ಗದಗ ಲಕ್ಕುಂಡಿಯಲ್ಲಿ ನಿಧಿಗಾಗಿ ಶೋಧ  
ರಾಜ್ಯ

ಲಕ್ಕುಂಡಿ ನಿಧಿ ರಹಸ್ಯ: 3ನೇ ದಿನದ ಉತ್ಖನನ, ಗೋಡೆಯಲ್ಲಿ ಶಿವಲಿಂಗ ಪತ್ತೆ! ಯಾವ ಕಾಲದ್ದಿದು ಅನ್ನೋದೇ ಕುತೂಹಲ

ಪ್ರಮುಖ ಮುಖ್ಯಾಂಶಗಳು

  • ಗದಗ ಲಕ್ಕುಂಡಿಯಲ್ಲಿ ಪುರಾತನ ಕಾಲದ ಚಿನ್ನಾಭರಣಗಳು ಪತ್ತೆ
  • ಮನೆ ಕಟ್ಟಿಸಲು ಅಡಿಪಾಯ ತೋಡುವಾಗ ತಂಬಿಗೆ ಪ್ರತ್ಯಕ್ಷ
  • 3ನೇ ದಿನದ ಉತ್ಖನನದ ವೇಳೆ ಗೋಡೆಯಲ್ಲಿ ಶಿವಲಿಂಗ ಪತ್ತೆ
  • ಇದು ಯಾವ ಕಾಲದ್ದು? ಹಿತ್ತಾಳೆ ಅಥವಾ ಕಂಚಿನದ್ದಾ? ಎಂಬ ಕುತೂಹಲ
ಗದಗ: ಜ.10ರಂದು ಜಿಲ್ಲೆಯ ಲಕ್ಕುಂಡಿಯಲ್ಲಿ ಮನೆ ನಿರ್ಮಾಣಕ್ಕೆಂದು ಅಡಿಪಾಯ ತೋಡುವಾಗ ತಂಬಿಗೆಯೊಂದು ಪತ್ತೆಯಾಗಿ, ಅದರಲ್ಲಿ ಮುತ್ತು, ಹವಳ, ಚಿನ್ನಾಭರಣ, ಖಡ್ಗ, ನೀಲಮಣಿ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳು ಸಿಕ್ಕಿದ್ದೇ ಇಂದಿನ ನಿಧಿ ಶೋಧಕ್ಕೆ ದಾರಿಯಾಗಿದೆ. ಪುರಾತತ್ವ ಇಲಾಖೆಯ ಅಧಿಕಾರಿಗಳು ಕೈಗೊಂಡಿರುವ ಶೋಧ ಕಾರ್ಯಾಚರಣೆಯ ಮೂರನೇ ದಿನದಂದು ಇದೀಗ ಶಿವಲಿಂಗ ಕಣ್ಣಿಗೆ ಬಿದ್ದಿದೆ.
ಆರಂಭದಲ್ಲಿ ನಿಧಿ ಸಿಕ್ಕ ಸ್ಥಳವನ್ನು ಜಿಲ್ಲಾಡಳಿತಕ್ಕೆ ಕುಟುಂಬ ತೋರಿಸಿದ್ದೇ ತಡ, ಅಂದಿನಿಂದ ಇಂದಿನವರೆಗೆ ಆ ಜಾಗದಲ್ಲಿ ಅಧಿಕಾರಿಗಳು ಬೀಡುಬಿಟ್ಟಿದ್ದು, ಲಕ್ಕುಂಡಿ ಗ್ರಾಮದಲ್ಲಿ ಇನ್ನಷ್ಟು ನಿಧಿ ಮತ್ತು ಪುರಾತನ ಕಾಲದ ವಜ್ರ, ಹವಳ, ಮುತ್ತು ಇವೆ ಎಂಬ ನಂಬಿಕೆಯನ್ನು ಬಲವಾಗಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಳೆದ ಮೂರು ದಿನಗಳಿಂದ ಶೋಧ ಕಾರ್ಯ ಆರಂಭಿಸಿರುವ ಅಧಿಕಾರಿಗಳಿಗೆ ಈಗ ಮತ್ತೊಂದು ಅಚ್ಚರಿ ಎದುರಾಗಿದೆ. ಇಂದು ಉತ್ಖನನ ನಡೆಯುತ್ತಿದ್ದ ಸ್ಥಳದ ಕೋಟೆಯ ಗೋಡೆಯಲ್ಲಿ ಶಿವಲಿಂಗ ಪತ್ತೆಯಾಗಿದೆ.
ಕೋಟೆಯ ಗೋಡೆಯಲ್ಲಿ ಶಿವಲಿಂಗದ ಮಾದರಿಯ ಪ್ರಾಚ್ಯಾವಶೇಷ ಪ್ರತ್ಯಕ್ಷವಾಗಿರುವುದು ಸದ್ಯ ಅಧಿಕಾರಿಗಳು ಮತ್ತು ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ. ಜನತಾ ಶಿಕ್ಷಣ ಸಂಸ್ಥೆ ಕಟ್ಟಡ ತೆರವು ವೇಳೆ ಕೋಟೆ ಗೋಡೆಯಲ್ಲಿ ಶಿವಲಿಂಗ ಸಿಕ್ಕಿದೆ. ಪತ್ತೆಯಾದ ಶಿವಲಿಂಗ ಹಿತ್ತಳೆ, ಕಂಚು, ತಾಮ್ರ ಅಥವಾ ಬೆಳ್ಳಿಯದ್ದಾ? ಎಂಬ ಕುತೂಹಲ ಮೂಡಿದೆ. ಈ ಎಲ್ಲ ಪ್ರಶ್ನೆಗಳಿಗೆ ಪುರಾತತ್ವ ಇಲಾಖೆ ಅಧಿಕಾರಿಗಳಷ್ಟೇ ಸ್ಪಷ್ಟ ಉತ್ತರ ನೀಡಬೇಕಿದೆ.

ಆರಂಭದಲ್ಲಿ ಸಿಕ್ಕಿದ್ದೇನು?

ಮನೆಯ ಅಡಿಪಾಯ ತೋಡಿದ ಬಡ ಕುಟುಂಬಕ್ಕೆ ಸಿಕ್ಕ ತಂಬಿಗೆಯಲ್ಲಿ ಚಿನ್ನಾಭರಣ, ಹವಳ ಸೇರಿ ಹಲವು ಬೆಲೆ ಬಾಳುವ ವಸ್ತುಗಳು ಪತ್ತೆಯಾದ ಬೆನ್ನಲ್ಲೇ ಲಕ್ಕುಂಡಿ ಗ್ರಾಮದ ಶ್ರೀಮಂತಿಕೆ ಮತ್ತೊಮ್ಮೆ ಪುನರುಚ್ಚರಿಸಿದೆ. ಜ.10ರಂದು ಪತ್ತೆಯಾದ ಚಿನ್ನಾಭರಣದಲ್ಲಿ ಎರಡು ನೀಲಮಣಿ, ಎರಡು ಮಾಣಿಕ್ಯ ಮತ್ತು ಒಂದು ಹವಳ ಜತೆ ಒಂದು ಮುತ್ತು ದೊರೆತಿದ್ದು, ಚಿನ್ನಾಭರಣದ ಮೌಲ್ಯದಷ್ಟೇ ನೀಲಮಣಿ ಮುತ್ತು-ಹವಳ ಮಾಣಿಕ್ಯದ ಮೌಲ್ಯವು ಇನ್ನೂ ಅಧಿಕವಾಗಲಿದೆ ಎಂದು ತಿಳಿದುಬಂದಿದೆ. ಇದು ಪ್ರಾಚೀನ ಕಾಲದ್ದು ಎಂಬುದಂತು ಸ್ಪಷ್ಟವಾಗಿದೆ.

ಪತ್ತೆ ಆಗಿದ್ಹೇಗೆ?

ಗ್ರಾಮದ ನಿವಾಸಿ ಗಂಗವ್ವ ಬಸವರಾಜ ರಿತ್ತಿ ಎಂಬ ಮಹಿಳೆ ಮನೆ ಕಟ್ಟಿಸುವ ಆಸೆಯನ್ನು ಹೊತ್ತಿದ್ದರು. ಈ ಹಿನ್ನೆಲೆ ತಮ್ಮ ಜಾಗದಲ್ಲಿ ಶನಿವಾರ ಅಡಿಪಾಯಕ್ಕೆ ಗುಂಡಿ ಅಗೆಯುವ ಕೆಲಸಕ್ಕೆ ಮುಂದಾದರು. ಈ ವೇಳೆ, ಅವರ ಪುಟ್ಟ ಮಗನಿಗೆ ತಾಮ್ರದ ತಂಬಿಗೆಯಲ್ಲಿ ಪುರಾತನದ ವಸ್ತುಗಳು ಎಂದು ಸೂಚಿಸುವ ಚಿನ್ನಾಭರಣಗಳು ಸಿಕ್ಕಿತು. ಅಲ್ಲಿಂದ ಶುರುವಾದ ಪುರಾತತ್ವ ಇಲಾಖೆಯ ಕೆಲಸ, ಇದು ಯಾವ ಶತಮಾನದ್ದು? ಇನ್ನೂ ಏನೆಲ್ಲ ಸಿಗಬಹುದು? ಎಂದು ಕಂಡುಹಿಡಿಯುವ ಸವಾಲಿಗಿಳಿದಿದೆ.