ಸಿಸಿಬಿ ದಾಳಿ ವೇಳೆ ಜೈಲಿನ ಸೆಲ್‌ನಲ್ಲಿ ಮೊಬೈಲ್ ಪೋನ್ ಹಾಗೂ ಪೆನ್‌ಡ್ರೈವ್ ಪತ್ತೆಯಾದ ಹಿನ್ನೆಲೆ ಬೆಳಗಾವಿ ಹಿಂಡಲಗಾ ಜೈಲಿಗೆ ಪ್ರಜ್ವಲ್ ರೇವಣ್ಣ ಸ್ಥಳಾಂತರ  
ರಾಜ್ಯ

ಪ್ರಜ್ವಲ್ ರೇವಣ್ಣ ಹಿಂಡಲಗಾ ಜೈಲಿಗೆ ಶಿಫ್ಟ್! ಪರಪ್ಪನ ಅಗ್ರಹಾರದಲ್ಲಿ ಮೊಬೈಲ್ ಪತ್ತೆಯಾದ ಬೆನ್ನಲ್ಲೇ ಡಿಜಿಪಿ ಅಲೋಕ್ ಕುಮಾರ್ ಖಡಕ್ ಆಕ್ಷನ್! Prajwal Revanna

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಪತ್ತೆಯಾದ ಬೆನ್ನಲ್ಲೇ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್. ಡಿಜಿಪಿ ಅಲೋಕ್ ಕುಮಾರ್ ಖಡಕ್ ಆದೇಶದ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ, ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಕೆಲ ದಿನಗಳ ಹಿಂದೆ, ಪರಪ್ಪರ ಅಗ್ರಹಾರದ ಮೇಲೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸ್​ ತಂಡ ದಾಳಿ ನಡೆಸಿದ ಸಂದರ್ಭದಲ್ಲಿ ಪ್ರಜ್ವಲ್​ ರೇವಣ್ಣ ಬಳಿ ಮೊಬೈಲ್​ ಪೋನ್​ ಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಈ ಹಿನ್ನಲೆಯಲ್ಲಿ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್​ ಕುಮಾರ್​, ಮಾಜಿ ಸಂಸದರನ್ನು ಬೆಂಗಳೂರಿನಿಂದ ಬೆಳಗಾವಿಗೆ ವರ್ಗಾವಣೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಹೀಗಾಗಿ, ಡಿಜಿಪಿ ಅಲೋಕ್​ ಕುಮಾರ್​, ಹಿಂಡಲಗಾ ಜೈಲಿನ ಅಧೀಕ್ಷಕರಿಗೆ ಈ ಬಗ್ಗೆ ಮಾಹಿತಿ ತಲುಪಿಸಿದ್ದು, ಯಾವುದೇ ಕ್ಷಣದಲ್ಲಿ ಪ್ರಜ್ವಲ್​ ರೇವಣ್ಣ ಅವರನ್ನು ಪರಪ್ಪನ ಅಗ್ರಹಾರದಿಂದ, ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್​ ಮಾಡಲಿದ್ದು, ಇದಕ್ಕೆ ತಕ್ಕಂತೆ ತಯಾರಿ ನಡೆಸಿಕೊಳ್ಳುವಂತೆ ನಿರ್ದೇಶಿಸಿದ್ದಾರೆ.

ಕೆಲ ದಿನಗಳ ಹಿಂದೆ ಸಿಸಿಬಿ ಪೊಲೀಸರು ಪ್ರಜ್ವಲ್​ ರೇವಣ್ಣ ಅವರ ಸೆಲ್​ನಲ್ಲಿ ಪರಿಶೀಲನೆ ನಡೆಸಿದ್ದ ಸಂದರ್ಭದಲ್ಲಿ ಮೊಬೈಲ್​ ಪೋನ್​, ಚಾರ್ಜರ್​ ಹಾಗೂ ಪೆನ್​ ಡ್ರೈವ್​ಗಳು ಪತ್ತೆಯಾಗಿದ್ದು, ಜೈಲಾಡಳಿತದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟಿ ಹಾಕಿದ್ದವು.

ಇನ್ನೊಬ್ಬ ಆರೋಪಿ ಬಳ್ಳಾರಿಗೆ ಶಿಫ್ಟ್​!

ಪ್ರಜ್ವಲ್​ ರೇವಣ್ಣ ಜೊತೆಗೆ ಸುಪ್ರೀಂ ಕೋರ್ಟ್​ನಲ್ಲಿ ನಕಲಿ ದಾಖಲೆ ಸೃಷ್ಟಿಸಿದ ಆರೋಪ ಹೊತ್ತಿರುವ ಆರೋಪಿ ಶಂಕರ್​ನನ್ನು ಕೂಡ ಬಳ್ಳಾರಿ ಜಿಲ್ಲೆಗೆ ಸ್ಥಳಾಂತರ ಮಾಡಲಾಗುತ್ತಿದೆ. ಅಂತಯೇ, ಇನ್ನು ಕೆಲವು ಆರೋಪಿಗಳನ್ನು ಬೇರೆ-ಬೇರೆ ಜಿಲ್ಲೆಯ ಜೈಲುಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಸಿಸಿಬಿ ಪೊಲೀಸರ ದಾಳಿಯಲ್ಲಿ ಜೈಲಿನ ಮಿತಿಯಲ್ಲಿ ಇರಬಾರದ ವಸ್ತುಗಳು ದೊರೆತ ಹಿನ್ನಲೆ ಕಾರಾಗೃಹ ಸಿಬ್ಬಂದಿಗಳಿಗೆ ತೀವ್ರ ಮುಖಭಂಗ ಉಂಟಾಗಿದ್ದು, ಇದನ್ನು ಸರಿ ಪಡಿಸಿಕೊಳ್ಳಲು ಇದೀಗ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಮಾಹಿತಿ ಪ್ರಕಾರ, ಇಂದು ಸಂಜೆ ಅಥವಾ ರಾತ್ರಿ ಒಳಗಾಗಿ ಪ್ರಜ್ವಲ್​ ರೇವಣ್ಣನನ್ನು ಬಳ್ಳಾರಿಗೆ ಸ್ಥಳಾಂತರ ಮಾಡುವುದಾಗಿ ಹೇಳಲಾಗುತ್ತಿದೆ.