ಬೆಂಗಳೂರು: ಹೊಸ ವರ್ಷದ ಹಿನ್ನೆಲೆಯಲ್ಲಿ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿ.ಗೆ(ಎಂಎಸ್‌ಐಎಲ್) ಒಂದೇ ದಿನದಲ್ಲಿ ಮದ್ಯ ಮಾರಾಟದಿಂದ 18.12 ಕೋಟಿ ರೂ.ಆದಾಯ ಬಂದಿದೆ.
ಸಾಮಾನ್ಯ ದಿನಗಳಲ್ಲಿ ಎಂಎಸ್‌ಐಎಲ್‌ಗೆ 19,154 ಬಾಕ್ಸ್ ಮಾರಾಟವಾಗುತ್ತದೆ. ಆದರೆ, ನೂತನ ವರ್ಷದ ಕಾರಣದಿಂದ ಡಿ.31ರಂದು 37,450 ಬಾಕ್ಸ್ ಸೇಲ್ ಆಗಿದೆ. ಇದರಿಂದಾಗಿ 18.12 ಕೋಟಿ ರೂ.ಆದಾಯ ಗಳಿಸಿದೆ. ರಾಜ್ಯದ ಇತರ ಜಿಲ್ಲೆಗಳಗಿಂತ ಬೆಂಗಳೂರು ನಗರ 1.71 ಕೋಟಿ ರೂ., ಬೆಳಗಾವಿ 1.30 ಕೋಟಿ ರೂ., ತುಮಕೂರು 1.17 ಕೋಟಿ ಮತ್ತು ಮೈಸೂರಿನಲ್ಲಿ 1.08 ಕೋಟಿ ರೂ. ಮೌಲ್ಯದ ಮದ್ಯ ವಹಿವಾಟು ನಡೆದಿದೆ. ಎಲ್ಲ ಮಳಿಗೆಗಳಗಿಂತ ಹುಮನಾಬಾದ್‌ನ ಎಂಎಸ್‌ಐಎಲ್ ಮಳಿಗೆಯಲ್ಲಿ ಅಧಿಕವಾಗಿ ಮದ್ಯ ಮಾರಾಟವಾಗಿದೆ.
ರಾಜ್ಯದಲ್ಲಿರುವ 1,029 ಎಂಎಸ್‌ಐಎಲ್ ಮದ್ಯದಂಗಡಿಗಳ ಪೈಕಿ 200 ಮಳಿಗೆಗಳನ್ನು ಬೋಟಿಕ್ ಆಗಿ ಮೇಲ್ದರ್ಜೆಗೇರಿಸಲಾಗುತ್ತಿದೆ.ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್, ಪ್ರೀಮಿಯಂ ಮಾದರಿಯ ಮದ್ಯ ಮಾರಾಟ ಮಳಿಗೆಗಳನ್ನು ತೆರೆದಿದೆ.ಸುಸಜ್ಜಿತ ಮಳಿಗೆಯಲ್ಲಿ ಕಡಿಮೆ ಬೆಲೆಯಿಂದ ಹಿಡಿದು, ದುಬಾರಿ ಬೆಲೆಯ ಮದ್ಯಗಳು ಒಂದೇ ಸೂರಿನಡಿ ಸಿಗಲಿವೆ. ಬೋಟಿಕ್, ಒಳಾಂಗಣ ವಿನ್ಯಾಸ ಗ್ರಾಹಕರನ್ನು ಸೆಳೆಯುತ್ತಿದೆ. ಮಾಲ್ ಮಾದರಿಯಲ್ಲಿ ಬೋಟಿಕ್ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಸಂಸ್ಥೆಯ ವಹಿವಾಟು ಶೇ.40 ಏರಿಕೆಯಾಗಿದೆ.
2025ರ ಡಿ.29ರಿಂದ ಡಿ.31ರವರೆಗೆ 9.84 ಲಕ್ಷ ಬಾಕ್ಸ್ ಐಎಂಎಲ್ ಮತ್ತು 6.64 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದು, ಇದರಿಂದಾಗಿ ಅಬಕಾರಿ ಇಲಾಖೆಗೆ ಒಟ್ಟು 587 ಕೋಟಿ ರೂ. ಆದಾಯ ಬಂದಿದೆ. 2024ರ ಡಿ.29ರಿಂದ ಡಿ.31ರವರೆಗೆ 8.25 ಲಕ್ಷ ಬಾಕ್ಸ್ ಐಎಂಎಲ್, 5.03 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. 2023ರ ಡಿ.29ರಿಂದ 9.44 ಲಕ್ಷ ಬಾಕ್ಸ್ ಐಎಂಎಲ್ ಮತ್ತು 6.16 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇಲಾಖೆಗೆ, ಮದ್ಯ ಮಾರಾಟದಲ್ಲಿ ಹೆಚ್ಚಾಗಿದೆ.