ಆಂಧ್ರದಿಂದ ಅಕ್ಕಿ ಖರೀದಿಸಲು ಹೋಗಿ ಹಣ ಕಳ್ಕೊಂಡ BMTC ಚಾಲಕ... Online Fraud
- ಅಪರಿಚಿತ ಲಿಂಕ್ ಕ್ಲಿಕ್ ಮಾಡಿ 2.3ಲಕ್ಷ ರೂ. ಹಣ ಕಳೆದುಕೊಂಡ ಬಿಎಂಟಿಸಿ ಬಸ್ ಚಾಲಕ
- ಆಂಧ್ರದಿಂದ ಬೆಂಗಳೂರಿಗೆ ಹತ್ತು ಟನ್ ಅಕ್ಕಿ ಖರೀದಿಸಲು ಹೋಗಿ ಫಜೀತಿ
- ಪ್ರತಿಷ್ಠಿತ ಸಾರಿಗೆ ಕಂಪನಿಗಳ ಹೆಸರು ಹೇಳಿಕೊಂಡು ವಂಚಿಸುವ ಖದೀಮರು
ಬೆಂಗಳೂರು: ಬಿಎಂಟಿಸಿ ಚಾಲಕರೊಬ್ಬರು ಆಂಧ್ರದಿಂದ 8 ರಿಂದ 10 ಟನ್ ಅಕ್ಕಿಯನ್ನು ಬಸ್ ಮೂಲಕ ಬೆಂಗಳೂರಿಗೆ ಪೂರೈಕೆ ಮಾಡಿಸಿಕೊಳ್ಳಲು ಹೋಗಿ ಬರೋಬ್ಬರಿ 2.3 ಲಕ್ಷ ರೂಪಾಯಿ (Online froud) ಕಳೆದುಕೊಂಡ ಆಘಾತಕಾರಿ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಮೋಸ ಹೋದ ಬಿಎಂಟಿಸಿ ಚಾಲಕನನ್ನು ದಿಲೀಪ್ ಹೂವಪ್ಪ ಪೋಲ್ (47) ಎಂದು ಗುರುತಿಸಲಾಗಿದೆ. ಇವರು, ಆಂಧ್ರದಿಂದ ಅಕ್ಕಿ ಖರೀದಿ ಮಾಡುವ ಉದ್ದೇಶದಿಂದ ಮಾರ್ಚ್ 10ರಂದು ಬಸ್ ಟಿಕೆಟ್ ಬುಕ್ಕಿಂಗ್ಗಾಗಿ ಆನ್ಲೈನ್ನಲ್ಲಿ ಹುಡುಕಾಡಿದ್ದಾರೆ. ಆಂಧ್ರದ ನೆಲ್ಲೂರಿನಿಂದ ಬೆಂಗಳೂರಿಗೆ ಬಸ್ ಟಿಕೆಟ್ ದರ ಎಷ್ಟಾಗಲಿದೆ? ಯಾವ ಬಸ್ಸಿನಲ್ಲಿ ಸೀಟು ಖಾಲಿಯಿದೆ ಎಂದು ಹುಡುಕುತ್ತಿರುವಾಗಲೇ ಅಪರಿಚಿತ ವ್ಯಕ್ತಿಯಿಂದ ಬಂದಂತಹ ಕರೆಯಿಂದ ಈ ಅನಾಹುತ ನಡೆದಿದೆ.
ಈ ಬಗ್ಗೆ ಮಾತನಾಡಿರುವ ಬಿಎಂಟಿಸಿ ಬಸ್ ಚಾಲಕ, ನಾನು ಟಿಕೆಟ್ ಬುಕ್ಕಿಂಗ್ನಲ್ಲಿ ಮಗ್ನನಾಗಿದ್ದೆ. ಆಗ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ, ನಾನು ಪ್ರತಿಷ್ಠಿತ ಸಾರಿಗೆ ಕಂಪನಿಯ ಉದ್ಯೋಗಿ ಎಂದುಕೊಂಡು ಹಿಂದಿಯಲ್ಲಿ ಮಾತನಾಡಿದ. ನೀವು ಬಸ್ ಹುಡುಕಾಟದಲ್ಲಿದ್ದೀರಾ ಎಂದು ಕೇಳಿದ. ನಾನು ಹೌದು ಎಂದೆ. ನಂತರ ಟಿಕೆಟ್ ಬೆಲೆ ಎಷ್ಟೆಂದು ಮಾಹಿತಿ ಕೇಳಿಕೊಂಡೆ. ಆತ ಎಲ್ಲ ಡಿಟೇಲ್ಸ್ನ್ನು ವಾಟ್ಸ್ಆಪ್ಗೆ ಕಳುಹಿಸುತ್ತೇನೆ ಎಂದು ಕರೆ ಕಟ್ ಮಾಡಿದ.
ಲಿಂಕ್ ಕ್ಲಿಕ್ ಮಾಡಿದ್ರೆ ಹೀಗಾ ಆಗೋದು!?
ಮುಂದುವರೆದು, `ಆತ ಕರೆ ಕಟ್ ಮಾಡಿದ ಒಂದು ಸೆಕೆಂಡ್ಗೆ ನನ್ನ ಮೊಬೈಲ್ಗೊಂದು ಲಿಂಕ್ ಬಂತು. ನಾನು ಅದು ನಿಜವಾದದ್ದು, ಇದರಲ್ಲಿ ಮೋಸವೇನಿಲ್ಲ ಎಂದು ಕ್ಲಿಕ್ ಮಾಡಿದೆ. ನಂತರ ನನ್ನ ಫೋನ್ ವರ್ಕ್ ಆಗಲೇ ಇಲ್ಲ. ನನ್ನ ಹಿಡಿತವಿಲ್ಲದೇ ಫೋನ್ ಸ್ವಿಚ್ ಆಫ್ ಆಗಿತ್ತು. ವಾಟ್ಸ್ಆ್ಯಪ್ ಲಾಗೌಟ್ ಆಗಿತ್ತು. ನನ್ನ ಮೊಬೈಲ್ ಬಳಕೆ ನನ್ನಿಂದಲೇ ಸಾಧ್ಯವಾಗುತ್ತಿರಲಿಲ್ಲ'.
ಆಗ ಏನೋ ತಪ್ಪಾಗಿದೆ ಎನ್ನುವ ಅನುಮಾನ ಮೂಡಿತು. ನೋಡಿದರೆ ನನ್ನ ಮೊಬೈಲ್ಗೆ ಆಫ್ಲೈನ್ ಮೆಸೇಜ್ವೊಂದು ಬ್ಯಾಂಕ್ನಿಂದ ತಲುಪಿತ್ತು. ನಿಮ್ಮ ಹಣ ಇಷ್ಟು ಡೆಬಿಟ್ ಆಗಿದೆ ಎಂದು. ನಾನು ಆ ಲಿಂಕ್ ಕ್ಲಿಕ್ ಮಾಡಿದ ಹತ್ತು ನಿಮಿಷದ ಒಳಗೆ 2.3 ಲಕ್ಷ ರೂಪಾಯಿ ಕಳೆದುಕೊಂಡೆ ಎಂದು ದಿಲೀಪ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನನ್ನ ಬ್ಯಾಂಕ್ ವಹಿವಾಟು ಸ್ಥಗಿತಗೊಳಿಸಲು ನಾನು ಕೂಡಲೇ ನನ್ನ ಬ್ಯಾಂಕಿನ ಅಧಿಕಾರಿಗಳಿಗೆ ಕರೆ ಮಾಡಿದೆ. ಅವರು ಪೊಲೀಸರಿಗೆ ದೂರು ಕೊಡಿ ಎಂದು ಸೂಚನೆ ಕೊಟ್ಟರು. ಈ ಸಮಸ್ಯೆ ಬಗೆಹರಿಸಲು ಮೂರು ತಿಂಗಳಾದರೂ ಬೇಕು ಎಂದು ಹೇಳಿದರು.
ಹಣ ಇಷ್ಟೆಲ್ಲ ವರ್ಗಾವಣೆಯಾಗಿದೆ
ದಿಲೀಪ್ ಅವರ ದೂರಿನ ಪ್ರತಿಯಲ್ಲಿ ಹೀಗಿದೆ, ಅಪರಿಚಿತ ವ್ಯಕ್ತಿ ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿದ ನಂತರ ಮೊದಲು 90,000 ರೂ.ಗಳನ್ನು navirajibulislam4828@naviaxis UPI ಐಡಿಗೆ, 99,000 ರೂ.ಗಳನ್ನು 8272934602@nyes ಮತ್ತು 907336342@nyes ಗೆ ಮತ್ತು 40,000 ರೂ.ಗಳನ್ನು ಮತ್ತೊಂದು ಖಾತೆಯಿಂದ 907336343@nyes ಗೆ ವರ್ಗಾವಣೆಯಾಗಿದೆ. ಒಟ್ಟಾರೆಯಾಗಿ ಮಾರ್ಚ್10ರ ಬೆಳಗ್ಗೆ 10:10 ರಿಂದ 10:20ರ ನಡುವೆ ಸುಮಾರು 2.3 ಲಕ್ಷ ರೂಪಾಯಿ ನನ್ನಿಂದ ದೋಚಲಾಗಿದೆ ಎಂದು ದಿಲೀಪ್ ಅವರು ಸಾಕ್ಷಿ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಬಿಎನ್ಎಸ್ ಸೆಕ್ಷನ್ 318ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ವಂಚಕರಿಗಾಗಿ ಹುಡುಕಾಟ ಆರಂಭವಾಗಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.