ಮಟನ್ಗೆ 1250 ರೂ., ಚಿಕನ್ಗೆ 700 ರೂ.: ಕೈದಿಗಳ ವಿಶೇಷ ಆತಿಥ್ಯಕ್ಕೆ ರೇಟ್ ಫಿಕ್ಸ್! ಮಂಡ್ಯ ಜೈಲು ಸಿಬ್ಬಂದಿ ವಿರುದ್ಧ ಆರೋಪ... Mandya Jail Extortion Allegation
- ಮಂಡ್ಯ ಜೈಲಿನಲ್ಲಿ ಕೈದಿಗಳಿಂದ ಹಣ ವಸೂಲಿ ಮಾಡುವ ದಂಧೆ ಆರೋಪ
- ವಿಶೇಷ ಸೌಲಭ್ಯಕ್ಕಾಗಿ ಸೆಲ್ ಹಾಗೂ ರೂಮ್ ಬದಲಾವಣೆಗಳಿಗೆ ರೇಟ್ ಫಿಕ್ಸ್
- ಹಣ ನೀಡದಿದ್ದರೆ ಕೈದಿಗಳಿಗೆ ಕಠಿಣ ಹಿಂಸೆ ನೀಡುವ ಬೆದರಿಕೆ ಹಾಕುತ್ತಿದ್ದಾರೆ ಎಂಬ ದೂರು
- ಜೈಲಿನೊಳಗೆ ಕೈದಿಗಳ ಬೇಡಿಕೆಗೆ ತಕ್ಕಂತೆ ಮಟನ್-ಚಿಕನ್ ಕ್ಯಾಟರಿಂಗ್ ವ್ಯವಸ್ಥೆ ಆರೋಪ
ಮಂಡ್ಯ: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬನ ರಾಜಾತಿಥ್ಯದ ವಿವಾದ ತಣಿಯುಷ್ಟರಲ್ಲೇ, ಜೈಲಿನೊಳಗೆ ನಡೆಯುತ್ತಿದೆ ಎನ್ನಲಾದ ಕರಾಳ ವ್ಯವಹಾರಗಳ ಮತ್ತೊಂದು ಹಗರಣ ( Mandya Jail Extortion Allegation ) ಹೊರಬಿದ್ದಿದೆ. ಜೈಲಿನಲ್ಲಿ ಕೈದಿಗಳಿಗೆ ಮೂಲಭೂತ ಸೌಕರ್ಯ ಹಾಗೂ ವಿಶೇಷ ಆತಿಥ್ಯ ಕಲ್ಪಿಸಲು ಜೈಲು ಸಿಬ್ಬಂದಿಯೇ ಪ್ರತ್ಯೇಕ 'ರೇಟ್ ಕಾರ್ಡ್' ಫಿಕ್ಸ್ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಕುರಿತಾಗಿ ಕೈದಿಗಳು ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಸಂಚಲನ ಸೃಷ್ಟಿಸಿದೆ.
ಜೈಲು ಅಧೀಕ್ಷಕಿ ಶಾಂತಮ್ಮ ಹಾಗೂ ಸಿಬ್ಬಂದಿ ಅನಿಲ್, ಶಿವರಾಜ್ ಮತ್ತು ರವಿ ಅವರ ನೇತೃತ್ವದಲ್ಲಿ ಈ ಹಣ ವಸೂಲಿ ದಂಧೆ ನಡೆಯುತ್ತಿದೆ ಎಂದು ಪತ್ರದಲ್ಲಿ ನೇರವಾಗಿ ಆರೋಪಿಸಲಾಗಿದೆ. ಮಂಡ್ಯ ಜಿಲ್ಲಾ ಕಾರಾಗೃಹದ ವಿವಿಧ ಸೆಲ್‌ಗಳಲ್ಲಿ ಇರಿಸಲಾಗಿರುವ ವಿಚಾರಣಾಧೀನ ಕೈದಿಗಳಿಂದ ಪ್ರತಿ ತಿಂಗಳು ಕಡ್ಡಾಯವಾಗಿ ಹಫ್ತಾ ವಸೂಲಿ ಮಾಡಲಾಗುತ್ತಿದೆ ಎಂಬ ಸ್ಫೋಟಕ ಅಂಶಗಳು ಬಹಿರಂಗಗೊಂಡಿವೆ. ಸೆಲ್-1ರಿಂದ ತಿಂಗಳಿಗೆ 10 ಸಾವಿರ ರೂ., ಸೆಲ್-3 ಮತ್ತು 4ರಿಂದ ತಲಾ 15 ಸಾವಿರ ರೂ., ಸೆಲ್-5ರಿಂದ 5 ಸಾವಿರ ರೂ., ಹಾಗೂ ಸೆಲ್-6ರಿಂದ 8 ಸಾವಿರ ರೂ. ವರೆಗೆ ಮಾಮೂಲಿ ವಸೂಲಿ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ವಿವರವಾಗಿ ಉಲ್ಲೇಖಿಸಲಾಗಿದೆ.
ಕೇವಲ ಸೆಲ್‌ಗಳಷ್ಟೇ ಅಲ್ಲದೆ, ಜೈಲಿನಲ್ಲಿ ರೂಮ್ ಬದಲಾವಣೆ ಮಾಡಲು 2 ಸಾವಿರ ರೂ. ಹಾಗೂ ಕಟ್ಟುನಿಟ್ಟಿನ ಶಿಕ್ಷೆಯ 'ಪನಿಷ್ಮೆಂಟ್ ಸೆಲ್' ನಿಂದ ಹೊರಬರಲು ಬರೋಬ್ಬರಿ 10 ಸಾವಿರ ರೂ.ಗಳನ್ನು ವಸೂಲಿ ಮಾಡಲಾಗುತ್ತದೆ ಎಂದು ದೂರಲಾಗಿದೆ. ಹಣ ನೀಡದಿದ್ದರೆ ಅಂಥವರನ್ನು 'ಕಮಾನು ಹತ್ತಿಸುವ' ಅಂದರೆ ಕಠಿಣ ಹಿಂಸೆ ನೀಡುವ ಬೆದರಿಕೆಗಳನ್ನು ಸಿಬ್ಬಂದಿ ಹಾಕುತ್ತಿದ್ದಾರೆ ಎಂದು ಒಟ್ಟು 15 ಮಂದಿ ವಿಚಾರಣಾಧೀನ ಕೈದಿಗಳ ಯುಟಿಪಿ ನಂಬರ್ ಜೊತೆಗೆ ಹೆಬ್ಬೆಟ್ಟು ಮುದ್ರೆ ಹಾಗೂ ಸಹಿ ಹಾಕಿರುವುದಾಗಿ ವೈರಲ್ ಆಗಿರುವ ಪತ್ರದಲ್ಲಿ ಗಂಭೀರ ಆರೋಪ ಮಾಡಲಾಗಿದೆ.
ಕೇವಲ ಸೆಲ್ ಶುಲ್ಕವಷ್ಟೇ ಅಲ್ಲದೆ, ಜೈಲಿನೊಳಗೆ ಕೈದಿಗಳ ಬೇಡಿಕೆಗೆ ತಕ್ಕಂತೆ ಅಡುಗೆ ಮಾಡಿ ಕೊಡುವ ಕ್ಯಾಟರಿಂಗ್ ವ್ಯವಸ್ಥೆಯೂ ಇಲ್ಲಿ ಚಾಲ್ತಿಯಲ್ಲಿದೆ! ಕೈದಿಗಳಿಗೆ ಮಟನ್ ಬೇಕಾದರೆ ಕೆಜಿಗೆ 1250 ರೂ. ಮತ್ತು ಚಿಕನ್ ಬೇಕಾದರೆ ಕೆಜಿಗೆ 700 ರೂ.ಗಳಂತೆ ಹಣ ಪಡೆದು ಜೈಲು ಸಿಬ್ಬಂದಿಯೇ ಖುದ್ದಾಗಿ ರುಚಿಕಟ್ಟಾದ ಅಡುಗೆ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಭ್ರಷ್ಟಾಚಾರದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಕೈದಿಗಳು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈಗಾಗಲೇ ಡಿಜಿಪಿ ಅಲೋಕ್ ಕುಮಾರ್ ಹಾಗೂ ದಕ್ಷಿಣ ವಲಯ ಕಾರಾಗೃಹ ಡಿಐಜಿ ದಿವ್ಯಶ್ರೀ ಅವರು ಮಂಡ್ಯ ಜೈಲಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದಾಗ್ಯೂ, ಜೈಲು ವೀಕ್ಷಣೆ ವೇಳೆ ತಮ್ಮ ಬಳಿಗೆ ಯಾವುದೇ ಅಂತಹ ಪತ್ರಗಳನ್ನು ಖೈದಿಗಳು ನೀಡಿಲ್ಲ ಎಂದು ದಿವ್ಯಶ್ರೀ ಅವರು ಸ್ಪಷ್ಟಪಡಿಸಿದ್ದು, ಸದ್ಯ ವೈರಲ್ ಆಗಿರುವ ಪತ್ರ ಹಾಗೂ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಉನ್ನತ ಮಟ್ಟದ ತನಿಖೆ ಮುಂದುವರೆದಿದೆ.