Pyxis Pioneer | ನವಮಂಗಳೂರು ಬಂದರು ತಲುಪಿದ ಪೈಕ್ಸಿಸ್ ಪಯೋನಿಯರ್ ಹಡಗು
ಮಂಗಳೂರು: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿದು ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿರುವಾಗಲೇ, ದಕ್ಷಿಣ ಕನ್ನಡದ ಮಂಗಳೂರು ಬಂದರಿಗೆ ಅಮೆರಿಕದಿಂದ ಬೃಹತ್ ಎಲ್‌ಪಿಜಿ ಟ್ಯಾಂಕರ್ ಆಗಮಿಸಿದ್ದು, ಸಿಂಗಾಪುರ ಧ್ವಜ ಹೊತ್ತ ಪೈಕ್ಸಿಸ್ ಪಯೋನಿಯರ್ (Pyxis Pioneer) ಎಂಬ 47,236 ಟನ್ ತೂಕದ ಬೃಹತ್ ಹಡಗು ಭಾನುವಾರ ಬೆಳಿಗ್ಗೆ ಸುರಕ್ಷಿತವಾಗಿ ನವಮಂಗಳೂರು ಬಂದರು ತಲುಪಿದೆ.
ಫೆಬ್ರವರಿ 14 ರಂದು ಅಮೆರಿಕದ ಟೆಕ್ಸಾಸ್ ರಾಜ್ಯದ ನೆಡರ್ಲ್ಯಾಂಡ್ ಬಂದರಿನಿಂದ ಹೊರಟಿದ್ದ ಈ ಹಡಗು, ಸುದೀರ್ಘ ಪ್ರಯಾಣದ ನಂತರ ಇಂದು ಬೆಳಿಗ್ಗೆ ಸುಮಾರು 6 ಗಂಟೆಗೆ ಬಂದರಿನ ಬರ್ತ್ ಸಂಖ್ಯೆ 13 ರಲ್ಲಿ ಬಂದಿಳಿದಿದೆ. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿರುವ ಕಾರಣ, ಈ ಹಡಗಿನ ಆಗಮನವು ಭಾರತದ ಇಂಧನ ಭದ್ರತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂದು ನವಮಂಗಳೂರು ಬಂದರು ಪ್ರಾಧಿಕಾರ ಮಾಹಿತಿ ನೀಡಿದೆ.
16,714 ಟನ್ ಎಲ್‌ಪಿಜಿ ಪೂರೈಕೆ
ಈ ಹಡಗು ಒಟ್ಟು 16,714 ಮೆಟ್ರಿಕ್ ಟನ್ ಎಲ್‌ಪಿಜಿ (LPG) ಅನಿಲವನ್ನು ಮಂಗಳೂರಿನಲ್ಲಿರುವ ಏಜಿಸ್ ಲಾಜಿಸ್ಟಿಕ್ಸ್ ಲಿಮಿಟೆಡ್ ಸಂಸ್ಥೆಗೆ ಹಸ್ತಾಂತರಿಸಲು ಹೊತ್ತು ತಂದಿದೆ. ಸೋಮವಾರ ಮುಂಜಾನೆ ಇಂಧನ ಇಳಿಸುವ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ನಂತರ ಹಡಗು ತನ್ನ ಮುಂದಿನ ಪ್ರಯಾಣ ಬೆಳೆಸಲಿದೆ.
ಹಾರ್ಮುಜ್ ಜಲಸಂಧಿಯ ಮೂಲಕ ಹಾದು ಹೋಗುವ ಭಾರತೀಯ ಹಡಗುಗಳು
ಮಾರ್ಚ್ 18 ರಂದು ಸುಮಾರು 80,800 ಮೆಟ್ರಿಕ್ ಟನ್ ಕಚ್ಚಾ ತೈಲ ಹೊತ್ತ ಜಗ್ ಲಾಡ್ಕಿ ಟ್ಯಾಂಕರ್ ಗುಜರಾತ್‌ನ ಮುಂದ್ರಾ ಬಂದರನ್ನು ಯಶಸ್ವಿಯಾಗಿ ತಲುಪಿದೆ. ಇದರ ಬೆನ್ನಲ್ಲೇ, ನಂದಾ ದೇವಿ ಎಂಬ ಹಡಗು 47,000 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ವಡಿನಾರ್ ಬಂದರಿಗೆ ಮತ್ತು ಶಿವಾಲಿಕ್ ಹಡಗು ಮುಂದ್ರಾ ಬಂದರಿಗೆ ಇಂಧನವನ್ನು ಸುರಕ್ಷಿತವಾಗಿ ತಲುಪಿಸಿವೆ.
ಇರಾನ್‌ನಿಂದ ಭಾರತೀಯ ಹಡಗುಗಳಿಗೆ ವಿಶೇಷ ರಕ್ಷಣೆ
ಯುನೈಟೆಡ್ ಅರಬ್ ಎಮಿರೇಟ್ಸ್ ಬಂದರು ಪ್ರದೇಶಗಳ ಮೇಲೆ ದಾಳಿಗಳು ನಡೆಯಬಹುದು ಎಂಬ ಎಚ್ಚರಿಕೆಗಳಿದ್ದರೂ, ಭಾರತೀಯ ಹಡಗುಗಳ ಸಂಚಾರಕ್ಕೆ ಯಾವುದೇ ಅಡ್ಡಿಯಾಗಿಲ್ಲ. ವಿಶ್ವದ ಅತ್ಯಂತ ಸೂಕ್ಷ್ಮ ತೈಲ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಭಾರತೀಯ ಹಡಗುಗಳಿಗೆ ಇರಾನ್ ಸರ್ಕಾರವು ಸುರಕ್ಷಿತ ಮಾರ್ಗದ ಭರವಸೆ ನೀಡಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚಿರುವ ಈ ಸಮಯದಲ್ಲಿ ಇರಾನ್‌ನ ಈ ನಿಲುವು ಭಾರತಕ್ಕೆ ದೊಡ್ಡ ಸಮಾಧಾನ ತಂದಿದೆ.
ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿದ ನಂತರ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಈ ಉಲ್ಬಣಕ್ಕೆ ಮೊದಲು ಭಾರತವು ತನ್ನ ಅಗತ್ಯದ ಬಹುಪಾಲು ತೈಲವನ್ನು ಸೌದಿ ಅರೇಬಿಯಾ ಮತ್ತು ಯುಎಇಗಳಿಂದ ಪಡೆಯುತ್ತಿತ್ತು. ಪ್ರಸ್ತುತ ಯುದ್ಧದ ಸನ್ನಿವೇಶದಲ್ಲಿಯೂ ಭಾರತವು ತನ್ನ ರಾಜತಾಂತ್ರಿಕ ಸಂಬಂಧಗಳನ್ನು ಬಳಸಿಕೊಂಡು ತೈಲ ಪೂರೈಕೆ ವ್ಯತ್ಯಯವಾಗದಂತೆ ನೋಡಿಕೊಳ್ಳುತ್ತಿದೆ(ಏಜೆನ್ಸೀಸ್).