾಧ್ಯವಾಗದೆ ದೇಶಕ್ಕೆ ಬೆಂಕಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಮನಸ್ಸು ಮಾಡಿದರೆ 40 ಲಕ್ಷ ಜನರು ಬೀದಿಗಿಳಿದು ದೇಶಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ ಎಂದಿರುವ ಜಾರ್ಖಂಡ್ ಸಚಿವ ಅನ್ಸಾರಿ ಹೇಳಿಕೆಯನ್ನು ಉಲ್ಲೇಖಿಸಿದ ಬಿಜೆಪಿ ರಾಜ್ಯಾಧ್ಯಕ್ಷರು, ಇಂತಹ ಅರಾಜಕತೆಯ ಕನಸು ಕಾಣುವವರಿಗೆ ತಕ್ಕ ತಿರುಗೇಟು ನೀಡುವ ಸಲುವಾಗಿಯೇ ಈ ಪ್ರಜಾಪ್ರಭುತ್ವ ಉಳಿಸಿ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಗಣಪತಿ ಹಬ್ಬ ಆಚರಿಸಲು ಕರ್ನಾಟಕದಲ್ಲಿ ಆಗುತ್ತಿಲ್ಲ. ದೀಪಾವಳಿ, ದಸರಾ ಆಚರಣೆಯ ಸಂದರ್ಭದಲ್ಲಿ ಹಾಲು, ಮೊಸರಿನ ದರವನ್ನು ಹೆಚ್ಚಿಸಿದ್ದಾರೆ. ಇದು ಬಡವರ ವಿರೋಧಿ, ಜನವಿರೋಧಿ ಸರ್ಕಾರ. ಇದನ್ನು ಮನೆಗೆ ಕಳುಹಿಸಲು ನಾವೆಲ್ಲರೂ ಸಿದ್ಧರಾಗಬೇಕು. ರೈತವಿರೋಧಿ, ಯುವಜನರ ವಿರೋಧಿ, ಹಿಂದೂ ವಿರೋಧಿ ಸರ್ಕಾರವನ್ನು ಕಿತ್ತುಹಾಕಲು ಮುಂದಾಗೋಣ ಎಂದು ವಿಜಯೇಂದ್ರ ಮನವಿ ಮಾಡಿದರು.