Mango-Jackfruit Festival 
ರಾಜ್ಯ

ಮಾವು-ಹಲಸು ಪ್ರಿಯರಿಗೆ ಗುಡ್​ನ್ಯೂಸ್; ಲಾಲ್​ಬಾಗ್​​​ನಲ್ಲಿ ಜೂ.4ರಿಂದ ಹಣ್ಣುಗಳ ಮೇಳ, ಪ್ರವೇಶ ಶುಲ್ಕವೆಷ್ಟು, ಎಷ್ಟು ದಿನ ಇರಲಿದೆ?..Mango-Jackfruit Festival

ಮಮತಾ

ಪ್ರಮುಖ ಮುಖ್ಯಾಂಶಗಳು

  • ಜೂನ್​4ರಿಂದ ಬೆಂಗಳೂರಿನ ಲಾಲ್​ಬಾಗ್​ನಲ್ಲಿ ಮಾವು-ಹಲಸು ಮೇಳ
  • ಜೂನ್​ 4ರಿಂದ ತಿಂಗಳಾಂತ್ಯದವರೆಗೂ ಇರಲಿದೆ ಮಾವು-ಹಲಸು ಮೇಳ
  • ಗ್ರಾಹಕರಿಗೆ ನೈಸರ್ಗಿಕ ಹಾಗೂ ನ್ಯಾಯಯುತವಾಗಿ ಹಣ್ಣು ಮಾರಾಟ ಮಾಡುವ ಉದ್ದೇಶ
Mango-Jackfruit Festival: ಜೂನ್​ 4ರಿಂದ ತಿಂಗಳಾಂತ್ಯದವರೆಗೂ ಬೆಂಗಳೂರಿನ ಲಾಲ್​​ಬಾಗ್​ನಲ್ಲಿ ಮಾವು ಮತ್ತು ಹಲಸು ಮೇಳ ಆಯೋಜಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆ ಮಾಹಿತಿ ಹಂಚಿಕೊಂಡಿದೆ.
ಬೆಂಗಳೂರಿನ ಲಾಲ್‌ಬಾಗ್ ಸಸ್ಯತೋಟದಲ್ಲಿ ಜೂನ್ 4 ರಿಂದ ಜೂನ್ 30, 2026 ರವರೆಗೆ 27 ದಿನಗಳ ಕಾಲ 'ಮಾವು ಮತ್ತು ಹಲಸು ಮೇಳ-2026' ನಡೆಯಲಿದೆ. ಈ ಮೇಳದಲ್ಲಿ ನೇರವಾಗಿ ರೈತರಿಂದಲೇ ತರಲಾದ ನೈಸರ್ಗಿಕವಾಗಿ ಮಾಗಿದ ಹಣ್ಣುಗಳನ್ನು ಸವಿಯಬಹುದಾಗಿದೆ

ನೈಸರ್ಗಿಕ ಹಣ್ಣು ಮಾರಾಟ

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ (KSMDMCL) ಮತ್ತು ತೋಟಗಾರಿಕೆ ಇಲಾಖೆಯು ಜಂಟಿಯಾಗಿ ಆಯೋಜಿಸಿರುವ ಈ ಪ್ರದರ್ಶನದಲ್ಲಿ ವಿವಿಧ ತಳಿಯ ಮಾವು ಮತ್ತು ಹಲಸಿನ ಹಣ್ಣುಗಳ ಜೊತೆಗೆ ಅವುಗಳಿಗೆ ಸಂಬಂಧಿಸಿದ ಆಹಾರ ಉತ್ಪನ್ನಗಳು ಗ್ರಾಹಕರಿಗೆ ಲಭ್ಯವಿರಲಿವೆ.


ಲಾಲ್​​ಬಾಗ್​ನಲ್ಲಿ ಮಾವು ಮತ್ತು ಹಲಸು ಬೆಳೆಗಾರರಿಗೆ ನೇರ ಮಾರುಕಟ್ಟೆ ಒದಗಿಸಿರುವುದರಿಂದ ರೈತರ ಬಳಿಯೇ ನೇರವಾಗಿ ಹಣ್ಣು ಕೊಂಡುಕೊಳ್ಳಬಹುದಾಗಿದೆ. ಇದರಿಂದ ರೈತರಿಗೆ ಯಾವುದೇ ಮಧ್ಯವರ್ತಿಗಳ ತಲೆನೋವು ಇರದೆ ನ್ಯಾಯಯುತ ಬೆಲೆ ಸಿಗಲಿದೆ. ಜೊತೆಗೆ, ಗ್ರಾಹಕರೂ ಸಹ ಕೈಗೆಟುಕುವ ದರದಲ್ಲಿ ಹಣ್ಣುಗಳನ್ನು ಖರೀದಿಸಿ ಸವಿಯಬಹುದಾಗಿದೆ ಎಂದು ಹೇಳಿದೆ. 

ಎಷ್ಟು ಮಳಿಗೆ, ಯಾವ್ಯಾವ ತಳಿಯ ಹಣ್ಣು ಇರಲಿದೆ?

ಈ ಬಾರಿ  ಮಾವು ಬೆಳೆಗಾರರಿಗೆ 168 ಮಳಿಗೆ ಹಾಕಿಕೊಳ್ಳಲು ಅವಕಾಶ ನೀಡಲಾಗಿದ್ದು, ಹಲಸು ಬೆಳೆಗಾರರಿಗೆ 17 ಮಳಿಗೆಗಳನ್ನು ಉಚಿತವಾಗಿ ನೀಡಲಾಗಿದೆ. ಇಲ್ಲಿಗೆ ಕೋಲಾರ, ಚಿಕ್ಕಬಳ್ಳಾಪುರ, ಕೊಪ್ಪಳ, ಮಂಡ್ಯ, ಧಾರವಾಡ, ಕೊಪ್ಪಳ ಸೇರಿದಂತೆ ಪ್ರಮುಖ ಜಿಲ್ಲೆಗಳ ರೈತರು ಈ ಮೇಳದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಇನ್ನು ಮೇಳದಲ್ಲಿ 65ಕ್ಕೂ ಹೆಚ್ಚು ತಳಿಯ ಮಾವು ಹಾಗೂ 15ಕ್ಕೂ ಹೆಚ್ಚು ತಳಿಯ ಹಲಸಿನ ಸವಿಯನ್ನು ಸವಿದು ಆನಂದಿಸಬಹುದಾಗಿದೆ.  ಬಾದಾಮಿ, ತೋತಾಪುರಿ, ಆಲ್ಫಾನ್ಸೋ, ಮಲಗೋವಾ, ಮಲ್ಲಿಕಾ, ಸಿಂಧೂರಾ ಸೇರಿದಂತೆ ಪ್ರಸಿದ್ಧ ತಳಿಯ ಮಾವುಗಳು ಇರಲಿವೆ.

ಪ್ರವೇಶ ಶುಲ್ಕವೆಷ್ಟು?

ಲಾಲ್​ಬಾಗ್​ ಉದ್ಯಾನ ಪ್ರವೇಶಿಸಿ ಮಾವು ಮತ್ತು ಹಲಸನ್ನು ಸವಿಯಲು ವಯಸ್ಕರು 50 ರೂ. ಪಾವತಿ ಮಾಡಿದರೆ, ಮಕ್ಕಳು 30 ರೂಪಾಯಿ ಪಾವತಿಸಬೇಕಾಗುತ್ತದೆ. ಇನ್ನು ಶಾಲಾ ಮಕ್ಕಳು ಸಮವಸ್ತ್ರದಲ್ಲಿದ್ದರೆ ಉಚಿತ ಪ್ರವೇಶ ಇರಲಿದೆ. ಬೆಳಿಗ್ಗೆ 6ರಿಂದ ಸಂಜೆ7ರವರೆಗೆ ಮೇಲ ಇರಲಿದೆ ಎಂದು ಹೇಳಲಾಗಿದೆ, (ಏಜೆನ್ಸೀಸ್).