ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯಲ್ಲಿ ಬೃಹತ್ ಘೋಷಣೆ 
ರಾಜ್ಯ

ಜಾಗತಿಕ ಭಾಷಾ ಜಾತ್ರೆಯಾಗಿ ಕುಂದಾಪ್ರ ಕನ್ನಡ ಹಬ್ಬ ಆಚರಣೆ: ಮುಂದಿನ ಜನವರಿ 30-31 ಅದ್ಧೂರಿ ಕಾರ್ಯಕ್ರಮ | Kundapra Kannada Habba

ಪ್ರಮುಖ ಮುಖ್ಯಾಂಶಗಳು

  • ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯಲ್ಲಿ ಬೃಹತ್ ಘೋಷಣೆ
  • 'ವಿಶ್ವ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನ-2027'
  • ಮುಂದಿನ ಜನವರಿ 30-31ರಂದು ಅದ್ಧೂರಿ ಕಾರ್ಯಕ್ರಮ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.) ಕಳೆದ ಎಂಟು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ 'ವಿಶ್ವ ಕುಂದಾಪ್ರ ಕನ್ನಡ ಹಬ್ಬ' (Kundapra Kannada Habba) ಈ ಸಲ ಜಾಗತಿಕ ಸ್ವರೂಪ ತಳೆದಿದ್ದು, 'ವಿಶ್ವ ಕುಂದಾಪ್ರ ಕನ್ನಡ ಸಮ್ಮೇಳನ-2027' ಎಂಬ ಹೆಸರಿನಲ್ಲಿ ಅದು ಅದ್ಧೂರಿಯಾಗಿ ಆಚರಣೆ ಆಗಲಿದೆ.
ವಿಜಯನಗರದ ಬಂಟರ ಸಂಘದಲ್ಲಿ ಶನಿವಾರ (ಆ.15) ಆಯೋಜಿಸಿದ್ದ 'ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ'ಯಲ್ಲಿ ಹಲವು ಅತಿಥಿ ಗಣ್ಯರ ಸಮ್ಮುಖದಲ್ಲಿ ಈ ಬಗ್ಗೆ ಬೃಹತ್ ಘೋಷಣೆ ಮಾಡಲಾಗಿದೆ.
ವಿಶ್ವದ ಎಲ್ಲ ಕಡೆಯಲ್ಲಿ ನಡೆಯುತ್ತಿರುವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಬೃಹತ್ ಪ್ರಮಾಣದಲ್ಲಿ ಒಂದೇ ಕಡೆ ಆಯೋಜಿಸಿದರೆ ಹೇಗೆ ಎಂಬ ಕಲ್ಪನೆ ಮತ್ತು ಕನಸಿನಲ್ಲಿ ಈ ಸಾಹಸಕ್ಕೆ ಮುಂದಾಗಿದ್ದೇವೆ ಎಂದು ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಡಾ.ದೀಪಕ್ ಶೆಟ್ಟಿ ಬಾರ್ಕೂರು ಘೋಷಿಸಿದ್ದಾರೆ.
ಅರಮನೆ ಮೈದಾನದ ರಾಯಲ್ ತ್ರಿಪುರವಾಸಿನಿಯಲ್ಲಿ 2027ರ ಜನವರಿ 30-31ರಂದು ಹಿಂದೆಂದಿಗಿಂತಲೂ ಅದ್ಭುತ ರೀತಿಯಲ್ಲಿ ವಿಶ್ವ ಕುಂದಾಪ್ರ ಕನ್ನಡ ಸಮ್ಮೇಳನ-2027 ನಡೆಯಲಿದ್ದು, ಇದರಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು, ನಾಯಕ ನಟ ನಿರಂಜನ ಸುಧೀಂದ್ರ, ನಟ-ನಿರ್ಮಾಪಕ ಪ್ರಮೋದ್ ಶೆಟ್ಟಿ, ಚಿತ್ರಸಾಹಿತಿ ಪ್ರಮೋದ್ ಮರವಂತೆ, ಎ.ಎಸ್.ಕೇಟರರ್ಸ್‌ನ ಸತೀಶ್ ಶೆಟ್ಟಿ ಮತ್ತು ಅಮರನಾಥ ಶೆಟ್ಟಿ ಹೆಗ್ಗುಂಜೆ ಮುಂತಾದ ಗಣ್ಯರ ಸಮ್ಮುಖದಲ್ಲಿ ವಿಭಿನ್ನ ರೀತಿಯಲ್ಲಿ ವಿಶ್ವ ಕುಂದಾಪ್ರ ಕನ್ನಡ ಸಮ್ಮೇಳನ-2027ರ ಬೃಹತ್ ಘೋಷಣೆ ಮಾಡಲಾಯಿತು.
ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯಕುಮಾರ್ ಹೆಗ್ಡೆ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಖಜಾಂಚಿ ವಿಜಯ್ ಶೆಟ್ಟಿ ಹಾಲಾಡಿ, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು ಮುಂತಾದವರು ಉಪಸ್ಥಿತರಿದ್ದರು.