ಸ್ಟಿಂಗ್ ಎಲ್ಲ ಬೇಕಾ ಜನಕ್ಕೆ? ಕುಮಾರಸ್ವಾಮಿಯನ್ನು ಒಮ್ಮೆ ವೈದ್ಯರ ಬಳಿ ತೋರಿಸಬೇಕು: ಸಚಿವ ಚಲುವರಾಯಸ್ವಾಮಿ ಕಿಡಿನುಡಿ | Sting Operation  
ರಾಜ್ಯ

ಸ್ಟಿಂಗ್ ಎಲ್ಲ ಬೇಕಾ ಜನಕ್ಕೆ? ಕುಮಾರಸ್ವಾಮಿಯನ್ನು ಒಮ್ಮೆ ವೈದ್ಯರ ಬಳಿ ತೋರಿಸಬೇಕು: ಸಚಿವ ಚಲುವರಾಯಸ್ವಾಮಿ ಕಿಡಿನುಡಿ | Sting Operation

ಇವೆಲ್ಲ ನಮ್ಮ ಜನಕ್ಕೆ ಬೇಕಾ? ಇದರ ಬಗ್ಗೆ ಏನಾದರೂ ಇದ್ದರೆ ತನಿಖೆ ನಡೆಯುತ್ತದೆ ಮತ್ತು ತಪ್ಪಿತಸ್ತರು ಕ್ರಮ ಆಗುತ್ತೆ. ಅಕಸ್ಮಾತ್​ ಏನಾದ್ರೂ ಸಚಿವರ ಮೇಲಿದ್ದರೆ ಮಾಧ್ಯದಲ್ಲಿ ಬಂದೇ ಬರುತ್ತೆ ಅಲ್ವಾ ಎಂದರು.

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಮೂಲಕ ಭಾರಿ ಸಂಚಲನ ಮೂಡಿಸಿರುವ ಕೇಂದ್ರ ಸಚಿವ ಎಚ್​.ಡಿ. ಕುಮಾರಸ್ವಾಮಿ ಅವರ ನಡೆಗೆ ಇದೀಗ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಮಾರಸ್ವಾಮಿ ಅವರನ್ನು ಒಮ್ಮೆ ವೈದ್ಯರ ಬಳಿ ಚೆಕ್​ಅಪ್​ ಮಾಡಿಸಬೇಕು. ಯಾಕಂದ್ರೆ ಅವರು ಎಷ್ಟು ನಿದ್ದೆ ಮಾಡುತ್ತಾರೆ ಮಾಡ್ತಿದ್ದಾರೆ ಅಂತ ಗೊತ್ತಾಗುತ್ತದೆ. ಈ ರಾಜ್ಯದಲ್ಲಿರುವ ಸಮಸ್ಯೆಗಳ ಬಗ್ಗೆ ಏನು ಮಾತಾಡದ ಕುಮಾರಸ್ವಾಮಿ, ಸ್ಟಿಂಗ್, ಅದು ಇದು, ಇದು ಅದು ಅಂತಿದ್ದಾರೆ. ಇವೆಲ್ಲ ನಮ್ಮ ಜನಕ್ಕೆ ಬೇಕಾ? ಇದರ ಬಗ್ಗೆ ಏನಾದರೂ ಇದ್ದರೆ ತನಿಖೆ ನಡೆಯುತ್ತದೆ ಮತ್ತು ತಪ್ಪಿತಸ್ತರು ಕ್ರಮ ಆಗುತ್ತೆ. ಅಕಸ್ಮಾತ್​ ಏನಾದ್ರೂ ಸಚಿವರ ಮೇಲಿದ್ದರೆ ಮಾಧ್ಯದಲ್ಲಿ ಬಂದೇ ಬರುತ್ತೆ ಅಲ್ವಾ ಎಂದರು.

ನಮ್ಮ ಪವರ್ ಎಷ್ಟಿದೆ, ಅಷ್ಟನ್ನು ನಮ್ಮ ಸರ್ಕಾರ ಮಾಡುತ್ತಿದೆ. ಈ ವರ್ಷ ಎಂಥ ಬರಗಾಲದ ಪರಿಸ್ಥಿತಿ ಇದೆ. ಕುಡಿಯೋಕೆ ನೀರಿನ ಸಮಸ್ಯೆ, ಜನರ ಬದುಕಿನ ಸಮಸ್ಯೆ ಇದೆ. ಇದರ ಬಗ್ಗೆ ಮಾತನಾಡುತ್ತಿಲ್ಲ ಇವರು. ಅಭಿವೃದ್ಧಿ ಆಗುತ್ತಿಲ್ಲವೇ?ಯಾವುದಾದರೂ ಕುಂಠಿತ ಆದ್ರೆ, ಯಾವ ಯಾವ ಇಲಾಖೆಯಲ್ಲಿ ಏನು ಸಮಸ್ಯೆಯಿದೆ ಎಂಬುದರ ಬಗ್ಗೆಯೂ ವಿಚಾರಣೆ ಮಾಡಬೇಕು. ಹಿಂದೆ ಅಸೆಂಬ್ಲಿ ಕರೆದರೂ ಅದೂ ನಡೆಯಲಿಲ್ಲ. ಎರಡನೇ ಬಾರಿ ನಡೆದಾಗ ಎರಡು ದಿನ ಏನೋ ಕಷ್ಟಪಟ್ಟು ಜನ ಬೈತಾರಲ್ಲ ಅಂತ ಹೇಳಿ ವಿಜಯೇಂದ್ರ, ಅಶೋಕ ಅಸೆಂಬ್ಲಿಯಲ್ಲಿ ಕುಳಿತಿದ್ದರು ಎಂದರು.

ಪಾಪ ಅಲ್ಲೂ ಇಲ್ಲ, ಇಲ್ಲೂ ಇಲ್ಲ

ಜನತಾ ದಳದಿಂದ ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಹಾರುತ್ತಾರೆ. ಅವರಿಗೆ ಎಲ್ಲರೂ ಒಂದು ಕಡೆ ಪವರ್ ಬೇಕು. ಹೋದರೆ, ಅಲ್ಲೂನು ಇಲ್ಲ, ಇಲ್ಲೂನು ಇಲ್ಲ ಅನ್ನೋ ಹಂಗಾಗಿದೆ. ಸ್ಟಿಂಗ್ ಆಪರೇಷನ್ ಬಗ್ಗೆ ಬಂದ್ರೆ ಸರ್ಕಾರ ಕಣ್ಣು ಮುಚ್ಕೊಂಡು ಕೂತ್ಕೊಳ್ಳೋಕೆ ಆಗಲ್ಲ. ಯಾರದಾದರೂ ಇದ್ರೆ ಎನ್‌ಕ್ವೈರಿ ಮಾಡಿಸುತ್ತೇವೆ. ಆದರೆ, ಕುಮಾರಸ್ವಾಮಿಯವರ ತರ ಅನಾವಶ್ಯಕವಾಗಿ ಮಾತನಾಡಲ್ಲ. ಪ್ರಜ್ವಲ್ ರೇವಣ್ಣ ಬಗ್ಗೆ ಮೊನ್ನೆ ಮಾತಾಡಿದರು. ಅವನು ಪಾಪ ಅಂತ ಹೇಳಿದರು. ಆದರೆ, ಆ ಹೆಣ್ಣು ಮಕ್ಕಳು ಏನು ಹಾಗಾದ್ರೆ, ಹೆಣ್ಣುಮಕ್ಕಳಿಗೆ ಅನ್ಯಾಯ ಆಗಿದೆಯಲ್ಲ. ಅದು ಪಾಪ ಅಂತೆ. ಪಾಪದ ಹುಡುಗ ಅಂತೆ ಅವನು ಎಂದು ಕಿಡಿಕಾರಿದರು.

ಇವರಿಗೆ ಅವನ ಬಗ್ಗೆ ಸಹಾನುಭೂತಿ ಇದೆ. ಆದರೆ, ಆ ಹೆಣ್ಣುಮಕ್ಕಳ ಬಗ್ಗೆ ಸಹಾನುಭೂತಿ ಇಲ್ಲ. ಇದರ ಬಗ್ಗೆ ಕಂಪ್ಲೇಂಟ್ ಕೊಡಲಿ, ಕಂಪ್ಲೇಂಟ್ ಮಾಡಲಿ. ಅದು ಬಿಟ್ಟುಬಿಟ್ಟು ಏನು ಮಾತಾಡ್ತಾರೆ ರೀ? ಹಾಸನದಲ್ಲಿ ನಡೆದಿರುವ ವಿಚಾರವನ್ನು ನಾವು ಎತ್ತಬಾರದು. ಇವರು ಯಾಕೆ ಮತ್ತೆ ಮತ್ತೆ ಅದನ್ನೇ ಎತ್ತುತ್ತಾರೆ. ನಾವು ಅದು ಅಸಭ್ಯ ಅಂತ ಹೇಳಿ ಬಿಟ್ಟುಬಿಟ್ಟಿದ್ದೀವಿ. ಆದರೆ, ಇವರೇ ಅದನ್ನು ಎತ್ತುಕೊಂಡು ಅದು ಪಾಪದ ಹುಡುಗ, ಅವನಿಗೆ ಪೆನ್ ಡ್ರೈವ್ ಹಂಚಿ ಅನ್ಯಾಯ ಮಾಡಿಬಿಟ್ರು ಅಂತಾರೆ ಎಂದರು.

ಸಿಬಿಐಗೆ ಹಸ್ತಾಂತರಿಸುವ ವಿಚಾರ

ಕೊಡಲಿ ಬಿಡಿ ತನಿಖೆ ಮಾಡಿಸಲಿ. ಈಗ ನಮಗಿಂತ ದೊಡ್ಡ ಸರ್ಕಾರ ಅವರದ್ದೇ ಇರೋದು ಅಲ್ವಾ? ಎಂದರು. ಇನ್ನು ಕ್ಯಾಬಿನೆಟ್​ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾಳೆ ಕ್ಯಾಬಿನೆಟ್ ಇದೆ. ಚರ್ಚೆ ಏನಾಗುತ್ತೆ ನೋಡೋಣ. ಸಿಎಂ ಅವರು ಅಥವಾ ಎಲ್ಲಾ ಮಂತ್ರಿಗಳು ಸೇರಿ ಏನು ತೀರ್ಮಾನ ತಗೋತಾರೆ ನೋಡೋಣ. ನಾನು ಇವತ್ತು ಕ್ಯಾಬಿನೆಟ್ ವಿಚಾರವನ್ನು ಅಡ್ವಾನ್ಸ್ ಆಗಿ ಮಾತನಾಡಲು ಸಾಧ್ಯವಿಲ್ಲ. ತನಿಖೆ ಅವಶ್ಯಕತೆ ಇಲ್ಲ ಅಂತ ಅನಿಸುತ್ತೆ. ಅವಶ್ಯಕತೆ ಇಲ್ಲದಿದ್ದರೆ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಸಂಸದ ಶ್ರೇಯಸ್ ಪಟೇಲ್ ತಿರುಗೇಟು

ನನ್ನ ವಿರುದ್ಧ ವೈಯಕ್ತಿಕ ತೇಜೋವಧೆ ಮಾಡುತ್ತಿದ್ದಾರೆ. ಎರಡು ವರ್ಷದಿಂದ ಆರೋಪ ಮಾಡುತ್ತಿದ್ದಾರೆ. ಅವರ ಕುಟುಂಬದಲ್ಲೇ ಸಮಸ್ಯೆ ಇಟ್ಟುಕೊಂಡು ನಮ್ಮ ಮೇಲೆ ಆರೋಪಿಸುತ್ತಿದ್ದಾರೆ. ನಾನು ಪ್ರಮಾಣ ಮಾಡಲು ಸಿದ್ಧ. ಅವರು ನಂಬುವ ಲಕ್ಷ್ಮೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಬರುತ್ತೇನೆ. ಅವರು ಕೊಡುವ ದಿನಾಂಕ ಸಮಯಕ್ಕೆ ನಾನು ಬಂದು ಪ್ರಮಾಣ ಮಾಡುತ್ತೇನೆ. ಅವರೂ ಪ್ರಮಾಣ ಮಾಡಲಿ, ಒಕ್ಕಲಿಗರು ಅಂದರೆ ಅವರು ಮಾತ್ರ ಅಧಿಕಾರದಲ್ಲಿ ಇರಬೇಕಾ? ನಾನು ಒಕ್ಕಲಿಗ ಅಲ್ವ, ಸಿಎಂ ಒಕ್ಕಲಿಗ ಅಲ್ವ?ಅನ್ಯಾಯ ಆದ ಮಹಿಳೆಯರಿಗೆ ಯಾರು ನ್ಯಾಯ ಕೊಡ್ತಾರಾ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಮಂತ್ರಿಯಾಗಿರುವುದೇ ಆರೋಪ ಮಾಡಲು. ಕೇಂದ್ರ ಸಚಿವರಾದ ಮೇಲೆ ಹಾಸನಕ್ಕೆ ಇವರ ಕೊಡುಗೆ ಏನಿದೆ? ಅವರಿಗೆ ಗೌರವ ಕೊಟ್ಟಿದ್ದು ಸಾಕು. ನಾವು ತಬ್ಬಲಿ ಮಕ್ಕಳು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ನಮ್ಮ ತಾಯಿ ಮಾತನಾಡಿದರು. ಬರೀ ಅವರು ಅವರ ತಾಯಿ ಬಗ್ಗೆ ಮಾತನಾಡುತ್ತಾರೆ. ನಮ್ಮ ತಾಯಿಗೆ ಏನಾದರೂ ಆದರೆ ಯಾರು ಹೊಣೆ? ಆರು ಲಕ್ಷ ಜನರು ಪೆನ್ ಡ್ರೈವ್​ ಕಾರಣಕ್ಕೆ ಓಟ್ ಹಾಕಿದರು. ಸಾಮಾನ್ಯ ಜನರು ಬೆಳೆಯಬಾರದಾ? ಮತ್ತೊಬ್ಬ ಒಕ್ಕಲಿಗ ಬೆಳೆದ ಅನ್ನೊ ಖುಷಿ ಇಲ್ಲ ಇವರಿಗೆ. ನ್ಯಾಯಾಲಯ ಸುಳ್ಳು ಹೇಳುತ್ತಾ? ಆ ಸಂತ್ರಸ್ತ ಮಹಿಳೆಯರಿಗೆ ಕ್ಷಮೆ ಕೇಳಿದ್ರಾ ಎಂದು ಪ್ರಶ್ನಿಸಿದರು.

ಇವರ ಕುಟುಂಬಸ್ಥರು ಮಾತ್ರ ಅಧಿಕಾರದಲ್ಲಿ ಇರಬೇಕಾ? ಅವರಿಗೊಂದು ನ್ಯಾಯ, ನಮಗೊಂದು ನ್ಯಾಯ ನಾ? ನಾನು ಪ್ರಧಾನಮಂತ್ರಿಗೆ ಪತ್ರ ಬರೆಯುತ್ತೇನೆ, ಆರೋಪ ರಹಿತ ತೇಜೋವಧೆ ಮಾಡುತ್ತಿದ್ದಾರೆ. ಕ್ಯಾಬಿನೆಟ್​ನಿಂದ ವಜಾಗೊಳಿಸಿ ಎಂದು ಪತ್ರ ಬರೆಯುತ್ತೇನೆ. ಪ್ರಜ್ವಲ್ ಸುದ್ದಿ ನಮಗೆ ಸಂಬಂಧಿಸಿದಲ್ಲ, ಅವರು ನಮ್ಮ ಕುಟುಂಬ ಅಲ್ಲ ಎಂದಿದ್ದರು. ಈಗ ರಾಜಕೀಯಕ್ಕೆ ಪ್ರಜ್ವಲ್ ಹೆಸರು ಬಳಸಿಕೊಳ್ಳುತ್ತಿದ್ದಾರೆ. ಅವರು ತನ್ನ ಸ್ಥಾನದ ಗೌರವ ಉಳಿಸಿಕೊಳ್ಳುತ್ತಿಲ್ಲ. ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ ಎಂದರು.

ನನ್ನ, ಪಕ್ಷ ಕಾರ್ಯಕರ್ತರ ಶ್ರಮದಿಂದ ನಾನು ಇಲ್ಲಿ ಕೂತಿದ್ದೇನೆ. ನನ್ನ ರಾಜಕೀಯ ಏಳು ಬೀಳು ಅವರಿಗೆ ಗೊತ್ತಿದೆ. ಅವರ ಹೊಟ್ಟೆಕಿಚ್ಚಿಗೆ ಮದ್ದಿಲ್ಲ. ನಮ್ಮ ಸಮಾಜದ ಮುಖಂಡರು ಅಂತಾ ಸುಮ್ನಿದ್ದೆ. ಇನ್ನು ಸುಮ್ಮನೆ ಇರಲ್ಲ. ನಾನು ಸುಮ್ನೆ ಇದ್ದರೆ ಜನರು ನನ್ನ ನಂಬೋದಿಲ್ಲ. ಪೆನ್ ಡ್ರೈವ್​ ಬಗ್ಗೆ ಮಾತನಾಡುವವರು, ಅದರೊಳಗೆ ಏನಿದೆ ಅದರ ಬಗ್ಗೆ ಮಾತನಾಡಲಿ. ಅವರು ಬರಲಿ ನಾನು ಪ್ರಮಾಣ ಮಾಡಲು ಸಿದ್ಧ. ಅವರು ದೈವಭಕ್ತರು ಅಲ್ಲವೇ? ಅವರು ಪ್ರಮಾಣ ಮಾಡಲಿ ಎಂದರು.

ವಿಧಾನಸೌಧದಲ್ಲಿ ಎಂಎಲ್​ಸಿ ಭೋಜೆಗೌಡ ಗರಂ

ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನೊಬ್ಬ ಎಂಎಲ್​ಸಿ ಆಗಿ ನಾವು ಕೂಡ ಸಮಾಜಕ್ಕೆ ಉತ್ತರ ಕೊಡುವಂತವರಾಗಿದ್ದೇವೆ. ನಾವು ಸಮಾಜ ಮತ್ತು ಕುಟುಂಬಕ್ಕೆ ಉತ್ತರ ಕೊಡಬೇಕಿದೆ. ಇವತ್ತು ರಾಜ್ಯದ ಮಾನ ಮರ್ಯಾದೆ ಇಡೀ ದೇಶದಲ್ಲಿ ಹರಾಜಾಗುತ್ತಿದೆ. ಸ್ಟಿಂಗ್ ಆಪರೇಷನ್ ವಿಚಾರವಾಗಿ ನ್ಯಾಯಯುತವಾದ ತನಿಖೆ ಆಗಬೇಕು. ರಾಜ್ಯದ ಮಾನ ಮರ್ಯಾದೆ ಕಾಪಾಡಬೇಕಾಗಿರೋದು ಮುಖ್ಯಮಂತ್ರಿಗಳ ಜವಾಬ್ದಾರಿ. ಈ ವಿಚಾರವಾಗಿ ಸಿಎಂ ಈ ಕೂಡಲೇ ಕ್ರಮ ಕೈಗೊಳ್ಳಬೇಕು. ನ್ಯಾಯಯುತವಾಗಿ ತನಿಖೆ ಮಾಡಬೇಕು ಎಂದರು.

ಹಿಂದುಳಿದ ವರ್ಗಗಳ ನೇತಾರ, ಹೆಚ್ಚು ಕಾಲ ಸಿಎಂ ಆಗಿ ಆಡಳಿತ ಮಾಡಿದ ವ್ಯಕ್ತಿಯನ್ನೇ ಇವತ್ತು ಬಿಟ್ಟಿಲ್ಲ. ಸಿದ್ದರಾಮಯ್ಯ ನಿರ್ದೋಷಿ ಅಂತ ಗೊತ್ತಾಗಬೇಕು. ಹೀಗಾಗಿ, ತನಿಖೆಯ ಅವಶ್ಯಕತೆಯಿದೆ. ಕುಮಾರಸ್ವಾಮಿ ಹೇಳಿದ್ರು ಅಂತಲ್ಲ ಅಥವಾ ಬೇರೆಯವರು ಹೇಳಿದರು ಅಂತಲ್ಲ. ಈ ರೀತಿ ಮಾಡಿದವರು ಯಾರು ಅಂತ ಪತ್ತೆಹಚ್ಚಿ ಅವರ ಬಗ್ಗೆ ಸಚಿವರಿಗೆ ತಿಳಿಸಬೇಕು. ಸಮಗ್ರವಾದ ತನಿಖೆ ಆಗಬೇಕು. ಸಿಬಿಐ ತನಿಖೆಯಾಗಲಿ ಅಂತ ಸಿಎಂ ಹೇಳಲಿ, ತಪ್ಪೇನಿದೆ. ಸಮಾಜದಲ್ಲಿ ಅವರನ್ನ ತೇಜೋವಧೆ ಮಾಡುವ ಕೆಲಸ ಆಗಬಾರದು ಎಂದರು.

ಕೇಂದ್ರ ಮಂತ್ರಿಗಳಿಗೆ ತಮ್ಮದೇ ಆದ ಜವಾಬ್ದಾರಿಗಳಿದೆ. ಕೇಂದ್ರ ಸರ್ಕಾರದ ಮಂತ್ರಿಯಾಗಿ ಅವರ‌ ಕೆಲಸ ಅವರು ಮಾಡುತ್ತಿದ್ದಾರೆ. ಸುಮೋಟೋ ಕೇಸ್ ಎಷ್ಟು ಮಾಡಿಲ್ಲ? ಅದೇ ರೀತಿ ಸುಮೋಟೋ ಕೇಸ್ ದಾಖಲು ಮಾಡಿಕೊಂಡು ತನಿಖೆ ಮಾಡಲಿ. ಮಾಜಿ ಸಿಎಂ ತಡೆಯಾಜ್ಞೆ ತರುತ್ತಾರೆ ಅಂದ್ರೆ ಏನು ಎಲ್ಲದಕ್ಕೂ ತೆರೆ ಎಳೆಯಬೇಕು ಅಂದ್ರೆ ತನಿಖೆಯಾಗಬೇಕು. ಬಾಂಬೆ ಬಾಯ್ಸ್ ಎಲ್ಲಿ ಹೋದ್ರು ಎಲ್ಲ? ಎಷ್ಟು ಜನ ಸ್ಟೇ ತೆಗೆದುಕೊಂಡು ಬಂದರು, ಹೈಕೋರ್ಟ್​ನಲ್ಲಿ ಅದೊಂದು ರಕ್ಷಣೆ ಸಿಕ್ಕಿದೆ. ಆದ್ರೆ, ಆ ಕುಟುಂಬದ ಪರಿಸ್ಥಿತಿ ಏನು ಸರ್ ಎಂದು ಪ್ರಶ್ನಿಸಿದರು.

ಸಮಾಜದಲ್ಲಿ ಅವರು ಹೇಗೋ ತಿರುಗಬಹುದು. ಆದ್ರೆ, ಮನೆಯಲ್ಲಿ ಅವರು ಯಾವ ರೀತಿ ಇರಲು ಸಾಧ್ಯ‌? ಆದ್ದರಿಂದ ಕೂಡಲೇ ತನಿಖೆಯಾಗಬೇಕು. ತನಿಖೆಯಿಂದ ಯಾರ ಹೆಸರು ಬೇಕಾದ್ರು ಹೊರಗಡೆ ಬರಲಿ ಅವರಿಗೆ ಶಿಕ್ಷೆಯಾಗಲಿ. ಸಿದ್ದರಾಮಯ್ಯ ಅವರಿಗೆ ಸಿಂಪತಿ ಏನು ಬೇಕಿಲ್ಲ. ನಾನು ಕಳಂಕ ರಹಿತ ರಾಜಕಾರಣಿ ಅಂತ ಅವರು ಪದೇ ಪದೇ ಹೇಳಿದ್ದಾರೆ. ಅವರು ಈ ರೀತಿಯ ಬ್ಲ್ಯಾಕ್​ಮೇಲ್ ತಂತ್ರಕ್ಕೆ ಬಲಿಯಾಗಬಾರದು. ಕಾಂಗ್ರೆಸ್​ನ ಸಾಕಷ್ಟು ಜನ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ ಅಂದರೆ ಅವರೆಲ್ಲ ಸಿದ್ದರಾಮಯ್ಯ ಅವರನ್ನ ಖೆಡ್ಡಕ್ಕೆ ಬೀಳಿಸಲು ಕಾಯುತ್ತಿದ್ದಾರೆ ಅನಿಸುತ್ತೆ ಎಂದರು.

ಅವರು ನಮ್ಮ ಪಕ್ಷದಲ್ಲಿ ಇದ್ದಾಗ ಪಕ್ಷದ ಅಧ್ಯಕ್ಷರಾಗಿದ್ದರು. ನಾನು ಅವರ ಮರ್ಯಾದೆ ಹರಾಜು ಹಾಕಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಎರಡು ಬಾರಿ ಸಿಎಂ ಆಗಿದ್ದರು. ಕಾಂಗ್ರೆಸ್ ಅವರೇ ಅವರ ಮರ್ಯಾದೆ ಹರಾಜು ಹಾಕುತ್ತಿದ್ದಾರೆ ಎಂದರು.

ವಿಧಾನಸೌಧದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ

ಸ್ಟಿಂಗ್ ಆರೋಪ ಸಿದ್ದರಾಮಯ್ಯ ಮೇಲೆ‌ ಆಗಿರುವುದು ನೋವು ತಂದಿದೆ. ರಾಜ್ಯದಲ್ಲಿ ನಡೆಯುತ್ತಿರುವ ಸ್ಪಿಂಗ್ ಬಗ್ಗೆ ಸಿಎಂ ಮೊದಲೇ ಎಚ್ಚರಿಸಿದ್ದರು. ಕುಮಾರಸ್ವಾಮಿ ಪೆನ್ ಡ್ರೈವ್​ ತೋರಿಸಿದ್ದರಲ್ಲ ಏನಾಯ್ತು? ಖೇಣಿ ಹಿಡ್ಕೊಂಡಿದ್ರು, ಈಗ ಸ್ಟಿಂಗ್ ಹಿಡ್ಕೊಂಡಿದ್ದಾರೆ ಅಷ್ಟೇ. ಕುಮಾರಸ್ವಾಮಿ ಬಳಿ ದಾಖಲೆ ಇದ್ದರೆ ತಂದುಕೊಡಲಿ ಆಗ ತನಿಖೆ ಆಗುತ್ತದೆ. ತಮಾಷೆ ಮಾಡುವುದು ಬೇಡ. ಸಣ್ಣ ವಿಚಾರವನ್ನು ದೊಡ್ಡದು ಮಾಡುವುದು ಬೇಡ. ಸಿಎಂ ಸುಮ್ಮನೆ ಕೂರಲ್ಲ ತನಿಖೆ ಮಾಡುತ್ತಾರೆ. ವ್ಯಕ್ತಿ ಮಾನಹಾನಿ ಮಾಡಬಾರದು ಅಷ್ಟೇ ಎಂದರು.