ಬೆಂಗಳೂರು: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಲೇಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ಅವರು ಆಗ್ರಹಿಸಿದ್ದಾರೆ.
ಬುಧವಾರ (ಸೆ.23) ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬಿವೈವಿ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ 4 ಲಕ್ಷ ಕೋಟಿ ರೂ. ಹೊಸ ಸಾಲ ಮಾಡಿದ್ದು, ರಾಜ್ಯದ ಒಟ್ಟು ಸಾಲ 8 ಲಕ್ಷ ಕೋಟಿ ರೂಪಾಯಿಗೆ ಏರಿದೆ. ಸಾಲ ಮಾಡುವುದನ್ನು ಬಿಟ್ಟರೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಸಿಎಂ ಅವರ ಕರಾವಳಿ ಪ್ರವಾಸವನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಖಜಾನೆಯಲ್ಲಿ ಬರ ಪರಿಹಾರ ನೀಡಲೂ ಹಣವಿಲ್ಲ. ಆದ್ದರಿಂದ ಯಾವುದೇ ಉಚಿತ ಕೊಡುಗೆ ಅಥವಾ ಹೊಸ ಯೋಜನೆಗಳನ್ನು ಘೋಷಿಸಬೇಡಿ ಎಂದು ಸ್ವತಃ ಆರ್ಥಿಕ ಇಲಾಖೆಯೇ ಮುಖ್ಯಮಂತ್ರಿಗಳಿಗೆ ನೇರವಾಗಿ ಪತ್ರ ಬರೆದು ಎಚ್ಚರಿಸಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿಗಳು 32,000 ಕೋಟಿ ಕೊಡುತ್ತೇನೆ, 10,000 ಕೋಟಿ ಕೊಡುತ್ತೇನೆ ಅಂತ ಹೇಳಿ ಹೋದಲ್ಲೆಲ್ಲ ಕೇವಲ ಘೋಷಣೆ ಮಾಡುತ್ತಿದ್ದಾರೆ. ವಾಸ್ತವಿಕ ಸತ್ಯ ಏನೆಂದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿ ಆಗಿದೆ. ರಾಜ್ಯದ ಹಣಕಾಸಿನ ಪರಿಸ್ಥಿತಿ ಇವತ್ತು ಕುಲಗೆಟ್ಟು ಹೋಗಿದೆ ಎಂದು ಕಿಡಿಕಾರಿದರು.
ಈ ಕಾಂಗ್ರೆಸ್ ಸರ್ಕಾರವೇ ಐಸಿಯುನಲ್ಲಿದ್ದು, ಅಭಿವೃದ್ಧಿಗೆ ಒಂದು ರೂಪಾಯಿ ಇಲ್ಲ, ಬಡವರಿಗೆ ಇವತ್ತು ಪರಿಹಾರ ಕೊಡೋದಕ್ಕೆ, ರೈತರಿಗೆ ಪರಿಹಾರ ಕೊಡೋದಕ್ಕೆ ಯಾವುದೇ ಹಣ ಇಲ್ಲ. ದಿವಾಳಿ ಆಗಿರತಕ್ಕಂತಹ ಈ ಸರ್ಕಾರ ಕೇವಲ ಜಾಹೀರಾತುಗಳನ್ನು ಕೊಟ್ಟುಕೊಂಡು ಇವತ್ತು ದಿನಗಳನ್ನು ಕಳೆಯುತ್ತಿದೆ. ರಾಜ್ಯದಲ್ಲಿ ವಿಕಲಚೇತನರಿಗೆ ಪಿಂಚಣಿ, ವೃದ್ಧಾಪ್ಯ ವೇತನ ಹಾಗೂ ವಿಧವಾ ವೇತನ ಕೊಡಲು ಆಗುತ್ತಿಲ್ಲ ಎಂದು ಆರೋಪಿಸಿದ ಅವರು, ಶಿಕ್ಷಣ ಇಲಾಖೆಯಲ್ಲಿ ಮಕ್ಕಳಿಗೆ ನೀಡುವ ಶೂ ಮತ್ತು ಸಾಕ್ಸ್ ಖರೀದಿಯಲ್ಲೂ ಭ್ರಷ್ಟಾಚಾರ ನಡೆಸಿದೆ ಎಂದು ದೂರಿದರು
ಹಣಕಾಸಿನ ಸಮಸ್ಯೆಯಿಂದಾಗಿ ಶಿಕ್ಷಕರ ನೇಮಕಾತಿ ಮಾಡಲು ಸಾಧ್ಯವಾಗುತ್ತಿಲ್ಲ, ಅಷ್ಟೇ ಅಲ್ಲದೆ ಶಿಕ್ಷಕರಿಗೆ ಸರಿಯಾಗಿ ಸಂಬಳವನ್ನೂ ನೀಡುತ್ತಿಲ್ಲ. ಒಟ್ಟಾರೆಯಾಗಿ ಯುವಕರಿಗೆ ಉದ್ಯೋಗ ನೀಡಲು ವಿಫಲವಾಗಿರುವ ಈ ದಿವಾಳಿ ಕಾಂಗ್ರೆಸ್ ಸರ್ಕಾರ, ಕೇವಲ ವಿಶೇಷ ಅಧಿವೇಶನವನ್ನು ಕರೆದು ತನ್ನ ವೈಫಲ್ಯಗಳನ್ನು ಕೇಂದ್ರ ಸರ್ಕಾರದ ಮೇಲೆ ಹೊರೆಸಿ ಕೈತೊಳೆದುಕೊಳ್ಳುವ ಕುತಂತ್ರ ಹಾಗೂ ಷಡ್ಯಂತ್ರ ಮಾಡುತ್ತಿದೆ ಎಂದು ಆರೋಪಿಸಿದರು.
ಬಡವರ ವಿರೋಧಿ ಹಾಗೂ ಜನವಿರೋಧಿಯಾಗಿರುವ ಈ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಕೊಳ್ಳೆ ಹೊಡೆದಿದೆ. ಮುಂದಿನ ದಿನಗಳಲ್ಲಿ ಈ ಸರ್ಕಾರದಿಂದ ಯಾವುದೇ ರೀತಿಯ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಮಾನ್ಯ ಮುಖ್ಯಮಂತ್ರಿಗಳು ಇನ್ನು ಒಂದೇ ವರ್ಷ ಅಧಿಕಾರದಲ್ಲಿ ಮುಂದುವರೆಯಲಿದ್ದು, ಇದ್ದಷ್ಟು ದಿನ ಪುಕ್ಕಟೆ ಭಾಷಣ ಮಾಡುವುದನ್ನು ಬಿಟ್ಟು ರಾಜ್ಯದ ವಾಸ್ತವಿಕ ಆರ್ಥಿಕ ಸ್ಥಿತಿ ಏನಿದೆ ಎಂಬುದನ್ನು ಜನರಿಗೆ ತಿಳಿಸಲಿ ಎಂದು ಆಗ್ರಹಿಸಿದರು.