ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಬೆಂಗಳೂರು: ಕೃಷಿ,ತೋಟಗಾರಿಕೆ ಪ್ರಗತಿಗೆ ಇನ್ನಷ್ಟು ಸಂಶೋಧನೆ ನಡೆಸುವ ಅಗತ್ಯವಿದೆ. ಜತೆಗೆ, ಮೌಲ್ಯವರ್ಧನೆ ಹಾಗೂ ತಾಂತ್ರಿಕತೆ ಆಧಾರಿತ ಕೃಷಿ ಚಟುವಟಿಕೆಗೆ ಹೆಚ್ಚಿನ ಆದ್ಯತೆ ನೀಡುವ ಕೆಲಸವಾಗಬೇಕಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಮಲ್ಲತ್ತಹಳ್ಳಿಯ ಹೊರವರ್ತುಲ ರಸ್ತೆಯಲ್ಲಿರುವ ಭಾರತೀಯ ತೋಟಗಾರಿಕಾ ವ್ಯವಸ್ಥಾಪಕ ಸಂಸ್ಥೆ ಆವರಣದಲ್ಲಿ ‘ಅಗ್ರಿಟೆಕ್ ಆ್ಯಂಡ್ ಪ್ಲಾಂಟೇಶನ್’ ಕುರಿತು ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮಾತನಾಡಿದರು.
ರೈತರು ಆರ್ಥಿಕ ಪ್ರಗತಿ ಸಾಧಿಸಲು, ಜಾಗತಿಕ ಮುಟ್ಟದಲ್ಲಿ ಛಾಪು ಮೂಡಿಸಲು ಮೌಲ್ಯವರ್ಧನೆ, ಬ್ರ್ಯಾಂಡಿಂಗ್, ಸಂಸ್ಕರಣೆ ಮತ್ತು ಮಾರುಕಟ್ಟೆ ಬೇಡಿಕೆ ಹಾಗೂ ಅಗತ್ಯಕ್ಕೆ ತಕ್ಕಂತೆ ಪದಾರ್ಥಗಳು ಗುಣಮಟ್ಟದಿಂದ ಕೂಡಿರಬೇಕು. ಆಗ ಮಾತ್ರ ಜಾಗತಿಕ ಮಟ್ಟದಲ್ಲಿ ಕೃಷಿ ಮಾರುಕಟ್ಟೆಗೆ ಆದ್ಯತೆ ಸಿಗಲಿದೆ. ಕೇಂದ್ರ ಸರ್ಕಾರವು ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳಿಗೆ, ನವೋದ್ಯಮಗಳಿಗೆ, ತಾಂತ್ರಿಕ ಕೌಶಲ ತರಬೇತಿ, ಆರ್ಥಿಕ ಸಹಾಯ ನೀಡುವ ಮೂಲಕ ಪ್ರೋತ್ಸಾಹಿಸುತ್ತಿದೆ. ಯುವಸಮೂಹ ಉದ್ಯಮಗಳನ್ನು ಸ್ಥಾಪಿಸಿ ಇತರರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಂಡು ಆರ್ಥಿಕ ಸದೃಢತೆ ಸಾಧಿಸಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ನಿರ್ದೇಶಕ ಡಾ.ಎಸ್. ಸೆಂದಿಲ್ ವಿನಯಗಮ್, ಐಟಿಸಿ ಸರಕುಸಾಗಣೆ ಮತ್ತು ಆಹಾರ ವಿಭಾಗದ ಮುಖ್ಯಸ್ಥ ಸೋಮನಾಥ್ ಚಟರ್ಜಿ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ತುಷಾರ್ ಕಾಂತಿ ಬೆಹರಾ ಸೇರಿ ಸಂಶೋಧನಾ ಸಂಸ್ಥೆಗಳು ಮತ್ತು ಕೈಗಾರಿಕಾ ಪ್ರತಿನಿಧಿಗಳಿದ್ದರು.