ಸಚಿವ ದಿನೇಶ್ ಗುಂಡೂರಾವ್ 
ರಾಜ್ಯ

ಯೋಗ ಜಿಲ್ಲೆಯಾಗಿ ಮೈಸೂರು ಘೋಷಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ: ಸಚಿವ ದಿನೇಶ್ ಗುಂಡೂರಾವ್ ಮಾಹಿತಿ

ಬೆಂಗಳೂರು: ಸಾಂಸ್ಕೃತಿಕ ನಗರಿ ‘ಮೈಸೂರು’ ಅನ್ನು ಯೋಗ ಜಿಲ್ಲೆಯನ್ನಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಯೋಗದ ರಾಜಧಾನಿ. ಯೋಗ ಅಭ್ಯಾಸ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಸಾವಿರಾರು ಜನರು ಮೈಸೂರಿಗೆ ಬರುತ್ತಾರೆ. ಪ್ರತಿ ಮನೆಗೆ ಯೋಗ ತಲುಪಿಸಲಾಗುತ್ತಿದೆ. ಯೋಗ ಜಿಲ್ಲೆಯನ್ನಾಗಿ ಮೈಸೂರು ೋಷಿಸುವುದಕ್ಕೆ ಕೇಂದ್ರ ಅನುಮೋದನೆ ನೀಡಲಿದೆ. ಯೋಗ ಜಿಲ್ಲೆಯಾಗಿ ಮೈಸೂರು ಘೋಷಣೆಯಾದ ಬಳಿಕ ರಾಜ್ಯದ ಇತರ ಜಿಲ್ಲೆಗಳಿಗೂ ಯೋಗವನ್ನು ವಿಸ್ತರಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಮಾಹಿತಿ ನೀಡಿದರು.
ಪ್ರತಿ ವರ್ಷ ಜೂ 21ಕ್ಕೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ‘ಆರೋಗ್ಯ, ಜ್ಞಾನ ಮತ್ತು ವಿಶ್ವಶಾಂತಿಗಾಗಿ ಯೋಗ’ ಪರಿಕಲ್ಪನೆ ಅಡಿ ಆಯುಷ್ ಇಲಾಖೆಯಿಂದ ವಿಧಾನಸೌಧ ಆವರಣದಲ್ಲಿ ಜೂ 21ರ ಬೆಳಗ್ಗೆ 6ರಿಂದ 8 ಗಂಟೆವರೆಗೆ ಯೋಗ ದಿನದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಜ್ಯಪಾಲ ಥಾವರ್‌ಚಂದ್ ಗೆಹಲ್ಲೋತ್, ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಅಂದಾಜು 5 ಸಾವಿರಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯವು ವಿಜೃಂಭಣೆಯಿಂದ ಯೋಗ ಆಚರಿಸಲು ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಅನೇಕ ವಿನೂತನ ಕಾರ್ಯಕ್ರಮದ ಮೂಲಕ ಮನೆ ಮನೆಗೆ ಯೋಗ, ಎಲ್ಲರಿಗೂ ಯೋಗ ಎಂಬ ವಿಶಾಲ ದೃಷ್ಟಿಕೋನದಿಂದ ಸಾಂಕೇತಿಕವಾಗಿ ಯೋಗೋತ್ಸವವನ್ನು ನಿತ್ಯೋತ್ಸವವಾಗಿ ಆಚರಿಸಲು ಸಂಕಲ್ಪ ಮಾಡಿದ್ದೇವೆ ಎಂದು ಸಚಿವರು ವಿವರಿಸಿದರು.
ಇದೇವೇಳೆ ಸಚಿವರು ಯೋಗ ಅಂಚೆ ಚೀಟಿ ಮತ್ತು ಕೈಪಿಡಿ ಬಿಡುಗಡೆ ಮಾಡಿದರು.ಇಲಾಖೆ ಆಯುಕ್ತ ಸುನೀಲ್ ಪನ್ವಾರ್, ಭಾರತೀಯ ಅಂಚೆ ಇಲಾಖೆಯ ಹಿರಿಯ ಸೂಪರಿಂಟೆಂಡೆಂಡ್ ಹರೀಶ್ ಇದ್ದರು.
ಕೇಂದ್ರದಿಂದ 1 ಕೋಟಿ ರೂ.ನೀಡಿಕೆ:
ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಯೋಗ ದಿನ ಕಾರ್ಯಕ್ರಮ ನಡೆಸಲು ಕೇಂದ್ರವು 1 ಕೋಟಿ ರೂ.ಅನುದಾನ ಕೊಟ್ಟಿದೆ. ಇಲಾಖೆಯಿಂದ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ‘ಗ್ರಾಮೀಣ ಯೋಗ’, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ‘ವಿಜ್ಞಾನ ಯೋಗ’, ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ ‘ಕಾರ್ಸಿನೋ ಯೋಗ’, ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ‘ಕಾರ್ಡಿಯೋ ಯೋಗ’, ಮೈಸೂರಿನ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದಲ್ಲಿ ‘ರಾಷ್ಟ್ರೀಯ ಯೋಗ’ ಮತ್ತು ‘ವಿದ್ಯಾರ್ಥಿ ಯೋಗ’ ಕಾರ್ಯಕ್ರಮಗಳು ನಡೆಯಲಿವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.