ಸಿಎಂ ಡಿ ಕೆ ಶಿವಕುಮಾರ್ ಜೊತೆ ಸಚಿವ ಸತೀಶ್ ಜಾರಕಿಹೊಳಿ  
ರಾಜ್ಯ

ಈಗಲೂ ಸಿದ್ದರಾಮಯ್ಯ ನಮ್ಮ ಕ್ಯಾಪ್ಟನ್​: 2028ಕ್ಕೂ ಡಿಕೆಶಿಯೇ ಸಿಎಂ ಆಗಲಿ: ಸಚಿವ ಸತೀಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ | Satish Jarkiholi

ಮೈಸೂರು: 2028ಕ್ಕೂ ನಾನೇ ಮುಖ್ಯಮಂತ್ರಿ ಎಂದು ಡಿ ಕೆ ಶಿವಕುಮಾರ್ ಅವರು ಹೇಳುತ್ತಿದ್ದು, ಅವರೇ ಸಿಎಂ ಆಗಲಿ. ಅವರಿಂದಲೇ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮೈಸೂರು: 2028ಕ್ಕೂ ನಾನೇ ಮುಖ್ಯಮಂತ್ರಿ ಎಂದು ಡಿ ಕೆ ಶಿವಕುಮಾರ್ ಅವರು ಹೇಳುತ್ತಿದ್ದು, ಅವರೇ ಸಿಎಂ ಆಗಲಿ. ಅವರಿಂದಲೇ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ನನಗೆ ಅವಕಾಶ ಸಿಕ್ಕರೆ 2028ಕ್ಕೆ ಸಿಎಂ ಆಗುತ್ತೇನೆ ಎಂದು ಈ ಹಿಂದೆ ಹೇಳಿದ್ದೆ. ಆದರೆ, ಈಗ ಡಿ ಕೆ ಶಿವಕುಮಾರ್ ಅವರೇ ಮುಂದೆಯೂ ನಾನೇ ಸಿಎಂ ಎಂದು ಹೇಳುತ್ತಿದ್ದಾರೆ. ಅದು ನನಗೆ ಸಂತೋಷದ ವಿಷಯ, ಅವರೇ ಸಿಎಂ ಆಗಲಿ. ನನಗೆ ಇನ್ನೂ ವಯಸ್ಸಿದೆ, ನಾನು ಕಾಯುತ್ತೇನೆ ಎಂದರು.

ಇದೇ ವೇಳೆ ನೀಲಿ ಶಾಲಿನ ಬಗ್ಗೆ ಮಾತನಾಡಿದ ಅವರು, ನೀಲಿ ಶಾಲಿನ ಶಕ್ತಿ ಇಡೀ ದೇಶಕ್ಕೆ ಗೊತ್ತಿದೆ. ಅದರ ಬಗ್ಗೆ ನಾನು ಹೆಚ್ಚು ಹೇಳುವ ಅಗತ್ಯವಿಲ್ಲ. ಇದರ ಬಗ್ಗೆ ಮಾತನಾಡಿದವರಿಗೆ ಹೋರಾಟಗಾರರೇ ಉತ್ತರ ನೀಡುತ್ತಿದ್ದಾರೆ ಎಂದರು.

ಇದನ್ನೂ ಓದಿ:ಸಿಇಸಿಗೆ ಮುಗಿಯದ ಸಂಕಷ್ಟ!...ದೆಹಲಿ ಬೀದಿಯಲ್ಲಿ ಜ್ಞಾನೇಶ್ ಹಟಾವೋ ಪೋಸ್ಟರ್, ಕೋರ್ಟ್‌ಗೂ ಅರ್ಜಿ | Gyanesh Hatao Posters

ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ಆರ್ಥಿಕ ಇಲಾಖೆಯು ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದು ಎಲ್ಲಿಯೂ ಹೇಳಿಲ್ಲ. ಬಜೆಟ್‌ನಲ್ಲಿ ಏನು ಘೋಷಣೆ ಮಾಡಿದ್ದೇವೋ ಅಷ್ಟಕ್ಕೆ ಮಾತ್ರ ನಮ್ಮ ಬಳಿ ಹಣವಿದೆ ಎಂದು ಹೇಳಿದೆ. ಹೊಸ ಘೋಷಣೆಗಳಿಗೆ ಹಣ ಹೊಂದಿಸುವುದು ಕಷ್ಟ ಹಾಗೂ ಹೊಸ ಘೋಷಣೆಗಳನ್ನು ಮಾಡುವಾಗ ಯೋಚಿಸಿ ಮಾಡಿ ಎಂದು ಸೂಚಿಸಿದೆ. ಇದನ್ನು ಎಲ್ಲಾ ಸರ್ಕಾರಗಳಿಗೂ ಆರ್ಥಿಕ ಇಲಾಖೆ ಹೇಳುತ್ತಿರುತ್ತದೆ ಎಂದು ಸ್ಪಷ್ಟಪಡಿಸಿದರು.

ಮುಂದುವರಿದು ಮಾತನಾಡುತ್ತಾ, ಆರ್ಥಿಕ ಇಲಾಖೆಯ ಪತ್ರದ ಅರ್ಥ ಸರ್ಕಾರ ದಿವಾಳಿಯಾಗಿದೆ ಎಂದಲ್ಲ. ಕೆಲವೊಂದು ಇಲಾಖೆಗಳಲ್ಲಿ ವೆಚ್ಚವಾಗದೆ ಉಳಿಯುವ ಹಣವನ್ನು ಹೊಸ ಘೋಷಣೆಗಳಿಗೆ ಬಳಸಿಕೊಳ್ಳುತ್ತೇವೆ. ಇಲಾಖೆಯ ಸೂಚನೆಯನ್ನು ನಾವು ಗಮನಿಸುತ್ತೇವೆ ಎಂದರು.

ಯಾವುದೇ ಕ್ಷಣದಲ್ಲಿ ಇಡಿಯಿಂದ ನೋಟಿಸ್!

ಯಾವುದೇ ಕ್ಷಣದಲ್ಲಿ ನನಗೆ ಇಡಿಯಿಂದ ನೋಟಿಸ್ ಬರಬಹುದು, ಬಂದಾಗ ಹೋಗಿ ಸೂಕ್ತ ಉತ್ತರ ನೀಡುತ್ತೇನೆ. ವಿದೇಶದಲ್ಲಿ ನಾವು ಹಣ ಹೂಡಿಕೆ ಮಾಡಿದ್ದೇವೋ ಇಲ್ಲವೋ ಎಂಬುದನ್ನು ಮಾಧ್ಯಮಗಳ ಮುಂದೆ ಮಾತನಾಡುವುದಿಲ್ಲ, ಇಡಿ ಅಧಿಕೃತ ತನಿಖೆ ನಡೆಸಿದಾಗ ಅವರ ಮುಂದೆಯೇ ಉತ್ತರ ಕೊಡುತ್ತೇನೆ ಎಂದರು.

ಯಾವುದೋ ಕಮಿಷನ್ ವಿಚಾರಕ್ಕೆ ದಾಳಿಯಾಗಿದೆಯೋ ಅಥವಾ ಬೇರೆ ವಿಚಾರಕ್ಕೋ ಎಂಬುದನ್ನು ಇಡಿಗೆ ತಿಳಿಸುತ್ತೇನೆ. ಇದು ಸಂಪೂರ್ಣವಾಗಿ ರಾಜಕೀಯಪ್ರೇರಿತ ದಾಳಿ. ಕಳೆದ 14 ವರ್ಷಗಳಿಂದ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳ ನಾಯಕರ ಮೇಲೆ ಒಂದೇ ಒಂದು ಇಡಿ ದಾಳಿಯೂ ಆಗಿಲ್ಲ. ನನ್ನ ಮೇಲೆ ಯಾರೇ ದೂರು ಕೊಟ್ಟಿರಲಿ, ಅದು ವಿಷಯವಲ್ಲ. ಯಾರು ದೂರು ಕೊಟ್ಟಿದ್ದಾರೆ ಮತ್ತು ಅದರ ಹಿನ್ನೆಲೆ ಏನು ಎಂಬುದನ್ನು ಗಮನಿಸುತ್ತಿದ್ದೇನೆ, ಎಲ್ಲವೂ ನನಗೆ ಗೊತ್ತಾಗುತ್ತಿದೆ. ಈ ದಾಳಿಯಿಂದ ನಾನೇನು ಮಾನಸಿಕವಾಗಿ ಕುಂದಿಲ್ಲ, ಎಲ್ಲವನ್ನೂ ರಾಜಕೀಯವಾಗಿಯೇ ಎದುರಿಸುತ್ತೇನೆ ಎಂದು ವಿರೋಧಿಗಳಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯ ಜೊತೆಗಿನ ಮುನಿಸಿನ ಬಗ್ಗೆ ಹೇಳಿದ್ದೇನು...?

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ತಮ್ಮ ನಡುವಿನ ಸಂಬಂಧ ಹಳಸಿವೆ ಎಂಬ ವದಂತಿಗಳನ್ನು ಅಲ್ಲಗೆಳೆದ ಸಚಿವರು, ಸಿದ್ದರಾಮಯ್ಯ ಆರ್ಮಿ ಛಿದ್ರವಾಗಿಲ್ಲ. ಈಗಲೂ ಅವರೇ ನಮಗೆ ಕ್ಯಾಪ್ಟನ್, ನಾನು ಅದರ ವೈಸ್ ಕ್ಯಾಪ್ಟನ್. ಇದರ ಬಗ್ಗೆ ಯಾರಿಗೆಯೂ ಅನುಮಾನ ಬೇಡ. ನಾನು ಮತ್ತು ಅವರು ಚೆನ್ನಾಗಿಯೇ ಇದ್ದೇವೆ. ನಾವು ಹಿಂದೆಯೂ ಪ್ರತಿ ಬಾರಿ ಭೇಟಿಯಾಗುತ್ತಿರಲಿಲ್ಲ, ಪದೇ ಪದೇ ಜೊತೆಯಲ್ಲಿ ಇರುತ್ತಿರಲಿಲ್ಲ. ಅಗತ್ಯವಿದ್ದಾಗ ಮಾತ್ರ ಭೇಟಿಯಾಗುತ್ತಿದ್ದೆವು, ಈಗಲೂ ಅಷ್ಟೆ ಎಂದರು.

ಇಡಿ ದಾಳಿಯ ನಂತರ ಯತೀಂದ್ರ ಸಿದ್ದರಾಮಯ್ಯ ನನ್ನನ್ನು ಭೇಟಿಯಾಗಿದ್ದರು. ಮನೆಯಲ್ಲಿ ಒಬ್ಬರು ಬಂದು ಸಾಂತ್ವನ ಹೇಳಿದರೆ ಸಾಕು. ಪ್ರತಿಯೊಂದಕ್ಕೂ ಮನೆಯಲ್ಲಿರುವ ಎಲ್ಲರೂ ಸಾಂತ್ವನ ಹೇಳಬೇಕೆಂದು ಬಯಸಬಾರದು. ಮದುವೆ ಅಥವಾ ಗೃಹಪ್ರವೇಶಕ್ಕೆ ಮನೆಯಿಂದ ಒಬ್ಬರು ಹೋಗುತ್ತಾರೆ, ಎಲ್ಲರೂ ಬರಬೇಕೆಂದು ನಿರೀಕ್ಷಿಸಲು ಸಾಧ್ಯವೇ..? ಮಾರ್ಮಿಕವಾಗಿ ಪ್ರಶ್ನಿಸಿದರು.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾವೇಶದ ಕುರಿತು ಮಾತನಾಡಿದ ಸತೀಶ್​ ಜಾರಕಿಹೊಳಿ, ಮೊನ್ನೆ ಬೆಂಗಳೂರಿನಲ್ಲಿ ನಡೆದಿದ್ದು ಅಹಿಂದ ಸಮಾವೇಶ ಅಲ್ಲ, ಅದು ಕೇವಲ ಹಿಂದುಳಿದವರ ಸಮಾವೇಶ. ಅದನ್ನು ಆಯೋಜನೆ ಮಾಡಿದವರು ನನ್ನನ್ನು ಕರೆದಿಲ್ಲ. ನನ್ನನ್ನು ಯಾಕೆ ಕರೆದಿಲ್ಲ ಎಂದು ಅವರನ್ನು ಕೇಳಲು ಆಗುತ್ತದೆಯೇ..? ಆದರೆ, ಅಹಿಂದ ಸಂಘಟನೆ ಈಗಲೂ ಅತ್ಯಂತ ಭದ್ರವಾಗಿದೆ ಎಂದು ಸ್ಪಷ್ಟಪಡಿಸಿದರು.