ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಸಚಿವ ಸ್ಥಾನ: ಅಭಿಮಾನಿಗಳ ನಿರ್ಧಾರಕ್ಕೆ ಬದ್ದ ಎಂದು ರಾಜೀನಾಮೆ ಸುಳಿವು ಕೊಟ್ಟ ತನ್ವೀರ್ ಸೇಠ್! Tanveer Sait 
ರಾಜ್ಯ

ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಸಚಿವ ಸ್ಥಾನ: ಅಭಿಮಾನಿಗಳ ನಿರ್ಧಾರಕ್ಕೆ ಬದ್ದ ಎಂದು ರಾಜೀನಾಮೆ ಸುಳಿವು ಕೊಟ್ಟ ತನ್ವೀರ್ ಸೇಠ್! Tanveer Sait

ಪ್ರಮುಖ ಮುಖ್ಯಾಂಶಗಳು

  • ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂದು ಶಾಸಕ ತನ್ವೀರ್ ಸೇಠ್ ಗಂಭೀರ ಆರೋಪ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ
  • ನನ್ನ ಅಭಿಮಾನಿಗಳು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಶಾಸಕ ತನ್ವೀರ್ ಸೇಠ್ ಸ್ಪಷ್ಟಪಡಿಸಿದ್ದಾರೆ
  • ಹೈಕಮಾಂಡ್ ಮೇಲೆ ಯಾವುದೇ ದೂರು ಇಲ್ಲ ಆದರೆ ನಮ್ಮದೇ ಕೆಲ ನಾಯಕರಿಂದ ನನಗೆ ಸಚಿವ ಸ್ಥಾನ ತಪ್ಪಿಸಲಾಗಿದೆ ಎಂದು ದೂರಿದ್ದಾರೆ
  • ಸಂಪುಟ ವಿಸ್ತರಣೆಯ ಸುದ್ದಿಗೋಷ್ಠಿಯಲ್ಲಿ ಹಣ ಕೊಟ್ಟವರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಕಾರ್ಯಕರ್ತರು ಮುಗಿಬಿದ್ದು ಆಕ್ರೋಶ ಹೊರಹಾಕಿದ್ದಾರೆ
ಮೈಸೂರು/ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಲ್ಲಿ ತಮಗೆ ಸಚಿವ ಸ್ಥಾನ ಕೈತಪ್ಪಿರುವ ಹಿನ್ನೆಲೆಯಲ್ಲಿ ಮೈಸೂರಿನ ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ( Tanveer Sait ) ತೀವ್ರ ಅಸಮಾಧಾನ ಹೊರಹಾಕಿದ್ದು, ಪಕ್ಷ ವಿರೋಧಿ ಚಟುವಟಿಕೆ ಬಹಿರಂಗವಾಗಿ ನಡೆಸಿದವರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂದು ನೇರ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಅಭಿಮಾನಿಗಳು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಹೇಳುವ ಮೂಲಕ ಮುಂದಿನ ರಾಜಕೀಯ ನಡೆ ಬಗ್ಗೆ ಕುತೂಹಲ ಮೂಡಿಸಿದ್ದಾರೆ.
ಮೈಸೂರು ಪ್ರಾಂತ್ಯಕ್ಕೆ ಸಿಗಬೇಕಾದ ರಾಜಕೀಯ ಶಕ್ತಿ ಸಿಕ್ಕಿಲ್ಲ ಮತ್ತು ಇದು ಈ ಭಾಗಕ್ಕೆ ಆಗಿರುವ ದೊಡ್ಡ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದ ತನ್ವೀರ್​ ಸೇಠ್​, ಯಾವ ಮಾನದಂಡದ ಮೇಲೆ ಸಚಿವ ಸಂಪುಟ ರಚನೆಯಾಗಿದೆ ಎಂಬುದು ತಮಗೆ ತಿಳಿಯುತ್ತಿಲ್ಲ ಎಂದರು. ಪಕ್ಷಕ್ಕೆ ಸವಾಲು ಹಾಕಿದವರಿಗೆ ಸಚಿವ ಸ್ಥಾನ ಸಿಗುತ್ತಿದ್ದು, ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡಿದವರಿಗೆ ಮನ್ನಣೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪಕ್ಷದ ಹೈಕಮಾಂಡ್ ಮೇಲೆ ತನಗೆ ಯಾವುದೇ ದೂರು ಇಲ್ಲ ಎಂದು ಸ್ಪಷ್ಟಪಡಿಸಿದ ತನ್ವೀರ್ ಸೇಠ್, ಪಕ್ಷದಿಂದ ತನಗೆ ಯಾವುದೇ ಅನ್ಯಾಯವಾಗಿಲ್ಲ ಬದಲಿಗೆ ನಮ್ಮದೇ ಕೆಲ ನಾಯಕರಿಂದ ತನಗೆ ಸಚಿವ ಸ್ಥಾನ ತಪ್ಪಿಸಲಾಗಿದೆ ಎಂದು ದೂರಿದರು. ಕೆಲ ನಾಯಕರು ತಾನು ಯಾರ ಮಾತನ್ನೂ ಕೇಳುವುದಿಲ್ಲ ಎಂದು ಭಾವಿಸಿದ್ದಾರೆ ಎಂದ ಅವರು, ಸಿದ್ದರಾಮಯ್ಯ ಅವರ ವಿಚಾರ ಹಾಗೂ ತಮ್ಮ ವಿಚಾರದಲ್ಲಿ ವ್ಯತ್ಯಾಸಗಳಿವೆ ಮತ್ತು ವ್ಯವಸ್ಥಿತ ಗುಂಪುಗಾರಿಕೆ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು. ಮುಖ್ಯಮಂತ್ರಿಗಳ ಕೈಯಲ್ಲಿ ಮಾತ್ರವಿದ್ದರೆ ತನಗೆ ಖಂಡಿತವಾಗಿಯೂ ಸಚಿವ ಸ್ಥಾನ ಸಿಗುತ್ತಿತ್ತು ಎಂದು ತಿಳಿಸಿದರು.
ಮೈಸೂರು ಪ್ರಾಂತ್ಯದಲ್ಲಿ ಕೆಲವರು ಸಮುದಾಯ ತಮ್ಮ ಕೈಯಲ್ಲಿದೆ ಎಂದು ಹೈಕಮಾಂಡ್‌ಗೆ ಧಮ್ಕಿ ಹಾಕಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದು ತನ್ವೀರ್ ಸೇಠ್ ವಾಗ್ದಾಳಿ ನಡೆಸಿದರು. ದಾವಣಗೆರೆ ಉಪಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೂ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ತಮಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ ಎಂದರು. ತಮಗೆ ಸಚಿವ ಸ್ಥಾನ ತಪ್ಪಿಸಿದವರ ಕುರಿತು ಸಂಪೂರ್ಣ ಮಾಹಿತಿ ತಮ್ಮ ಬಳಿ ಇದೆ ಎಂದು ತಿಳಿಸಿದ ಅವರು, ಕಾರ್ಯಕರ್ತರು ಹೊರಬನ್ನಿ ಎಂದು ಸೂಚಿಸಿದರೆ ಅವರ ನಿರ್ಧಾರದಂತೆ ನಡೆದುಕೊಳ್ಳುವುದಾಗಿ ಪುನರುಚ್ಚರಿಸಿದರು.
ಈ ಸುದ್ದಿಗೋಷ್ಠಿಯ ವೇಳೆಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ತನ್ವೀರ್ ಸೇಠ್ ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರು ಮುಗಿಬಿದ್ದು ಆಕ್ರೋಶ ವ್ಯಕ್ತಪಡಿಸಿದರು. ಹಣ ಕೊಟ್ಟವರಿಗೆ ಮಾತ್ರ ಸಂಪುಟದಲ್ಲಿ ಅವಕಾಶ ನೀಡಲಾಗಿದೆ ಎಂದು ಆರೋಪಿಸಿದ ಕಾರ್ಯಕರ್ತರು ಕಣ್ಣೀರು ಹಾಕಿ, ತಕ್ಷಣವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಟ್ಟು ಹಿಡಿದರು. ಈ ವೇಳೆ ಮನನೊಂದ ಅಭಿಮಾನಿಯೊಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದ್ದು, ಸಚಿವ ಸಂಪುಟ ವಿಸ್ತರಣೆಯು ಕಾಂಗ್ರೆಸ್ ಪಕ್ಷದೊಳಗೆ ತೀವ್ರ ಸ್ವರೂಪದ ಆಂತರಿಕ ಬಿಕ್ಕಟ್ಟಿಗೆ ಕಾರಣವಾಗಿದೆ.