ಮೈಸೂರಿನಲ್ಲಿ ನವದಂಪತಿಗೆ ಹಾಲು ಮತ್ತು ಮೊಸರಿನ ಪ್ಯಾಕೆಟ್ ಉಡುಗೊರೆ ನೀಡಿ ಸರ್ಕಾರದ ಗಮನ ಸೆಳೆದ ಪ್ರಜ್ಞಾವಂತ ನಾಗರಿಕ ವೇದಿಕೆ. 
ರಾಜ್ಯ

ದರ ಏರಿಕೆಗೆ ಆಕ್ರೋಶ: ನವದಂಪತಿಗೆ ಹಾಲು-ಮೊಸರಿನ ಉಡುಗೊರೆ; ಸರ್ಕಾರದ ವಿರುದ್ಧ ವಿನೂತನ ಪ್ರತಿಭಟನೆ! Milk Price Hike

ಮೈಸೂರು: ರಾಜ್ಯ ಸರ್ಕಾರ ಹಾಲು ಮತ್ತು ಮೊಸರಿನ ದರ ಏರಿಕೆ ಮಾಡಿರುವ ಕಾರಣ ಜನಸಾಮಾನ್ಯರ ಮೇಲೆ ಹೆಚ್ಚುತ್ತಿರುವ ಆರ್ಥಿಕ ಹೊರೆಯತ್ತ ಸರ್ಕಾರದ ಗಮನ ಸೆಳೆಯಲು ಪ್ರಜ್ಞಾವಂತ ನಾಗರಿಕ ವೇದಿಕೆ ವಿನೂತನ ಜಾಗೃತಿ ಅಭಿಯಾನ ನಡೆಸಿದೆ.

ಮೈಸೂರಿನ ಕಡಕೋಳದ ಶ್ರೀ ಕಾಳಿಬೀರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕಡಕೋಳ ನಿವಾಸಿ ಮಂಜು ಮತ್ತು ಅನನ್ಯ ಅವರ ವಿವಾಹ ಸಮಾರಂಭದಲ್ಲಿ ನವದಂಪತಿಗೆ ಹಾಲು ಹಾಗೂ ಮೊಸರಿನ ಪ್ಯಾಕೆಟ್‌ಗಳನ್ನು ಉಡುಗೊರೆಯಾಗಿ ನೀಡಿ ಶುಭಹಾರೈಸಿದ್ದಾರೆ. ಈ ಮೂಲಕ ಬೆಲೆ ಏರಿಕೆ ವಿರುದ್ಧ ಸಾಂಕೇತಿಕವಾಗಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಹಾಲು ಮತ್ತು ಮೊಸರು ಪ್ರತಿಯೊಂದು ಕುಟುಂಬದ ದೈನಂದಿನ ಅಗತ್ಯ ವಸ್ತುಗಳಾಗಿದ್ದು, ಇವುಗಳ ಬೆಲೆ ಏರಿಕೆ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಜೀವನ ನಿರ್ವಹಣೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನರಿಗೆ ಮತ್ತಷ್ಟು ಹೊರೆ ಹೊರಿಸುವುದು ಸರಿಯಲ್ಲ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಜನಸಾಮಾನ್ಯರಿಗೆ ಹೊರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವಿವಾಹದ ಸಂಭ್ರಮದಲ್ಲಿ ನಿತ್ಯ ಬಳಕೆಯ ಹಾಲು ಮತ್ತು ಮೊಸರನ್ನೇ ಉಡುಗೊರೆಯಾಗಿ ನೀಡುವ ಮೂಲಕ ಬೆಲೆ ಏರಿಕೆಯ ಬಿಸಿ ಸಾಮಾನ್ಯ ಕುಟುಂಬಗಳ ಬದುಕಿಗೆ ಹೇಗೆ ತಟ್ಟುತ್ತಿದೆ ಎಂಬುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಪ್ರಜ್ಞಾವಂತ ನಾಗರಿಕ ವೇದಿಕೆ ಮಾಡಿದೆ. ವೇದಿಕೆಯ ಅಧ್ಯಕ್ಷ ಕಡಕೋಳ ಜಗದೀಶ್, ಯುವ ಮುಖಂಡ ಜೋಗಿ ಮಂಜು, ನಗರಪಾಲಿಕೆ ಮಾಜಿ ಸದಸ್ಯ ಜಗದೀಶ್, ದೂರ ರಾಜಣ್ಣ ಸೇರಿದಂತೆ ಹಲವರು ಈ ಮದುವೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.