ಬೆಂಗಳೂರು: ಸುಪ್ರೀಂಕೋರ್ಟ್ ನಕಲಿ ಆದೇಶ ಸೃಷ್ಟಿಸಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಬಿಡುಗಡೆಗೆ ಸಹಕರಿಸಿದ್ದ ಬಂಧಿತ ಡಿಐಜಿ ಸೋಮಶೇಖರ್, ಕೈದಿ ಪತ್ನಿಗೆ ವಿಡಿಯೋ ಕರೆ ಮಾಡಿ ಮಾತನಾಡಿರುವ ವಿಚಾರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವಿಡಿಯೋದಲ್ಲಿ ಡಿಐಜಿ, ಕೈದಿ ಪತ್ನಿಗೆ ವಿವಸ್ತ್ರಗೊಳ್ಳುವಂತೆ ಮನವಿ ಮಾಡಿದ್ದ ಎನ್ನಲಾಗಿದೆ. ತನಿಖಾಧಿಕಾರಿಗಳು, ಆ ವಿಡಿಯೋವನ್ನು ಎಫ್‌ಎಸ್‌ಎಲ್‌ಗೆ ರವಾನಿಸಿದ್ದು, ಅಸಲಿಯೋ, ನಕಲಿಯೋ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಎಫ್‌ಎಸ್‌ಎಲ್ ವರದಿ ಬಂದನಂತರ ಡಿಐಜಿ ಪಾತ್ರದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಸದ್ಯ ಪೊಲೀಸರು ಜೈಲು ದಾಖಲೆಗಳು, ನಕಲಿ ಆದೇಶ ಪ್ರತಿಗಳು, ಪತ್ರದ ಮೂಲ ಮತ್ತು ವಿಡಿಯೋವನ್ನು ಸಮಗ್ರವಾಗಿ ಪರಿಶೀಲಿಸುತ್ತಿದ್ದಾರೆ.
ನಕಲಿ ಆದೇಶ ಹುಟ್ಟಿಕೊಂಡಿದ್ದು ಹೇಗೆ? ಅದನ್ನು ತಯಾರಿಸಿದವರು ಯಾರು? ಜೈಲು ಅಧಿಕಾರಿಗಳಿಗೆ ಹೇಗೆ ತಲುಪಿತು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅನಾಮಧೇಯ ಪತ್ರ ಬರೆದವರಾರು ಎಂಬುದನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ಈ ಸಂಬಂಧ ಪತ್ರದಲ್ಲಿದ್ದ ಮಾಹಿತಿ ಮತ್ತು ಅದರ ಭಾಷಾಶೈಲಿ ಪರಿಶೀಲಿಸಿ ಕೈದಿ ಪತ್ನಿ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಶಂಕರ್ ಜೈಲಿನಿಂದ ಬಿಡುಗಡೆಯಾದ ಬಳಿಕ ಬೇರೊಬ್ಬರ ಜತೆಗೆ ಮದುವೆ ಆಗಿದ್ದ. ಈ ವಿಚಾರದಲ್ಲಿ ಶಂಕರ್ ಜತೆಗೆ ಪತ್ನಿ ಜಗಳ ಮಾಡುತ್ತಿದ್ದಳು. ತನ್ನನ್ನು ತೊರೆದು ಮತ್ತೊಬ್ಬಳೊಂದಿಗೆ ಪತಿ ಜೀವನ ನಡೆಸುತ್ತಿದ್ದಾನೆ ಎಂದು ನೊಂದು ಕಾರಾಗೃಹ ಇಲಾಖೆಗೆ ಪತ್ರ ಬರೆದಿದ್ದಳು ಎನ್ನಲಾಗಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಜೀವಾವಧಿ ಸಜಾಬಂಧಿ ತಮಿಳುನಾಡು ಮೂಲದ ಅಪರಾಧಿ ಎ. ಶಂಕರ್ನನ್ನು ಸುಪ್ರೀಂ ಕೋರ್ಟ್ ನಕಲಿ ಆದೇಶ ಪ್ರತಿ ಆಧಾರದ ಮೇಲೆ ಬಿಡುಗಡೆ ಮಾಡಲಾಗಿತ್ತು. ಆಗ ಕಾರಾಗೃಹದ ಮುಖ್ಯ ಅಧೀಕ್ಷಕರಾಗಿದ್ದ ಈಗಿನ ಡಿಐಜಿ ಸೋಮಶೇಖರ್, ಶಂಕರ್ ಬಿಡುಗಡೆಗೆ ಸಹಕರಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಸ್ತುತ ಬೆಳಗಾವಿ ಹಿಂಡಲಗಾ ಜೈಲಿನ ಡಿಐಜಿಯಾಗಿರು ಸೋಮಶೇಖರ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. ಬಿಡುಗಡೆಗೆ ನೆರವು ನೀಡಲು ಅಪರಾಧಿ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪವೂ ಸೋಮಶೇಖರ್ ವಿರುದ್ಧ ಕೇಳಿಬಂದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಅವರನ್ನು ಕೋರ್ಟ್ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲಾಗಿದೆ.
ಶಂಕರ್ ಅಪಹರಣ ಹಾಗೂ ಸುಲಿಗೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ 2004ರ ಜುಲೈ 12ರಂದು ಶಿಕ್ಷೆಗೆ ಒಳಗಾಗಿದ್ದ. ಕೆಲ ದಿನ ಶಿಕ್ಷೆ ಅನುಭವಿಸಿದ ಆತ, ಶಿಕ್ಷೆ ರದ್ದುಗೊಳಿಸುವಂತೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದ. ಆದರೆ ಎರಡೂ ಕಡೆ ವಿಚಾರಣಾ ನ್ಯಾಯಾಲಯದ ತೀರ್ಪನ್ನೇ ಪುರಸ್ಕರಿಸಿ ಜೀವಾವಧಿ ಶಿಕ್ಷೆ ಕಾಯಂಗೊಳಿಸಿ ಆದೇಶಿಸಲಾಗಿತ್ತು. ಆದರೆ, ಸುಪ್ರೀಂಕೋರ್ಟ್ ಕ್ರಿಮಿನಲ್ ಮೇಲ್ಮನವಿಯನ್ನು ಪುರಸ್ಕರಿಸಿ ಬಿಡುಗಡೆಗೆ ಆದೇಶಿಸಿದೆ ಎಂದು ನಕಲಿ ಆದೇಶ ಪ್ರತಿಯನ್ನು ಸೃಷ್ಟಿಸಿ, ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.