50 ಡಿಗ್ರಿಗೂ ಮೀರಿದ ತಾಪಮಾನ, ಸಲ್ಫರ್‌ ಕೊಳಗಳು! ಇದೇ ನೋಡಿ ಭೂಮಿಯ ವಿಚಿತ್ರ ತಾಣ| Danakil Depression

ಹೆಸರೇ ಸೂಚಿಸುವಂತೆ, ಡನಾಕಿಲ್ ತನ್ನಲ್ಲಿ ಅನೇಕ ರಹಸ್ಯಗಳನ್ನು ಅಡಗಿಸಿಕೊಂಡಿದೆ. ಡನಾಕಿಲ್ ಅನ್ನು 'ಅಫಾರ್ ಡಿಪ್ರೆಶನ್' (Afar Depression) ಎಂದೂ ಕರೆಯಲಾಗಿದೆ.
Danakil Depression
50 ಡಿಗ್ರಿಗೂ ಮೀರಿದ ತಾಪಮಾನ, ಸಲ್ಫರ್‌ ಕೊಳಗಳು! ಇದೇ ನೋಡಿ ಭೂಮಿಯ ವಿಚಿತ್ರ ತಾಣ| Danakil Depression
Published on: 

Danakil Depression: ಪೂರ್ವ ಆಫ್ರಿಕಾದ ದೇಶವಾದ ಇಥಿಯೋಪಿಯಾ ಖಂಡದ ಅತ್ಯಂತ ಸುಂದರ ದೇಶಗಳಲ್ಲಿ ಒಂದು. ಪ್ರಪಂಚದ ಅತ್ಯಂತ ಗರಿಷ್ಠ ತಾಪಮಾನ ಪ್ರದೇಶದಿಂದ ಹಿಡಿದು ಅತ್ಯಂತ ಸುಂದರವಾದ ಮಳೆಕಾಡುಗಳವರೆಗೆ, ಪ್ರಕೃತಿಯು ಮಾನವನಿಗಾಗಿ ಸೃಷ್ಟಿಸಿದ ಅನೇಕ ಅದ್ಭುತಗಳಿಗೆ ಇಥಿಯೋಪಿಯಾ ಕಣ್ಮುಂದಿರುವ ಒಂದು ಜ್ವಲಂತ ಸಾಕ್ಷಿ.

ಒಂದೇ ದೇಶದಲ್ಲಿ ಇಂತಹ ಅದ್ಭುತ ಭೂದೃಶ್ಯಗಳು ಮತ್ತು ಹವಾಮಾನ ವೈವಿಧ್ಯತೆಯನ್ನು ಕಾಣಸಿಗುವುದು ಅಪರೂಪದಲ್ಲೇ ಅಪರೂಪ ಮತ್ತು ಇದೇ ಇಥಿಯೋಪಿಯಾದ ಜನಪ್ರಿಯತೆಯನ್ನು ದುಪ್ಪಟ್ಟಾಗಿಸಿದೆ. ಈ ಸುಂದರ ದೇಶದಲ್ಲಿ ಪ್ರವಾಸಿಗರಿಗಾಗಿ ಕಾಯುತ್ತಿರುವ ಮತ್ತೊಂದು ಅದ್ಭುತವೆಂದರೆ ಅದು 'ನರಕದ ಬಾಗಿಲು' (Gates to Hell). ಭೂಮಿ ಮೇಲಿನ ಅತ್ಯಂತ ಕಠಿಣ ಪರಿಸ್ಥಿತಿಯ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ 'ಡನಾಕಿಲ್ ಡಿಪ್ರೆಶನ್' ಇದಾಗಿದೆ.

ಬಿಸಿನೀರಿನ ಬುಗ್ಗೆ, ಆಮ್ಲೀಯ ಕೊಳಗಳ ಭೂಮಿ

'ನರಕದ ಬಾಗಿಲು' ಎಂದು ಕರೆಯಲ್ಪಡುವ ಈ ಸ್ಥಳವು ಬಿಸಿನೀರಿನ ಬುಗ್ಗೆಗಳು, ಆಮ್ಲೀಯ ಕೊಳಗಳು, ಜ್ವಾಲಾಮುಖಿಗಳು ಮತ್ತು ಉಪ್ಪಿನ ಪರ್ವತಗಳಿಂದಲೇ ಆವೃತಗೊಂಡಿದೆ. ಡನಾಕಿಲ್ ಡಿಪ್ರೆಶನ್ ಭೂಮಿಯ ಮೇಲಿನ ಅತ್ಯಂತ ಬಿಸಿಯಾದ ಸ್ಥಳಗಳಲ್ಲಿ ಒಂದಾಗಿದೆ. ಇದು ಮನುಷ್ಯರು ವಾಸಿಸಲು ಯೋಗ್ಯವಲ್ಲದ ಸ್ಥಳವೆಂದು ಪರಿಗಣಿಸಲ್ಪಟ್ಟಿದ್ದರೂ, ಅನೇಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಡನಾಕಿಲ್ ಡಿಪ್ರೆಶನ್ ಬಗ್ಗೆ ಮಾತನಾಡುವಾಗ, ವಿಜ್ಞಾನಿಗಳು ಸೌರವ್ಯೂಹದ ಇತರ ಗ್ರಹಗಳ ಕುರಿತು ಸಂಶೋಧನೆ ನಡೆಸಲು ಈ ಸ್ಥಳವನ್ನು ಬಳಸಿಕೊಳ್ಳುತ್ತಾರೆ ಎಂಬುದು ಇಲ್ಲಿ ಗಮನಾರ್ಹ. ಅತ್ಯಂತ ಬಿಸಿಯಿರುವ ಸ್ಥಳವನ್ನು ಸಂಶೋಧನೆಗೆ ಹೇಗೆ ಬಳಸಲು ಸಾಧ್ಯವೆಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ಆದರೆ, ಹೆಸರೇ ಸೂಚಿಸುವಂತೆ, ಡನಾಕಿಲ್ ತನ್ನಲ್ಲಿ ಅನೇಕ ರಹಸ್ಯಗಳನ್ನು ಅಡಗಿಸಿಕೊಂಡಿದೆ. ಡನಾಕಿಲ್ ಅನ್ನು 'ಅಫಾರ್ ಡಿಪ್ರೆಶನ್' (Afar Depression) ಎಂದೂ ಕರೆಯಲಾಗಿದೆ.

ಏನಿದು 'ಬಿಳಿ ಚಿನ್ನ'?

ನೂರಾರು ವರ್ಷಗಳ ಹಿಂದೆ, ನಾಣ್ಯಗಳ ಚಲಾವಣೆಗೂ ಮೊದಲು, ಇಥಿಯೋಪಿಯಾದ ವ್ಯಾಪಾರ ಮಾರ್ಗಗಳು ಉಪ್ಪಿನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿತ್ತು. ಡನಾಕಿಲ್ ಡಿಪ್ರೆಶನ್‌ನ ಉಪ್ಪಿನ ಬಯಲುಗಳನ್ನು ಚಿನ್ನಕ್ಕೆ ಸಮಾನವೆಂದು ಪರಿಗಣಿಸಲಾಗುತ್ತಿತ್ತು. ಬಿಸಿಯಾದ ಡನಾಕಿಲ್ ಡಿಪ್ರೆಶನ್‌ನಿಂದ ತೆಗೆಯಲಾಗುತ್ತಿದ್ದ ಈ ಉಪ್ಪನ್ನು ಬಿಳಿ ಚಿನ್ನ ಎಂದು ಕರೆಯಲಾಗುತ್ತಿತ್ತು. ಶತಮಾನಗಳ ಕಾಲ, ಈ ಉಪ್ಪಿನ ತುಂಡುಗಳನ್ನು ಹಣದ ರೂಪದಲ್ಲಿ ಬಳಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಖಂಡಗಳ ಬೇರ್ಪಡಿಸುವ ಭೂಮಿಯ ಪದರ

ಆಫ್ರಿಕಾ ಮತ್ತು ಏಷ್ಯಾ ಖಂಡಗಳ ಟೆಕ್ಟೋನಿಕ್ ಪ್ಲೇಟ್‌ಗಳ (ಭೂಮಿ ಪದರಗಳ) ಚಲನೆಯಿಂದ ಡನಾಕಿಲ್ ಡಿಪ್ರೆಶನ್ ರೂಪುಗೊಂಡಿದೆ. ಈ ಪ್ಲೇಟ್‌ಗಳು ಪ್ರತಿವರ್ಷ ಸುಮಾರು 1ರಿಂದ 2 ಸೆಂಟಿಮೀಟರ್‌ಗಳಷ್ಟು ದೂರ ಸರಿಯುತ್ತಿದ್ದು, ಇದರಿಂದ ಭೂಮಿಯ ಮೇಲ್ಮೈಯಲ್ಲಿ ಡನಾಕಿಲ್ ಡಿಪ್ರೆಶನ್ ನಿರ್ಮಾಣವಾಗಿದೆ. ಅಫಾರ್ ಡಿಪ್ರೆಶನ್ ಎಂಬುದು ಜಿಬೌಟಿ, ಎರಿಟ್ರಿಯಾ ಮತ್ತು ಎಥಿಯೋಪಿಯಾದ ಅಫಾರ್ ಪ್ರದೇಶದವರೆಗೆ ಹಬ್ಬಿರುವ ಒಂದು ದೊಡ್ಡ ಭೂಭಾಗವಾಗಿದೆ.

ಒಂದು ಕಾಲದಲ್ಲಿ ಕೆಂಪು ಸಮುದ್ರದ ಭಾಗವಾಗಿದ್ದ ಈ ಪ್ರದೇಶವು, ಶುಷ್ಕ ವಾತಾವರಣದಲ್ಲಿ ಜ್ವಾಲಾಮುಖಿ ಸ್ಫೋಟಗಳಿಂದ ಹೊರಬಂದ ಲಾವಾ ಆವಿಯಾದಾಗ ಕಾಲಕ್ರಮೇಣ ರಚನೆಯಾಗಿದೆ. ನೆರೆಯ ಕರಾವಳಿ ಪ್ರದೇಶಗಳಿಂದ ಬರುವ ಸಮುದ್ರದ ನೀರು ಮತ್ತು ಮಳೆನೀರು ಇಲ್ಲಿನ ಸಲ್ಫರ್ ಯುಕ್ತ ಸರೋವರಗಳನ್ನು ಸೇರುತ್ತವೆ ಮತ್ತು ಭೂಮಿಯ ಆಳದಲ್ಲಿರುವ ಮ್ಯಾಗ್ಮಾದಿಂದ (ಕರಗಿದ ಶಿಲೆ) ಬಿಸಿಯಾಗುತ್ತವೆ. ಸಮುದ್ರದ ಉಪ್ಪು ಮ್ಯಾಗ್ಮಾದಲ್ಲಿರುವ ಖನಿಜಗಳೊಂದಿಗೆ ಬೆರೆತಾಗ, ಹಳದಿ, ಹಸಿರು, ಕಿತ್ತಳೆ ಮತ್ತು ಕೆಂಪು ಬಣ್ಣಗಳಂತಹ ಸುಂದರವಾದ ವರ್ಣಗಳು ಸೃಷ್ಟಿಯಾಗುತ್ತವೆ.

ಭವಿಷ್ಯದಲ್ಲಿ ಹೊಸ ಸಾಗರ?

ಡನಾಕಿಲ್ ಡಿಪ್ರೆಶನ್ ಭೂಮಿ ಮೇಲಿನ ಅತ್ಯಂತ ಆಕರ್ಷಕ ಭೌಗೋಳಿಕ ರಚನೆಗಳಲ್ಲಿ ಒಂದಾಗಿದೆ. ಇದು ಒಂದು ಹೊಸ ಸಾಗರ ಜಲಾನಯನ ಪ್ರದೇಶವಾಗಿದೆ. ಅಂದರೆ, ಭವಿಷ್ಯದಲ್ಲಿ ಕೋಟ್ಯಂತರ ವರ್ಷಗಳ ನಂತರ ಆಫ್ರಿಕನ್ ಖಂಡವು ಎರಡು ಭಾಗಗಳಾಗಿ ವಿಭಜನೆಗೊಂಡು, ಈ ಪ್ರದೇಶವು ಸಾಗರದ ನೀರಿನಿಂದ ಆವೃತವಾಗಲಿದೆ ಎಂದು ವಿಜ್ಞಾನಿಗಳು ನಂಬಿದ್ದಾರೆ. ಡನಾಕಿಲ್ ಡಿಪ್ರೆಶನ್ ಪ್ರದೇಶವು ಕುಸಿದು ಹೊಸ ಸಾಗರವನ್ನು ಸೃಷ್ಟಿಸಲಿದೆ. ಈ ಸಮುದ್ರವು 'ರೆಡ್ ಸೀ ರಿಫ್ಟ್' (ಕೆಂಪು ಸಮುದ್ರದ ಬಿರುಕು ಕಣಿವೆ) ಕಡೆಗೆ ಹರಿದು ಆಫ್ರಿಕನ್ ಖಂಡವನ್ನು ಎರಡು ಭಾಗಗಳಾಗಿ ವಿಭಜಿಸುತ್ತದೆ ಎಂದು ವಿವರಿಸಲಾಗಿದೆ.

Also Read
ಬೆರಳಷ್ಟಿಲ್ಲದ ಈ ಸೀಗಡಿ ಮಾಡೋ ಸೌಂಡ್​ ಮುಂದೆ ಬುಲೆಟ್​ ಶಬ್ದವೇ ಠುಸ್​! ಇಲ್ಲಿದೆ ನಿಮ್ಮ ಹುಬ್ಬೇರಿಸುವ ಸಂಗತಿ | Pistol Shrimp
Danakil Depression

ಡನಾಕಿಲ್ ಡಿಪ್ರೆಶನ್ ಭೂಮಿಯ ಮೇಲಿನ ಅತ್ಯಂತ ಬಿಸಿಯಾದ ಸ್ಥಳವಾಗಿದ್ದು, ಸಮುದ್ರ ಮಟ್ಟಕ್ಕಿಂತ 100 ಮೀಟರ್‌ಗಿಂತಲೂ ಹೆಚ್ಚು ಆಳದಲ್ಲಿ ನೆಲೆಗೊಂಡಿದೆ. ಇದು ಭೂಮಿಯ ಮೇಲಿನ ಅತ್ಯಂತ ತಗ್ಗು ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ವಾರ್ಷಿಕ ಸರಾಸರಿ ತಾಪಮಾನವು 35°C ಮತ್ತು 40°C ನಡುವೆ ಇರುತ್ತದೆ ಮತ್ತು ಈ ಪ್ರದೇಶದಲ್ಲಿ ವರ್ಷಕ್ಕೆ ಕೇವಲ 100-200 ಮಿ.ಮೀ.ನಷ್ಟು ಮಾತ್ರ ಮಳೆಯಾಗುತ್ತದೆ. ಆ ಮಳೆಯ ನೀರು ಕೂಡ ತೀವ್ರವಾದ ಶಾಖದಿಂದಾಗಿ ಕ್ಷಣಮಾತ್ರದಲ್ಲಿ ಆವಿಯಾಗಿ ಹೋಗುತ್ತದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net