ಹಿರಿಯ ಕವಿ ಶ್ರೀ ಬಿ.ಆರ್. ಲಕ್ಷ್ಮಣ ರಾವ್ ಹಾಗೂ ಖ್ಯಾತ ಗಾಯಕ ಪುತ್ತೂರು ಶ್ರೀ ನರಸಿಂಹ ನಾಯಕ್  
ರಾಜ್ಯ

ಕೆಎಸ್‌ ನ ಸಾಹಿತ್ಯ ಹಾಗೂ ಕಾವ್ಯಗಾಯನ ಪ್ರಶಸ್ತಿಗೆ ಕವಿ ಬಿ.ಆರ್‌. ಲಕ್ಷ್ಮಣ ರಾವ್, ಗಾಯಕ ಪುತ್ತೂರು ನರಸಿಂಹ ನಾಯಕ್ ಆಯ್ಕೆ! Awards

ಪ್ರಮುಖ ಮುಖ್ಯಾಂಶಗಳು

  • ಬಿ ಆರ್ ಲಕ್ಷ್ಮಣ ರಾವ್ ಮತ್ತು ಪುತ್ತೂರು ನರಸಿಂಹ ನಾಯಕ್ ಅವರಿಗೆ ಪ್ರತಿಷ್ಠಿತ ಕೆಎಸ್ ನ ಪ್ರಶಸ್ತಿ
  • 2025ನೇ ಸಾಲಿನ ಕೆಎಸ್ ನ ಸಾಹಿತ್ಯ ಹಾಗೂ ಕಾವ್ಯಗಾಯನ ಪ್ರಶಸ್ತಿ ಘೋಷಣೆ
  • ಹಿರಿಯ ಕವಿ ಬಿ ಆರ್ ಲಕ್ಷ್ಮಣ ರಾವ್ ಮತ್ತು ಗಾಯಕ ಪುತ್ತೂರು ನರಸಿಂಹ ನಾಯಕ್ ಕೆಎಸ್ ನ ಪ್ರಶಸ್ತಿಗೆ ಆಯ್ಕೆ
  • ಆಗಸ್ಟ್ 1 ರಂದು ಬೆಂಗಳೂರಿನಲ್ಲಿ ಕೆಎಸ್ ನರಸಿಂಹಸ್ವಾಮಿ ಟ್ರಸ್ಟ್ ಪ್ರಶಸ್ತಿ ಪ್ರದಾನ ಸಮಾರಂಭ
ಬೆಂಗಳೂರು: ಕನ್ನಡ ಸಾರಸ್ವತ ಲೋಕದಲ್ಲಿ ಭಾವಗೀತೆಗಳ ಮೂಲಕ ಕೋಟ್ಯಂತರ ಕನ್ನಡಿಗರ ಮನ ಗೆದ್ದ 'ಮೈಸೂರು ಮಲ್ಲಿಗೆ' ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ಹೆಸರಿನಲ್ಲಿ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಗಳಿಗೆ ( Awards ) ಈ ಬಾರಿ ಇಬ್ಬರು ದಿಗ್ಗಜರು ಭಾಜನರಾಗಿದ್ದಾರೆ. ಕರ್ನಾಟಕ ಸರ್ಕಾರ ಸ್ಥಾಪಿಸಿರುವ ಮೈಸೂರು ಮಲ್ಲಿಗೆ ಕವಿ ಕೆಎಸ್ ನರಸಿಂಹಸ್ವಾಮಿ ಟ್ರಸ್ಟ್ ( K S Narasimhaswamy Trust ) ವತಿಯಿಂದ ನೀಡಲಾಗುವ 2025ನೇ ಸಾಲಿನ ಅತ್ಯುನ್ನತ ಪುರಸ್ಕಾರಗಳನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಈ ಸಾಲಿನ 'ಕೆಎಸ್ ನ ಸಾಹಿತ್ಯ ಪ್ರಶಸ್ತಿ'ಗೆ ಹಿರಿಯ ಕವಿ ಶ್ರೀ ಬಿ.ಆರ್. ಲಕ್ಷ್ಮಣ ರಾವ್ ಅವರು ಆಯ್ಕೆಯಾಗಿದ್ದರೆ, 'ಕಾವ್ಯಗಾಯನ ಪ್ರಶಸ್ತಿ'ಗೆ ಖ್ಯಾತ ಗಾಯಕ ಪುತ್ತೂರು ಶ್ರೀ ನರಸಿಂಹ ನಾಯಕ್ ಅವರು ಭಾಜನರಾಗಿದ್ದಾರೆ. ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಕ್ಕೆ ಇವರು ನೀಡಿದ ಗಣನೀಯ ಕೊಡುಗೆಯನ್ನು ಗೌರವಿಸಿ ಈ ಪುರಸ್ಕಾರ ನೀಡಲಾಗುತ್ತಿದೆ. ಪ್ರಶಸ್ತಿಯು ತಲಾ 25 ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕ ಹಾಗೂ ಫಲತಾಂಬೂಲವನ್ನು ಒಳಗೊಂಡಿರಲಿದೆ.
ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭವು 2026ರ ಆಗಸ್ಟ್ 1ರ ಶನಿವಾರದಂದು ಸಂಜೆ 5 ಗಂಟೆಗೆ ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನ ಮಲ್ಟಿ ಮೀಡಿಯಾ ಹಾಲ್‌ನಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಪ್ರಖ್ಯಾತ ಕಲಾವಿದರಿಂದ ಕೆ.ಎಸ್. ನರಸಿಂಹಸ್ವಾಮಿ ಅವರ ಗೀತಗಾಯನ ಹಾಗೂ ನೃತ್ಯ ಪ್ರದರ್ಶನ ಕೂಡ ಏರ್ಪಾಡಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಆಯೋಜಿಸಿರುವ ಈ ಸಾಂಸ್ಕೃತಿಕ ರಸಸಂಜೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಈ ಕುರಿತು ಮಂಡ್ಯ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿಯಾದ ಡಾ. ಬಿ.ವಿ. ನಂದೀಶ್ ಅವರು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.