ತುಮಕೂರು ವಿವಿ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ 
ರಾಜ್ಯ

ತುಮಕೂರು ವಿವಿ ಜ್ಞಾನಸಿರಿ ಕ್ಯಾಂಪಸ್ ಬಳಿ ರೋಚಕ ಘಟನೆ: ನಾಯಿಗೆ ಹೆದರಿ ತೆಂಗಿನ ಮರವೇರಿ ಕುಳಿತ ಚಿರತೆ..! Leopard

ತಿಮ್ಮಸಂದ್ರ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಅನಿರೀಕ್ಷಿತವಾಗಿ ಮನೆಯೊಂದಕ್ಕೆ ನುಗ್ಗಿದ ಈ ಚಿರತೆ, ಅಲ್ಲಿ ಕೋಳಿಯೊಂದನ್ನು ಬೇಟೆಯಾಡಿ ತಿಂದು ಅಡಗಿಕೊಳ್ಳಲು ಯತ್ನಿಸಿದೆ. ಅದೇ ಸಮಯದಲ್ಲಿ ಅಲ್ಲಿಯೇ ಇದ್ದ ನಾಯಿಗಳು ಚಿರತೆಯನ್ನು ಕಂಡು ಜೋರಾಗಿ ಬೊಗಳಲು ಆರಂಭಿಸಿವೆ. ಇದರಿಂದ ಹೆದರಿದ ಚಿರತೆ, ದಿಕ್ಕುಗಾಣದೆ ತಕ್ಷಣವೇ ಸಮೀಪದಲ್ಲಿದ್ದ ಎತ್ತರದ ತೆಂಗಿನ ಮರವನ್ನು ಏರಿ ಅದರ ತುತ್ತತುದಿಯಲ್ಲಿ ಆಶ್ರಯ ಪಡೆದುಕೊಂಡಿದೆ.

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಜ್ಞಾನಸಿರಿ ಕ್ಯಾಂಪಸ್​ನಲ್ಲಿ ರೋಚಕ ಘಟನೆಯೊಂದು ನಡೆದಿದೆ. ಗುರುವಾರ ಬೆಳಗಿನ ಜಾವ ಜನವಸತಿ ಪ್ರದೇಶಕ್ಕೆ ನುಗ್ಗಿದ ಚಿರತೆಯೊಂದು ( Leopard ), ನಾಯಿಗಳ ಆರ್ಭಟಕ್ಕೆ ಬೆಚ್ಚಿಬಿದ್ದು ಪ್ರಾಣಭಯದಿಂದ ನೇರವಾಗಿ ತೆಂಗಿನ ಮರವನ್ನೇ ಏರಿ ಕುಳಿತಿರುವ ಅಪರೂಪದ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

ತಿಮ್ಮಸಂದ್ರ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಅನಿರೀಕ್ಷಿತವಾಗಿ ಮನೆಯೊಂದಕ್ಕೆ ನುಗ್ಗಿದ ಈ ಚಿರತೆ, ಅಲ್ಲಿ ಕೋಳಿಯೊಂದನ್ನು ಬೇಟೆಯಾಡಿ ತಿಂದು ಅಡಗಿಕೊಳ್ಳಲು ಯತ್ನಿಸಿದೆ. ಅದೇ ಸಮಯದಲ್ಲಿ ಅಲ್ಲಿಯೇ ಇದ್ದ ನಾಯಿಗಳು ಚಿರತೆಯನ್ನು ಕಂಡು ಜೋರಾಗಿ ಬೊಗಳಲು ಆರಂಭಿಸಿವೆ. ಇದರಿಂದ ಹೆದರಿದ ಚಿರತೆ, ದಿಕ್ಕುಗಾಣದೆ ತಕ್ಷಣವೇ ಸಮೀಪದಲ್ಲಿದ್ದ ಎತ್ತರದ ತೆಂಗಿನ ಮರವನ್ನು ಏರಿ ಅದರ ತುತ್ತತುದಿಯಲ್ಲಿ ಆಶ್ರಯ ಪಡೆದುಕೊಂಡಿದೆ.

ಬೆಳಗ್ಗೆ ಎದ್ದು ಹೊರಬಂದ ಗ್ರಾಮಸ್ಥರಿಗೆ ತೆಂಗಿನ ಮರದ ಮೇಲಿದ್ದ ಚಿರತೆ ಕಣ್ಣಿಗೆಬಿದ್ದು ಬೆಚ್ಚಿಬೆಳಿದಿದ್ದಾರೆ. ಕೂಡಲೇ ಎಚ್ಚೆತ್ತ ಗ್ರಾಮಸ್ಥರು ಅರಣ್ಯ ಇಲಾಖೆಗೆ ತುರ್ತು ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿಬಂದ ಅರಣ್ಯ ಸಿಬ್ಬಂದಿ ಚಿರತೆಯನ್ನು ಸೆರೆಹಿಡಿಯಲು ಭರ್ಜರಿ ಕಾರ್ಯಾಚರಣೆಗೆ ಮುಂದಾದರು. ಆದರೆ, ಸಿಬ್ಬಂದಿಯ ಕಣ್ಣುತಪ್ಪಿಸುವಲ್ಲಿ ಚಾಕಚಕ್ಯತೆ ಮೆರೆದ ಚಿರತೆ, ಅಂತಿಮವಾಗಿ ಅರಣ್ಯ ಇಲಾಖೆಯವರಿಗೂ ಚಳ್ಳೆಹಣ್ಣು ತಿನ್ನಿಸಿ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಪರಾರಿಯಾಗಿದೆ.

ಚಿರತೆಯ ಓಡಾಟದಿಂದ ಕಂಗೆಟ್ಟಿರುವ ಗ್ರಾಮಸ್ಥರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಕೂಡಲೇ ಚಿರತೆಯನ್ನು ಬೋನಿನಲ್ಲಿ ಸೆರೆಹಿಡಿಯುವಂತೆ ತೀವ್ರ ಒತ್ತಾಯಿಸಿದ್ದಾರೆ. ಗ್ರಾಮಸ್ಥರ ಈ ಬೇಡಿಕೆಗೆ ಸ್ಪಂದಿಸಿರುವ ಅರಣ್ಯ ಇಲಾಖೆಯು, ಚಿರತೆಯನ್ನು ಮರುಸೆರೆ ಹಿಡಿಯಲು ಸೂಕ್ತ ಸ್ಥಳದಲ್ಲಿ ಬೋನು ಅಳವಡಿಸಿದ್ದು, ಸುತ್ತಮುತ್ತಲಿನ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.