ಬೆಂಗಳೂರು: ನಮ್ಮ ಲೀಗ್ ವತಿಯಿಂದ ಚಾಮರಾಜಪೇಟೆಯ ಜಿಂಕೆ ಪಾರ್ಕ್ ಮುಂಭಾಗದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ (ಜ.7) ಮಧ್ಯಾಹ್ನ 3 ಗಂಟೆಗೆ ಫೈನಲ್ ಪಂದ್ಯಾವಳಿ ಆಯೋಜಿಸಿದೆ.
ಚಾಮರಾಜಪೇಟೆ ಚಾರ್ಜರ್ಸ್ ಮತ್ತು ಶಿವಾಜಿನಗರ ಫೈಲ್ವಾನ್ಸ್ ತಂಡಗಳ ನಡುವೆ ಫೈನಲ್ ಪಂದ್ಯಾವಳಿ ನಡೆಯಲಿದೆ. ಸಚಿವ ಜಮೀರ್ ಅಹ್ಮದ್ ಟೂರ್ನಿಮೆಂಟ್ ಉದ್ಘಾಟಿಸಲಿದ್ದಾರೆ. ಶಾಸಕ ರಿಜ್ವಾನ್ ಅರ್ಷದ್, ನಟರಾದ ದುನಿಯಾ ವಿಜಯ್, ಶ್ರೀನಗರ ಕಿಟ್ಟಿ ಆಗಮಿಸಲಿದ್ದಾರೆ. ಇದೇ ವೇಳೆ ಅಂಧರ ಮಹಿಳಾ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಕರ್ನಾಟಕದ ಆಟಗಾರ್ತಿಯರನ್ನು ಸನ್ಮಾನಿಸಲಾಗುತ್ತದೆ.
ಎರಡು ವಾರದ ಹಿಂದೆ ಲೀಗ್ ಪಂದ್ಯಗಳು ನಡೆದಿದ್ದವು. 3 ತಂಡಗಳು ಸ್ಪರ್ಧಿಸಿದ್ದವು.ಅತ್ಯುತ್ತಮ ಪ್ರದರ್ಶನ ತೋರಿದ್ದ ಚಾಮರಾಜಪೇಟೆ ಚಾರ್ಜರ್ಸ್ ಮತ್ತು ಶಿವಾಜಿನಗರ ಫೈಲ್ವಾನ್ಸ್ ತಂಡ ಫೈನಲ್ ಪ್ರವೇಶಿಸಿದ್ದವು.
ಬೆಂಗಳೂರು ಸೇರಿ ರಾಜ್ಯದ ಬಹುತೇಕ ಆಟದ ಮೈದಾನಗಳು ಮೂಲಸೌಕರ್ಯ ಕೊರತೆಯಿಂದ ನಲುಗಿವೆ. ಈ ಹಿನ್ನೆಲೆಯಲ್ಲಿ ಮೈದಾನದ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು, ಕ್ರೀಡಾಂಗಣ ಸುಧಾರಣೆ ಅಶಯದೊಂದಿಗೆ ನಮ್ಮ ಲೀಗ್ ಹುಟ್ಟುಹಾಕಲಾಗಿದೆ. ಮೈದಾನಗಳ ಸ್ವಚ್ಛತೆ ಬಗ್ಗೆ ಗಮನಹರಿಸಿರುವ ನಮ್ಮ ಲೀಗ್, ಮೊದಲ ಬಾರಿಗೆ ರಾಜೀವ್ ಗಾಂಧಿ ಕ್ರೀಡಾ ಸಂಕೀರ್ಣದಲ್ಲಿ ಸ್ವಚ್ಛ ಮೈದಾನ ಅಭಿಯಾನ ನಡೆಸಿದೆ. ಅಭ್ಯಾಸ ನಿರತ ವಿವಿಧ ಕ್ರೀಡೆಗಳ ಆಟಗಾರರಿಗೆ ನೆರವಾಗುತ್ತಿದ್ದು, ಉಚಿತವಾಗಿ ಮೈದಾನವನ್ನು ಸ್ವಚ್ಛಗೊಳಿಸಲಾಗಿದೆ.ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ದೊರೆಯಬೇಕು ಎಂಬ ಉದ್ದೇಶದಿಂದ ಸ್ಥಳೀಯ ಮಟ್ಟದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿದೆ.