ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ
- ಸೇವಾ ಶುಲ್ಕ ಗ್ರಾಹಕರ ಐಚ್ಚಿಕ ವಿಚಾರ, ನಿಯಮ ಉಲ್ಲಂಘಿಸಿದ್ರೆ ಕ್ರಮ
- ರೆಸ್ಟೋರೆಂಟ್‌ಗಳ ಮೇಲೆ ಸ್ವಯಂ ಪ್ರೇರಿತ ಕ್ರಮಕ್ಕಿಳಿದ CCPA
- ಕ್ರಮಕ್ಕೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸೂಚನೆ
- ಸೇವಾಶುಲ್ಕ ಗ್ರಾಹಕರ ಪ್ರೀತಿ; ಕಡ್ಡಾಯವಲ್ಲ ಎಂದ ಸಚಿವ ಜೋಶಿ
ನವದೆಹಲಿ: ಸೇವಾ ಶುಲ್ಕ ಗ್ರಾಹಕರ ಐಚ್ಚಿಕ ವಿಚಾರವಾಗಿದ್ದು, ನಿಯಮ ಉಲ್ಲಂಘಿಸಿ ಸ್ವಯಂ ಸೇವಾ ಶುಲ್ಕ ವಿಧಿಸುತ್ತಿರುವ ಹೋಟೆಲ್, ಬಾರ್, ರೆಸ್ಟೋರೆಂಟ್, ಕ್ಯಾಂಟೀನ್‌ಗಳ ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ(CCPA) ಸಮರ ಸಾರಿದ್ದು, ಒಟ್ಟು 41 ರೆಸ್ಟೋರೆಂಟ್‌ಗಳಿಗೆ ದಂಡ ವಿಧಿಸಿದೆ.
ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ಬಂದ ದೂರುಗಳ ಆಧಾರದ ಮೇಲೆ ಗ್ರಾಹಕರಿಗೆ ಬಿಲ್‌ನಲ್ಲಿ ಪೂರ್ವನಿಯೋಜಿತವಾಗಿ ಸೇವಾ ಶುಲ್ಕ ವಿಧಿಸುತ್ತಿದ್ದ ಬಗ್ಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿಯವರ ಸೂಚನೆ ಮೇರೆಗೆ CCPA ಈ ಕ್ರಮ ಕೈಗೊಂಡಿದೆ. ಗ್ರಾಹಕರಿಗೆ ಪೂರ್ವನಿಯೋಜಿತವಾಗಿ ಸೇವಾ ಶುಲ್ಕ ವಿಧಿಸುತ್ತಿದ್ದ ಚಾಯೋಸ್, ಬಾರ್ಬೆಕ್ಯೂ ನೇಷನ್ಸ್, ಎಲ್ಓಪೆರಾ, ಫ್ರೆಂಚ್ ಬೇಕರಿ ಪ್ರವೈಟ್ ಲಿಮಿಟೆಡ್ ಸೇರಿ 41 ರೆಸ್ಟೋರೆಂಟ್‌ಗಳ ವಿರುದ್ಧ CCPA ಕ್ರಮ ಕೈಗೊಂಡಿದೆ.
ಸೇವಾ ಶುಲ್ಕ ಗ್ರಾಹಕರಿಗೆ ಐಚ್ಛಿಕವಾಗಿದ್ದು, ಕಡ್ಡಾಯವಲ್ಲ. ಗ್ರಾಹಕರೇ ಸ್ವಯಂಪ್ರೇರಿತವಾಗಿ ನೀಡಿದರೆ ಮಾತ್ರ ಸ್ವೀಕರಿಸತಕ್ಕದ್ದು ಎಂದು ಸಿಸಿಪಿಎ ಈ ಹಿಂದೆಯೇ ಆದೇಶಿಸಿದೆ. ಹಾಗಿದ್ದರೂ ನಿಯಮ ಉಲ್ಲಂಘಿಸಿ ಗ್ರಾಹಕರಿಗೆ ಕೊಡುವ ಬಿಲ್‌ನಲ್ಲಿ ಮೊದಲೇ ಸೇವಾ ಶುಲ್ಕ ಸೇರಿಸಿಯೇ ಕೊಡುತ್ತಿರುವುದು ಗಮನಕ್ಕೆ ಬಂದಿದ್ದು, ಯಾವುದೇ ಕಾರಣಕ್ಕೂ ಸ್ವಯಂ ಆಗಿ ಸೇವಾಶುಲ್ಕ ವಿಧಿಸುವಂತಿಲ್ಲ. ಇದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಪ್ರಾಧಿಕಾರ ಎಚ್ಚರಿಕೆ ನೀಡಿದೆ.
ಇನ್ನೂ ಈ ಕುರಿತು ಮಾತನಾಡಿರುವ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಸೇವಾಶುಲ್ಕ ಎನ್ನುವುದು ಅತ್ಯುತ್ತಮ ಸೇವೆಗೆ ಗ್ರಾಹಕರು ಪ್ರೀತಿಯಿಂದ ಕೊಡುವುದಾಗಿದೆ. ಅದನ್ನು ಒತ್ತಾಯದಿಂದ ಪಡೆಯುವುದು ಮತ್ತು ಪೂರ್ವನಿಯೋಜಿತವಾಗಿ ವಿಧಿಸುವುದನ್ನು ತರವಲ್ಲ. ಮತ್ತಿದನ್ನು ಸಹಿಸುವುದಿಲ್ಲ. ಹೋಟೆಲ್, ರೆಸ್ಟೋರೆಂಟ್, ಕ್ಯಾಂಟೀನ್ ನ್ಯಾಯಯುತ, ಪಾರದರ್ಶಕ ಮತ್ತು ಗ್ರಾಹಕ-ಸ್ನೇಹಿ ಪದ್ಧತಿಗಳನ್ನು ಅನುಸರಿಸಬೇಕು. ಗ್ರಾಹಕರ ಹಕ್ಕುಗಳ ಉಲ್ಲಂಘನೆ ಬದಲು ಗ್ರಾಹಕರ ಹಿತ ಕಾಯಬೇಕು ಎಂದಿದ್ದಾರೆ.