ರಾಜ್ಯಾದ್ಯಂತ ವ್ಯಾಪಿಸಿದ ಮಾನ್ಸೂನ್
ಬೆಂಗಳೂರು: ಮುಕ್ಕಾಲು ರಾಜ್ಯಕ್ಕೆ ವ್ಯಾಪಿಸಿದ ಮಾನ್ಸೂನ್, ಸೋಮವಾರ ವೇಳೆಗೆ ಉತ್ತರ ಕರ್ನಾಟಕದಾದ್ಯಂತ ಆವರಿಸಿದೆ. ಈ ಮೂಲಕ ವಾಡಿಕೆಗಿಂತ ತಡವಾಗಿ ರಾಜ್ಯಾದ್ಯಂತ ಮಾನ್ಸೂನ್ ವ್ಯಾಪಿಸಿದಂತಾಗಿದೆ.
ರಾಜ್ಯದ ಹಲವೆಡೆ ವರುಣಾರ್ಭಟ ಮುಂದುವರಿದಿದ್ದು, ಕರಾವಳಿ ಮತ್ತು ಉತ್ತರ ಕರ್ನಾಟಕದ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ಭರ್ಜರಿ ಮಳೆಯಾಗಿತ್ತು. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಮುಂದಿನ 2 ದಿನ ಜೋರಾಗಿ ಮಳೆಯಾಗುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಕೊಟ್ಟಿದೆ. ಈ ಅವಧಿಯಲ್ಲಿ ಬಿರುಗಾಳಿ ಸಹಿತ 7ರಿಂದ 15 ಸೆಂಮೀ ಮಳೆಯಾಗಲಿದೆ. ಸಮುದ್ರ ತೀರದ ಪ್ರದೇಶಗಳಲ್ಲಿ ಮೀನುಗಾರರು ಸೇರಿ ಸಾರ್ವಜನಿಕರು ತೆರಳದಂತೆ ಇಲಾಖೆ ಎಚ್ಚರಿಕೆ ಕೊಟ್ಟಿದೆ.
ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಕೊಡಗು, ಹಾಸನದಲ್ಲಿ ಮುಂದಿನ 3 ದಿನ ಭಾರಿ ಮಳೆಯಾಗುವುದರಿಂದ ಆರೆಂಜ್ ಅಲರ್ಟ್ ನೀಡಲಾಗಿದೆ. ಬಾಗಲಕೋಟೆ, ಕೊಪ್ಪಳ, ಯಾದಗಿರಿ, ರಾಯಚೂರು, ವಿಜಯಪುರ, ವಿಜಯನಗರ ಮತ್ತು ಮೈಸೂರಿನಲ್ಲಿ ಜೂ 9ರಂದು ಯೆಲ್ಲೋ ಅಲರ್ಟ್ ಇರಲಿದೆ. ಉಳಿದೆಡೆ ಸಾಧಾರಣ ವರ್ಷಧಾರೆಯಾಗಲಿದೆ.
ಬೆಂಗಳೂರು ನಗರದಲ್ಲಿ ಮುಂದಿನ 4 ದಿನ ಮೋಡ ಕವಿದ ವಾತಾವರಣ ಇರಲಿದೆ. ಕೆಲ ಪ್ರದೇಶಗಳಲ್ಲಿ ಗಂಟೆಗೆ 40 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಮಧ್ಯಮ ಪ್ರಮಾಣದಲ್ಲಿ ಮಳೆ ಸುರಿಯಲಿದೆ.ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 21 ಡಿ.ಸೆ.ಉಷ್ಣಾಂಶ ದಾಖಲಾಗಬಹುದು.