ಬೆಂಗಳೂರು: ಬಹುನಿರೀಕ್ಷಿತ ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗ ಯೋಜನೆಯಿಂದ (ಯುಕೆಟಿಎಲ್) ಕರ್ನಾಟಕ ಮತ್ತು ಕೇರಳಕ್ಕೆ ಅಂತಾರಾಜ್ಯ ವಿದ್ಯುತ್ ಗ್ರೀಡ್ ಬಲವರ್ಧನೆಗೆ ಹೆಚ್ಚಿನ ಅನುಕೂಲವಾಗುತ್ತಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ. ಅದರಂತೆ, ಯೋಜನೆಯಡಿ ಮಂಗಳೂರಿನ ಕೃಷಿ ಭೂಮಿಗಳಲ್ಲಿ ಬೃಹತ್ ಸ್ಟೀಲ್ ವಿದ್ಯುತ್ ಪ್ರಸರಣ ಗೋಪುರಗಳು (ಟವರ್) ನಿರ್ಮಾಣವಾಗುತ್ತಿದೆ. ಆದರೆ, ಒಳ್ಳೆಯ ಯೋಜನೆಗೆ ರಾಜಕೀಯ ಹಿತಾಸಕ್ತಿಗೆ ಕೆಲವರು ರೈತರನ್ನು ಮುಂದಿಟ್ಟು ಅನಗತ್ಯಾಗಿ ಹೋರಾಟ ನಡೆಸುತ್ತಿರುವ ಬಗ್ಗೆ ಗುರುತರ ಆರೋಪಗಳು ಕೇಳಿಬಂದಿವೆ.
ಯೋಜನೆಯಡಿ ಕರಾವಳಿ ಪ್ರದೇಶದಾದ್ಯಂತ ವಿದ್ಯುತ್ ಸಂಪರ್ಕ, ದೀರ್ಘಕಾಲೀನ ಇಂಧನ ಭದ್ರತೆಯನ್ನು ಕಲ್ಪಿಸಲಾಗುತ್ತಿದೆ. ಆದ್ಯತೆ ಮೇರೆಗೆ ಯೋಜನೆಯನ್ನು ಪೂರ್ಣಗೊಳಿಸಲಾಗುತ್ತಿದೆ. ಇದರಿಂದಾಗಿ ಆದಾಯ ನಷ್ಟವನ್ನು ಸಂಪೂರ್ಣವಾಗಿ ತಗ್ಗಿಸಲಾಗಿದೆ. ಯೋಜನೆ ಕಾರ್ಯಾರಂಭದ ಬಳಿಕ 115 ಕಿಲೋಮೀಟರ್ 400 ಕೆವಿ (ಕ್ವಾಡ್) ಡಬಲ್ ಸರ್ಕ್ಯೂರ್ಟ್ ವಿದ್ಯುತ್ ಮಾರ್ಗವು ಒಂದು ಸಾವಿರ ಮೆಗಾ ವ್ಯಾಟ್‌ಗಳಿಗಿಂತ ಅಧಿಕ ವಿದ್ಯುತ್ ರವಾನಿಸುವ ಸಾಮರ್ಥ್ಯ ಹೊಂದಲಿದೆ. ಜೊತೆಗೆ, ನವೀಕರಿಸಬಹುದಾದ ಇಂಧನ ಏಕೀಕರಣವನ್ನು ಪ್ರೋತ್ಸಾಹಿಸಲಿದೆ. ವಿದ್ಯುತ್ ಸಚಿವಾಲಯವು ಅಂತಾರಾಜ್ಯ ಪ್ರಸರಣ ವ್ಯವಸ್ಥೆ (ಐಎಸ್‌ಟಿಎಸ್) ಎಂದು ಪರಿಗಣಿಸುವ ಈ ಯೋಜನೆಯನ್ನು ದೇಶದ ದಕ್ಷಿಣ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಅಗತ್ಯಗಳಿಗೆ ಸ್ಥಿರತೆ ನೀಡಲು ವಿನ್ಯಾಸಗೊಳಿಸಲಾಗಿದೆ.
ಇದು ದಕ್ಷಿಣ ಗ್ರಿಡ್‌ನ ಎಸ್1 ವಲಯ (ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ) ಮತ್ತು ಎಸ್2 ವಲಯ (ತಮಿಳುನಾಡು ಮತ್ತು ಕೇರಳ) ನಡುವಿನ ಪ್ರಸರಣ ಕಾರಿಡಾರ್‌ನ ದಟ್ಟಣೆ ತಗ್ಗಲಿದೆ. ಅಲ್ಲದೆ, ನವೀಕರಿಸಬಹುದಾದ ಇಂಧನ ಕೇಂದ್ರಗಳನ್ನು ಒಳಗೊಂಡಂತೆ ಉತ್ಪಾದನಾ ಕೇಂದ್ರಗಳಿಂದ ವಿದ್ಯುತ್ ಅನ್ನು ಬಳಕೆದಾರರ ವಲಯಗಳಿಗೆ ರವಾನಿಸಲು ಈ ಪ್ರಸರಣ ಮಾರ್ಗಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಪ್ರಕ್ರಿಯೆ ವಿಳಂಬವಾದರೆ ಅದು ಗ್ರಿಡ್ ಬ್ಯಾಲೆನ್ಸಿಂಗ್, ಕೈಗಾರಿಕಾ ಪೂರೈಕೆ ಸರಪಳಿಗಳು ಮತ್ತು ಅಂತಿಮವಾಗಿ ಗ್ರಾಹಕರ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ, ಇಂತಹ ಒಳ್ಳೆಯ ಯೋಜನೆಗೆ ಅಡ್ಡಿಪಡಿಸಬಾರದು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ.
ಟವರ್ ಹಾಕಲು ಜಾಗ ನೀಡುವ ರೈತರಿಗೆ ನೀಡಲಾಗುವ ಪರಿಹಾರದ ಸೂತ್ರಗಳನ್ನು ಸ್ಥಳೀಯ ಮಟ್ಟದಲ್ಲಿ ಬೇಕಾಬಿಟ್ಟಿ ಸೃಷ್ಟಿಸಲಾಗಿಲ್ಲ. ಬದಲಾಗಿ ಅವುಗಳನ್ನು ಸರ್ಕಾರಿ ಅಧಿಸೂಚಿತ ಮಾರ್ಗಸೂಚಿಗಳ ಪ್ರಕಾರವೇ ನಿರ್ಧರಿಸಲಾಗುತ್ತದೆ. ಆದರೂ, ಪರಿಹಾರದ ಕುರಿತಾದ ಹೋಲಿಕೆಗಳು ಮತ್ತು ತಾರತಮ್ಯದ ಮಾತುಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ನೀರಾವರಿ ಸೌಲಭ್ಯವಿರುವ ತೋಟದ ಭೂಮಿಯ ರೈತನಿಗೆ, ಒಣ ಭೂಮಿಯ ರೈತನಿಗಿಂತ ಗಮನಾರ್ಹವಾಗಿ ಹೆಚ್ಚಿನ ಮೊತ್ತದ ಪರಿಹಾರ ಲಭಿಸುತ್ತಿದೆ. ರೈತರಿಗೆ ನ್ಯಾಯಯುತ ಪರಿಹಾರ ಸಿಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ; ಖಂಡಿತವಾಗಿಯೂ ಅವರಿಗೆ ನ್ಯಾಯ ದಕ್ಕಲೇಬೇಕು. ಆದರೆ ಇಲ್ಲಿ ಕಾಡುತ್ತಿರುವ ಮೂಲ ಪ್ರಶ್ನೆಯೆಂದರೆ, ನಿಯಂತ್ರಣ ಚೌಕಟ್ಟುಗಳನ್ನು ಮೀರಿ ರೈತರ ನಿರೀಕ್ಷೆಗಳನ್ನು ಹೆಚ್ಚಿಸಲು ಹಾಗೂ ಅವರನ್ನು ಪ್ರಚೋದಿಸಲು ಕೆಲವರು ರಾಜಕೀಯ ದಾಳ ಬಳಸುತ್ತಿದ್ದಾರೆ ಎಂಬ ಆರೋಪಗಳಿವೆ.
ಈಗಾಗಲೇ ಪರಿಹಾರ ಪಡೆದ ಅನೇಕ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಸುಲಲಿತವಾಗಿ ಮುಂದುವರಿಸುತ್ತಿದ್ದಾರೆ. ವಿದ್ಯುತ್ ಮಾರ್ಗಗಳ ಕೆಳಗೆ ಋತುಮಾನದ ಬೆಳೆಗಳನ್ನು ಬೆಳೆಯಲು ಹಾಗೂ ಓಡಾಟದ ಹಾದಿಗಳನ್ನು ಬಳಸಲು ಯಾವುದೇ ಅಡೆತಡೆಗಳಿಲ್ಲ. ಸುರಕ್ಷತೆಯ ಹಿತದೃಷ್ಟಿಯಿಂದ ಕೇವಲ ಶಾಶ್ವತ ಕಟ್ಟಡಗಳ ನಿರ್ಮಾಣ ಮತ್ತು ಎತ್ತರವಾಗಿ ಬೆಳೆಯುವ ಮರಗಳಿಗೆ ಮಾತ್ರ ನಿರ್ಬಂಧ ಹೇರಲಾಗಿದೆ. ಹೀಗಿರುವಾಗಿ, ಯೋಜನೆ ಬಗ್ಗೆ ನಾಕಾರಾತ್ಮಕವಾಗಿ ಚರ್ಚೆ ನಡೆಯುತ್ತಿರುವುದು ಸರಿಯಲ್ಲ.
ರಾಜಕೀಯ ನಾಯಕರು ಈ ವಿದ್ಯುತ್ ಪ್ರಸರಣ ಮಾರ್ಗಗಳ ವಿಷಯವನ್ನು ತಮ್ಮ ವೈಯಕ್ತಿಕ ಪ್ರತಿಷ್ಠೆಯ ಅಥವಾ ರಾಜಕೀಯ ಲಾಭದ ವೇದಿಕೆಯನ್ನಾಗಿ ಬಳಸಿಕೊಂಡಿದ್ದಾರೆ. ಇದು ನೇರವಾಗಿ ರೈತರ ಮೇಲೆ ಹೊಡೆತ ಬೀಳಲಿದೆ. ಹೋರಾಟದ ನೆಪದಲ್ಲಿ ಯೋಜನೆಗಳು ಸ್ಥಗಿತಗೊಂಡರೆ, ರೈತರಿಗೆ ಸಿಗಬೇಕಾದ ಪರಿಹಾರದ ಪಾವತಿ ವಿಳಂಬವಾಗುತ್ತದೆ. ಕಾನೂನು ಸಮರಗಳು ಪರಸ್ಪರ ಮಾತುಕತೆಯ ಬಾಗಿಲುಗಳನ್ನು ಮುಚ್ಚಿಹಾಕುತ್ತವೆ, ಪರಿಣಾಮವಾಗಿ ಸಂಘರ್ಷಗಳು ತೀವ್ರಗೊಂಡು ಪ್ರಾಯೋಗಿಕ ಪರಿಹಾರದ ಹಾದಿಗಳೇ ಕಿರಿದಾಗುತ್ತವೆ. ಕೇಂದ್ರ ಸರ್ಕಾರವು ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಮತ್ತು ಬೃಹತ್ ಕೈಗಾರಿಕಾ ಕಾರಿಡಾರ್‌ಗಳನ್ನು ವಿಸ್ತರಿಸುತ್ತಿದೆ. ಪ್ರಸರಣ ಮೂಲಸೌಕರ್ಯವು ದೇಶದ ಆರ್ಥಿಕ ಪ್ರಗತಿಯ ಬೆನ್ನೆಲುಬಾಗಿದೆ. ಇಂತಹ ಮಹತ್ವದ ವಿದ್ಯುತ್ ಕಾರಿಡಾರ್‌ಗಳನ್ನು ರಾಜಕೀಯ ಬೆರೆಸುತ್ತಿರುವುದು ಸರಿಯಲ್ಲ. ಇದರಿಂದ ರಾಷ್ಟ್ರದ ಆರ್ಥಿಕತೆಗೆ ತುಂಬಲಾರದ ನಷ್ಟವನ್ನುಂಟಾಗುವ ಆಂತಕವೂ ಕಾಡುತ್ತಿದೆ.
ವಿದ್ಯುತ್ ಗೋಪುರಗಳು ರೈತರ ಭೂಮಿಯ ಮೇಲೆ ನಿರ್ಮಾಣವಾದರೂ, ಅದರ ಮೂಲ ಮಾಲೀಕತ್ವ ರೈತನ ಬಳಿಯೇ ಇರುತ್ತದೆ. ಇಡೀ ಜಮೀನು ಸರ್ಕಾರದ ಪಾಲಾಗುತ್ತದೆ ಎಂಬುದು ತಪ್ಪು ಕಲ್ಪನೆ; ಕೇವಲ ಒಂದು ಪುಟ್ಟ ಭಾಗವನ್ನಷ್ಟೇ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತದೆ. ಈ ಜಾಗವನ್ನು ಪಾಳು ಬಿಡಬೇಕಿಲ್ಲ; ಬದಲಿಗೆ ರಾಗಿ, ಜೋಳ, ತರಕಾರಿಗಳಂತಹ ಋತುಮಾನದ ಬೆಳೆಗಳನ್ನು ಬೆಳೆಯಬಹುದು. ರಾಜ್ಯದ ಅನೇಕ ಭಾಗಗಳಲ್ಲಿ ರೈತರು ಈಗಾಗಲೇ ಇಂತಹ ಗೋಪುರಗಳ ಕೆಳಗೆ ಋತುಮಾನದ ಬೆಳೆ ತೆಗೆಯುತ್ತಿದ್ದಾರೆ.
| ಎಸ್.ವಿ. ಹಿತ್ತಲಮನಿ, ತೋಟಗಾರಿಕಾ ತಜ್ಞ.