ಲಿಡ್ಕರ್​ಗೆ ಸುವರ್ಣ ಸಂಭ್ರಮ ಏರುಗತಿಯಲ್ಲಿ ಚಮೋದ್ಯಮ: ರಾಜ್ಯಾದ್ಯಂತ ಮಳಿಗೆಗಳ ವಿಸ್ತರಣೆಗೆ ಕ್ರಮ! LIDKAR  
ರಾಜ್ಯ

ಲಿಡ್ಕರ್​ಗೆ ಸುವರ್ಣ ಸಂಭ್ರಮ ಏರುಗತಿಯಲ್ಲಿ ಚಮೋದ್ಯಮ: ರಾಜ್ಯಾದ್ಯಂತ ಮಳಿಗೆಗಳ ವಿಸ್ತರಣೆಗೆ ಕ್ರಮ! LIDKAR

ಪ್ರಮುಖ ಮುಖ್ಯಾಂಶಗಳು

  • ಡಾ.ಬಾಬು ಜಗಜೀವನರಾಮ್ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಸುವರ್ಣ ಸಂಭ್ರಮ
  • ಪಾದರಕ್ಷೆ, ಶೂ ಸೇರಿ ಇತ್ಯಾದಿ ಚರ್ಮ ಉತ್ಪನ್ನಗಳ ಮಾರಾಟದಿಂದ ವಾರ್ಷಿಕ 35-40 ಕೋಟಿ ರೂ. ವಹಿವಾಟು
  • ಕೊಲ್ಲಾಪುರಿ ಚಪ್ಪಲಿಗಳಿಗೆ ಇನ್ನಷ್ಟು ಬೇಡಿಕೆ ತರಲು ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಳಿಗೆ
  • ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ‘ಸಂವಾದ’ದಲ್ಲಿ ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಕೆ.ಎಂ.ವಸುಂಧರಾ ಹೇಳಿಕೆ
ಬೆಂಗಳೂರು: ಡಾ.ಬಾಬು ಜಗಜೀವನರಾಮ್ ಕೈಗಾರಿಕಾ ಅಭಿವೃದ್ಧಿ ನಿಗಮವು ( LIDKAR ) ಕೊಲ್ಹಾಪುರಿ ಪಾದರಕ್ಷೆ, ಶೂ ಸೇರಿ ಇತ್ಯಾದಿ ಚರ್ಮ ಉತ್ಪನ್ನಗಳ ಮಾರಾಟದಿಂದ ವಾರ್ಷಿಕ 35-40 ಕೋಟಿ ರೂ. ವಹಿವಾಟು ಗಳಿಸುತ್ತಿದೆ. ಇದನ್ನು 500 ಕೋಟಿ ರೂ.ಗೆ ಹೆಚ್ಚಿಸಲು, ಜಾಗತಿಕ ಮಟ್ಟದಲ್ಲಿ ಲಕ್ಸುರಿ ಬ್ರ್ಯಾಂಡ್​​ನೊಂದಿಗೆ ಕೊಲ್ಲಾಪುರಿ ಚಪ್ಪಲಿಗಳಿಗೆ ಇನ್ನಷ್ಟು ಬೇಡಿಕೆ ತರಲು ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಳಿಗೆಗಳ ವಿಸ್ತರಣೆಗೆ ಗುರಿ ಹಾಕಿಕೊಂಡಿದ್ದೇವೆ ಎಂದು ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಕೆ.ಎಂ.ವಸುಂಧರಾ ಹೇಳಿದ್ದಾರೆ.
ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ‘ಸಂವಾದ’ದಲ್ಲಿ ಸುವರ್ಣ ಸಂಭ್ರಮ ಹೊಸ್ತಿನಲ್ಲಿರುವ ಲಿಡ್ಕರ್​ನಿಂದ ಮುಂದಿನ ದಿನಗಳಲ್ಲಿ ಚರ್ಮ ಉತ್ಪನ್ನಗಳಿಗೆ ಇನ್ನಷ್ಟು ಜನಪ್ರಿಯತೆ ತರಲು ಕೈಗೊಳ್ಳಬೇಕಾದ ಯೋಜನೆಗಳು, ಕುಶಲಕರ್ವಿುಗಳ ಸಬಲೀಕರಣ ಮತ್ತು ಪ್ರಾಡಾ ಜೊತೆಗಿನ ಒಪ್ಪಂದ ಸೇರಿ ಇತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡಿದರು.
ಶೂಭಾಗ್ಯ ಲಿಡ್ಕರ್​ಗೆ ವಹಿಸಲಿ: ರಾಜ್ಯ ಸರ್ಕಾರವು ಶೂ ಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಶೂಗಳನ್ನು ಸರಬರಾಜು ಮಾಡುವ ಹಾಗೂ ಇನ್ನಿತರ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಿದರೆ ಲಿಡ್ಕರ್ ವಹಿವಾಟು 5 ಸಾವಿರ ಕೋಟಿ ರೂ. ಮುಟ್ಟಲಿದೆ. ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿರುವುದಾಗಿ ಡಾ. ಕೆ.ಎಂ. ವಸುಂಧರಾ ಹೇಳಿದರು.

500 ಕೋಟಿ ರೂ. ವಹಿವಾಟು ಗುರಿ

ಐದು ದಶಕಗಳ ಸುದೀರ್ಘ ಅವಧಿಯಲ್ಲಿ ನಂಬಿಕೆ, ವಿಶ್ವಾಸ ಗಳೊಂದಿಗೆ ಲಿಡ್ಕರ್ ಸಾಗಿ ಬಂದಿದೆ. ಇದು ಸರ್ಕಾರಿ ಬ್ರ್ಯಾಂಡ್​ ಆಗಿದ್ದು, ಸಾಮಾಜಿಕ ಜವಾಬ್ದಾರಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. 50 ವರ್ಷಗಳ ಆಚರಣೆಯ ಈ ಸಂದರ್ಭದಲ್ಲಿ ಉದ್ಯಮದ ಆಭಿವೃದ್ಧಿಗೆ ಪೂರಕ ಯೋಜನೆಗಳನ್ನು ರೂಪಿಸಲಾಗಿದೆ. ನಾನು ಅಧಿಕಾರ ವಹಿಸಿಕೊಂಡಾಗ ವಾರ್ಷಿಕ ವಹಿವಾಟು 9 ಕೋಟಿ ರೂ. ಇತ್ತು. ಇದೀಗ 35-40 ಕೋಟಿ ರೂ.ಗೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಆನ್​ಲೈನ್ ವೇದಿಕೆಯಲ್ಲೂ ಮಾರಾಟ ಮಾಡುವ ಮೂಲಕ ವಾರ್ಷಿಕ ವಹಿವಾಟು 500 ಕೋಟಿ ರೂ. ತಲುಪುವ ಗುರಿ ಹೊಂದಲಾಗಿದೆ ಎಂದು ಡಾ. ಕೆ.ಎಂ. ವಸುಂಧರಾ ಹೇಳಿದರು.

ಮೈಸೂರು ರಾಜವೈಭವದ ನೋಟ

ಬೆಳಗಾವಿ, ವಿಜಯಪುರ, ಬಾಗಲಕೋಟೆ ಮತ್ತು ಯಾದಗಿರಿಯಲ್ಲಿ ಕೊಲ್ಲಾಪುರಿ ಪಾದರಕ್ಷೆಗಳು ಹೆಚ್ಚು ಪ್ರಸಿದ್ಧಿ ಹೊಂದಿವೆ. ಈ ಹಿಂದೆ ಕೊಲ್ಲಾಪುರಿ ಹೆಸರಿನಲ್ಲಿ ಪ್ರಸಿದ್ಧವಾಗಿದ್ದ ಚಪ್ಪಲಿಗಳನ್ನು ಭೌಗೋಳಿಕವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ವಿಭಜನೆಗೊಂಡ ನಂತರದಲ್ಲಿ ಕರ್ನಾಟಕ ಪರಂಪರೆಗೆ ಪೂರಕವಾಗಿ ಗ್ರಾಹಕರಿಗೆ ಉತ್ಪನ್ನಗಳನ್ನು ಒದಗಿಸಬೇಕು ಎಂಬ ಕಾರಣಕ್ಕಾಗಿ ಮೈಸೂರು ಸಂಸ್ಥಾನದ ಪರಂಪರೆಯಿಂದ ಪ್ರೇರಿತವಾಗಿ ಅತ್ಯಂತ ಆಕರ್ಷಕ ‘ಮಹಾರಾಜ ಹಾಗೂ ಮಹಾರಾಣಿ’ ಪಾದರಕ್ಷೆಗಳನ್ನು ಲಿಡ್ಕರ್ ಮಾರುಕಟ್ಟೆಗೆ ಪರಿಚಯಿಸಿತು. ಕರಕುಶಲತೆಯಿಂದ ಕೂಡಿರುವ ಈ ಚಪ್ಪಲಿಗಳು ಪಾರಂಪರಿಕ ಶೈಲಿಯಲ್ಲಿ ರಾಜವೈಭವದ ನೋಟವನ್ನು ಹೊಂದಿವೆ. ಇವುಗಳ ಬೆಲೆ 3 ಸಾವಿರ ರೂ.ಇರಲಿದೆ. ಈ ವಿಶಿಷ್ಟ ವಿನ್ಯಾಸದ ಚಪ್ಪಲಿಗಳಿಗೆ ಸ್ಥಳೀಯವಾಗಿ ಮಾತ್ರವಲ್ಲದೆ ದೇಶ-ವಿದೇಶಗಳಿಂದಲೂ ಬೇಡಿಕೆ ಬಂದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಲಾ ಲೋಕದಲ್ಲಿ ಈ ಪಾದರಕ್ಷೆಗಳು ದೊರೆಯುತ್ತಿವೆ ಎಂದು ಲಿಡ್ಕರ್ ಎಂಡಿ ಮಾಹಿತಿ ನೀಡಿದರು.

ಅಂತಾರಾಷ್ಟ್ರೀಯ ಮಟ್ಟಕ್ಕೆ ಲಿಡ್ಕರ್

·* ಕರ್ನಾಟಕದ ಲಿಡ್ಕರ್ ಸಹಯೋಗದೊಂದಿಗೆ ಪ್ರಾಡಾದಿಂದ ಉತ್ಪನ್ನ ಅಭಿವೃದ್ಧಿ

* ಪಾರಂಪರಿಕ ಸಾಂಪ್ರದಾಯಿಕವಾಗಿ ಕೊಲ್ಲಾಪುರಿ ಚಪ್ಪಲಿಗಳಿಂದ ಪ್ರೇರಿತ ವಿನ್ಯಾಸದಲ್ಲಿ ಇಟಲಿಯ ಪ್ರಾಡಾದಿಂದ ತಯಾರಿಸಿ ಮಾರಾಟ

* ಕೊಲ್ಲಾಪುರಿ ಚಪ್ಪಲಿಗಳು, ಭಾರತೀಯ ಚರ್ಮ ಉದ್ಯಮ, ಪರಂಪರೆ ರಕ್ಷಣೆ, ಉತ್ತೇಜನ ಮತ್ತು ಅಭಿವೃದ್ಧಿಗೆ ಒತ್ತು

* ಕರ್ನಾಟಕದ ಕುಶಲಕರ್ವಿುಗಳಿಗೆ ತರಬೇತಿ ನೀಡಲಿರುವ ಪ್ರಾಡಾ

* 18ರಿಂದ 45 ವರ್ಷದ ಆಯ್ದ 180 ಕುಶಲಕರ್ವಿುಗಳಿಗೆ ತರಬೇತಿ

* ಕರ್ನಾಟಕದ ಚರ್ಮ ಮತ್ತು ಫ್ಯಾಷನ್ ತಂತ್ರಜ್ಞಾನ ಸಂಸ್ಥೆ (ಕಿಲ್ಟ್) ಹಾಗೂ ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ (ಎನ್​ಐಎಫ್​ಟಿ) ಸಹಭಾಗಿತ್ವದಲ್ಲಿ ತರಬೇತಿ

* ತರಬೇತಿಯಲ್ಲಿ ಚರ್ಮ ಉತ್ಪನ್ನಗಳ ತಯಾರಿಕೆಯಲ್ಲಿನ ವಿನ್ಯಾಸ, ಡಿಜಿಟಲ್ ಕೌಶಲ, ಉತ್ಪನ್ನ ತಯಾರಿಕೆಯಿಂದ ಮಾರುಕಟ್ಟೆ ಸಿದ್ಧತೆವರೆಗಿನ ಮಾರ್ಗದರ್ಶನ

* ಕೌಶಲ ಉನ್ನತೀಕರಣ ಯೋಜನೆಗಾಗಿ ಚರ್ಮ ಕುಶಲಕರ್ವಿುಗಳಿಗೆ ತರಬೇತಿ

* ಸ್ವಾವಲಂಬಿ/ಸಂಚಾರಿ ಮಾರಾಟ ಮಳಿಗೆ ಯೋಜನೆಯಡಿ 5 ಲಕ್ಷ ರೂ.ವರೆಗೆ ಸಹಾಯಧನ

* ಮಹಿಳಾ ಕುಶಲಕರ್ವಿುಗಳಿಗೆ ಕಾಯಕಸ್ಪೂರ್ತಿ ಯೋಜನೆ

* ರಸ್ತೆ ಬದಿ ಕಾಯಕ ನಿರ್ವಹಿಸುತ್ತಿರುವ ಕುಶಲಕರ್ವಿುಗಳಿಗೆ ಪಾದುಕೆ ಕುಟೀರ ನಿರ್ಮಾಣ

* ಚರ್ಮಕಾರರ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ನೇರ ಸಾಲ ಮತ್ತು ಮಾರುಕಟ್ಟೆ ಸಹಾಯ ಯೋಜನೆ

* ಚರ್ಮ ಕುಶಲಕರ್ವಿುಗಳಿಗೆ ವಾಸಕ್ಕೆ ಮತ್ತು ಪಾರಂಪರಿಕ ಉದ್ಯೋಗ ಮುಂದುವರಿಸಲು ವಸತಿ ನಿರ್ವಣಕ್ಕೆ ಧನಸಹಾಯ

* shoplidkar.com ನಲ್ಲಿ ಉತ್ಪನ್ನಗಳು ಲಭ್ಯ

ಟ್ಯಾನರಿಗಳ ಸ್ಥಗಿತ ಉದ್ಯಮಕ್ಕೆ ಹೊಡೆತ

ಚರ್ಮ ಸಂಸ್ಕರಣೆ ಸಂದರ್ಭದಲ್ಲಿ ಹೊರಹೊಮ್ಮುವ ವಿಷಕಾರಿ ತ್ಯಾಜ್ಯ ನೀರು ಮತ್ತು ಘನತ್ಯಾಜ್ಯಗಳಿಂದ ಪರಿಸರಕ್ಕೆ ಮಾರಕ ಎಂಬ ಕಾರಣದಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯದ ಎಲ್ಲ ಟ್ಯಾನರಿಗಳನ್ನು (ಚರ್ಮ ಸಂಸ್ಕರಣಾ ಘಟಕಗಳು) ಮುಚ್ಚಿಸಿತು. ಆಗ ಸ್ಥಳೀಯವಾಗಿ ಕಚ್ಚಾ ವಸ್ತುಗಳು ಲಭ್ಯವಾಗದೆ, ಹೊರಗಿನಿಂದ ಚರ್ಮ ಆಮದು ಮಾಡಿಕೊಳ್ಳಬೇಕಾಯಿತು. ಇದರಿಂದ ಉದ್ಯಮಕ್ಕೆ ತೀವ್ರ ಹೊಡೆತ ಬಿದ್ದಿತು. ಪರಿಣಾಮ 2009-10ರಲ್ಲಿ ಲಿಡ್ಕರ್ ಅನ್ನು ಮುಚ್ಚುವ ನಿರ್ಧಾರಕ್ಕೆ ಸರ್ಕಾರ ಬಂದಿತ್ತು. ಆದರೆ, ಕೆಲ ಹಿರಿಯ ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳ ಮುತುವರ್ಜಿಯೊಂದಿಗೆ ಚಮೋದ್ಯಮವನ್ನು ನಂಬಿ ಬದುಕುತ್ತಿರುವ ಕುಶಲಕರ್ವಿುಗಳ ಸಮುದಾಯ ಆಧಾರಿತ ಕುಲಕಸುಬನ್ನು ಉಳಿಸುವ ಮತ್ತು ಪರಂಪರೆ, ಸಂಸ್ಕೃತಿಯನ್ನು ಮುಂದುವರಿಸುವ ನಿರ್ಧಾರದೊಂದಿಗೆ ಲಿಡ್ಕರ್​ಗೆ ಹೊಸ ರೂಪ ನೀಡಲಾಯಿತು ಎಂದು ಡಾ.ಕೆ.ಎಂ. ವಸುಂಧರಾ ಹೇಳಿದರು.

ಜಾಗತಿಕ ಮಟ್ಟಕ್ಕೆ ಕೊಲ್ಹಾಪುರಿ ಪಾದರಕ್ಷೆ

ಜಿಯಾಗ್ರಫಿಕಲ್ ಇಂಡಿಕೇಷನ್ (ಜಿಐ) ಟ್ಯಾಗ್ ಹೊಂದಿರುವ ಕೊಲ್ಹಾಪುರಿ ಪಾದರಕ್ಷೆ ಬ್ರಾ್ಯಂಡ್ ಹೆಚ್ಚಿಸಲು ಇಟಲಿ ಮೂಲದ ಖ್ಯಾತ ಫ್ಯಾಷನ್ ಕಂಪನಿಯಾದ ‘ಪ್ರಾಡಾ’ ಜತೆ ಲಿಡ್ಕರ್ ಒಪ್ಪಂದ ಮಾಡಿಕೊಂಡಿದೆ. ಕೊಲ್ಹಾಪುರಿ ಪಾದರಕ್ಷೆ ತಯಾರಿಕೆಗೆ ನಿರ್ದಿಷ್ಟ ತಾಂತ್ರಿಕ ಕೌಶಲ ಪಡೆಯಲು ಆಗ್ರಾದಲ್ಲಿ ವಿಶೇಷ ತರಬೇತಿ ನೀಡಲಾಗಿದೆ. ‘ಪ್ರಾಡಾ’ ಕಂಪನಿಯ ತಾಂತ್ರಿಕ ನಿಪುಣರು, ಮುಖ್ಯ ವಿನ್ಯಾಸಕಾರರ ತಂಡ ತರಬೇತಿಯಲ್ಲಿ ಕೆಲಸ ಹೇಳಿಕೊಡಲಿದೆ. ಇದರಿಂದ ಪರಂಪರಾಗತವಾಗಿ ಕೊಲ್ಹಾಪುರಿ ಪಾದರಕ್ಷೆಗಳ ತಯಾರಿಕೆಗೆ ಹೆಸರುವಾಸಿಯಾದ ಕರ್ನಾಟಕದ ಕುಶಲಕರ್ವಿುಗಳಿಗೆ ಕೌಶಲವನ್ನು ಅಂತಾರಾಷ್ಟ್ರೀಯ ಗುಣಮಟ್ಟದೊಂದಿಗೆ ಸಂಯೋಜಿಸಲು ಅನುಕೂಲವಾಗಲಿದೆ ಎಂದು ಡಾ. ಕೆ.ಎಂ. ವಸುಂಧರಾ ತಿಳಿಸಿದ್ದಾರೆ.

ಡಾ. ಮಹದೇವಪ್ಪ ಮಾರ್ಗದರ್ಶನ

ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಪ್ರತಿವರ್ಷ ಹೆಚ್ಚಿನ ಅನುದಾನ ನೀಡುವ ಮೂಲಕ ಲಿಡ್ಕರ್​ಗೆ ಒತ್ತು ನೀಡುತ್ತಿದ್ದಾರೆ. ಆನ್​ಲೈನ್ ಸೇರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಲ್ಹಾಪುರಿ ಪಾದರಕ್ಷೆಗಳನ್ನು ಜನಪ್ರಿಯಗೊಳಿಸಲು ಮಾರ್ಗದರ್ಶನ ಮಾಡುತ್ತಿದ್ದಾರೆ. ಲಿಡ್ಕರ್ ಬ್ರಾ್ಯಂಡ್ ಮತ್ತು ಡಾ. ಬಾಬು ಜಗಜೀವನರಾಂ ನಿಗಮದ ಹಲವು ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ನಿಗಮದ ಅಧ್ಯಕ್ಷರಾದ ಮುಂಡರಗಿ ನಾಗರಾಜ, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಡಿ. ರಂದೀಪ್ ಹಾಗೂ ಇಲಾಖೆಯ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್ ಅವರ ಸಹಕಾರ ಸ್ಮರಣೀಯ ಎಂದು ಡಾ.ಕೆ.ಎಂ. ವಸುಂಧರಾ ತಿಳಿಸಿದರು.

ಜಿಲ್ಲೆಗಳಲ್ಲಿ ಮಳಿಗೆ ತೆರೆಯಲು ನಿರ್ಧಾರ

ಬೆಂಗಳೂರು ನಗರ, ಬೆಂ. ದಕ್ಷಿಣ, ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ಧಾರವಾಡ, ಮೈಸೂರು, ದಾವಣಗೆರೆ ಸೇರಿ ರಾಜ್ಯದಲ್ಲಿ 15 ಲಿಡ್ಕರ್ ಮಳಿಗೆಗಳಲ್ಲಿ ಕೊಲ್ಹಾಪುರಿ ಪಾದರಕ್ಷೆ ಇತ್ಯಾದಿ ಚರ್ಮದ ಉತ್ಪನ್ನಗಳ ಮಾರಾಟ ಮಾಡಲಾಗುತ್ತಿದೆ. ಪ್ರತಿ ಮಳಿಗೆಯಿಂದ ನಿತ್ಯ 20 ಸಾವಿರ ರೂ.ಗಿಂತ ಅಧಿಕ ವಹಿವಾಟು ನಡೆಯುತ್ತಿದೆ. ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳ ಸ್ಪರ್ಧೆ ಹಿನ್ನೆಲೆಯಲ್ಲಿ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಂಡು ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲೂ ಮಳಿಗೆಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಜತೆಗೆ, ಸಿಬ್ಬಂದಿ ಕೊರತೆ ಇರುವುದರಿಂದ ಆನ್​ಲೈನ್​ನಲ್ಲಿ ಮಾರಾಟ ವ್ಯವಸ್ಥೆ ಬಲಪಡಿಸಲು ನಿರ್ಧರಿಸಲಾಗಿದೆ. ಆನ್​ಲೈನ್​ನಲ್ಲಿ ಉತ್ಪನ್ನಗಳನ್ನು ಮಾರಾಟ ಸಂಬಂಧ ಭಾರತೀಯ ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ವ್ಯವಸ್ಥಾಪಕ ನಿರ್ದೇಶಕಿ ತಿಳಿಸಿದರು.

1976ರಲ್ಲಿ ನಿಗಮ ಸ್ಥಾಪನೆ

ಚರ್ವೇದ್ಯಮ ಬೆಳವಣಿಗೆ ಮತ್ತು ಚರ್ಮ ಕುಶಲಕರ್ವಿುಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಉತ್ತಮಗೊಳಿಸುವ ಉದ್ದೇಶದಿಂದ ಅಂದಿನ ಸಿಎಂ ಆಗಿದ್ದ ದೇವರಾಜ ಅರಸು ಅವರು 1976ರಲ್ಲಿ ‘ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಸ್ಥಾಪಿಸಿದರು. ನಿಗಮವು ಲಿಡ್ಕರ್ ಬ್ರಾ್ಯಂಡ್​ನಡಿ ಶೂ, ಪಾದರಕ್ಷೆ, ಮೆಡಿಕೇರ್ ಚಪ್ಪಲಿ, ಬ್ಯಾಗ್, ಪರ್ಸ್, ಪಾಸ್​ಪೋರ್ಟ್ ವ್ಯಾಲೆಟ್, ಬೆಲ್ಟ್, ಲ್ಯಾಪ್​ಟಾಪ್ ಬ್ಯಾಗ್ ಮತ್ತು ಮೊಬೈಲ್ ಪೌಚ್ ಸೇರಿ ಇತ್ಯಾದಿ ಚರ್ಮದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ರಾಜ್ಯದಲ್ಲಿ ಚರ್ಮಕುಶಲಕರ್ವಿುಗಳು ಇಂದಿಗೂ ಚರ್ಮದ ವಸ್ತುಗಳ ತಯಾರಿಕೆಗೆ ಹೆಸರುವಾಸಿಯಾಗಿದ್ದಾರೆ. 2010ರ ಮೇನಲ್ಲಿ ನಿಗಮದ ಹೆಸರನ್ನು ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಎಂದು ಮರುನಾಮಕರಣ ಮಾಡಲಾಯಿತು. 2011ರ ಡಿ.12ರಿಂದ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಂದಿನಿಂದ ಸಮಾಜ ಕಲ್ಯಾಣ ಇಲಾಖೆ, ನಿಗಮಕ್ಕೆ ನೀಡುತ್ತಿರುವ ಅನುದಾನ ಬಳಸಿಕೊಂಡು ಕೆಲವೊಂದು ಹೊಸ ಯೋಜನೆ ರೂಪಿಸಿ ಅನುಷ್ಠಾನಗೊಳಿಸುತ್ತಿದ್ದೇವೆ. 2023ರ ಡಿ.6ರಿಂದ ನಟ ಡಾಲಿ ಧನಂಜಯ್ ‘ಲಿಡ್ಕರ್ ಬ್ರಾ್ಯಂಡ್’ ಉತ್ಪನ್ನಗಳಿಗೆ ರಾಯಭಾರಿ ಆಗಿದ್ದಾರೆ ಎಂದು ಡಾ.ಕೆ.ಎಂ. ವಸುಂಧರಾ ಮಾಹಿತಿ ನೀಡಿದರು.