ಗಣಿಗಾರಿಕೆ ನಡೆಸಲು ಅನುಮತಿ 
ರಾಜ್ಯ

ಕಲ್ಲುಗಣಿಗಾರಿಕೆಯಿಂದ ವಸತಿ ಬಡಾವಣೆ ನಿರ್ಮಾಣಕ್ಕೆ ತೊಂದರೆ-quarry

ಬೆಂಗಳೂರು: ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ಸೊಣ್ಣೇನಹಳ್ಳಿ, ಮೀಸಗಾನಹಳ್ಳಿ ತೈಲಗೆರೆ ಸೇರಿ ಕೊಡಗುರ್ಕಿ  ಗ್ರಾಮದಲ್ಲಿ  500 ಎಕರೆ ಜಮೀನಿನಲ್ಲಿ ವಸತಿ ಯೋಜನೆ ಕೈಗೊಳ್ಳಲು ಸರ್ಕಾರ ಅನುಮೋದನೆ ನೀಡಿದೆ. 
ತೈಲಗೆರೆ ಗ್ರಾಮದ ಸರ್ವೇ ಸಂಖ್ಯೆ 110ರಲ್ಲಿ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಿದರೆ  ಚಟುವಟಿಕೆಗಳಿಂದಬಡಾವಣೆ ನಿರ್ಮಾಣಕ್ಕೆ ತೊಂದರೆಯಾಗುತ್ತಿದೆ ಎಂದು ಕರ್ನಾಟಕ ಗೃಹ ಮಂಡಳಿ, ಬೆಂ.ಗ್ರಾಮಾಂತರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಆದರೂ, ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. 
ತೈಲಗೆರೆ ಗ್ರಾಮದ ಸರ್ವೇ ಸಂಖ್ಯೆ 109/3, 109/4, 109/5 ಮತ್ತು 115/1ರಲ್ಲಿ ಒಟ್ಟು 12 ಎಕರೆ 19 ಗುಂಟೆ ಜಮೀನು ಅನ್ನು ಮಂಡಳಿ ಖರೀದಿಸಿದೆ. ಇದಕ್ಕೆ ಹೊಂದಿಕೊಂಡಂತೆ 109/2, 108/5, 112/3ರಲ್ಲಿ ಒಟ್ಟು 14 ಎಕರೆ 23 ಗುಂಟೆ ಜಮೀನನ್ನು ಶೇ.50:50 ಅನುಪಾತದ ಪಾಲುದಾರಿಕೆ ಅಡಿ ವಸತಿ ಯೋಜನೆಗೆ ಜಮೀನಿ ನೀಡಲು ಭೂಮಾಲೀಕರು ಒಪ್ಪಿದ್ದಾರೆ. ಅದರಂತೆ, ಮಂಡಳಿ ಈಗಾಗಗಲೇ ಖರೀದಿ ಮಾಡಿರುವ ಜಮೀನು ಸೇರಿ ಒಟ್ಟು 27 ಎಕರೆ 2 ಗುಂಟೆ ಜಮೀನಿನಲ್ಲಿ ವಸತಿ ಯೋಜನೆ ಕೈಗೊಂಡಿದೆ. ಇದಕ್ಕೆ ಸರ್ಕಾರವು ಅನುಮೋದನೆ ಕೊಟ್ಟಿದೆ. 
ಈ ಯೋಜನೆಗೆ ಬೇಡಿಕೆ ಸಮೀಕ್ಷೆಯಲ್ಲಿ 6,583 ಅರ್ಜಿಗಳು ಸ್ವೀಕೃತವಾಗಿವೆ.ನಕ್ಷೆ ತಯಾರಿಸಿ  ಬಡಾವಣೆ ನಿರ್ಮಿಸಲಾಗುತ್ತಿದೆ. ಆದರೆ, ಈ ಗ್ರಾಮಕ್ಕೆ ಸೇರಿದ ಸರ್ವೇ ಸಂಖ್ಯೆ 110ರಲ್ಲಿ ಕಲ್ಲುಗಣಿಗಾರಿಕೆ ಚಟುವಟಿಕೆಗಳು ನಡೆಯುತ್ತಿದೆ. ಇದರಿಂದ ಬಡಾವಣೆ ನಿರ್ಮಾಣಕ್ಕೆ ಮತ್ತು ಅಲ್ಲಿ ವಾಸ ಮಾಡುವ ಜನರಿಗೆ ತೊಂದರೆಯಾಗುತ್ತದೆ. ಆದ್ದರಿಂದ, ಬಡಾವಣೆ ನಿರ್ಮಿಸಲು ತೊಂದರೆಯಾಗದಂತೆ ಬರ್ ಬಡಬೇಕು ಎಂದು ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದಲ್ಲಿ ಮಂಡಳಿಯ ಗೃಹ ಆಯುಕ್ತರು, ಉಲ್ಲೇಖಿಸಿದ್ದರು. 
ಸರ್ವೇ ಸಂಖ್ಯೆ 110ಕ್ಕೆ ಮೀಸಗಾನಹಳ್ಳಿ ಗಡಿಗೆ ಹೊಂದಿಕೊಂಡಂತೆ ಸರ್ವೇ ಸಂಖ್ಯೆ 146ರಲ್ಲಿ 2 ಎಕರೆ 38 ಗುಂಟೆ, ಸರ್ವೇ ಸಂಖ್ಯೆ 58ರಲ್ಲಿ 9 ಎಕರೆ ಜಮೀನು ಸೇರಿ ಒಟ್ಟು 30 ಎಕರೆ 20 ಗುಂಟೆ ಖರೀದಿಯಾಗಿದ್ದು,  ಮುಂದಿನ ದಿನಗಳಲ್ಲಿ ಸದರಿ ಸರ್ವೇ ನಂಬರ್‌ಗಳಲ್ಲಿ ಮಂಡಳಿಯಿಂದ ಬಡಾವಣೆ ನಿರ್ಮಿಸಲು ಉದ್ದೇಶಿಸಲಾಗಿದೆ. ಬಡಾವಣೆ ಸಮೀಪ ಗಣಿಗಾರಿಕೆ ಅನುಮತಿ ಕೊಟ್ಟರೆ ಅಲ್ಲಿ ವಾಸ ಮಾಡುವ ಜನರಿಗೆ ತೊಂದರೆಯಾಗಲಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಗೃಹ ಆಯುಕ್ತರು ಪತ್ರದಲ್ಲಿ ವಿವರಿಸಿದರು.
ಸರ್ಕಾರ ಸಮಸ್ಯೆ ಬಗೆಹರಿಸಲಿ:ಕಲ್ಲುಗಣಿಗಾರಿಕೆ ನಡೆಸಲು ಬ್ಲಾಸ್ಟಿಂಗ್ ಮಾಡಿದರೆ ಬಡಾವಣೆಯಲ್ಲಿ ನಿರ್ಮಿಸಲಾಗುವ  ಮನೆಗಳು ಬಿರುಕು ಬಿಡಲಿದೆ. ಧೂಳುಗಳಿಂದ ಬಡಾವಣೆಯೂ ಹಾಳಾಗಲಿದೆ. ಆದ್ದರಿಂದ, ಬಡಾವಣೆ ಪಕ್ಕದಲ್ಲಿ ಪಕ್ಕದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು. ಈ ಬಗ್ಗೆ ಸರ್ಕಾರ ಗಮನ ಹರಿಸಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ.